ಬುಧವಾರ, ಡಿಸೆಂಬರ್ 11, 2019
26 °C
ತಲಚೇರಿ–ಮೈಸೂರು, ಕುಶಾಲನಗರ–ಮೈಸೂರು ರೈಲು ಮಾರ್ಗ ನಿರ್ಮಾಣ

ರೈಲು ಮಾರ್ಗ: ಕೊಡವರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಮಾರ್ಗ: ಕೊಡವರ ವಿರೋಧ

ಮೈಸೂರು: ಕೊಡಗು ಜಿಲ್ಲೆಯಲ್ಲಿ ರೈಲು ಮಾರ್ಗ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಕೊಡವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ನಗರದಲ್ಲಿ ಭಾನುವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.

ಕೇರಳದ ತಲಚೇರಿ–ಮೈಸೂರು ಹಾಗೂ ಕುಶಾಲನಗರ–ಮೈಸೂರು ರೈಲು ಮಾರ್ಗ ನಿರ್ಮಾಣ ಕೈಬಿಡುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧತೆಯನ್ನು ರೈಲ್ವೆ ಇಲಾಖೆ ಕೂಡಲೇ ಕೈಬಿಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಕೊಡಗಿನಿಂದ ಮೈಸೂರಿಗೆ ಬಂದ 20ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ಪ್ರತಿಭಟನಾಕಾರರು ಇಲ್ಲಿನ ವಸ್ತುಪ್ರದರ್ಶನ ಮೈದಾನದಲ್ಲಿ ಜಮಾಯಿಸಿದರು. ಕಪ್ಪುಪಟ್ಟಿ ಕಟ್ಟಿ

ಕೊಂಡು ಮೆರವಣಿಗೆ ನಡೆಸಿದರು. ‘ಕೊಡಗು ಉಳಿಸಿ, ಕಾವೇರಿ ಕಾಪಾಡಿ’ ಎಂಬ ಘೋಷಣೆಯನ್ನು ಮೊಳಗಿಸಿದರು. ವೃದ್ಧರು, ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಹೋರಾಟ ಬೆಂಬಲಿಸಿದರು.

‘ಕೊಡಗಿನಿಂದ ತಮಿಳುನಾಡಿಗೆ ಹರಿಯುವ ಕಾವೇರಿ ಸುಮಾರು 20 ಲಕ್ಷ ಹೆಕ್ಟೇರ್‌ ಭೂಮಿಗೆ ನೀರುಣಿಸುತ್ತಿದೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆಯ 600 ಉದ್ಯಮಗಳಿಗೆ ಆಸರೆಯಾಗಿದೆ. ಮಾನವ ಕೇಂದ್ರಿತ ಅಭಿವೃದ್ಧಿಯ ಫಲವಾಗಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ರೈಲು ಮಾರ್ಗಕ್ಕೆ ಮತ್ತಷ್ಟು ಅರಣ್ಯ ನಾಶವಾದರೆ ನದಿಗೆ ಗಂಡಾಂತರ’ ಎಂದು ಪರಿಸರವಾದಿ ಸುರೇಶ್‌ ಹೆಬ್ಳಿಕರ್‌ ಕಳವಳ ವ್ಯಕ್ತಪಡಿಸಿದರು.

‘ಕೊಡಗಿನಲ್ಲಿ ಮಳೆಯಾದರೆ ಕಾವೇರಿಯಲ್ಲಿ ನೀರು ಹರಿಯುತ್ತದೆ. ಆದರೆ, ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಪರಿಣಾಮ ಶೇ 40ರಷ್ಟು ಕೃಷಿ ಚಟುವಟಿಕೆಗೆ ಹಾನಿಯಾಗಿದೆ. ಹವಾಮಾನ ವೈಪರೀತ್ಯದಿಂದಲೂ ಕೃಷಿಗೆ ಧಕ್ಕೆ ಉಂಟಾಗಿದೆ. ಪಶ್ಚಮ ಘಟ್ಟ, ಕೊಡಗಿನ ಕಾಡನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಕನ್ನಡಿಗರ ಮೇಲಿದೆ’ ಎಂದರು.

ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್ ಕಾಳಪ್ಪ, ಸಂಸದ ಪ್ರತಾಪ ಸಿಂಹ ಇದ್ದರು.

ಪ್ರತಿಕ್ರಿಯಿಸಿ (+)