ಬುಧವಾರ, ಡಿಸೆಂಬರ್ 11, 2019
15 °C

ಗಂಡನ ಊರಿಗೆ ಕಳಿಸಿ...

Published:
Updated:
ಗಂಡನ ಊರಿಗೆ ಕಳಿಸಿ...

‘ಚಿತ್ರದ ಟೈಟಲ್ಲೇ ತುಂಬಾ ಆಕರ್ಷಕವಾಗಿದೆ. ಖಂಡಿತ ಜನರು ಈ ಸಿನಿಮಾ ನೋಡ್ತಾರೆ' ಹೀಗೆಂದು ವಿತರಕ ಪಾಲ್ ಬಾಬು ಉತ್ಸಾಹದಿಂದ ಮಾತಾಡುತ್ತಿದ್ದರು.

ಅವರು ಹೇಳುತ್ತಿದ್ದದ್ದು ಸಾಯಿಕೃಷ್ಣ ನಿರ್ದೇಶನದ ‘ಗಂಡ ಊರಿಗೆ ಹೋದಾಗ’ ಸಿನಿಮಾ ಕುರಿತು. ಶೀರ್ಷಿಕೆ ಯಾವ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆ ಎಂಬ ಪ್ರಶ್ನೆಗೆ ಅವರ ಬಳಿ ಸಮರ್ಥ ಉತ್ತರ ಇರಲಿಲ್ಲ. ಇದೇ ವಾರ (ಫೆ. 23) ಚಿತ್ರ ರಾಜ್ಯದಾದ್ಯಂತ ಸುಮಾರು ಮೂವತ್ತೈದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಚಿತ್ರ ಬಿಡುಗಡೆಯ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಾಯಿಕೃಷ್ಣ ಹೆಚ್ಚೇನೂ ಮಾತಾಡಲಿಲ್ಲ. ‘ಒಳ್ಳೆಯ ಚಿತ್ರ ಮಾಡಿದ್ದೇವೆ.‌ ಜನರು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಮಾತು ಮುಗಿಸಿದರು.

'ಗಂಡ ಊರಿಗೆ ಹೋದಾಗ ಏನೇನೆಲ್ಲಾ ಆಗತ್ತೆ?’ ಎಂಬ ಪತ್ರಕರ್ತರ ಪ್ರಶ್ನೆಗೆ ಚಿತ್ರದ ಪಾತ್ರವೊಂದರಲ್ಲಿ ನಟಿಸಿರುವ ವಿಸಿಎನ್‌ ಮಂಜುರಾಜ್‌ ಅವರು ‘ನೀವು ಊರಿಗೆ ಹೋದಾಗ ಏನಾಗತ್ತೆ?’ ಎಂದು ಮರುಪ್ರಶ್ನಿಸಿದರು. ನಂತರ ಆ ಪ್ರಶ್ನೆಗೆ ತಾವೇ ಉತ್ತರವನ್ನೂ ಕೊಡುತ್ತಾ ‘ನೀವು ಊರಿಗೆ ಹೋದಾಗ ಹೇಗೆ ಏನೂ ಆಗುವುದಿಲ್ಲವೋ. ಚಿತ್ರದಲ್ಲಿಯೂ ಕೆಟ್ಟದ್ದೇನೂ ಆಗುವುದಿಲ್ಲ’ ಎಂದರು.

‘ಗಂಡ ಊರಿಗೆ ಹೋದಾಗ ಹೆಂಡತಿಯರು ಯಾವ್ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಯಾವ ರೀತಿ ಮಾತಾಡಿಕೊಳ್ಳುತ್ತಾರೆ, ಯಾವ ರೀತಿ ಬಟ್ಟೆ ತೊಟ್ಟುಕೊಳ್ಳುತ್ತಾರೆ ಎನ್ನುವುದನ್ನೆಲ್ಲ ಈ ಚಿತ್ರದಲ್ಲಿ ತೋರಿಸಲಾಗಿದೆ’ ಎಂದರು ನಾಯಕಿಯರಲ್ಲಿ ಒಬ್ಬರಾದ ಸ್ವ‍ಪ್ನಾ. ‘ತುಂಬಾನೇ ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಒಳ್ಳೆಯ ಚಿತ್ರ. ಕುಟುಂಬದವರೆಲ್ಲ ಒಟ್ಟಿಗೇ ಕುಳಿತು ನೋಡುವಂಥ ಚಿತ್ರ’ ಎಂದರು ಇನ್ನೊಬ್ಬ ನಾಯಕಿ ಸಿಂಧು ರಾವ್‌.

ಹಾಗಾದರೆ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ‘ಎ’ ಪ್ರಮಾಣಪತ್ರ ಕೊಟ್ಟಿರುವುದು ಯಾಕೆ? ಎಂಬ ಪ್ರಶ್ನೆಗೆ ‘ಸಿನಿಮಾದಲ್ಲಿ ಹೆಣ್ಣುಮಕ್ಕಳೆಲ್ಲ ಸೇರಿ ಪಾರ್ಟಿ ಮಾಡುವ ದೃಶ್ಯವಿದೆ. ಹಾಗೆಯೇ ದ್ವಿತೀಯಾರ್ಧ ಥ್ರಿಲ್ಲರ್‌ ಕಥೆ ಇದೆ. ಈ ಕಾರಣಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ’ ಎಂದು ಮಂಜು ವಿವರಿಸಿದರು.

‘ಸಿನಿಮಾದಲ್ಲಿ ಒಂದೆರಡು ದ್ವಂದ್ವಾರ್ಥದ ಸಂಭಾಷಣೆಗಳು ಇವೆ’ ಎಂಬುದನ್ನು ರಾಧಿಕಾ ರಾವ್‌ ಒಪ್ಪಿಕೊಂಡರು. ಇನ್ನಿಬ್ಬರು ನಾಯಕಿಯರಾದ ಅನು ಗೌಡ ಮತ್ತು ಶಾಲಿನಿ ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ.

ಅರುಣ್‌ ಆ್ಯಂಡ್ರ್ಯೂ ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ.  ಜಗದೀಶ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)