ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ಬರಲು ದಾರಿ ಯಾವುದಯ್ಯಾ?

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಅಲ್ಲಾ ಕಣ್ರೀ, ನೀವು ಇಲ್ಲೀತನಕ ಏಕೆ ಬರೋಕೆ ಹೋದ್ರೀ. ರೈಲ್ವೆ ಸ್ಟೇಷನ್ ಇಳಿದವರು ಬಲಕ್ಕೆ ಹೋಗಿದ್ದರೆ ಮೆಟ್ರೊ ಸ್ಟೇಷನ್ ಸಿಗ್ತಾ ಇತ್ತಲ್ಲ...?’

‘ಅಯ್ಯೋ ಏನ್ರೀ ಮಾಡೋದು, ಅಲ್ಲೆಲ್ಲೂ ಒಂದು ಬೋರ್ಡ್‌ ಕೂಡಾ ಇಲ್ಲ. ಹಮಾಲಿನ ಕೇಳ್ದೆ, ಅವರು ಈ ಕಡೆ ಹೋಗಿ ಅಂದ್ರು. ಅದ್ಕೆ ಇಷ್ಟು ದೂರ ನಡೆದು ಬಂದೆ’

‘ಈಗ ಎಲ್ಲಿಗೆ ಹೋಗಬೇಕು?’

‘ರಾಜಾಜಿನಗರಕ್ಕೆ ಹೋಗಬೇಕಿತ್ತು, ಮಗಳ ಮನೆಗೆ’

‘ಅಯ್ಯೋ ಇದು ಪರ್ಪಲ್ ಲೈನ್ ಅಲ್ಲಿಗೆ ಹೋಗಲ್ಲ ಕಣ್ರೀ, ನೀವು ಕೆಳಗೆ ಇಳಿದು ಗ್ರೀನ್‌ ಲೈನ್‌ಗೆ ಹೋಗಿ...’

‘ಎಲ್ಲಿ ಕೆಳಗೆ ಇಳಿಯಬೇಕಮ್ಮಾ? ನನ್ನನ್ನು ಒಂಚೂರು ರೈಲಿಗೆ ಹತ್ತಿಸಮ್ಮಾ...’ ಎನ್ನುತ್ತಾ ಆ ಅಜ್ಜಿ, ಸೆಕ್ಯುರಿಟಿ ಹೆಣ್ಣುಮಗಳನ್ನು ಗೋಗರೆಯುತ್ತಿತ್ತು. ಅವರು ಕೈತೋರಿ ‘ಅತ್ತ ಹೋಗಿ’ ಎಂದರಾದರೂ ಡ್ಯೂಟಿ ಬಿಟ್ಟು ಬರುವ ಸ್ಥಿತಿಯಲ್ಲಿ ಇರಲಿಲ್ಲ.

ಎಂ.ಜಿ. ರಸ್ತೆಯಲ್ಲಿರುವ ಕಚೇರಿಗೆ ಹೊರಟಿದ್ದ ನನಗೆ ಈ ಸಂಭಾಷಣೆ ಕೇಳಿದ ನಂತರ ಅಜ್ಜಿಯನ್ನು ಅವರ ರೈಲಿಗೆ ಹತ್ತಿಸಿ ಬರೋಣ ಎನಿಸಿತು. ಅವರ ಕೈ ಹಿಡಿದು ಕರೆದೊಯ್ದೆ.ಮೈಸೂರಿನಿಂದ ಬಂದಿದ್ದ ಅಜ್ಜಿ ಇಷ್ಟೇಕೆ ಪರದಾಡಿತು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ ಒಮ್ಮೆ ಸಿಟಿ ರೈಲು ನಿಲ್ದಾಣದಲ್ಲಿ ಅಡ್ಡಾಡಬೇಕು.

ಮಾಹಿತಿಯುಗದ ಜಾಗತಿಕ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ದಿನಬಳಕೆಯ ಮಾಹಿತಿಯನ್ನು ಹೇಗೆ ತಲುಪಿಸಬೇಕು ಎನ್ನುವ ಬಗ್ಗೆ ನಮ್ಮ ಅಧಿಕಾರಿಗಳಲ್ಲಿ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ನಮ್ಮ ಸಿಟಿ ರೈಲು ನಿಲ್ದಾಣವೇ ಉತ್ತಮ ಉದಾಹರಣೆ.

ನಾನು ಬೆಳಿಗ್ಗೆ 11ರ ಸುಮಾರಿಗೆ ರೈಲು ನಿಲ್ದಾಣಕ್ಕೆ ಹೋಗಿದ್ದೆ. ಬಾಗಲಕೋಟೆಯಿಂದ ಮೈಸೂರಿಗೆ ಹೋಗುವ ‘ಬಸವ ಎಕ್ಸ್‌ಪ್ರೆಸ್‌’ ಆಗಿನ್ನೂ ಪ್ಲಾಟ್‌ಫಾರಂ 8ಕ್ಕೆ ಬಂದು ನಿಂತಿತ್ತು. ನೂರಾರು ಜನರು ರೈಲು ಇಳಿಯುತ್ತಿದ್ದರು. ಹೀಗೆ ಇಳಿದ ಬಹುತೇಕರು ಎತ್ತ ಹೋಗುವುದು ತಿಳಿಯದೆ ಅಲ್ಲಲ್ಲೇ ಸುಳಿದಾಡುತ್ತಿದ್ದರು, ಅಂಗಡಿಗಳವರು, ಹಮಾಲಿಗಳು, ಟ್ರಾಕ್ ಸ್ವಚ್ಛ ಮಾಡುವವರನ್ನು ವಿಚಾರಿಸಿ ಪರದಾಡುತ್ತಿದ್ದರು.

ಕಲಬುರ್ಗಿ ಜಿಲ್ಲೆಯ ಆಳಂದದಿಂದ ವಯಸ್ಸಾದ ತಾಯಿಯೊಂದಿಗೆ ಬಂದಿದ್ದ ಅನಿಲ್‌ಕುಮಾರ್, ಆ ದಟ್ಟಣೆಯಲ್ಲೇ ತಾವೂ ಇಳಿದು ತಾಯಿಯನ್ನು ಕೈಹಿಡಿದು ನಿಧಾನಕ್ಕೆ ಇಳಿಸಿಕೊಂಡರು. ಒಂದು ಕೈಯಲ್ಲಿ ಭಾರವಾದ ಲಗೇಜ್ ಹಿಡಿದು, ಮತ್ತೊಂದು ಕೈಲಿ ಅವ್ವನ ಕೈ ಹಿಡಿದುಕೊಂಡು ಎತ್ತ ಹೋಗುವುದು ತಿಳಿಯದ ಗೊಂದಲ ಅನುಭವಿಸುತ್ತಿದ್ದರು.

‘ರೈಲು ಇಳಿದ ತಕ್ಷಣ ಎಡಕ್ಕೆ ಹೋಗುವುದೋ, ಬಲಕ್ಕೆ ಹೋಗುವುದೋ ಗೊತ್ತಾಗುವುದಿಲ್ಲ. ಯಾರನ್ನು ಕೇಳಬೇಕು? ಅವಸರದಲ್ಲಿ ಯಾರನ್ನಾದರೂ ಮಾತನಾಡಿಸಿದಾಗ ಅವರು ಸರಿಯಾಗಿ ಮಾಹಿತಿ ಕೊಡುತ್ತಾರೆ ಅನ್ನೋದೇ ಅನುಮಾನ. ನಿಲ್ದಾಣದ ನಿರ್ಗಮನ ದ್ವಾರಗಳು, ಸ್ಕೈವಾಕ್, ಸುರಂಗಮಾರ್ಗ, ಮೆಟ್ರೊ ಸ್ಟೇಷನ್‌ಗಳು ಇಂತಲ್ಲಿ ಇವೆ ಎನ್ನುವು ಮಾಹಿತಿ ನೀಡುವ ಫಲಕಗಳನ್ನು ಅಲ್ಲಲ್ಲಿ ಅಳವಡಿಸಿದರೆ ನಮ್ಮಂಥವರಿಗೆ ಅನುಕೂಲವಾಗುತ್ತದೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅದೇ ರೈಲು ಇಳಿದ ಪದ್ಮಾ ಪ್ರಕಾಶ್ ಅವರ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ‘ನನಗೆ ಯಾವ ಕಡೆಗೆ ಹೋಗಬೇಕು ಅಂತ ಗೊತ್ತಾಗಲಿಲ್ಲ ಕಣಮ್ಮ. ಎಲ್ಲ ಜನರೂ ಯಾವ ಕಡೆಗೆ ಹೋಗ್ತಾರೆ ಅಂತ ನೋಡಿದೆ. ಆಮೇಲೆ ಅವರನ್ನೇ ಅನುಸರಿಸಿ ಸ್ಕೈವಾಕ್ ಕಡೆಗೆ ಬಂದೆ’ ಎಂದು ಪ್ರತಿಕ್ರಿಯಿಸಿದರು.

ಚೆನ್ನೈನಿಂದ ಬೆಂಗಳೂರಿಗೆ ಮೊದಲ ಬಾರಿಗೆ ಬಂದಿದ್ದ ಚಿತ್ರಾ ಬಾಲಾಜಿ ಅವರನ್ನು ಮಾತಿಗೆಳೆದಾಗ ಅವರಲ್ಲಿ ಕೋಪ ಉಕ್ಕುತ್ತಿತ್ತು. ಒಂದು ಕೈಲಿ ಸೂಟ್‌ಕೇಸ್ ಮತ್ತೊಂದು ಕೈಲಿ ಹ್ಯಾಂಡ್ ಬ್ಯಾಗ್ ಹಿಡಿದಿದ್ದ ಅವರು ಹೇಗೋ ಸುರಂಗಮಾರ್ಗದ ದಾರಿ ಕಂಡುಕೊಂಡಿದ್ದರು. ಅಲ್ಲಿದ್ದ ಲಿಫ್ಟ್ ಕೆಟ್ಟು ನಿಂತಿದ್ದನ್ನು ನೋಡಿ ಅವರ ಸಿಟ್ಟು ಮತ್ತಷ್ಟು ಪ್ರಜ್ವಲಿಸಿತು.

‘ನೋಡಿ ನಾನು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದೆ. ಹೊರಗೆ ಹೇಗೆ ಹೋಗುವುದು ಅಂತಲೇ ತಿಳಿಯಲಿಲ್ಲ. ನನಗೆ ತಮಿಳು, ಇಂಗ್ಲಿಷ್ ಬಿಟ್ರೆ ಬೇರೆ ಭಾಷೆ ಬರಲ್ಲ. ಅಲ್ಲೆಲ್ಲೂ ಸೈನ್ ಬೋರ್ಡ್‌ಗಳೂ ಇಲ್ಲ. ತಮಿಳು, ಇಂಗ್ಲಿಷ್ ಎರಡೂ ಭಾಷೆಯಲ್ಲಿ ಕೇಳಿದೆ ಯಾರೂ ಹೊರಗೆ ಹೋಗುವ ದಾರಿ ಹೇಳಲಿಲ್ಲ. ಮುಂದೆ ರೈಲ್ವೆ ಕ್ಯಾಂಟೀನ್ ಹತ್ತಿರ ಬಂದು ಕೇಳಿದೆ. ಆಗ ಈ ಸುರಂಗದ ಮಾರ್ಗ ತೋರಿಸಿದ್ರು. ರೈಲು ಇಳಿಯವವರ ಕಣ್ಣಿಗೆ ಕಾಣಿಸುವಂತೆ ನಿರ್ಗಮನದ ಬೋರ್ಡ್‌ಗಳಿದ್ದರೆ ಇಷ್ಟೊಂದು ತಾಪತ್ರಯ ಆಗುತ್ತಿರಲಿಲ್ಲ’ ಎಂದು ನಿಟ್ಟುಸಿರುಬಿಟ್ಟರು.

ಕೆಲ ಪ್ಲಾಟ್‌ಫಾರಂಗಳಲ್ಲಿ ಈಚೆಗೆ ಸ್ಕೈವಾಕ್‌ಗಳಿಗೆ ಸಂಪರ್ಕ ಕಲ್ಪಿಸಲು ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ಇವು ಕಾರ್ಯ ನಿರ್ವಹಿಸಿದ ದಿನಗಳಿಗೆ ಹೋಲಿಸಿದರೆ ಕೆಟ್ಟು ನಿಂತ ದಿನಗಳೇ ಹೆಚ್ಚು ಎಂದು ಜನರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT