ಬುಧವಾರ, ಡಿಸೆಂಬರ್ 11, 2019
24 °C

ಶನಿವಾರದಿಂದ ಮುಂಬೈ ಕರ್ನಾಟಕ ಭಾಗದಲ್ಲಿ ರಾಹುಲ್‌ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರದಿಂದ ಮುಂಬೈ ಕರ್ನಾಟಕ ಭಾಗದಲ್ಲಿ ರಾಹುಲ್‌ ಯಾತ್ರೆ

ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಶನಿವಾರದಿಂದ ಮುಂಬೈ ಕರ್ನಾಟಕ ಭಾಗದಲ್ಲಿ ಸಂಚರಿಸಲಿದೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೈಗೊಂಡ ಮೊದಲ ಹಂತದ ಯಾತ್ರೆಗೆ ವ್ಯಕ್ತವಾದ ಜನಬೆಂಬಲ ಕಾಂಗ್ರೆಸ್ ಪಾಳಯದಲ್ಲಿ ನವ ಚೈತನ್ಯ ಮೂಡಿಸಿದೆ.

ಅದರ ಮುಂದುವರಿದ ಭಾಗವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆ ಕೇಂದ್ರೀಕರಿಸಿ ಈ ಯಾತ್ರೆ  ನಡೆಯಲಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಭಾಗ ಬದಲಾದ ರಾಜಕೀಯ ಬೆಳವಣಿಗೆಗಳ ಪರಿಣಾಮ ಬಿಜೆಪಿ ಪರವಾಗಿ ವಾಲಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿ- ಕೆಜೆಪಿ ವಿಭಜನೆ ಲಾಭ ಕಾಂಗ್ರೆಸ್ ಪಾಲಾಗಿತ್ತು. ಅದೇ ಅಧಿಪತ್ಯ ಉಳಿಸಿಕೊಳ್ಳಲು ಕೈ ಪಕ್ಷ ಕಾರ್ಯತಂತ್ರ ರೂಪಿಸಿದೆ.

ಈ ಕಾರಣಕ್ಕೆ ಯಾತ್ರೆ ಸಂದರ್ಭದಲ್ಲಿ ಮಹದಾಯಿ ವಿಷಯವನ್ನು ರಾಹುಲ್ ಪ್ರಸ್ತಾಪಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದೇ ಇರುವುದನ್ನೆ ಪ್ರಧಾನ ಅಸ್ತ್ರವಾಗಿ ಬಳಸುವ ಬಗ್ಗೆ ಪಕ್ಷದ ರಾಜ್ಯ ನಾಯಕರು ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿಗೆ ಈ ಬಗ್ಗೆ ಈಗಾಗಲೇ ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.

ಆ ಮೂಲಕ ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ಅಲ್ಲದೆ. ಈ ಭಾಗದಲ್ಲಿ ರಾಜ್ಯ ಸರ್ಕಾರ 5 ವರ್ಷದ ಅವಧಿಯಲ್ಲಿ ಜಾರಿಗೊಳಿಸಿದ ನೀರಾವರಿ ಯೋಜನೆಗಳ ಬಗ್ಗೆಯೂ ಜನರ ಗಮನಸೆಳೆಯುವ ಸಾಧ್ಯತೆ ಇದೆ.

ಆದರೆ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಸ್ಪಷ್ಟ ನಿಲುವು ತಳೆದಿಲ್ಲ. ನ್ಯಾಯಮೂರ್ತಿ  ಸದಾಶಿವ ಆಯೋಗದ ವರದಿ ವಿಷಯದಲ್ಲಿ ಎಡಗೈ ಬಲಗೈ ಬಣಗಳ ಮಧ್ಯೆ ಇನ್ನೂ ಒಮ್ಮತ ಮೂಡಿಲ್ಲ. ಹೀಗಾಗಿ ಈ ಎರಡೂ ವಿಷಯಗಳ ಬಗ್ಗೆ ರಾಹುಲ್ ಮಾತನಾಡುವ ಸಂಭವ ಇಲ್ಲ ಎಂದೂ ಗೊತ್ತಾಗಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಸ್ಥಳೀಯ ನಾಯಕರು ಯಾತ್ರೆ ಉದ್ದಕ್ಕೂ ಭಾಗವಹಿಸಲಿದ್ದಾರೆ.

ಈ ಬಾರಿಯ ರಾಹುಲ್ ಪ್ರವಾಸ ವೇಳಾಪಟ್ಟಿಯಲ್ಲಿ ಧಾರ್ಮಿಕ ಕೇಂದ್ರಗಳ ಭೇಟಿಯ ಪ್ರಸ್ತಾಪ ಇಲ್ಲ. ಆದರೆ ಅವರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭೇಟಿಗೆ  ನೀಡುವ ಸಾಧ್ಯತೆ ಇದೆ. ಸವದತ್ತಿ ಯಲ್ಲಮ್ಮ ಮತ್ತು ವಿಜಯಪುರದ ದರ್ಗಾ ಭೇಟಿ ನೀಡುವ ಬಗ್ಗೆ ಪಕ್ಷದ ಮೂಲಗಳು ಖಚಿತಪಡಿಸಿವೆ.

ಮೊದಲ ಹಂತದ ಯಾತ್ರೆ ಸಂದರ್ಭದಲ್ಲಿ ರೋಡ್ ಶೋಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಆದರೆ ಈ ಬಾರಿ ರಸ್ತೆ ಪ್ರಯಾಣ ಕಡಿಮೆ ಮಾಡಿ ಹೆಲಿಕಾಪ್ಟರ್  ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ನೆಗೆಯಲಿದ್ದಾರೆ. ಮಹಿಳಾ ಮತದಾರರ ಒಲವು ಗಳಿಸಲು ಪ್ರಯತ್ನಿಸಲಿದ್ದಾರೆ. ಪ್ರವಾಸ ಕೈಗೊಳ್ಳುವ ಎಲ್ಲ ಜಿಲ್ಲಾ ಘಟಕಗಳೊಂದಿಗೂ ಸಭೆ ನಡೆಸುವ ಮೂಲಕ ಸ್ಥಳೀಯ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಲಿದ್ದಾರೆ.

ಪ್ರವಾಸ ಎಲ್ಲೆಲ್ಲಿ?

ಫೆ.24: ಬೆಳಗ್ಗೆ 11.30ಕ್ಕೆ ಬೆಳಗಾವಿಗೆ ಬರಲಿರುವ ರಾಹುಲ್,  ಮಧ್ಯಾಹ್ನ ಅಥಣಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಬಳಿಕ ವಿಜಯಪುರ ಜಿಲ್ಲೆ ತಿಕೋಟದಲ್ಲಿ ಸ್ತ್ರೀ ಶಕ್ತಿ ಸಮಾವೇಶ, ಚಿಕ್ಕೋಡಿಯಲ್ಲಿ ಸಭೆ, ಬಿಜಾಪುರ ನಗರಕ್ಕೆ ಬಸ್ ಸಂಚ, ಪಕ್ಷದ ಪ್ರಮುಖರ ಜತೆ ಸಭೆ.

ಫೆ.25: ಬಾಗಲಕೋಟೆ ಜಿಲ್ಲೆ ಜಮಖಂಡಿ ಬಳಿ ನೀರು ತುಂಬಿರುವ ಬ್ಯಾರೇಜ್ ಬಳಿ ಸಂಭ್ರಮಾಚರಣೆ, ವಿಜಯಪುರ ಜಿಲ್ಲೆ ಮುಳವಾಡ ಭೇಟಿ, ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಕಾರ್ನರ್ ಮೀಟಿಂಗ್, ಮುಧೋಳದಲ್ಲಿ ಸಾರ್ವಜನಿಕ ಸಭೆ, ಲೋಕಾಪುರ ಭೇಟಿ, ಬಾಗಲಕೋಟೆಯಲ್ಲಿ ಕಾರ್ನರ್ ಮೀಟಿಂಗ್

ಫೆ.26: ಬಾಗಲಕೋಟೆ, ವಿಜಯಪುರ ಮುಖಂಡರೊಂದಿಗೆ ಸಭೆ, ರಾಮದುರ್ಗ, ಸವದತ್ತಿಯಲ್ಲಿ ಕಾರ್ನರ್ ಸಭೆ, ಧಾರವಾಡ ಮೂಲಕ ಹುಬ್ಬಳ್ಳಿಗೆ. ಅಲ್ಲಿ ಸಾರ್ವಜನಿಕ ಸಭೆ.

ಪ್ರತಿಕ್ರಿಯಿಸಿ (+)