‘ಅಪ್ಪನ ಮಗಳೇ, ಆದ್ರೆ ಅಡುಗೆ ಅಷ್ಟಕ್ಕಷ್ಟೇ’

7

‘ಅಪ್ಪನ ಮಗಳೇ, ಆದ್ರೆ ಅಡುಗೆ ಅಷ್ಟಕ್ಕಷ್ಟೇ’

Published:
Updated:
‘ಅಪ್ಪನ ಮಗಳೇ, ಆದ್ರೆ ಅಡುಗೆ ಅಷ್ಟಕ್ಕಷ್ಟೇ’

ನಾನು ಸಿಹಿಕಹಿ ಚಂದ್ರು ಮಗಳು ಅಂದಾಕ್ಷಣ ಎಲ್ಲರೂ ನನಗೂ ಅಪ್ಪನಷ್ಟೇ ಚೆನ್ನಾಗಿ ಅಡುಗೆ ಬರುತ್ತೆ ಅಂದುಕೊಳ್ಳುತ್ತಾರೆ. ಆದರೆ ನನಗೆ ಅಪ್ಪನಷ್ಟು ಅಡುಗೆ ಬಗ್ಗೆ ಆಸಕ್ತಿ ಇಲ್ಲ. ಕೆಲವೇ ಅಡುಗೆಗಳನ್ನು ಚೆನ್ನಾಗಿ ಮಾಡುತ್ತೇನೆ ಎನ್ನುವ ವಿಶ್ವಾಸವಿದೆ. ಅಮ್ಮ ಕೆಲವು ಸರಳ ಅಡುಗೆಗಳನ್ನು ಕಲಿಸಿದ್ದಾರೆ. ಅಪ್ಪ ಮಾಡುವ ವಿಶೇಷ ಅಡುಗೆಗಳನ್ನು ನೋಡಿ ತಿಳಿದುಕೊಂಡಿದ್ದೇನೆ. ಚಿತ್ರೀಕರಣ ಇಲ್ಲದಾಗ, ಮನಸಾದಾಗ ಹೊಸರುಚಿ ಮಾಡುವುದುಂಟು. ಆದ್ರೆ ಅದು ತುಂಬಾ ಅಪರೂಪ.

ನಾನು ಮೊದಲು ಅಡುಗೆ ಮಾಡಿದ್ದು 8 ವರ್ಷದವಳಿದ್ದಾಗ. ರಾಜರಾಜೇಶ್ವರಿನಗರದ ನನ್ನಜ್ಜಿಯೊಬ್ಬರು ನನಗೆ ಸುಲಭವಾಗಿ ಬೇಸನ್‌ ಲಡ್ಡು ಮಾಡುವುದನ್ನು ಹೇಳಿಕೊಟ್ಟಿದ್ದರು. ನಾನು ಮನೆಗೆ ಬಂದು ಪ್ರಯೋಗ ಮಾಡಿದ್ದೆ. ಕಡ್ಲೆಹಿಟ್ಟು, ಸಕ್ಕರೆಹುಡಿ, ತುಪ್ಪ ಮಿಶ್ರಣ ಮಾಡಿಕೊಂಡು ಲಡ್ಡು ಮಾಡಬೇಕಾಗಿತ್ತು. ಒಂದಿಷ್ಟು ಲಡ್ಡು ಮಾಡಿದ್ದೆ. ಮತ್ತೊಂದಿಷ್ಟು ತಟ್ಟೆಯಲ್ಲಿ ಹರಡಿ, ವಜ್ರದಾಕಾರದಲ್ಲಿ ಕಟ್‌ ಮಾಡಿ ಬರ್ಫಿ ಅಂತಾ ಮನೆಯವರಿಗೆ ಕೊಟ್ಟಿದ್ದೆ. ರುಚಿ ಹೇಗಿತ್ತೋ ಗೊತ್ತಿಲ್ಲ. ಆಗನಾನಿನ್ನೂ ಸಣ್ಣವಳಲ್ವಾ, ನನಗೆ ಬೇಜಾರು ಮಾಡಬಾರದು ಅಂತಾನೋ ಅಥವಾ ಚೆನ್ನಾಗೇ ಆಗಿತ್ತೋ ಎಲ್ಲರೂ ‘ವ್ಹಾಹ್‌’ ಅಂತ ತಿಂದಿದ್ದರು.

ಅಪ್ಪ– ಅಮ್ಮ ಇಬ್ಬರೂ ಮನೆಯಲ್ಲಿ ಇಲ್ಲ ಅಂದ್ರೆ ಅಡುಗೆ ಮನೆ ಜವಾಬ್ದಾರಿ ನನ್ನದೇ. ಅಜ್ಜ, ಅಜ್ಜಿಗೆ ಅನ್ನ, ಸಾರು ಮಾಡಿಕೊಡುತ್ತೇನೆ. ಉಪ್ಪಿಟ್ಟು ಅಂದ್ರೆ ಎಷ್ಟೋ ಜನರು ಮೂಗು ಮುರಿಯುತ್ತಾರೆ. ಆದ್ರೆ ನನಗೆ ಉಪ್ಪಿಟ್ಟು ಅಂದ್ರೆ ಭಾರಿ ಇಷ್ಟ. ಅಪ್ಪ ಏಳೆಂಟು ನಮೂನೆ ಉಪ್ಪಿಟ್ಟು ಮಾಡ್ತಾರೆ. ನಾನೂ ಕೆಲವನ್ನು ಕಲಿತಿದ್ದೇನೆ. ನಾನು ನಟನಾ ತರಬೇತಿಗಾಗಿ ಮುಂಬೈನಲ್ಲಿ ಒಂದೂವರೆ ವರ್ಷ ಇದ್ದೆ. ಆಗ ಅಲ್ಲಿ ಮನೆಯೊಂದರಲ್ಲಿ ಒಬ್ಬಳೇ ಇದ್ದೆ. ಅಡುಗೆ ನಾನೇ ಮಾಡಿಕೊಳ್ಳಬೇಕಾಗಿತ್ತು. ವಾರದಲ್ಲಿ ಐದು ದಿನ ಬರೀ ಮ್ಯಾಗಿ, ಉಪ್ಪಿಟ್ಟು ಮಾಡಿ ತಿನ್ನುತ್ತಿದ್ದೆ. ಮ್ಯಾಗಿಯನ್ನು ಸೂಪ್‌ ಥರ ಮಾಡಿಕೊಂಡು ತಿನ್ನೋಕೆ ನನಗಿಷ್ಟ. ನಾನು ಶೂಟಿಂಗ್‌ ಇದ್ದಾಗ ಡಯೆಟ್‌ ಮಾಡುತ್ತೇನೆ. ಆಗ ಹೆಚ್ಚು ಸಲಾಡ್‌ ಹಾಗೂ ಸ್ಮೂತಿಗಳನ್ನು ಮಾಡಿಕೊಳ್ಳುತ್ತೇನೆ. ನನ್ನ ಇಷ್ಟದ ತಿನಿಸು ಗ್ರಿಲ್ಡ್‌ ವೆಜಿಟೇಬಲ್ ಸಲಾಡ್. ಮಾಡೋದು ಸುಲಭ, ರುಚಿ ಬಹಳ.

ಗ್ರಿಲ್ಡ್‌ ವೆಜಿಟೆಬಲ್‌ ಸಲಾಡ್‌

ಸಾಮಗ್ರಿಗಳು: ಬ್ರೊಕೊಲಿ, ಕ್ಯಾರೆಟ್‌, ಕ್ಯಾಪ್ಸಿಕಂ (ನಿಮಗಿಷ್ಟವಾಗುವ ಯಾವುದೇ ತರಕಾರಿಯನ್ನು ಬಳಸಬಹುದು), ಒಂದು ಬಟ್ಟಲು ಮೊಸರು, ಒಂದು ಚಮಚ ಜೀರಿಗೆ ಹುಡಿ, ಒಂದು ಚಮಚ ಅಚ್ಚ ಖಾರದ ಪುಡಿ, ಉಪ್ಪು, ಅರ್ಧ ಚಮಚ ಆಲಿವ್‌ ಎಣ್ಣೆ.

ವಿಧಾನ: ಒಂದು ಬಟ್ಟಲು ಮೊಸರಿಗೆ ಜೀರಿಗೆ ಹುಡಿ, ಅಚ್ಚ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆ ಮಿಶ್ರಣಕ್ಕೆ ಬ್ರೊಕೊಲಿ, ಕ್ಯಾರೆಟ್‌, ಕ್ಯಾಪ್ಸಿಕಂ ಹಾಗೂ ಇತರ ತರಕಾರಿಗಳನ್ನು ಹಾಕಿ, ಮೊಸರಿನಲ್ಲಿ ತರಕಾರಿ ಹೋಳು ಬೆರೆಯುವಂತೆ ಚೆನ್ನಾಗಿ ಕಲಸಿಕೊಳ್ಳಿ. ಒಂದು ತವಾದಲ್ಲಿ ಅರ್ಧ ಚಮಚ ಆಲಿವ್‌ ಎಣ್ಣೆ ಹಾಕಿ ಒಂದೊಂದಾಗಿ ತರಕಾರಿಗಳನ್ನು ಫ್ರೈ ಮಾಡಿ, ಎರಡೂ ಕಡೆ ಮಡಚಿ ಹಾಕುತ್ತಾ ಗ್ರಿಲ್‌ನಲ್ಲಿ ಬೇಯಿಸಿದಂತೆ ಫ್ರೈ ಮಾಡಬೇಕು. ಹದವಾಗಿ ಬೇಯಿಸಿದರೆ ರುಚಿ ಅದ್ಭುತವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry