ಶುಕ್ರವಾರ, ಡಿಸೆಂಬರ್ 13, 2019
27 °C

ಶ್ರೀಯಾ ಅಂದದ ರಹಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಯಾ ಅಂದದ ರಹಸ್ಯ

ಅಪ್ರತಿಮ ಚೆಲುವು ಮತ್ತು ಅಭಿನಯದಿಂದ ದಕ್ಷಿಣ ಭಾರತದ ಸಿನಿರಸಿಕರ ಮನಗೆದ್ದವರು ನಟಿ ಶ್ರೀಯಾ ಶರಣ್. ದಕ್ಷಿಣ ಭಾರತ ಚಿತ್ರರಂಗದಲ್ಲಿ  ತಮನ್ನಾ ಭಾಟಿಯಾ ಬಿಟ್ಟರೆ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಇವರು. ‘ಇಷ್ಟಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಯಾ, ತೆಳ್ಳಗಿನ ಸೊಂಟದ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಬೆಡಗಿ.

ತ ಮ್ಮ ಅಪ್ರತಿಮ ಚೆಲುವು ತಾಯಿಯಿಂದಲೇ ಬಂದದ್ದು ಎಂದು ಹೇಳುವ ಇವರು, ಸೌಂದರ್ಯ ಕಾಪಾಡಿಕೊಳ್ಳಲು ಚೆನ್ನಾಗಿ ನಿದ್ದೆ ಮಾಡಬೇಕೆನ್ನುತ್ತಾರೆ.

ಶೂಟಿಂಗ್ ಇಲ್ಲದ ವೇಳೆಯಲ್ಲಿ ಮೇಕಪ್‌ ರಹಿತವಾಗಿರುವ ಅವರು, ತ್ವಚೆಗೆ ರಾಸಾಯನಿಕ ಸೌಂದರ್ಯ ವರ್ಧಕಗಳನ್ನು ಅಷ್ಟಾಗಿ ಬಳಸುವುದಿಲ್ಲವಂತೆ. ಅಮ್ಮ ಹೇಳುವ ಸಾಂಪ್ರದಾಯಿಕ ಸೌಂದರ್ಯದ ಟಿಪ್ಸ್‌ಗಳನ್ನು ಅನುಸರಿಸುತ್ತಾರಂತೆ ಅವರು. ಇವರ ಗುಲಾಬಿ ಕೆನ್ನೆಯ ಸೌಂದರ್ಯ ಅಡಗಿರುವುದು ಗುಲಾಬಿ ಜಲದಲ್ಲಂತೆ. ದಣಿವು ಅನಿಸಿದಾಗಲೆಲ್ಲಾ ಮುಖಕ್ಕೆ ಗುಲಾಬಿ ರಸವನ್ನು ಚಿಮುಕಿಸಿಕೊಳ್ಳುತ್ತಾರೆ. ಇದರಿಂದ ದಣಿವು ಮಾಯವಾಗಿ ನವೋಲ್ಲಾಸ ಮೂಡುತ್ತದೆ ಅನ್ನುತ್ತಾರೆ ಶ್ರೀಯಾ. ಅಷ್ಟೇ ಅಲ್ಲ, ಮೇಕಪ್ ಮುಗಿದ ಮೇಲೂ ಮುಖಕ್ಕೆ ಗುಲಾಬಿ ಜಲ ಸ್ಪ್ರೇ ಮಾಡಿಕೊಳ್ಳುತ್ತಾರಂತೆ ಅವರು. ತಾವು ಹೋದೆಲ್ಲೆಲ್ಲಾ ತಮ್ಮ ಜತೆ ಗುಲಾಬಿ ಜಲವನ್ನು ಮರೆಯದೇ ಕೊಂಡೊಯ್ಯುತ್ತಾರೆ.

ಇವರು ಬಳಸುವ ಮಾಯಿಶ್ಚರೈಸಿಂಗ್‌ನಲ್ಲೂ ಗುಲಾಬಿ ಜಲ ಇರುತ್ತೆ. ಅದನ್ನು ಅವರು ಟೋನರ್ ರೀತಿಯಲ್ಲೂ ಬಳಸುತ್ತಾರೆ. ಮುಖಕ್ಕೆ ಕ್ಲೆನ್ಸಿಂಗ್‌ ಮಾಡಿಕೊಳ್ಳಲು ಕಡ್ಲೆಹಿಟ್ಟು, ಅರಿಶಿಣ ಪುಡಿ ಅಥವಾ ಮೊಸರಿನ ಮಿಶ್ರಣ ಉಪಯೋಗಿಸುತ್ತಾರೆ. ಕಣ್ಣಿನಲ್ಲೇ ಸೌಂದರ್ಯವನ್ನು ಅಡಗಿಸಿಕೊಂಡಿರುವ ಈ ಚೆಲುವೆ ಮನೆಯಲ್ಲಿದ್ದಾಗಲೂ ಕಣ್ಣಿಗೆ ಕಾಜಲ್ ಹಚ್ಚುವುದನ್ನು ಮರೆಯುವುದಿಲ್ಲವಂತೆ.

ಇನ್ನು ಬಿಲ್ಲಿನಂತೆ ಬಳಕುವ ತಮ್ಮ ದೇಹಾಕೃತಿಗಾಗಿ ಇವರು ನಿತ್ಯವೂ 45 ನಿಮಿಷಗಳ ಕಾಲ ಯೋಗ, ವ್ಯಾಯಾಮದ ಮೊರೆ ಹೋಗುತ್ತಾರೆ. ಮೂಲತಃ ಕಥಕ್ ನೃತ್ಯಗಾತಿಯೂ ಆಗಿರುವ ಅವರಿಗೆ ನೃತ್ಯವೆಂದರೆ ಪಂಚಪ್ರಾಣ. ಬಿಡುವು ಸಿಕ್ಕಾಗಲೆಲ್ಲಾ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ತೋಳುಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಪವರ್ ಯೋಗ ಮಾಡುತ್ತಾರೆ. ವಾರಕ್ಕೆ ಮೂರು ಬಾರಿ ಕಾರ್ಡಿಯೋ ಮಾಡುವುದರ ಜತೆಗೆ ಆಟ ಮತ್ತು ಈಜುತ್ತಾರೆ.

ಊಟದಲ್ಲಿ ಕಟ್ಟುನಿಟ್ಟಾಗಿರುವ ಶ್ರೀಯಾ, ಮುಂಜಾನೆಯನ್ನು ಕಿತ್ತಳೆ ಹಣ್ಣಿನ ರಸ ಸೇವನೆಯ ಮೂಲಕ ಆರಂಭಿಸುತ್ತಾರೆ. ಮೊಟ್ಟೆಯ ಬಿಳಿಭಾಗದ ಆಮ್ಲೆಟ್ ಅನ್ನು ಬೆಳಗಿನ ಉಪಾಹಾರವಾಗಿ ಸೇವಿಸುತ್ತಾರೆ. ತಿಂಡಿಗೆ ಪರಾಠ ಇಲ್ಲವೇ ದೋಸೆ ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ಪ್ಲೇನ್ ರೋಟಿ, ದಾಲ್ ಮತ್ತು ಬೆಂಡೇಕಾಯಿಯ ಪಲ್ಯ ಸೇವಿಸುತ್ತಾರೆ. ಚಿಕನ್ ಮತ್ತು ಮಟನ್‌ಗಿಂತ ಇವರಿಗೆ ಮೀನು ಎಂದರೆ ಇಷ್ಟವಂತೆ. ಜಂಕ್ ಫುಡ್‌ಗೆ ಅಷ್ಟಾಗಿ ಸೊಪ್ಪು ಹಾಕುವುದಿಲ್ಲ.

ದೇಹಾಕೃತಿಯನ್ನು ಕಾಪಾಡಿಕೊಳ್ಳಲು ಉಪ್ಪಿನ ಸೇವನೆ ಕಡಿಮೆಗೊಳಿಸಿರುವ ಇವರು, ಸಾಧ್ಯವಾದಷ್ಟೂ ನೀರು ಮತ್ತು ಹಣ್ಣಿನ ರಸ ಸೇವಿಸುತ್ತಾರೆ. ಒಮ್ಮಲೇ ಜಾಸ್ತಿ ಆಹಾರ ಸೇವಿಸುವುಕ್ಕಿಂತ ಊಟವನ್ನು ವಿಭಾಗಿಸಿಕೊಂಡು ತಿನ್ನುತ್ತಾರೆ. ರಾತ್ರಿ 7.30ರೊಳಗೆ ಊಟ ಮುಗಿಸುವ ಶ್ರೀಯಾ ಮಲಗುವ ಮುನ್ನ ತಪ್ಪದೇ ಒಂದು ಲೋಟ ಹಾಲು ಕುಡಿಯುತ್ತಾರೆ.

ಪ್ರತಿಕ್ರಿಯಿಸಿ (+)