ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಮನುಷ್ಯನಲ್ಲಿರುವ ದೈವೀಸಗುಣ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹಾಗೆ ನೋಡಿದರೆ ಪ್ರಸಿದ್ಧ ಲೈಲಾ ಮಜ್ನೂ ಪ್ರೇಮ ಪ್ರಕರಣದಲ್ಲಿ ಮಜ್ನೂ ಓರ್ವ ಉನ್ಮತ್ತ ಪ್ರೇಮಿ ಎಂದು ಎಲ್ಲರಿಂದ ಕರೆಯಲ್ಪಟ್ಟವನು. ಆದರೆ ಲೈಲಾಳ ಮೇಲಿನ ತದೇಕಚಿತ್ತದ ಧ್ಯಾನದಲ್ಲಿ ಆತನನ್ನು ಅಧ್ಯಾತ್ಮ ಪ್ರೇಮಿಗೆ ಸಮಾನನೆಂದು ಪರಿಗಣಿಸಬಹುದು. ಪ್ರೇಮವೆಂಬುದು ಮಾನವ ಕುಲದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.

ಪ್ರೇಮವು ತನ್ನ ಭಕ್ತರಲ್ಲಿರುವ ಪವಿತ್ರ ಭಾವನೆಯೆಂದೂ, ತನ್ನಲ್ಲಿ ಅವರ ಬಗೆಗಿರುವ ಪ್ರೇಮವನ್ನು ತಿಳಿಸುವ ದೈವೀಮಾರ್ಗವೂ ಆಗಿದೆ ಎಂದು ದೇವರು ಪರಿಗಣಿಸುತ್ತಾನೆ. ಇದರಿಂದಾಗಿ ದೇವರ ಗುಣಲಕ್ಷಣಗಳಲ್ಲಿ ತನ್ನ ಭಕ್ತನ ಮೇಲಿರುವ ಪ್ರೇಮವೂ ಒಂದಾಗಿದೆ. ಭಕ್ತನ ಗುಣಲಕ್ಷಣಗಳಲ್ಲಿ ದೇವರ ಮೇಲಿನ ಪ್ರೀತಿಯು ಮುಖ್ಯವೆನಿಸಲ್ಪಟ್ಟಿದೆ.

ಪಂಡಿತರು ಪ್ರೇಮಕ್ಕೆ ನೀಡಿರುವ ಅರ್ಥ ‘ಆಸೆ' ಅಥವಾ ‘ಇಚ್ಛೆ', `ಸಂಕಲ್ಪ' ಎಂದಾಗಿದೆ. ಆದರೆ ಸೂಫಿಗಳು ಅಧ್ಯಾತ್ಮ ಪ್ರೇಮಕ್ಕೆ ನೀಡಿರುವ ಅರ್ಥವು ಸರಳವಾದ ಇಚ್ಛೆಗಿಂತ ಮೀರಿದ್ದಾಗಿರುತ್ತದೆ. ಸರಳವಾದ ಇಚ್ಛೆಗೆ ದೈವೀಸಾಮಿಪ್ಯದ ಭಾವನೆ ಬರಬೇಕಾದರೆ ಪಾವಿತ್ರ್ಯದ ವಿಶೇಷ ಲಕ್ಷಣವನ್ನು ಅದಕ್ಕೆ ಹೊಂದಿಸಬೇಕಾಗುತ್ತದೆ. ತನ್ನ ಭಕ್ತನ ಮೇಲಿನ ದೇವರ ಪ್ರೇಮವು ಅವನಿಗೆ ಅನುಗ್ರಹವನ್ನು ದಯಪಾಲಿಸುವ ಉದ್ದೇಶದಿಂದ ಉಂಟಾಗಿದೆ. ಇದು ಕೆಲವೊಂದು ವಿಶೇಷ ಸಂದರ್ಭದಲ್ಲಿ ಅವನು ತೋರುವ ಕರುಣೆಯ ರೀತಿಯಲ್ಲೇ ಇರುತ್ತದೆ. ಆದುದರಿಂದ ಭಕ್ತನ ಮೇಲೆ ತೋರುವ ಕರುಣೆಯು ಕೂಡ`ಇಚ್ಛೆ'ಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿದೆ. ಅಧ್ಯಾತ್ಮಿಗಳು ಪ್ರೇಮದ ಬಗ್ಗೆ ತಾತ್ಸಾರ ತೋರುವ ಜನರನ್ನು ಪಶುಗಳಿಗೆ, ಕಾಡುಕತ್ತೆಗಳು, ಕಲ್ಲುಬಂಡೆಗಳು ಅಥವಾ ಮೃಗಗಳಿಗೆ ಹೋಲಿಸುತ್ತಾರೆ. ಕುರಾನಿನ 7ನೆಯ ಅಧ್ಯಾಯದಲ್ಲಿನ 179ನೆಯ ವಾಕ್ಯದಲ್ಲಿ ಉಲ್ಲೇಖಿಸಿದಂತೆ `ಅವರು ಕ್ರೂರ ಮೃಗಗಳಂತೆ ಮಾತ್ರವಲ್ಲ, ಅಡ್ಡದಾರಿ ಹಿಡಿದವರು’.

ಇದೇ ರೀತಿಯಲ್ಲಿ ರೂಮಿಯವರು ತಮ್ಮ`ಮಸ್ನವಿ’ ಕಾವ್ಯದಲ್ಲಿ `ಇವರನ್ನು ನಾಯಿಗಳು ಎನ್ನುವಂತಿಲ್ಲ ಯಾಕೆಂದರೆ ಪ್ರಾಣಿಗಳು ಕೂಡ ಒಂದಲ್ಲ ಒಂದು ರೀತಿಯ ಪ್ರೇಮವನ್ನು ತಿಳಿದಿರುತ್ತವೆ’ ಎಂದು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಅತ್ತಾರ್ ತನ್ನ`ತದ್ಕೀರತುಲ್ ಔಲಿಯಾ’ ಗ್ರಂಥದಲ್ಲಿ, ಸಂತ ಶಿರಾಜಿ ಒಮ್ಮೆ ಸಭೆಯಲ್ಲಿ ಪ್ರೇಮದ ವ್ಯಾಖ್ಯಾನವನ್ನು ಮಾಡುತ್ತಿದ್ದಾಗ ಸಭಿಕರು ಭಾವುಕರಾಗಿ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಒಬ್ಬಾತ ಎದ್ದು ನಿಂತು,`ನನ್ನ ಕತ್ತೆಯೊಂದು ಕಳೆದು ಹೋಗಿದೆ, ನೀವೇನಾದರೂ ನೋಡಿದಿರಾ?’ ಎಂದು ಕೇಳಿದ ಘಟನೆಯನ್ನು ಉಲ್ಲೇಖಿಸಿದ್ದರು. ಪ್ರವಚನ ಮುಗಿದ ಬಳಿಕ ಕೊನೆಯಲ್ಲಿ ಪ್ರವಚನಕಾರ ಶಿರಾಜಿಯವರು ಸಭಿಕರನ್ನು`ಇಲ್ಲಿ ಸಭೆಯಲ್ಲಿ ಭಾಗವಹಿಸಿದವರ ಮಧ್ಯೆ ಪ್ರೇಮವನ್ನು ಎಂದೂ ಅನುಭವಿಸದವರು ಯಾರಾದರೂ ಇದ್ದೀರಾ?’ ಎಂದು ಕೇಳಿದ್ದರು. ‘ಮನುಷ್ಯನು ತನ್ನನ್ನು ಪ್ರೀತಿಸುವವನ ಜೊತೆಗಿರುತ್ತಾನೆ’ ಎಂದು ಪ್ರವಾದಿಯವರ ವಚನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT