ಶುಕ್ರವಾರ, ಡಿಸೆಂಬರ್ 13, 2019
27 °C

ಅಪ್ಪುಗೆಯ ಭಾವ ಬೆಸುಗೆ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಅಪ್ಪುಗೆಯ ಭಾವ ಬೆಸುಗೆ...

ಹೂವ ಮುಡಿಸಿ ನಗುವುದು, ಅಪ್ಪಿ ಮುತ್ತನಿಡುವುದು/ ಬಾರೆ ನನ್ನ ಶಾರದೆ, ಬಾರೆ ಅತ್ತ ನೋಡದೆ...

–ಕೆ.ಎಸ್.ನರಸಿಂಹಸ್ವಾಮಿ

ಮಾತನ್ನೂ ಮೀರಿದ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಅಪ್ಪುಗೆಯ ಪಾತ್ರ ಮಹತ್ವದ್ದು. ನೂರು ಪದಗಳಲ್ಲಿ ಹೇಳಲಾಗದ್ದನ್ನು ಒಂದೇ ಒಂದು ಅಪ್ಪುಗೆ ಹೇಳುತ್ತದೆ. ಹಾಗಾಗಿಯೇ ಪ್ರೀತಿ–ಪಾತ್ರರನ್ನು ಕಂಡಾಕ್ಷಣ ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರ ತನಕ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು ಲೋಕಾರೂಢಿ.

ಅಪ್ಪುಗೆಯಲ್ಲಿ ನೆಮ್ಮದಿಯ ಭಾವವಿದೆ. ದುಃಖದಲ್ಲಿದ್ದಾಗ ಸಂತೈಸಲು ಅಪ್ಪುಗೆಗಿಂತ ಬೇರೆ ಬೇಕಿಲ್ಲ. ಅಳುವಿನ ಭಾಷೆ ಬಿಟ್ಟು ಬೇರೇನೂ ಗೊತ್ತಿಲ್ಲದ ಹಸುಗೂಸಿಗೆ ಅಮ್ಮನ ಅಪ್ಪುಗೆಯ ಬೆಸುಗೆ ಕೊಡುವ ಸಂರಕ್ಷಣೆ ಅನನ್ಯ. ನಲ್ಲ–ನಲ್ಲೆಯರಲ್ಲಿ ಮಾತಿನ ಮಂಟಪಕ್ಕಿಂತ ಅಪ್ಪುಗೆಯ ಸೌಖ್ಯವೇ ಮೇಲುಗೈ... ಹೀಗೆ ಒಂದೊಂದು ಅಪ್ಪುಗೆಯ ರೀತಿಗೂ ಅದರದ್ದೇ ಆದ ವಿಶೇಷ ಗುಣವಿದೆ. ವ್ಯಕ್ತಿಗಳಿಬ್ಬರು ಪರಸ್ಪರ ಅಪ್ಪಿಕೊಂಡಾಗ ದೇಹದಲ್ಲಿ ಅಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ಇಬ್ಬರಲ್ಲೂ ನಿರಾಳ ಭಾವ ಮೂಡಿಸಿ, ಮನಸಿಗೆ ಸಂತೋಷ ಕೊಡುತ್ತದೆ. ಅಂಥ ಅಪ್ಪುಗೆಗಳ ಬಗ್ಗೆ ಇಲ್ಲಿದೆ ವಿವರಣೆ.

ತಾಯ್ತನದ ಅಪ್ಪುಗೆ: ಪುಟ್ಟ ಮಗುವೊಂದು ಗರ್ಭದಲ್ಲಿ ಮೊಳಕೆಯೊಡೆದ ಘಳಿಗೆಯಿಂದಲೇ ಮನದೊಳಗೆ ಜೀವ ನೀಡಿ ಅದನ್ನು ಅಪ್ಪಿಮುದ್ದಾಡುವ ಕನಸು ಕಾಣುತ್ತಾಳೆ ತಾಯಿ. ಆ ಜೀವ ಭೂಮಿಗೆ ಬಂದ ಮೊದಲ ಘಳಿಗೆಯಲ್ಲೇ ಎದೆಗೆ ಅಪ್ಪಿ ಹಣೆಗೊಂದು ಹೂಮುತ್ತ ನೀಡುತ್ತಾಳಾಕೆ. ಅಮ್ಮನ ತೋಳಬಂದಿಯಲ್ಲಿ ಅಪ್ಪುಗೆಯ ಬೆಚ್ಚನೆಯ ಭಾವ ಹೊಂದುವ ಕಂದಮ್ಮನಿಗೆ ತಾಯಿ ಗರ್ಭದಲ್ಲಿರುವಷ್ಟೇ ಈ ಅಪ್ಪುಗೆ ಅಪ್ಯಾಯಮಾನ.

ಬಿಗಿದಪ್ಪುಗೆ: ಬಹಳ ದಿನಗಳ ನಂತರ ಸ್ನೇಹಿತರು ಅಥವಾ ಪ್ರೀತಿಪಾತ್ರರು ಸಿಕ್ಕಾಗ ಆಗುವ ಆನಂದದಲ್ಲಿ ಒಬ್ಬರನ್ನೊಬ್ಬರು ಬಿಗಿದಪ್ಪುವುದು ಸಹಜ. ಆ ಅಪ್ಪುಗೆಯಲ್ಲಿ ಅಷ್ಟುದಿನಗಳ ಕಾಲ ಅವರನ್ನು ಮಿಸ್ ಮಾಡಿಕೊಂಡ ಭಾವವಿರುತ್ತದೆ. ಬಿಗಿಯಾಗಿ ಅಪ್ಪಿಕೊಳ್ಳುವ ಮೂಲಕ ಒಬ್ಬರನ್ನೊಬ್ಬರು ಸಂತೈಸುವ ಭಾವವಿರುತ್ತದೆ. ಇದು ಸಂಬಂಧದ ಆಳತೆಯನ್ನು ತೋರಿಸುತ್ತದೆ.

ಹಿಂದಿನಿಂದ ಅಪ್ಪುಗೆ: ಹೆಂಡತಿ ಅಡುಗೆ ಮಾಡುತ್ತಿರುವಾಗ ಸಾಮಾನ್ಯವಾಗಿ ಗಂಡ ಹಿಂದಿನಿಂದ ಬಂದು ಅಪ್ಪುವುದು ವಾಡಿಕೆ. ಈ ಅಪ್ಪುಗೆಯಲ್ಲಿ ಅವಳೆಡೆಗೆ ಅದಮ್ಯ ಪ್ರೀತಿಯಿರುತ್ತದೆ. ಅವಳ ಪ್ರತಿ ಕ್ಷಣದಲ್ಲೂ ತಾನಿದ್ದೇನೆ ಎಂಬ ಭಾವ ಮೂಡಿಸುವ ಅಪ್ಪುಗೆ ಇಬ್ಬರ ನಡುವಿನ ರೊಮ್ಯಾಂಟಿಕ್ ಘಳಿಗೆಗೆ ಮುನ್ನುಡಿ. ಸಂಗಾತಿಯ ಬಗೆಗೆನ ಅದಮ್ಯ ಪ್ರೀತಿಯಿರುವ ಹೆಣ್ಣು ಗಂಡನ್ನು ಹಿಂದಿನಿಂದ ಅಪ್ಪಿ ಅವನ ಬೆನ್ನ ಮೇಲೇರುವುದು ತುಂಟ ಪ್ರೇಮಿಯ ಸಂಕೇತ ಕೂಡ.

ದೀರ್ಘಕಾಲದ ಅಪ್ಪುಗೆ: ಸಂಗಾತಿಗಳಿಬ್ಬರೂ ಬಹುದಿನಗಳ ನಂತರ ಜತೆಯಾಗಿ ಕಾಲ ಕಳೆಯುವ ಸಮಯದಲ್ಲಿ ದೀರ್ಘಕಾಲದ ಅಪ್ಪುಗೆ ಖುಷಿ ಕೊಡುತ್ತದೆ. ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಧಾನವಾಗಿ ಸಂಜೆ ಅಥವಾ ಬೆಳಗಿನ ಹೊತ್ತು ಸಮುದ್ರ ದಂಡೆಯಲ್ಲಿ ನಡೆಯುವುದು ಇಬ್ಬರಿಗೂ ಇಷ್ಟವಾಗಬಲ್ಲದು. ಸಂಗಾತಿಯೆಡೆಗಿನ ಅದಮ್ಯ ಪ್ರೇಮ ಮತ್ತು ಅಗತ್ಯವನ್ನು ಈ ದೀರ್ಘಕಾಲದ ಅಪ್ಪುಗೆ ಪ್ರತಿಪಾದಿಸುತ್ತದೆ.

ಕ್ಯಾಚ್ ಅಪ್ಪುಗೆ: ದೀರ್ಘಕಾಲದ ನಂತರ ಭೇಟಿಯಾದ ಪ್ರೇಮಿಗಳೋ ಅಥವಾ ಗಂಡ–ಹೆಂಡತಿಗೆ ಕ್ಯಾಚ್ ಅಪ್ಪುಗೆ ಖುಷಿ ತರುತ್ತದೆ. ಸಂಗಾತಿಯ ಭೇಟಿಯ ಮೊದಲ ಘಳಿಗೆಯಲ್ಲಿ ಪ್ರೀತಿಯ ತೀವ್ರತೆಯನ್ನು ಸಾರುವ ಈ ಅಪ್ಪುಗೆಯಲ್ಲಿ ಗಂಡು, ಹೆಣ್ಣನ್ನು ಎತ್ತಿ ಹಿಡಿಯುವ ಮೂಲಕ ಅವಳನ್ನು ಮಿಸ್ ಮಾಡಿಕೊಂಡ ಬಗೆಯನ್ನು ಅಭಿವ್ಯಕ್ತಿ ಪಡಿಸುತ್ತಾನೆ.

ಸೌಹಾರ್ದದ ಅಪ್ಪುಗೆ: ಕಚೇರಿಯಲ್ಲಿ ಸಹೋದ್ಯೋಗಿಗಳನ್ನೋ ಅಥವಾ ಸ್ನೇಹಿತರನ್ನು ಸೌಹಾರ್ದದಿಂದ ಅಪ್ಪಿಕೊಳ್ಳುವುದೂ ಒಂದು ಕಲೆ. ಅಲ್ಲಿ ಸಂಬಂಧಗಳ ಭಾವ–ಬೆಸುಗೆಯ ಜತೆಗೆ ಸೌಹಾರ್ದದ ಭಾವವಿರುತ್ತದೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಹಿತಚಿಂತನೆ ಅಡಗಿರುತ್ತದೆ.

ಪ್ರತಿಕ್ರಿಯಿಸಿ (+)