ಗುರುವಾರ , ಡಿಸೆಂಬರ್ 12, 2019
25 °C

ಓದಿನ ಜತೆಗೆ ಪರಿಸರ ರಕ್ಷಣೆ ಪಾಠ

ಪಿ.ಕೃಷ್ಣ ಸಿರವಾರ Updated:

ಅಕ್ಷರ ಗಾತ್ರ : | |

ಓದಿನ ಜತೆಗೆ ಪರಿಸರ ರಕ್ಷಣೆ ಪಾಠ

ಸಿರವಾರ: ಪಟ್ಟಣ ಜ್ಞಾನ ಗಂಗೋತ್ರಿ ಎಜುಕೇಷನ್ ಟ್ರಸ್ಟ್ ನ ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಒಂದು ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಗಿಡಗಳ ಪೊಷಣೆಯನ್ನು ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿಗೆ ವಹಿಸಲಾಗಿದ್ದು, ಅವುಗಳ ಮೇಲೆ ಅವರ ಹೆಸರು ಬರೆಯಲಾಗಿದೆ.

ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರು ತರಬೇತಿ ಮತ್ತು ಸ್ಪರ್ಧೆಗಳನ್ನು ನಡೆಸಿಕೊಡುತ್ತಾರೆ. ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ ವರ್ಷದಲ್ಲಿ ಎರಡು ಬಾರಿ ವಿಶೇಷ ತರಬೇತಿ ನೀಡಲಾಗುತ್ತದೆ.

ಮರೆಯಾಗುತ್ತಿರುವ ಗಿಲ್ಲಿದಾಂಡು, ಮರಕೋತಿ ಆಟ, ಲಗೋರಿ, ಹಗ್ಗ ಜಗ್ಗಾಟ, ಗೋಲಿ ಆಟಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಂಡು, ಪ್ರೋತ್ಸಾಹಿಸಲಾಗುತ್ತಿದೆ.

ಅವುಗಳ ಜತೆಗೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕ್ರಿಕೆಟ್, ಕಬಡ್ಡಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ. ಇದೇ ವರ್ಷ ಶಾಲೆಯ ವಿದ್ಯಾರ್ಥಿ ವಿಜಯರಾಜ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.

ಕಳೆದ ಆರು ವರ್ಷದಿಂದ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬರುತ್ತಿದೆ. ಚಿತ್ರಕಲೆ, ವಸ್ತು ಪ್ರದರ್ಶನ, ಪ್ರಬಂಧ ಸ್ಪರ್ಧೆ, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ವಿಷಯವಾರು ವಿದ್ಯಾರ್ಥಿಗಳ ಕ್ಲಬ್ ರಚಿಸಿ ಪ್ರತಿ ಬುಧವಾರ ಚರ್ಚೆ ಮತ್ತು ವಿಷಯ ಮಂಡನೆ ನಡೆಸಲಾಗುತ್ತದೆ.

ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಓದಿನಲ್ಲೂ ಹೆಚ್ಚಿನ ಅಂಕ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪಾಲಕರು ಹರ್ಷ ವ್ಯಕ್ತಪಡಿಸುತ್ತಾರೆ.

ಪ್ರತಿಕ್ರಿಯಿಸಿ (+)