ಮಂಗಳವಾರ, ಡಿಸೆಂಬರ್ 10, 2019
26 °C

‘ಮರಾಠಿ– ಕನ್ನಡಿಗರ ಬಾಂಧವ್ಯದ ಸಂಕೇತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮರಾಠಿ– ಕನ್ನಡಿಗರ ಬಾಂಧವ್ಯದ ಸಂಕೇತ’

ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜ ಮರಾಠಿಗರು ಹಾಗೂ ಕನ್ನಡಿಗರ ನಡುವಿನ ಬಾಂಧವ್ಯದ ಸಂಕೇತವಾಗಿದ್ದಾರೆ ಎಂದು ಸಾಹಿತಿ ಯ.ರು. ಪಾಟೀಲ ಹೇಳಿದರು.

ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿನ ಸಂಭಾಜಿ ಉದ್ಯಾನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವಾಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಇಡೀ ದೇಶದ ಆಸ್ತಿ. ಒಳ್ಳೆಯ ಆಡಳಿತಗಾರ, ಶೌರ್ಯವಂತ ಹಾಗೂ ಸಂಘಟನಾ ಚತುರರಾಗಿದ್ದರು. ಬೆಳವಡಿ ಮಲ್ಲಮ್ಮನ ವಿರುದ್ಧ ಯುದ್ಧ ಮಾಡಿದ್ದರೂ, ಆಕೆಯನ್ನು ಸಹೋದರಿಯಂತೆ ಕಂಡಿದ್ದರು. ಮಹಿಳೆಯರ ಬಗ್ಗೆ ವಿಶೇಷ ಗೌರವ ಹೊಂದಿದ್ದರು’ ಎಂದು ಸ್ಮರಿಸಿದರು.

ಶ್ರೇಷ್ಠ ಮಹಾರಾಜ: ‘ದೇಶಕಂಡ ಅಪರೂಪದ ನಾಯಕತ್ವ ಗುಣ ಹೊಂದಿದ ಶ್ರೇಷ್ಠ ಮಹಾರಾಜ. ಸುತ್ತಮುತ್ತಲಿನ ಜನರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಬಳಸಿಕೊಂಡು ಸಂಘಟನೆ ಮಾಡಿದ್ದರು. ಯುದ್ಧ ಚತುರ, ಮಹಾಪರಾಕ್ರಮಿ ಹಾಗೂ ಸದ್ಗುಣಗಳನ್ನು ಹೊಂದಿದ್ದರು. ತಂಜಾವೂರನ್ನು ಗೆದ್ದು ಮರಳಿ ಹಂಪಿಯ ಮೂಲಕ ಮಹಾರಾಷ್ಟ್ರಕ್ಕೆ ಹೋಗುವಾಗ, ಹಂಪಿಯಲ್ಲಿ ಹಾಳಾಗಿರುವ ದೇವಾಲಯಗಳನ್ನು ಕಂಡು ಮರುಕಪಟ್ಟಿದ್ದರು’ ಎಂದು ತಿಳಿಸಿದರು.

ಇದಕ್ಕೆ ಒಪ್ಪಿ, ಮತ್ತೆ ಹಂಪಿಗೆ ಬರುವುದಾಗಿ ತಿಳಿಸಿದ್ದರು ಎನ್ನುವುದು ಇತಿಹಾಸದಿಂದ  ತಿಳಿದುಬರುತ್ತದೆ. ಧಾರವಾಡ ತಾಲ್ಲೂಕಿನಲ್ಲಿರುವ ಯಾದವಾಡ ಗ್ರಾಮದ ಹನುಮಪ್ಪನ ದೇವಸ್ಥಾನದಲ್ಲಿ ಶಿವಾಜಿ ಮಹಾರಾಜರ ಶಿಲ್ಪಚಿತ್ರವಿದೆ. ಆ ಶಿಲ್ಪಚಿತ್ರದಲ್ಲಿ ಶಿವಾಜಿಯು ಬೆಳವಡಿ ಮಲ್ಲಮ್ಮಳ ಪುತ್ರ ನಾಗಭೂಷನನಿಗೆ ಹಾಲು ಕುಡಿಸುವ ಸನ್ನಿವೇಶ ಚಿತ್ರಿಸಲಾಗಿದೆ. ನೀನು ನನ್ನ ಸಹೋದರಿ, ನಿನ್ನ ಸೇನೆ ಹಾಗೂ ಸಾಮ್ರಾಜ್ಯದ ರಕ್ಷಣೆ ನನ್ನ ಹೊಣೆ ಎಂದು ಮಾತು ನೀಡಿದ್ದರ ಸಂಕೇತವಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ’ ಎಂದರು.

ಮುಂದುವರಿಸಬೇಕು: ‘ಕನ್ನಡಿಗರು ಹಾಗೂ ಮರಾಠಿಗರ ನಡುವೆ ಹಿಂದಿನಿಂದಲೂ ಉತ್ತಮ ಸಂಬಂಧ ಇರುವುದು ಇತಿಹಾಸದಿಂದ ತಿಳಿದುಬರುತ್ತದೆ. ಇದನ್ನು ನಾವು ಕಾಪಾಡಿಕೊಂಡು, ಮುಂದುವರಿಸಿಕೊಂಡು ಸಾಗಬೇಕಿದೆ’ ಎಂದು ಆಶಿಸಿದರು.

ಮರಾಠಾ ಸಮಾಜದ ಮುಖಂಡ ರಾಜೇಶ ಜಾಧವ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಮುಖಂಡರಾದ ಮಲ್ಲೇಶ ಚೌಗುಲೆ, ಯಲ್ಲಪ್ಪ ಹುದಲಿ, ಸುಧೀರ ಚೌಗುಲೆ ಇದ್ದರು.

ಬೆಳಿಗ್ಗೆ ನಡೆದ ಮೆರವಣಿಗೆಗೆ ಮೇಯರ್‌ ಸಂಜೋತಾ ಬಾಂದೇಕರ ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಡಿಸಿಪಿ ಸೀಮಾ ಲಾಟ್ಕರ್‌ ಭಾಗವಹಿಸಿದ್ದರು. ಶಿವಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ಫುಲ್ಬಾಗ್‌ ಗಲ್ಲಿ ಮಾರ್ಗವಾಗಿ ನಾಥಪೈ ವೃತ್ತ ತಲುಪಿತು.‌

ಪ್ರತಿಕ್ರಿಯಿಸಿ (+)