ಇಂದಿರಾಗಾಂಧಿ ಸಂಗೀತ ಕಾರಂಜಿ ಪುನಶ್ಚೇತನ: ಟೆಂಡರ್ ಪ್ರಕ್ರಿಯೆ ಪೂರ್ಣ

7

ಇಂದಿರಾಗಾಂಧಿ ಸಂಗೀತ ಕಾರಂಜಿ ಪುನಶ್ಚೇತನ: ಟೆಂಡರ್ ಪ್ರಕ್ರಿಯೆ ಪೂರ್ಣ

Published:
Updated:

ಬೆಂಗಳೂರು: ಇಂದಿರಾಗಾಂಧಿ ಸಂಗೀತ ಕಾರಂಜಿಯ ಪುನಶ್ಚೇತನ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ತೋಟಗಾರಿಕೆ ಇಲಾಖೆ ಪೂರ್ಣಗೊಳಿಸಿದೆ.

₹2 ಕೋಟಿ ವೆಚ್ಚದ ಕಾಮಗಾರಿಯ ಗುತ್ತಿಗೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ಪಡೆದಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ.

20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಾರಂಜಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ, ಅದರ ಪುನಶ್ಚೇತನಕ್ಕೆ ₹ 16 ಕೋಟಿ ಅನುದಾನ ಕೋರಿ ತೋಟಗಾರಿಕೆ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಅಷ್ಟು ಅನುದಾನ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿತ್ತು.

ಸೈಕಲ್ ಟ್ರ್ಯಾಕ್‌ಗೆ ಪ್ರಸ್ತಾವ: ಸೈಕಲ್ ಸಂಚಾರ ಉತ್ತೇಜಿಸುವ ಸಲುವಾಗಿ ಕಬ್ಬನ್ ಉದ್ಯಾನದಲ್ಲಿ ಸೈಕಲ್ ಟ್ರ್ಯಾಕ್‌ ನಿರ್ಮಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಮಹಾಂತೇಶ್ ಮುರಗೋಡ, ‘ಟ್ರಿಣ್ ಟ್ರಿಣ್ ಯೋಜನೆಯ ಭಾಗವಾಗಿ ಉದ್ಯಾನದ ಅಂಗಳದಲ್ಲಿ ಸೈಕಲ್‌ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ಕೋರಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪತ್ರ ಬರೆದಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಜತೆಗೆ ಉದ್ಯಾನದ ರಸ್ತೆಗಳ ಬದಿಯಲ್ಲಿ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸುವಂತೆ ಕೋರಲಾಗಿದೆ’ ಎಂದರು.

‘ಉದ್ಯಾನದಲ್ಲಿ ಮಾಲಿನ್ಯ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಸೈಕಲ್ ಬಳಕೆಯಿಂದ ಅದನ್ನು ಕಡಿಮೆ ಮಾಡಬಹುದು. ಜತೆಗೆ ಸಾಕಷ್ಟು ವಿಶಾಲವಾಗಿರುವ ಉದ್ಯಾನವನ್ನು ನಡೆದುಕೊಂಡೇ ಸುತ್ತಾಡಲು ಜನರಿಗೆ ಹಾಗೂ ಪ್ರವಾಸಿಗರಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಅವರಿಗೆ ಸೈಕಲ್ ಸೌಲಭ್ಯ ಒದಗಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ಮಿನಿ ಪಾಲ್ಸ್‌: ಬಾಲಭವನ ಅಂಗಳದ ಹಳ್ಳದ ಬಳಿ ‘ಮಿನಿ ಫಾಲ್ಸ್‌’ ನಿರ್ಮಿಸುವ ಬಗ್ಗೆ ಕಬ್ಬನ್ ಉದ್ಯಾನದ ಸಲಹಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪವಾಗಿದೆ. ಅದಕ್ಕೆ ಎಲ್ಲ ಸದಸ್ಯರು ಒಪ್ಪಿದ್ದಾರೆ ಎಂದು ಮುರಗೋಡ ಹೇಳಿದರು.

‘ಆ ಹಳ್ಳದಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಅದರಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಅದರಿಂದ ಬಾಲಭವನ ಆಕರ್ಷಣೆ ಕಳೆದುಕೊಂಡಿದೆ. ಹೀಗಾಗಿ, ನೀರಿನ ಚಲನೆಗೆ ಅವಕಾಶ ಮಾಡಿಕೊಡಲು ಜಲಪಾತ ನಿರ್ಮಾಣದ ಉದ್ದೇಶ ಹೊಂದಿದ್ದೇವೆ’ ಎಂದರು.

ಆ ಸಂಬಂಧ ಯೋಜನಾ ವರದಿ ತಯಾರಿಸಲಾಗುತ್ತಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ನೆರವು ಪಡೆದು ಕಾಮಗಾರಿ ನಡೆಸಲಾಗುತ್ತದೆ ಎಂದರು.

ಕಾರಂಜಿಯ ಪುನಶ್ಚೇತನ ಸೌಲಭ್ಯ

* ಪಾದಚಾರಿ ಮಾರ್ಗ ನಿರ್ಮಾಣ

* 45 ಎಲ್‌ಇಡಿ ಬಲ್ಬ್‌ಗಳ, ಸ್ಪ್ರಿಂಕ್ಲರ್‌ಗಳ ಅಳವಡಿಕೆ

* ನೆರಳು ಉದ್ಯಾನ ನಿರ್ಮಾಣ

* 2 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ

* ಶಿಥಿಲಗೊಂಡ ಕಾಂಪೌಂಡ್‌ನ ದುರಸ್ತಿ

* ಕಾಂಪೌಂಡ್ ಎತ್ತರಿಸಿ, ತಂತಿ ಬೇಲಿ ಅಳವಡಿಕೆ

* ಕಾರಂಜಿ ವೀಕ್ಷಣೆ ಜಾಗದಲ್ಲಿ ಆಸನಗಳ ವ್ಯವಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry