ಶುಕ್ರವಾರ, ಡಿಸೆಂಬರ್ 6, 2019
25 °C

‘ವಿರಳವಾಗುತ್ತಿವೆ ಜಲವರ್ಣ ಚಿತ್ರಕೃತಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿರಳವಾಗುತ್ತಿವೆ ಜಲವರ್ಣ ಚಿತ್ರಕೃತಿಗಳು’

ಬೆಂಗಳೂರು: ‘ಜಲವರ್ಣದ ಚಿತ್ರಕೃತಿಗಳು ಇಂದು ವಿರಳವಾಗುತ್ತಿವೆ’ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿರಿಯ ಕಲಾವಿದರಾದ ಎಸ್‌.ಎಸ್‌. ಕುಕ್ಕೆ, ಆರ್‌. ಸೀತಾರಾಂ, ಎಫ್‌.ಎಂ. ಸೂಫಿ, ಎನ್‌.ಜಿ. ಮುತ್ಕೇಕರ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಣ್ಣ, ಕ್ಯಾನ್ವಾಸ್‌, ಪೇಪರ್‌... ಯಾವುದೂ ಸಮರ್ಪಕವಾಗಿ ಸಿಗದಿದ್ದ ಕಾಲದಲ್ಲಿ ಕಲಾವಿದರು ಜಲವರ್ಣ, ತೈಲವರ್ಣದ ಕಲಾಕೃತಿಗಳನ್ನು ರಚಿಸಿದ್ದರು. ಅಂತಹ ಕಲಾವಿದರನ್ನು ನೆನಪಿಸಿಕೊಳ್ಳುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಅವಶ್ಯಕ’ ಎಂದು ಅವರು ಹೇಳಿದರು.

ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ಮಾತನಾಡಿ, ‘ಎಸ್‌.ಎಸ್‌.ಕುಕ್ಕೆ ಅವರು ಚಿತ್ರಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿದ್ದರು. ಪರಿಷತ್ತಿನ ಪ್ರಾಂಶುಪಾಲರಾಗಿದ್ದ ಅವರು ಪಾಠ ಕಲಿಸುತ್ತಿದ್ದ ರೀತಿ ನನ್ನನ್ನು ಬೆರಗುಗೊಳಿಸಿತ್ತು’ ಎಂದು  ಸ್ಮರಿಸಿಕೊಂಡರು.

‘ಈಗಿನ ಯುವಕರಿಗೆ ಪಿಕಾಸೋ, ರವಿವರ್ಮ.. ಹೀಗೆ ಜನ‍ಪ್ರಿಯ ಕಲಾವಿದರ ಪರಿಚಯ ಮಾತ್ರ ಇದೆ. ನಮ್ಮ ನಡುವೆಯೇ ಇದ್ದ ಅಪ್ರತಿಮ ಕಲಾವಿದರನ್ನು ತಿಳಿಯುವುದು ಅಗತ್ಯ’ ಎಂದು ಹೇಳಿದರು.

ಹಿರಿಯ ಶಿಲ್ಪ ಕಲಾವಿದೆ ಕನಕಾ ಮೂರ್ತಿ ಅವರು ನಾಲ್ವರು ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿದರು.

ಪ್ರತಿಕ್ರಿಯಿಸಿ (+)