ಶುಕ್ರವಾರ, ಡಿಸೆಂಬರ್ 13, 2019
27 °C
ಕೆಎಸ್‌ಎಪಿಎಸ್ ಪ್ರಯೋಗಾಲಯ ತಂತ್ರಜ್ಞರ ಸಮ್ಮೇಳನ

ಉದ್ಯೋಗ ಕಾಯಂಗೊಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯೋಗ ಕಾಯಂಗೊಳಿಸಲು ಒತ್ತಾಯ

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರಯೋಗಾಲಯ ತಂತ್ರಜ್ಞರನ್ನು ಕಾಯಂಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ (ಕೆಎಸ್‌ಎಪಿಎಸ್) ಪ್ರಯೋಗಾಲಯ ತಂತ್ರಜ್ಞರ ಸಂಘದ ಅಧ್ಯಕ್ಷ ಸಿ.ಎಲ್.ಶಿವಮೂರ್ತಿ ಒತ್ತಾಯಿಸಿದರು.

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರಯೋಗಾಲಯ ತಂತ್ರಜ್ಞರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕೆಎಸ್‌ಎಪಿಎಸ್ ಪ್ರಯೋಗಾಲಯ ತಂತ್ರಜ್ಞರ ಸಂಘವನ್ನೂ ಉದ್ಘಾಟಿಸಲಾಯಿತು.

‘ಹೊರಗುತ್ತಿಗೆ ಆಧಾರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ, ನಮ್ಮ ಹಕ್ಕುಗಳಿಗಾಗಿ ಹೋರಾಡಲು ಸಂಘ ಸ್ಥಾಪಿಸಿದ್ದೇವೆ’ ಎಂದು ಶಿವಮೂರ್ತಿ ತಿಳಿಸಿದರು.

‘ಸರ್ಕಾರಿ ಪ್ರಯೋಗಾಲಯ ತಂತ್ರಜ್ಞರಿಗೆ ಸರಿಸಮಾನವಾಗಿ ಕೆಲಸ ಮಾಡುವ ನಮಗೂ, ಅವರಿಗೆ ನೀಡುವಷ್ಟೇ ವೇತನ ನೀಡಬೇಕು. ಶುಶ್ರೂಷಕರ ನೇಮಕಾತಿ ವೇಳೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿ ಕೆಲಸ ಮಾಡುವ ನರ್ಸಿಂಗ್ ಸಿಬ್ಬಂದಿಗೆ ಕೃಪಾಂಕ ನೀಡಲಾಗಿದೆ. ಅದೇ ಮಾದರಿಯಲ್ಲಿ ತಂತ್ರಜ್ಞರ ನೇಮಕಾತಿ ವೇಳೆ ನಮಗೂ ಕೃಪಾಂಕ ನೀಡಬೇಕು’ ಎಂದು ಸಂಘಟನಾ ಕಾರ್ಯದರ್ಶಿ ಎಲ್.ನಾಗರಾಜ್ ಮನವಿ ಮಾಡಿದರು.

ಸಂಘವನ್ನು ಉದ್ಘಾಟಿಸಿದ ಕೆಎಸ್‌ಎಪಿಎಸ್‌ ಹೆಚ್ಚುವರಿ ಯೋಜನಾ ನಿರ್ದೇಶಕ ಕೆ.ಶ್ರೀನಿವಾಸ್‌ಗೌಡ, ‘ಕೆಲವೊಮ್ಮೆ ನೌಕರರನ್ನು ಹಗಲು–ರಾತ್ರಿ ದುಡಿಸಿಕೊಳ್ಳಲಾಗುತ್ತದೆ. ಅಂಥ ಸಂದರ್ಭದಲ್ಲಿ ನೌಕರರಿಗೆ ಮರುದಿನ ರಜೆ ನೀಡಬೇಕು. ಈ ಬಗ್ಗೆ ಸೋಮವಾರವೇ ಆದೇಶ ಹೊರಡಿಸುತ್ತೇನೆ’ ಎಂದರು.

ತಾಂತ್ರಿಕ ತೊಡಕುಗಳಿಂದಾಗಿ ತಂತ್ರಜ್ಞರಿಗೆ ವೇತನ ಪಾವತಿ ವಿಳಂಬವಾಗುತ್ತಿದೆ. ಪ್ರತಿ ತಿಂಗಳ 5ನೇ ತಾರೀಖಿನ  ಒಳಗೆ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)