ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ ‘ಫಲಪುಷ್ಪ ಪ್ರದರ್ಶನ’ ವೈಭವ

Last Updated 19 ಫೆಬ್ರುವರಿ 2018, 9:51 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್‌ ಮೂರು ವರ್ಷಗಳ ಬಳಿಕ ಫಲಪುಷ್ಪ ಪ್ರದರ್ಶನದ ವೈಭವಕ್ಕೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್‌ 9, 10 ಹಾಗೂ 11ರಂದು ಬಗೆಬಗೆಯ ಹೂವಿನ ರಾಶಿ, ಅದರ ನಡುವೆ ಕಂಗೊಳಿಸುವ ಉದ್ಯಾನ, ಕಾರಂಜಿಯ ವೈಯ್ಯಾರ ಕಣ್ತುಂಬಿಕೊಳ್ಳಬಹುದು.

ಕೆಲವು ವರ್ಷಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನವು ಕಾರಣಾಂತರಗಳಿಂದ ಸ್ಥಗಿತಗೊಂಡು ಮಂಜಿನ ನಗರಿಯ ಜನರು ಹಾಗೂ ಪ್ರವಾಸಿಗರಿಗೆ ನಿರಾಸೆ ಮೂಡಿಸಿತ್ತು. ಈಗ ಪ್ರದರ್ಶನ ನಡೆಸಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ ಹಾಗೂ ತೋಟಗಾರಿಕೆ ಇಲಾಖೆ ಪ್ರಭಾರ ನಿರ್ದೇಶಕಿ ದೇವಕಿ ಉತ್ಸುಕತೆ ತೋರಿದ್ದಾರೆ. ಈ ಬಗ್ಗೆ ಈಗಾಗಲೇ ಎರಡು ಮೂರು ಬಾರಿ ಸಭೆ ನಡೆದಿದ್ದು, ಚುನಾವಣೆ ಕಾವಿನ ಮಧ್ಯೆದಲ್ಲಿ ಹೂವಿನ ಆನಂದ ಸವಿಯಲು ಸಾಧ್ಯವಾಗಲಿದೆ.

ಉದ್ಯಾನಕ್ಕೆ ಹೊಂದಿಕೊಂಡ ಬೆಟ್ಟದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು, ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ ದಿಂದ ಬೇಸತ್ತು ಪ್ರವಾಸಿಗರನ್ನು ಹೊರತು ಪಡಿಸಿದರೆ ಸ್ಥಳೀಯರು ಅತ್ತಕಡೆ ಮುಖ ಮಾಡುತ್ತಿರಲಿಲ್ಲ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಜಂಟಿಯಾಗಿ ವೈಭವ ಮರುಕಳುಹಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿಂತನೆ: ಮೂರು ದಿನ ನಡೆಯುವ ವಿಭಿನ್ನ ಪ್ರದರ್ಶನಕ್ಕೆ ವಿವಿಧ ಹೂವುಗಳಿಂದ ಅಲಂಕೃತ ಆಕೃತಿಗಳು, ವಿವಿಧ
ಬಗೆಯ ಫಲ ಪುಷ್ಪಗಳು, ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಜಿಲ್ಲಾಡಳಿತದ್ದು. ಫಲಪುಷ್ಪ ಪ್ರದರ್ಶನಕ್ಕೆ ₹ 7 ಲಕ್ಷ ಅನುದಾನ ತೋಟಗಾರಿಕೆ ಇಲಾಖೆಯಲ್ಲಿದೆ. ಮತ್ತಷ್ಟು ಅನುದಾನಕ್ಕೆ ಕೋರಿಕೆ ಸಲ್ಲಿಸಲೂ ನಿರ್ಧರಿಸಲಾಗಿದೆ.

ವಾರಾಂತ್ಯದಲ್ಲಿ ಪ್ರದರ್ಶನ ನಡೆಯುತ್ತಿರುವ ಕಾರಣ ಪ್ರವಾಸಿಗರ ದಟ್ಟಣೆ ಹೆಚ್ಚಿರುತ್ತದೆ. ಅವರಿಗೆ ಯಾವುದೇ ರೀತಿಯ ತೊಂದರೆ ಯಾಗಬಾರದು. ಕುಡಿಯುವ ನೀರಿನ ವ್ಯೆವಸ್ಥೆ ಮತ್ತು ಶೌಚಾಲಯದ ವ್ಯೆವಸ್ಥೆ ಮಾಡಬೇಕು ಎಂದು ಸಿಇಒ ಪ್ರಶಾಂತ್ ಕುಮಾರ್ ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಈ ಬಾರಿಯ ವಿಶೇಷ: ಇಲಾಖೆಯಿಂದ ಬ್ರಹ್ಮಗಿರಿ ಪ್ರದರ್ಶನ, ಕಾವೇರಿ ಪ್ರತಿಮೆ, ಪ್ರವೇಶ ಗೋಪುರ, ಅರಣ್ಯ ಸಂರಕ್ಷಣೆ ಕುರಿತ ಪ್ರದರ್ಶನ ಇರಲಿದೆ ಎಂದು ಹೇಳುತ್ತಾರೆ ದೇವಕಿ.

ಲಾಲ್‌ಬಾಗ್‌ನ ಮಾರ್ಗದರ್ಶಕರ ಸಲಹೆ: ಸಾರ್ವನಿಕರ ಮನಸ್ಸು ಪ್ರಫುಲ್ಲಗೊಳಿಸುವ ಉದ್ದೇಶದಿಂದ ಭಿನ್ನ ರೀತಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಲಾಲ್‌ಬಾಗ್‌ ಮಾರ್ಗದರ್ಶಕರ ಸಲಹೆ– ಸೂಚನೆ ಪಡೆದು ಕೊಳ್ಳಲಾಗುತ್ತಿದೆ.

ಸ್ಥಳದಲ್ಲೇ ಮಕ್ಕಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ಬಹುಮಾನ ನೀಡುವ ಆಲೋಚನೆಯೂ ಇದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯು ಹೂವಿನ ಉತ್ತಮ ಛಾಯಾಚಿತ್ರ ತೆಗೆದವರಿಗೆ ಬಹುಮಾನ ನೀಡಲು ತಯಾರಿ ನಡೆಸಿದೆ. ಕೃಷಿ ಇಲಾಖೆಯಿಂದ ಕೃಷಿ ಹೊಂಡದ ಅರಿವು ಮೂಡಿಸಲಾಗುವುದು. ಗಾಂಧಿ ಮೈದಾನದಲ್ಲಿ ಪ್ರದರ್ಶನ ಮಳಿಗೆ ತೆರಯಲಾಗುವುದು ಎನ್ನುತ್ತಾರೆ ಸಮಿತಿ ಸದಸ್ಯರು. ಕಳೆಗುಂದಿರುವ ಉದ್ಯಾನಕ್ಕೆ ವೈಭವ ಮರಳಲಿ ಎಂಬುದು ಸ್ಥಳೀಯರ ಆಶಯ.

ವಿಕಾಸ್‌ ಬಿ. ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT