ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆ ತಳಿ ಸಂಶೋಧನೆ ಅಗತ್ಯ

Last Updated 24 ಫೆಬ್ರುವರಿ 2018, 6:51 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕುರಿ ಮತ್ತು ಮೇಕೆ ತಳಿ ಸಂಶೋಧನೆ ನಡೆಸಬೇಕು. ಇದರಿಂದ ಕುರಿ ಸಾಕಾಣಿಕೆ ಮಾಡಲು ಸಹಕಾರಿಯಾಗುತ್ತದೆ’ ಎಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ಒತ್ತಾಯಿಸಿದರು.

ನಗರದ ಡಾ.ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಹಮ್ಮಿಕೊಂಡಿದ್ದ ಕುರಿ ಮತ್ತು ಮೇಕೆ ಮಾರುಕಟ್ಟೆ ಬಗ್ಗೆ ಒಂದು ದಿನದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ರಾಜಸ್ಥಾನದ ಜೈಪುರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯ ಬಗ್ಗೆ ಸಂಶೋಧನೆ ನಡೆದಿದೆ. ಮಾಂಸಕ್ಕೆ ಭಾರೀ ಬೇಡಿಕೆ ಇದೆ.
ಲಾಭದಾಯಕ ಉದ್ಯಮವೂ ಆಗಿದೆ. ರೈತರು ವೈಜ್ಞಾನಿಕವಾಗಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕುರಿ ಮತ್ತು ಮೇಕೆಗಳನ್ನು ಸಾಕಬೇಕು. ಸರ್ಕಾರದಿಂದ ಸಿಗುವ ಸಾಲ, ಸೌಲಭ್ಯಗಳನ್ನು ಪಡೆಯಬೇಕು. ಕುರಿ ಮತ್ತು ಮೇಕೆಗಳಿಗೆ ಲಸಿಕೆ, ಚುಚ್ಚುಮದ್ದುಗಳನ್ನು ಕಾಲ ಕಾಲಕ್ಕೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.

‘ಹಾಪ್‌ಕಾಮ್ಸ್ ಮಾದರಿಯಲ್ಲಿ ಮಾಂಸ ಮಾರಾಟ ಮಳಿಗೆಯನ್ನು ತೆರೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. ಪಶುಪಾಲನಾ ಇಲಾಖೆ ಉಪನಿರ್ದೇಶಕ ನಾಗರಾಜ್ ಜಿ.ಎಚ್. ಮಾತನಾಡಿ, ‘ಕುರಿ ಮೇಯಿಸಲು ಮೊದಲಿನಂತೆ ಬೆಟ್ಟಗುಡ್ಡಗಳ ಆಸರೆ ಇಲ್ಲ. ಇದರಿಂದ ಸಾಕಾಣಿಕೆದಾರರು ಹೆದ್ದಾರಿ ಪಕ್ಕದಲ್ಲಿ ಹಟ್ಟಿಗಳನ್ನು ನಿರ್ಮಿಸಿಕೊಂಡು ಠಿಕಾಣಿ ಹೂಡಿರುತ್ತಾರೆ. ಇದರಿಂದ ಅಪಘಾತ ತಪ್ಪಿದ್ದಲ್ಲ. ರಸ್ತೆಗಳ ಪಕ್ಕದಲ್ಲಿ ಕುರಿ ಸಾಕಾಣಿಕೆ ಮಾಡಬಾರದು’ ಎಂದು ಹೇಳಿದರು.

‘ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವ ಮಳೆಗೆ ಸಿಡಿಲು ಬಡಿದು ಹೆಚ್ಚು ಕುರಿಗಳು ಸಾವನ್ನಪ್ಪುತ್ತವೆ. ಜಾಗೃತಿ ವಹಿಸುವ ಜೊತೆಗೆ ವಿಮೆ ಮಾಡಿಸಬೇಕು’ ಎಂದು ತಿಳಿಸಿದರು.

ನಿವೃತ್ತ ಡಿವೈಎಸ್ಪಿ ಬಿ.ಎಸ್‌.ಮಾಲಗತ್ತಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಉಪನಿರ್ದೇಶಕ ಡಾ.ಶಿವಕುಮಾರ ಎಸ್‌.ಜಂಬಲದಿನ್ನಿ, ಮಹಾಮಂಡಳದ ರಾಯಚೂರು ಮತ್ತು ಯಾದಗಿರಿ ನಿರ್ದೇಶಕ ಶಾಂತಗೌಡ ಪಾಟೀಲ, ಪಶು ವೈದ್ಯಾಧಿಕಾರಿಗಳಾದ ಡಾ.ಮಲ್ಲಪ್ಪ ಇಂಗಳೆ, ಡಾ. ವಿಜಯಕುಮಾರ, ಡಾ.ಶಂಕರ ಕಟ್ಟಿ ಇದ್ದರು. ಡಾ.ಸುರೇಶ ರಾಠೋಡ ವಂದಿಸಿದರು.

‘ಕುರಿ, ಮೇಕೆ ಸತ್ತರೆ ಭಾವಚಿತ್ರ ತೆಗೆಸಿ’

ಕುರಿ ಅಥವಾ ಮೇಕೆ ಸಾವನ್ನಪ್ಪಿದಾಗ ಸಮೀಪದ ಪಶು ವೈದ್ಯರಿಗೆ ಮಾಹಿತಿ ನೀಡಬೇಕು. ಪಶು ವೈದ್ಯರನ್ನು ಕರೆದುಕೊಂಡು ಬಂದು ಭಾವಚಿತ್ರ ತೆಗೆಸಿಕೊಳ್ಳಬೇಕು. ನಂತರ ಮರಣೋತ್ತರ ಪರೀಕ್ಷೆ ಆದಾಗ ಮತ್ತೊಂದು ಭಾವಚಿತ್ರ ತೆಗೆಸಿಕೊಳ್ಳಬೇಕು.

ನಂತರದ ಪ್ರಕ್ರಿಯೆ ಸರ್ಕಾರಿ ಹಂತದಲ್ಲಿ ನಡೆಯುತ್ತದೆ. ತದನಂತರ ಫಲಾನುಭವಿಗಳಿಗೆ ಪರಿಹಾರ ಧನ ಸಿಗುತ್ತದೆ’ ಎಂದು ಪಂಡಿತರಾವ್‌ ಚಿದ್ರಿ ಮಾಹಿತಿ ನೀಡಿದರು. ‘ಜಿಲ್ಲೆಯಲ್ಲಿ ಇದುವರೆಗೆ ಸತ್ತ ಕುರಿಗಳಿಗೆ ₹34 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ’ ಎಂದರು.

* * 

ಜಿಲ್ಲೆಯಲ್ಲಿ 340 ಪಶು ವೈದ್ಯರು ಇರಬೇಕು. ಆದರೆ 200 ಜನ ಇದ್ದಾರೆ. ಇದರಿಂದ ಕುರಿ ಮತ್ತು ಮೇಕೆ ಸಾಕಾಣಿಕೆದಾರರು ತೊಂದರೆ ಅನುಭವಿಸುವಂತಾಗಿದೆ.
ಪಂಡಿತರಾವ್ ಚಿದ್ರಿ ಅಧ್ಯಕ್ಷ, ಕುರಿ, ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT