ಅರುಣಾ ರೆಡ್ಡಿ ಚಾರಿತ್ರಿಕ ಸಾಧನೆ

7
ವಿಶ್ವಕಪ್‌ನಲ್ಲಿ ಕಂಚಿಗೆ ಕೊರಳೊಡ್ಡಿದ ಭಾರತದ ಜಿಮ್ನಾಸ್ಟಿಕ್‌ ಪಟು

ಅರುಣಾ ರೆಡ್ಡಿ ಚಾರಿತ್ರಿಕ ಸಾಧನೆ

Published:
Updated:
ಅರುಣಾ ರೆಡ್ಡಿ ಚಾರಿತ್ರಿಕ ಸಾಧನೆ

ಮೆಲ್ಬರ್ನ್‌ :ವಿಶ್ವ ಜಿಮ್ನಾಸ್ಟಿಕ್ಸ್‌ ಅಂಗಳದಲ್ಲಿ ಶನಿವಾರ ಭಾರತದ ಮತ್ತೊಬ್ಬ ತಾರೆಯ ಉದಯವಾಯಿತು. ಹೈದರಾಬಾದಿನ ಅರುಣಾ ಬುದ್ದಾ ರೆಡ್ಡಿ, ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟಿಕ್‌ ಪಟು ಎಂಬ ಹಿರಿಮೆಗೂ ಪಾತ್ರರಾದರು.

ಹಿಸೆನ್ಸ್‌ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ವಾಲ್ಟ್ ವಿಭಾಗದಲ್ಲಿ  ಹೈದರಾಬಾದ್‌ನ ಅರುಣಾ, 13.649 ಪಾಯಿಂಟ್ಸ್‌ ಕಲೆಹಾಕಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

2016ರ ರಿಯೊ ಒಲಿಂಪಿಕ್ಸ್‌ನ ವಾಲ್ಟ್‌ ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ದೀಪಾ ಕರ್ಮಾಕರ್‌, 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಆದರೆ ವಿಶ್ವಕಪ್‌ನಲ್ಲಿ ಅವರು ಪದಕದ ಸಾಧನೆ ಮಾಡಿಲ್ಲ.

ಅರುಣಾ, ಅಂತರರಾಷ್ಟ್ರೀಯ ಕೂಟದಲ್ಲಿ ಗೆದ್ದ ಮೊದಲ ಪದಕ ಇದಾಗಿದೆ. 2013ರ ವಿಶ್ವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌, 2014ರ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟ, 2017ರ ಏಷ್ಯಾ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಸ್ಪರ್ಧಿಸಿದ್ದರು. ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಗಳಿಸಿದ್ದು ಅವರ ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು.

ಸ್ಲೊವೇನಿಯಾದ ತಜಾಸ ಕೈಸ್ಲೆಫ್‌, ಚಿನ್ನಕ್ಕೆ ಕೊರಳೊಡ್ಡಿದರು. ಅವರು 13.800 ಪಾಯಿಂಟ್ಸ್‌ ಸಂಗ್ರಹಿಸಿದರು. ಈ ವಿಭಾಗದ ಬೆಳ್ಳಿ ಆಸ್ಟ್ರೇಲಿಯಾದ ಎಮಿಲಿ ವೈಟ್‌ಹೆಡ್‌ (13.699 ಪಾಯಿಂಟ್ಸ್‌) ಅವರ ಪಾಲಾಯಿತು.

ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದ್ದ ಭಾರತದ ಪ್ರಣತಿ ನಾಯಕ್‌ ಆರನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ಅವರು 13.416 ಪಾಯಿಂಟ್ಸ್‌ ಕಲೆಹಾಕಲಷ್ಟೇ ಶಕ್ತರಾದರು. ಅರುಣಾ, ಭಾನುವಾರ ನಡೆಯುವ ಫ್ಲೋರ್‌ ಸ್ಪರ್ಧೆಯ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

ಪುರುಷರ ರಿಂಗ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ರಾಕೇಶ್‌ ಪಾತ್ರ, ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.

ಭಾನುವಾರ ನಡೆಯುವ ಪ್ಯಾರಲಲ್‌ ಬಾರ್ಸ್‌ ಸ್ಪರ್ಧೆಯ ಫೈನಲ್‌ನಲ್ಲೂ ರಾಕೇಶ್‌ ಸ್ಪರ್ಧಿಸಲಿದ್ದಾರೆ.

ಪುರುಷರ ವಾಲ್ಟ್‌ ವಿಭಾಗದಲ್ಲಿ ಕಣದಲ್ಲಿರುವ ಆಶಿಶ್‌ ಕುಮಾರ್‌, ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಅವರು ಆರನೇ ಸ್ಥಾನ ತಮ್ಮದಾಗಿಸಿಕೊಂಡರು. ಆಶಿಶ್‌, 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು 2014 ಏಷ್ಯನ್‌ ಕ್ರೀಡಾಕೂಟಗಳಲ್ಲಿ ಕಂಚಿನ ಸಾಧನೆ ಮಾಡಿದ್ದರು.

‘ಅರುಣಾ, ವಿಶ್ವಕಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮತ್ತು ಏಕೈಕ ಜಿಮ್ನಾಸ್ಟಿಕ್‌ ಪಟು. ಅವರ ಈ ಸಾಧನೆ ಹೆಮ್ಮೆಯಿಂದ ಬೀಗವಂತಹದ್ದು’ ಎಂದು ಭಾರತ ಜಿಮ್ನಾಸ್ಟಿಕ್ಸ್‌ ಫೆಡರೇಷನ್‌ನ ಕಾರ್ಯದರ್ಶಿ ಶಾಂತಿಕುಮಾರ್‌ ಸಿಂಗ್‌  ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry