ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮ ಸ್ಕೂಟರ್‌’ ಯೋಜನೆಗೆ ಮೋದಿ ಚಾಲನೆ

ದ್ವಿಚಕ್ರ ವಾಹನ ಖರೀದಿಸಲು ಮಹಿಳೆಯರಿಗೆ ಸಹಾಯಧನ ನೀಡಲಿರುವ ತಮಿಳುನಾಡು ಸರ್ಕಾರ
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ 70 ವರ್ಷದ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಆರಂಭಿಸಿರುವ ‘ಅಮ್ಮ ಸ್ಕೂಟರ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.

ಈ ಯೋಜನೆ ಅಡಿ ಪ್ರತಿ ವರ್ಷ 1 ಲಕ್ಷ ಮಹಿಳೆಯರಿಗೆ ಸ್ಕೂಟರ್ ಕೊಳ್ಳಲು, ಸ್ಕೂಟರ್‌ನ ಬೆಲೆಯ ಶೇ 50ರಷ್ಟು ಅಥವಾ ₹ 25,000 ಸಹಾಯಧನ ನೀಡಲಾಗುತ್ತದೆ.

ಖಾಸಗಿ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿರುವ ಯುವತಿಯೊಬ್ಬರಿಗೆ ಸ್ಕೂಟರ್‌ನ ಕೀ ಹಸ್ತಾಂತರಿಸುವ ಮೂಲಕ ಯೋಜನೆಗೆ ಮೋದಿ ಚಾಲನೆ ನೀಡಿದರು. ಆ ಯುವತಿಯೊಂದಿಗೆ ಮೋದಿ ಕೆಲ ಕಾಲ ಮಾತನಾಡಿದರು.

‘ಈ ಯೋಜನೆಯ ಫಲಾನುಭವಿಗಳ ಮುಖದಲ್ಲಿರುವ ನಗುವನ್ನು ನೋಡಿ ಜಯಲಲಿತಾ ಅವರು ಸಂತೋಷಪಡುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಒಬ್ಬ ಮಹಿಳೆಯ ಸಬಲೀಕರಣ ಸಾಧ್ಯವಾದರೆ, ಆಕೆಯ ಕುಟುಂಬವೇ ಸಬಲಗೊಳ್ಳುತ್ತದೆ. ಮಹಿಳೆಗೆ ಶಿಕ್ಷಣ ನೀಡಿದರೆ, ಆಕೆಯ ಕುಟುಂಬವೂ ಶಿಕ್ಷಣ ಪಡೆಯುತ್ತದೆ. ಮಹಿಳೆಯ ಆರೋಗ್ಯ ಕಾಪಾಡಿದರೆ, ಆಕೆಯ ಕುಟುಂಬದವರ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಜಯಲಲಿತಾ ಅವರು ಈ ಯೋಜನೆಯನ್ನು ಘೋಷಿಸಿದ್ದರು. ಆದರೆ ಯೋಜನೆ ಜಾರಿಯಾಗಿರಲಿಲ್ಲ. ‘ಜಯಲಲಿತಾ ಅವರ 70ನೇ ಜನ್ಮದಿನಾಚರಣೆ ವೇಳೆ ಯೋಜನೆಯನ್ನು ಜಾರಿಗೆ ತರುತ್ತೇವೆ’ ಎಂದು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದರು.

ಜಯಲಲಿತಾ ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯದಲ್ಲಿ 70 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೂ ಪ್ರಧಾನಿ ಚಾಲನೆ ನೀಡಿದರು. ಮೋದಿ ಅವರು ಶನಿವಾರ ರಾತ್ರಿ ಚೆನ್ನೈನಲ್ಲೇ ತಂಗಲಿದ್ದು, ಭಾನುವಾರ ಪುದುಚೇರಿಗೆ ತೆರಳಲಿದ್ದಾರೆ.

ಯೋಜನೆ ವಿವರ

ಶೇ 50
ಸ್ಕೂಟರ್ ಖರೀದಿಗೆ ನೀಡಲಾಗುವ ಸಹಾಯಧನ

ಅಥವಾ
₹ 25,000
ಸ್ಕೂಟರ್ ಖರೀದಿಗೆ ನೀಡಲಾಗುವ ಗರಿಷ್ಠ ಸಹಾಯಧನ

18–40 ವರ್ಷ
ವಯಸ್ಸಿನ ಯುವತಿಯರು ಮತ್ತು ಮಹಿಳೆಯರಿಗೆ ಮಾತ್ರ ಸಹಾಯಧನ ಸಿಗಲಿದೆ

1 ಲಕ್ಷ
ಪ್ರತಿ ವರ್ಷ ನೀಡಲಾಗುವ ಸ್ಕೂಟರ್‌ಗಳು

3.36 ಲಕ್ಷ
ಸ್ಕೂಟರ್ ಸಹಾಯಧನಕ್ಕಾಗಿ ಈವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು
****
‘ಕಾವೇರಿ ನಿರ್ವಹಣಾ ಮಂಡಳಿ ರಚಿಸಿ’
‘ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ರಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು.

ಆದರೆ ಮೋದಿ ಈ ಬಗ್ಗೆ ಏನನ್ನೂ ಮಾತನಾಡಲಿಲ್ಲ.
***
ದಿಯು–ಅಹಮದಾಬಾದ್ ಉಡಾನ್ ಸೇವೆಗೆ ಚಾಲನೆ

ದಮನ್ : ದಮನ್ ಮತ್ತು ದಿಯುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ₹ 1,000 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಶನಿವಾರ ಉದ್ಘಾಟಿಸಿದರು.

ಕೇಂದ್ರ ಸರ್ಕಾರದ ಪ್ರಾದೇಶಿಕ ವಾಯುಯಾನ ಸಂಪರ್ಕ ಯೋಜನೆ–ಉಡಾನ್ ಅಡಿ ದಿಯು ಮತ್ತು ಅಹಮದಾಬಾದ್ ನಡುವಣ ವಿಮಾನ ಸೇವೆಯನ್ನು ಮೋದಿ ಉದ್ಘಾಟಿಸಿದರು. ದಿಯು ಮತ್ತು ದಮನ್ ಮಧ್ಯೆ ಹೆಲಿಕಾಪ್ಟರ್‌ ಸೇವೆಗೆ ಚಾಲನೆ ನೀಡಿದರು. ಇದಲ್ಲದೆ ಕೊಳಚೆ ನೀರು ಸಂಸ್ಕರಣ ಘಟಕ, ಅಡುಗೆ ಅನಿಲ ಕೊಳವೆಮಾರ್ಗ, ಸಾರ್ವಜನಿಕ ಮಾರುಕಟ್ಟೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಲು ನಿರಾಕರಿಸಿದರು. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಸಾವಿರಾರು ಕಪ್ಪು ಬಲೂನುಗಳನ್ನು ಹಾರಿಬಿಟ್ಟು ಪ್ರತಿಭಟನೆ ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT