6

ಕುಲುಮೆ ರಸ್ತೆಗೆ ಬೇಕಿದೆ ಡಾಂಬರು

Published:
Updated:
ಕುಲುಮೆ ರಸ್ತೆಗೆ ಬೇಕಿದೆ ಡಾಂಬರು

ಚಾಮರಾಜನಗರ: ನಗರದ ಸಂತೇಮರಹಳ್ಳಿ ವೃತ್ತದ ರಾಷ್ಟ್ರೀಯ ಹೆದ್ದಾರಿಯಿಂದ ರಾಮಸಮುದ್ರಕ್ಕೆ ನೇರ ಸಂಪರ್ಕ ಕಲ್ಪಿಸುವ ಕುಲುಮೆ ರಸ್ತೆಯ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವುದು ವಾಹನ ಸವಾರರಿಗೆ ಪೀಕಲಾಟ ತಂದಿದೆ.

ನಗರೋತ್ಥಾನ ಯೋಜನೆಯಡಿ ಈ ರಸ್ತೆಯ ಕಾಮಗಾರಿ ನಡೆಸಲಾಗಿತ್ತು. ರಾಮಸಮುದ್ರದ ಜೋಡಿ ರಸ್ತೆಯ ದಿಕ್ಕಿನಿಂದ ಮತ್ತು ವಿಎಚ್‌ಪಿ ಶಾಲೆಯ ಕಡೆಯಿಂದ ಡಾಂಬರೀಕರಣ ನಡೆದಿದೆ. ಆದರೆ, ಮಧ್ಯಭಾಗದಲ್ಲಿ ಸುಮಾರು 300 ಮೀಟರ್‌ ಉದ್ದದ ರಸ್ತೆ ಕಾಮಗಾರಿಗೆ ಎದುರಾಗಿರುವ ತೊಡಕು ವರ್ಷಗಳು ಉರುಳಿದರೂ ನಿವಾರಣೆಯಾಗಿಲ್ಲ. ಇದರಿಂದ ಈ ಮಾರ್ಗದಲ್ಲಿ ಓಡಾಡುವವರು ಸಂಕಟ ಪಡುವಂತಾಗಿದೆ.

ಸಂಪರ್ಕ ರಸ್ತೆ: ರಾಮಸಮುದ್ರದಲ್ಲಿ ಜೋಡಿ ರಸ್ತೆಗೆ ಸಂಪರ್ಕಿಸುವಲ್ಲಿ ಕುಲುಮೆ ಇರುವುದರಿಂದ ಇದಕ್ಕೆ ಕುಲುಮೆ ರಸ್ತೆ ಎಂದು ಕರೆಯಲಾಗುತ್ತದೆ. ಜೋಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ವಿಎಚ್‌ಪಿ ಶಾಲೆಯ ಮಾರ್ಗದ ಮೂಲಕ ಸಂತೇಮರಹಳ್ಳಿ ವೃತ್ತದ ಕೇಂದ್ರೀಯ ವಿದ್ಯಾಲಯದ ಬಳಿ ಕೂಡಿಕೊಳ್ಳುವ ಈ ರಸ್ತೆಯಿಂದ ಕೊಳ್ಳೇಗಾಲ, ನಂಜನಗೂಡು ಮಾರ್ಗಕ್ಕೆ ತೆರಳಲು ವಾಹನಸವಾರರಿಗೆ ಅನುಕೂಲವಾಗುತ್ತಿದೆ. ಹತ್ತರಿಂದ ಹದಿನೈದು ನಿಮಿಷ ಪ್ರಯಾಣವನ್ನು ಇದು ಉಳಿಸುತ್ತದೆ. ನಗರದ ಚನ್ನೀಪುರಮೋಳೆ ಹಾಗೂ ವಿವಿಧ ಬಡಾವಣೆಗಳಿಗೆ ತೆರಳಲು ಸಮಯದ ಉಳಿತಾಯವಾಗುತ್ತಿದೆ.

ಪ್ರಸ್ತುತ ಜೋಡಿ ರಸ್ತೆಯ ವಿಸ್ತರಣೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ರಾಮಸಮುದ್ರದಿಂದ ನೇರವಾಗಿ ನಗರದೊಳಗೆ ಪ್ರವೇಶಿಸುವುದು ಕಷ್ಟವಾಗುತ್ತಿದೆ. ಇದರಿಂದ ಅನೇಕರು ಕುಲುಮೆ ರಸ್ತೆ ಮಾರ್ಗವಾಗಿ ಬಂದು ನಗರಕ್ಕೆ ತಲುಪುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ತಲುಪುವ ಲಾರಿ, ಟ್ಯಾಂಕರ್‌ ಮುಂತಾದ ಬೃಹತ್‌ ವಾಹನಗಳು ಸಹ ಈ ಮಾರ್ಗದಿಂದ ಸಾಗುತ್ತಿವೆ.

ಕೊಳ್ಳೇಗಾಲ, ನಂಜನಗೂಡು ಮುಂತಾದ ಭಾಗಗಳಿಗೆ ತೆರಳುವವರು ನಗರದೊಳಕ್ಕೆ ಬರುವ ಅಗತ್ಯ ಇಲ್ಲದಿರುವುದರಿಂದ ಸಂಚಾರ ದಟ್ಟಣೆಗೂ ಕಡಿವಾಣ ಹಾಕಿದಂತಾಗುತ್ತದೆ. ಬಾಕಿ ಉಳಿದಿರುವ ಭಾಗವೂ ಡಾಂಬರು ಕಂಡರೆ ಸಂಚಾರ ಸುಗಮವಾಗುವುದರಿಂದ ಜೋಡಿ ರಸ್ತೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಕಾಮಗಾರಿಗೂ ನೆರವಾಗಲಿದೆ.

ಜಾಗ ಬಿಡಲು ನಿರಾಕರಣೆ: ಈ ರಸ್ತೆಯು ಜಮೀನುಗಳ ಮೇಲೆ ಹಾದುಹೋಗಿದೆ. 300 ಮೀಟರ್ ಉದ್ದದ ರಸ್ತೆಯಲ್ಲಿಯೇ 11 ಮಂದಿಯ ಜಮೀನು ಇದೆ. ಅವರು ಜಾಗವನ್ನು ಬಿಟ್ಟುಕೊಡಲು ಒಪ್ಪಿಕೊಂಡಿಲ್ಲ. ತಕರಾರಿನ ಕಾರಣ ಕೆಲಸ ಮುಂದೆ ಸಾಗುತ್ತಿಲ್ಲ.

ತಗ್ಗುದಿಣ್ಣೆಗಳು: ಚನ್ನೀಪುರಮೋಳೆಯ ಸ್ಮಶಾನದ ಭಾಗದಿಂದ ರಸ್ತೆ ತುಸು ಕಿರಿದಾಗಿದ್ದರೂ ಸುಸಜ್ಜಿತವಾಗಿರುವು ದರಿಂದ ವಾಹನ ಓಡಾಟಕ್ಕೆ ಅಡ್ಡಿಯಿಲ್ಲ. ಆದರೆ, ನಡುವೆ ರಸ್ತೆ ಅಭಿವೃದ್ಧಿಯಾಗದ ಕಾರಣ ಹಳ್ಳದಿಣ್ಣೆಗಳಲ್ಲಿ ಹರಸಾಹಸ ಪಟ್ಟು ಸಾಗುವಂತಾಗಿದೆ. ಮಳೆ ಬಂದ ರಂತೂ ಇಲ್ಲಿ ಓಡಾಟ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತದೆ.

2017ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ₹50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಕುಲುಮೆ ರಸ್ತೆಯ ಅಭಿವೃದ್ಧಿಯನ್ನೂ ಯೋಜನಾಪಟ್ಟಿಯಲ್ಲಿ ಸೇರಿಸಲಾಗಿತ್ತು. ಬಳಿಕ ಆರಂಭವಾದ ₹10.50 ಕೋಟಿಯ ನಗರದ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಯಡಿ ₹60 ಲಕ್ಷ ವೆಚ್ಚದಲ್ಲಿ ಇಲ್ಲಿನ ಬಾಕಿ ಉಳಿದಿರುವ ರಸ್ತೆಗೆ ಡಾಂಬರು ಹಾಕಲು ಉದ್ದೇಶಿಸಲಾಗಿದೆ.

‘ಡಾಂಬರೀಕರಣ ಮಾಡಿದರೆ ಬಹುತೇಕ ವಾಹನಗಳು ಇಲ್ಲಿಂದಲೇ ಓಡಾಟ ನಡೆಸಬಹುದು. ವಿಪರೀತ ಹೊಂಡಗಳಿರುವುದರಿಂದ ಆಯತಪ್ಪಿ ಬೀಳುವ ಅಪಾಯವಿದೆ. ಕಡೇಪಕ್ಷ ತಗ್ಗುದಿಣ್ಣೆಗಳನ್ನಾದರೂ ಸರಿಪಡಿಸಲಿ. ಈ ಮಾರ್ಗದಲ್ಲಿ ಸುಸಜ್ಜಿತ ಬೀದಿ ದೀಪ ಅಳವಡಿಕೆ ಮಾಡಿದರೆ ರಾತ್ರಿ ವೇಳೆ ಸುರಕ್ಷಿತ ಓಡಾಟಕ್ಕೆ ಅನುಕೂಲವಾಗುತ್ತದೆ’ ಎಂದು ಬೈಕ್ ಸವಾರ ಸುರೇಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry