ಬೆಳ್ಳುಳ್ಳಿ ಬೆಲೆ ಕುಸಿತ: ರೈತ ಕಂಗಾಲು

7
ಕೈಗೆ ಸಿಗದ ಉತ್ಪಾದನಾ ವೆಚ್ಚ l ಹೆಚ್ಚಿದ ಸಾಲದ ಹೊರೆ l ನೆರವಿಗೆ ಬೆಳೆಗಾರರ ಮೊರೆ

ಬೆಳ್ಳುಳ್ಳಿ ಬೆಲೆ ಕುಸಿತ: ರೈತ ಕಂಗಾಲು

Published:
Updated:
ಬೆಳ್ಳುಳ್ಳಿ ಬೆಲೆ ಕುಸಿತ: ರೈತ ಕಂಗಾಲು

ವಿಜಯಪುರ: ಬೆಳ್ಳುಳ್ಳಿ ರಾಶಿ ಮಾಡಿ ಮಾರುಕಟ್ಟೆಗೆ ತರುತ್ತಿರುವ ಹೊತ್ತಿಗೆ ಬೆಲೆ ಕುಸಿದಿದೆ. ಕನಿಷ್ಠ ದರ ಸಿಗುತ್ತಿರುವುದರಿಂದ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ.

ಎರಡು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹ 10,000 ಆಸುಪಾಸಿನಲ್ಲಿದ್ದ ಧಾರಣೆ, ಇದೀಗ ಕೇವಲ ₹ 2,000ಕ್ಕೆ ಕುಸಿದಿದೆ.

‘ಮೂರ್‌ ವರ್ಸದ ಹಿಂದೆ ಬೆಳ್ಳುಳ್ಳಿ ಬೆಳೆಯಲಾರಂಭಿಸಿದ್ದೆವು. ಬೆಳಿ ಚಲೋ ಬಂದಿತ್ತು. ಧಾರಣೆಯೂ ಕೈಗತ್ತಿತ್ತು. ಆದ್ರ, ಈ ಬಾರಿ ಬೆಲೆ ಪಾತಾಳಕ್ಕೆ ಕುಸಿದೈತಿ. ಏನ್‌ ಮಾಡ್ಬೇಕು ಗೊತ್ತಾಗವಲ್ದಾಗೈತಿ’ ಎಂದು ಬಸವನಬಾಗೇವಾಡಿ ತಾಲ್ಲೂಕು ಹಂಚಿನಾಳ ಗ್ರಾಮದ ರೈತ ಸೋಮಶೇಖರ ಬಿರಾದಾರ ಅಲವತ್ತುಕೊಂಡರು.

‘ಮಾಡ್ದ ಖರ್ಚು ಹುಟ್ಟವಲ್ದು. ವಿಧಿಯಿಲ್ಲದೆ ಸ್ವಲ್ಪ, ಸ್ವಲ್ಪ ಮಾರಾಟ ಮಾಡಿನಿ. ಬೆಳಗಾವಿ ಮಾರುಕಟ್ಯಾಗ ಪ್ರತಿ ಕ್ವಿಂಟಲ್‌ಗೆ ₹ 1,800 ಸಿಕ್ಕರೆ, ನಿಡಗುಂದಿ ಮಾರುಕಟ್ಟೆಯಲ್ಲಿ ₹ 2,100 ಸಿಕ್ಕಿತ್ತು. ವಿಜಯಪುರದಲ್ಲಿ ₹ 1,800 ಸಿಕ್ತು. ಇದು ಯಾವುದಕ್ಕೂ ಸಾಲದು. ಕನಿಷ್ಠ ₹ 5000–6000 ಸಿಕ್ಕರೆ ಒಳ್ಳೆದ. ಇಲ್ಲದಿದ್ದರೆ, ಸೊಸೈಟಿ ಹಾಗೂ ಬ್ಯಾಂಕ್‌ ಸಾಲ ಮುಟ್ಸಕ್ಕಾಗಲ್ಲ. ಕಟ್ಟದಿದ್ರೆ ಬಡ್ಡಿ ಬೆಳೆಯುತ್ತೆ. ಬದುಕ ಹ್ಯಾಂಗ ಸಾಗಿಸ್ಬೇಕು ಎಂಬುದೇ ತಿಳಿದಂಗಾಗಿದೆ’ ಎಂದರು.

‘ಪ್ರತಿ ಕ್ವಿಂಟಲ್‌ ಬೀಜಕ್ಕೆ ₹ 12,000 ಆಗುತ್ತೆ. ಒಂದ್‌ ಎಕ್ರೆಗೆ ಮೂರು ಕ್ವಿಂಟಲ್‌ ಬೇಕಂದ್ರೂ ಕನಿಷ್ಠ ₹ 50,000 ಖರ್ಚು ಆಗ್ತದ. 30 ಕ್ವಿಂಟಲ್‌ ಉತ್ಪನ್ನ ಬಂದ್ರೆ, ಈಗಿನ ಧಾರಣೆಯಲ್ಲಿ ಬರೋಬ್ಬರಿ ₹ 60,000 ರೊಕ್ಕ ಸಿಗ್ಬಹುದು. ನಮ್ಮ ಕೂಲಿ ಸಹ ನೀಗಂಗಿಲ್ಲ’ ಎಂದು ನರಸಲಗಿಯ ಆನಂದಗೌಡ ಪಾಟೀಲ ತಿಳಿಸಿದರು. ‘ನರಸಲಗಿಯಲ್ಲಿ ಈ ಹಿಂದೆ ಹೆಚ್ಚಾಗಿ ಉಳ್ಳಾಗಡ್ಡಿ ಬೆಳಿತಿದ್ರು. ಬೆಲೆ ಏರಿಳಿತದ ಹೊಡೆತಕ್ಕೆ ಅಂಜಿ, ಬೆಳ್ಳುಳ್ಳಿ ಬೆಳೆಯಲು ಕೈಹಚ್ಚಿದವರೇ ಹೆಚ್ಚು. ಈ ಬಾರಿ ಬೆಳ್ಳುಳ್ಳಿ ಧಾರಣೆಯೂ ಉಲ್ಟಾ ಹೊಡೆದಿದೆ’ ಎಂದು ರೈತ ಶಂಕರಗೌಡ ಬಿರಾದಾರ ತಿಳಿಸಿದರು.

ಹಾವೇರಿಯಲ್ಲಿ ಗರಿಷ್ಠ ಪ್ರಮಾಣ ಬೆಳೆ

‘ರಾಜ್ಯದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳ್ಳುಳ್ಳಿ ಬೆಳೆಯ ಲಾಗುತ್ತಿದೆ. ಹಾವೇರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಚಾಮರಾಜನಗರ ಹಾಗೂ ಬೀದರ್‌ ಜಿಲ್ಲೆಗಳಲ್ಲಿಯೂ ಬೆಳೆಯಲಾಗುತ್ತದೆ. ಆದರೆ, ವ್ಯಾಪ್ತಿಯ ಪ್ರಮಾಣ ಕಡಿಮೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry