ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಮನೆಯೊಳಗೆ ಮುಸುಕಿನ ಗುದ್ದಾಟ

Last Updated 24 ಫೆಬ್ರುವರಿ 2018, 7:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜೆಡಿಎಸ್ ವರಿಷ್ಠರು ಇತ್ತೀಚೆಗೆ ಬಿಡುಗಡೆ ಮಾಡಿದ ಮುಂಬರುವ ವಿಧಾನಸಭಾ ಚುನಾವಣೆಯ ತಮ್ಮ ಅಭ್ಯರ್ಥಿಗಳ ಪಟ್ಟಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಸಂಚಲನ ಮೂಡಿಸಿದೆ. ಟಿಕೆಟ್‌ಗೆ ಪಟ್ಟು ಹಿಡಿದವರ ಪೈಕಿ ಕೆಲವರು ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದ್ದೇ ಬಂಡಾಯದ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದಾರೆ. ಅನೇಕರು ಮುನಿಸಿಕೊಂಡು ಮೌನಕ್ಕೆ ಶರಣಾಗಿ ತಮ್ಮ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸುತ್ತಿದ್ದಾರೆ.

ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಗೌರಿಬಿದನೂರು ಹೊರತುಪಡಿಸಿದಂತೆ ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ವಿಕಾಸಪರ್ವ’ ಸಮಾವೇಶದಲ್ಲಿ ಪ್ರಕಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಬಾಗೇಪಲ್ಲಿಗೆ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್, ಶಿಡ್ಲಘಟ್ಟಕ್ಕೆ ಶಾಸಕ ಎಂ.ರಾಜಣ್ಣ ಮತ್ತು ಚಿಂತಾಮಣಿಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಗೆ ಟಿಕೆಟ್ ಘೋಷಿಸಿರುವುದು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ವಿದ್ಯಮಾನ ಹುಟ್ಟು ಹಾಕಿದೆ.

ಸದ್ಯದ ಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮುಖಂಡರ ಅಸಮಾಧಾನ ಸಮಾಧಾನಪಡಿಸಿದರೆ ಸಾಕೆನ್ನುವ ವಾತಾವರಣವಿದ್ದರೆ, ಬಾಗೇ
ಪಲ್ಲಿ ಮತ್ತು ಶಿಡ್ಲಘಟ್ಟದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಏಳುವ ಲಕ್ಷಣಗಳು ಗೋಚರಿಸುತ್ತಿವೆ.

ಚಿಕ್ಕಬಳ್ಳಾಪುರ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆರಂಭದಿಂದಲೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಂದಿ ಆಂಜನಪ್ಪ ಅವರ ನಡುವೆ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ದಿನಕಳೆದಂತೆ ಆಂಜನಪ್ಪ ಅವರು ಮೌನಕ್ಕೆ ಶರಣಾದರು. ಹೀಗಾಗಿ ಇಬ್ಬರು ಮುಖಂಡರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಕೊನೆಯ ಹಂತದಲ್ಲಿ ತಮಗೆ ಟಿಕೆಟ್ ಕೈತಪ್ಪುವ ಸುಳಿವು ಅರಿತ ಕೆ.ವಿ.ನಾಗರಾಜ್ ಅವರು ಮುನಿಸಿಕೊಳ್ಳುವ ಜತೆಗೆ ಪಕ್ಷದಿಂದ ಅಂತರ ಕಾಯ್ದುಕೊಂಡು ವರಿಷ್ಠರಿಗೆ ಪರೋಕ್ಷವಾಗಿ ತಮ್ಮ ಅಸಮಾಧಾನ ಮುಟ್ಟಿಸುವ ಯತ್ನವನ್ನು ಇಂದಿಗೂ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ರೈತರು ಮತ್ತು ಕಾರ್ಯಕರ್ತರ ಬೃಹತ್ ಸಭೆಗೆ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಬಂದಾಗಲೂ ನಾಗರಾಜ್ ಅವರು ಅತ್ತ ಸುಳಿಯಲಿಲ್ಲ.

ಇತ್ತೀಚೆಗೆ ಬಚ್ಚೇಗೌಡರಿಗೆ ಪುನಃ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಸದ್ಯ ನಾಗರಾಜ್ ಅವರ ಮುಂದಿನ ನಡೆ ಏನಾಗಿರುತ್ತದೆ ಎನ್ನುವುದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ವರಿಷ್ಠರ ನಿರ್ಧಾರದಿಂದ ಬೇಸತ್ತು ನಾಗರಾಜ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ಈ ನಡುವೆ ಹರಿದಾಡುತ್ತಿದ್ದು, ಈ ಬಗ್ಗೆ ಅವರನ್ನು ಕೇಳಿದರೆ ‘35 ವರ್ಷ ಜೆಡಿಎಸ್‌ಗಾಗಿ ದುಡಿದು ಇದೀಗ ಕಾಂಗ್ರೆಸ್ ಸೇರಲಾರೆ. ಅದೆಲ್ಲ ಸುಳ್ಳು’ ಎನ್ನುತ್ತಾರೆ.

ಈ ಹಿಂದೆ ನಾಗರಾಜ್ ಅವರು ಎರಡು ಬಾರಿ ಟಿಕೆಟ್ ಕೇಳಿದ ಸಂದರ್ಭದಲ್ಲಿ ವರಿಷ್ಠರು ಅವರಿಗೆ ‘ಮುಂದೊಂದು ದಿನ ನಿನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡುತ್ತೇವೆ’ ಎಂದು ನೀಡಿದ ಮಾತು ಪಾಲಿಸಿಲ್ಲ ಎನ್ನುವುದು ಅವರಲ್ಲಿ ಬೇಸರ ತಂದಿದೆ. ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಗೌಪ್ಯವಾಗಿ ತಮಗೆ ನೀಡಿದ ವಚನ ಪಾಲಿಸಲಿ ಎನ್ನುವುದು ಅವರ ಸದ್ಯದ ಒತ್ತಾಯ. ಒಂದೊಮ್ಮೆ ಟಿಕೆಟ್ ಕೈತಪ್ಪಿದರೆ ಮುಂದೇನು? ಎನ್ನುವ ಪ್ರಶ್ನೆಗೆ ‘ಕಾಯ್ದು ನೋಡಿ’ ಎಂದಷ್ಟೇ ಹೇಳುವ ಅವರ ನಡೆ ಕೂಡ ಕುತೂಹಲ ಮೂಡಿಸುತ್ತಿದೆ.

ಬಾಗೇಪಲ್ಲಿ

ಜೆಡಿಎಸ್‌ ಟಿಕೆಟ್‌ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಅವರಿಗೆ ಅಭ್ಯರ್ಥಿಗಳ ಪಟ್ಟಿ ಭಾರಿ ನಿರಾಶೆ ಮೂಡಿಸಿತು. ಟಿಕೆಟ್ ಘೋಷಣೆಗೂ ಮುನ್ನವೇ ಈ ಬಾರಿ ಇಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಳ್ಳುವುದಷ್ಟೇ ಅಲ್ಲದೇ, ತಮ್ಮ ವಾಹನದ ಮೇಲೆ ಆ ರೀತಿ ಸ್ಟೀಕರ್‌ ಕೂಡ ಅಂಟಿಕೊಂಡು ಅನೇಕ ಗ್ರಾಮಗಳಿಗೆ ತೆರಳಿ ಮತದಾರರಿಗೆ ಸೀರೆ, ಬಟ್ಟೆ ಹಂಚಿದ್ದು ಸ್ಥಳೀಯ ಮುಖಂಡರಲ್ಲಿ ಆಕ್ರೋಶ ಮೂಡಿಸಿತ್ತು.

ಸ್ವಪಕ್ಷದ ಮುಖಂಡರ ಆಕ್ಷೇಪಕ್ಕೆ ಸೊಪ್ಪು ಹಾಕದ ನಾಗರಾಜರೆಡ್ಡಿ ಅವರು ಫೆ.15ರಂದು ಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಿ, ಕುಮಾರ
ಸ್ವಾಮಿ ಅವರನ್ನು ಕರೆಯಿಸಿ ಅವ
ರೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಅವರು ತಮ್ಮ ಬೆಂಬಲಿಗರತ್ತ ಕೈಬಿಸಿ ಸಂತಸದಿಂದ ಬೀಗಿದ್ದರು. ಅವರ ಆ ಸಂತದ ಒಂದು ದಿನ ಕಳೆದು ಎರಡನೇ ದಿನ (ಫೆ.17) ಸಂಜೆಯ ವೇಳೆಗೆ ಕರಗಿ ಹೋಯಿತು. ಟಿಕೆಟ್ ಕೈ ತಪ್ಪುತ್ತಿದ್ದಂತೆ ಅವರ ಮೊಗದಲ್ಲಿ ನಿರಾಶೆ ಮನೆ ಮಾಡಿತು.

ಸದ್ಯ ಬಾಗೇಪಲ್ಲಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಆಪ್ತರಲ್ಲಿ ಒಬ್ಬರಾದ ಸಿ.ಆರ್.ಮನೋಹರ್ ಅಧಿಕೃತ ಅಭ್ಯರ್ಥಿ. ಅವರು ಫೆ.28 ರಂದು ಪಟ್ಟಣದಲ್ಲಿ ಅಧಿಕೃತ ಕಚೇರಿ ತೆರೆದು ಪ್ರಚಾರಕ್ಕೆ ಇಳಿಯುವುದಾಗಿ ಇತ್ತೀಚೆಗೆ ತಿಳಿಸಿದ್ದಾರೆ. ಇನ್ನೊಂದೆಡೆ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಮುಖಂಡ ಗುಂಜೂರು ಶ್ರೀನಿವಾಸ್ ರೆಡ್ಡಿ ಅವರು ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ.

ಇಷ್ಟಾದರೂ ನಾಗರಾಜರೆಡ್ಡಿ ಅವರು ಇಂದಿಗೂ, ‘ಇನ್ನೂ ನನಗೆ ವರಿಷ್ಠರ ಮೇಲೆ ನಂಬಿಕೆ ಇದೆ. ನಾನೇ ಅಧಿಕೃತ ಅಭ್ಯರ್ಥಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಒಂದೊಮ್ಮೆ ಜೆಡಿಎಸ್‌ ಟಿಕೆಟ್ ಕೈತಪ್ಪಿದರೆ? ಎನ್ನುವ ಪ್ರಶ್ನೆಗೆ ‘ಬಂಡಾಯ ಅಭ್ಯರ್ಥಿಯಾಗಿದರೂ ಚುನಾವಣಾ ಕಣಕ್ಕೆ ಧುಮುಕುತ್ತೇನೆ. ಚುನಾವಣೆಗೆ ನಿಲ್ಲುವುದಂತೂ ಗ್ಯಾರಂಟಿ’ ಎಂದು ಹೇಳುತ್ತಿದ್ದಾರೆ. ವರಿಷ್ಠರು ಈ ಭಿನ್ನಮತವನ್ನು ಶಮನ ಮಾಡುತ್ತಾರಾ? ಅಥವಾ ನಾಗರಾಜರೆಡ್ಡಿ, ಮನೋಹರ್ ಅವರ ವಿರುದ್ಧವೇ ತೊಡೆ ತಟ್ಟುತ್ತಾರಾ? ಎನ್ನುವುದು ಸದ್ಯದ ಪ್ರಶ್ನೆಗಳಾಗಿವೆ.

ಚಿಂತಾಮಣಿ

ಚುನಾವಣೆಯ ಹೊಸ್ತಿಲಲ್ಲಿ ಕ್ಷೇತ್ರದ ಜೆಡಿಎಸ್‌ ನಾಯಕರ ನಡುವೆ ಭಿನ್ನಮತ ಭುಗಿಲೆದ್ದ ರೀತಿ ಕಾಣಿಸಿಕೊಂಡಿತಾದರೂ ಅದೂ ವಿಕೋಪಕ್ಕೆ ತಲುಪಲು ಹೋಗಲಿಲ್ಲ. ಕೆಲ ಮುಖಂಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದ ಮುಖಂಡ ಕೋನಪ್ಪರೆಡ್ಡಿ ಅವರನ್ನು ಈ ಬಾರಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಗೆ ಪರ್ಯಾಯ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದ್ದಾರೆ ಎನ್ನುವ ಶಂಕೆ ಪಕ್ಷದೊಳಗೆ ಒಡಕು ಉಂಟು ಮಾಡಿತ್ತು.

ಇತ್ತೀಚೆಗೆ ಒಳಗಿನ ಭಿನ್ನಮತದ ಹೊಗೆ ಬಹಿರಂಗಕ್ಕೆ ಬರಲು ಆರಂಭಿಸಿತ್ತು. ಆದರೆ ಕೃಷ್ಣಾರೆಡ್ಡಿ ಅವರಿಗೆ ಪೈಪೋಟಿ ನೀಡಿ ಟಿಕೆಟ್‌ಗಾಗಿ ಸೆಣಸಾಡುವಂತಹ ಯಾವುದೇ ಮುಖಗಳು ಕಾಣಿಸಿಕೊಳ್ಳಲಿಲ್ಲ. ಇದರ ನಡುವೆಯೇ ಕೃಷ್ಣಾರೆಡ್ಡಿ ಅವರಿಗೆ ಮತ್ತೊಂದು ಬಾರಿ ವರಿಷ್ಠರು ಟಿಕೆಟ್ ನೀಡಿದ್ದಾರೆ. ಇದನ್ನು ಖಂಡಿಸಿ ಬಂಡಾಯ ಏಳುವಂತಹ ಯಾವುದೇ ಲಕ್ಷಣಗಳು ಪಕ್ಷದೊಳಗಿಲ್ಲ.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್‌ ಮುಖಂಡತ್ವದ ಗುಂಪು ಶಾಸಕರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ವರದಿಯಾಗಿತ್ತು. ಈ ಅಸಮಾಧಾನವನ್ನು ವರಿಷ್ಠರು ಸಮಾಧಾನದಿಂದ ಆಲಿಸಿ, ಸೂಕ್ತ ಸಲಹೆಗಳನ್ನು ನೀಡಿದರೆ ಸಾಕು ಇಲ್ಲಿ ಎಲ್ಲವೂ ಸರಿಹೋಗುತ್ತದೆ ಎನ್ನುವುದು ಜೆಡಿಎಸ್ ಮುಖಂಡರ ಆಶಯ.

ಶಿಡ್ಲಘಟ್ಟ

ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ತೀವ್ರ ಪೈಪೋಟಿ ಏರ್ಪಟ್ಟು, ಬಹಿರಂಗ
ವಾಗಿ ‘ಬಣ’ ರಾಜಕೀಯಕ್ಕೆ ಎಡೆ ಮಾಡಿಕೊಟ್ಟಿತ್ತು. ಕಳೆದ ಚುನಾವಣೆಯಲ್ಲಿ ರಾಜಣ್ಣ ಅವರ ಗೆಲುವಿಗೆ ಶ್ರಮಿಸಿದ್ದ ರವಿಕುಮಾರ್, ಕಳೆದ ನಾಲ್ಕು ವರ್ಷಗಳಲ್ಲಿ ಶಾಸಕರಿಗೆ ‘ಗಳಸ್ಯ- ಕಂಠಸ್ಯ’ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ಟಿಕೆಟ್ ಪೈಪೋಟಿ ಈ ಜೋಡಿಯಲ್ಲಿ ‘ಮನಸ್ತಾಪ’ ತಂದಿಟ್ಟು ಸದ್ಯ ಇವರನ್ನು ಬದ್ಧ ರಾಜಕೀಯ ವೈರಿಗಳನ್ನಾಗಿ ಮಾಡಿಟ್ಟಿದೆ.

ರಾಜಣ್ಣ ಅವರಿಗೆ ಎರಡನೇ ಬಾರಿಗೆ ಸಹ ವರಿಷ್ಠರು ಟಿಕೆಟ್ ನೀಡಿದ್ದಾರೆ. ಇದು, ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿ
ವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮೂಲಕ ‘ಸೇವಾ ಕಾರ್ಯ’ಗಳನ್ನು ಚುರುಕುಗೊಳಿಸಿ ‘ನಾನೇ ಅಭ್ಯರ್ಥಿಯಾಗುವುದು ಖಚಿತ’ ಎನ್ನುತ್ತಿದ್ದ ರವಿಕುಮಾರ್ ಅವರಿಗೆ ತೀವ್ರ ನಿರಾಶೆ ಮೂಡಿಸಿದೆ.

ರಿಯಲ್ ಎಸ್ಟೆಟ್‌ ಉದ್ಯಮಿಯಾಗಿರುವ ಅವರು ಆರ್ಥಿಕವಾಗಿ ಕೂಡ ಚೆನ್ನಾಗಿದ್ದಾರೆ. ಈಗಾಗಲೇ ರಾಜಕೀಯ ದೂರದೃಷ್ಟಿಯಿಂದ ಉಚಿತ ಓಂ ಶಕ್ತಿ ಪ್ರವಾಸ, ಶಬರಿಮಲೆ ಯಾತ್ರೆಗಳನ್ನು ಆಯೋಜಿಸಿದ್ದಾರೆ. ಆಂಬುಲೆನ್ಸ್‌ಗಳನ್ನು ದೇಣಿಗೆ ನೀಡಿದ್ದಾರೆ. ಶಿಡ್ಲಘಟ್ಟ ಪಟ್ಟಣದಲ್ಲಿಯೇ ಐದೂವರೆ ಎಕರೆ ಭೂಮಿ ಖರೀದಿಸಿ ಮುಸ್ಲಿಮರ ಸ್ಮಶಾನಕ್ಕಾಗಿ ‘ಕೊಡುಗೆ’ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಬುರುಡುಗುಂಟೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ಅವರ ಹುಟ್ಟುಹಬ್ಬದ ‘ನೆಪ’ದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಲಕ್ಷಾಂತರ ರೂಪಾಯಿ ಖರ್ಚು ಕೂಡ ಮಾಡಿದ್ದರು.

ಇಷ್ಟಾದರೂ ಟಿಕೆಟ್ ಕೈ ತಪ್ಪಿದ್ದು ಅವರಲ್ಲಿ ಅಸಮಾಧಾನದ ಜತೆಗೆ ಆಕ್ರೋಶ ಮೂಡಿಸಿದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ರವಿಕುಮಾರ್ ಅವರು ಫೆ.25 ರಂದು ದಿಬ್ಬೂರಹಳ್ಳಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಅಲ್ಲಿ ತಮ್ಮ ಆಪ್ತರು, ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಲಹೆ ಪಡೆದು ತಮ್ಮ ಮುಂದಿನ ರಾಜಕೀಯ ನಡೆ ಘೋಷಿಸುವುದಾಗಿ ಹೇಳುತ್ತಿದ್ದಾರೆ.

‘ಒಂದೊಮ್ಮೆ ಜೆಡಿಎಸ್‌ ಟಿಕೆಟ್ ಕೈತಪ್ಪಿದರೆ ದೇವೇಗೌಡರ ಫೋಟೊ ಮತ್ತು ತಮ್ಮ ಟ್ರಸ್ಟ್ ವತಿಯಿಂದ ಮಾಡಿದ ಸಮಾಜಸೇವಾ ಕಾರ್ಯಗಳನ್ನು ಮುಂದಿ
ಟ್ಟುಕೊಂಡು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿರುವ ರವಿಕುಮಾರ್ ಈ ಬಾರಿ ಅದನ್ನೇ ಮಾಡುತ್ತಾರಾ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ಎಲ್ಲರ ಗಮನ ಗೌರಿಬಿದನೂರು ಕಡೆ

ಇಲ್ಲಿ ಜೆಡಿಎಸ್ ಅಭ್ಯರ್ಥಿಯ ಹೆಸರು ಘೋಷಣೆ ಆಗದ ಕಾರಣಕ್ಕೆ ಈ ಕ್ಷೇತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸಿರುವ ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಅಶೋಕ್ ಕುಮಾರ್, ಮುಖಂಡರಾದ ಮಂಜುನಾಥ್‌ ರೆಡ್ಡಿ, ವೇಣುಗೋಪಾಲ್ ನಾಯ್ಕ್ ಅವರು ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ದಿನದಿಂದ ಕ್ಷೇತ್ರ ಮರೆತು ಟಿಕೆಟ್‌ಗಾಗಿ ವರಿಷ್ಠರ ಮನೆ ಬಳಿಯೇ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ.

ಆದರೆ ವರಿಷ್ಠರ ರಾಜಕೀಯ ಲೆಕ್ಕಾಚಾರದಲ್ಲಿ ಈ ಮೂರು ಮುಖಂಡರ ಬಗ್ಗೆ ಒಲವು ಇಲ್ಲ ಎನ್ನಲಾಗಿದೆ. ಉದ್ಯಮಿ ಜೈಪಾಲ್ ರೆಡ್ಡಿ ಸೇರ್ಪಡೆಯಿಂದ ಬಿಜೆಪಿಯಲ್ಲಿ ಉಂಟಾಗಿರುವ ಒಡಕಿನ ಲಾಭ ಪಡೆಯಲು ಹವಣಿಸುತ್ತಿರುವ ಜೆಡಿಎಸ್‌ ವರಿಷ್ಠರು ಬಿಜೆಪಿ ಮುಖಂಡ ಸಿ.ಆರ್.ನರಸಿಂಹಮೂರ್ತಿ ಅವರಿಗೆ ‘ಗಾಳ’ ಹಾಕುತ್ತಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ನಿಂದ ರಾಜಕೀಯ ಜೀವನ ಆರಂಭಿಸಿದ ನರಸಿಂಹಮೂರ್ತಿ ಅವರನ್ನು ಪುನಃ ಮಾತೃಪಕ್ಷಕ್ಕೆ ಸೆಳೆದು ಅವರ ಮೂಲಕ ತಮ್ಮ ಹಳೆಯ ಭದ್ರಕೋಟೆ ಎನಿಸಿಕೊಂಡಿದ್ದ ಗೌರಿಬಿದನೂರನ್ನು ಮತ್ತೊಮ್ಮೆ ಕೈವಶ ಮಾಡಿಕೊಳ್ಳುವ ತವಕದಲ್ಲಿರುವ ದೇವೇಗೌಡರು ಈ ವಿಚಾರವಾಗಿ ಇತ್ತೀಚೆಗೆ ಎರಡು ಬಾರಿ ನರಸಿಂಹಮೂರ್ತಿ ಅವರನ್ನು ಕರೆಯಿಸಿಕೊಂಡು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷೇತ್ರದಲ್ಲಿ ಸದ್ಯ ಜೆಡಿಎಸ್‌ ಮೂರನೇ ಸ್ಥಾನದಲ್ಲಿರುವುದನ್ನು ಅರಿತಿರುವ ನರಸಿಂಹಮೂರ್ತಿ ಅವರು ದೂರದೃಷ್ಟಿಯೊಂದಿಗೆ ತಮ್ಮ ಭವಿಷ್ಯದ ನಿರ್ಧಾರದ ಬಗ್ಗೆ ಅಳೆದು ತೂಗಿ ನೋಡುವ ಜತೆಗೆ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ನರಸಿಂಹಮೂರ್ತಿ ಅವರು ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದರೆ ಜೆಡಿಎಸ್ ಅಭ್ಯರ್ಥಿಯಾಗುತ್ತಾರಾ ಅಥವಾ ಜೆಡಿಎಸ್‌ ಟಿಕೆಟ್‌ಗಾಗಿ ಪೈಪೋಟಿಗಿಳಿದ ಮುಖಂಡರ ಪೈಕಿ ಅಂತಿಮವಾಗಿ ಒಬ್ಬರಿಗೆ ವರಿಷ್ಠರು ಟಿಕೆಟ್ ನೀಡುತ್ತಾರಾ ಎನ್ನುವುದು ಕಾಯ್ದು ನೋಡಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT