7

ಪ್ರೇಕ್ಷಕರನ್ನು ಬೆಳೆಸದೆ ಕಲೆ ಉಳಿಯದು

Published:
Updated:
ಪ್ರೇಕ್ಷಕರನ್ನು ಬೆಳೆಸದೆ ಕಲೆ ಉಳಿಯದು

ಬೆಂಗಳೂರು: ‘ಕಲಾತ್ಮಕ ಸಿನಿಮಾ ಮತ್ತು ವಾಣಿಜ್ಯ ಸಿನಿಮಾಗಳ ನಡುವಿನ ಕಂದಕ ತೊಲಗಬೇಕು. ಒಳ್ಳೆಯ ಸಿನಿಮಾ ಕೆಟ್ಟ ಸಿನಿಮಾ ಎರಡು ವಿಭಾಗ ಮಾತ್ರವೇ ಇರಬೇಕು’ ಎಂದು ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯಪಟ್ಟರು.

ಸಿನಿಮೋತ್ಸವದಲ್ಲಿ ಆಯೋಜಿಸಲಾಗಿದ್ದ ‘ನಿರ್ದೇಶಕರೊಂದಿಗೆ ಸಂವಾದ’ದಲ್ಲಿ ಮಾತನಾಡಿದ ಅವರು ‘ಸಿನಿಮಾ ಎಂದರೆ ಒಂದು ಕಥೆಯನ್ನು ಜನರಿಗೆ ಹೇಳುವುದು ಎನ್ನುವ ಸಿದ್ಧಮಾದರಿಯಲ್ಲಿಯೇ ನಾವು ಸಿಲುಕಿಕೊಂಡಿದ್ದೇವೆ. ಹೊಸ ಪ್ರಯೋಗಗಳನ್ನು ಮಾಡುವತ್ತ ಗಮನಹರಿಸುತ್ತಿಲ್ಲ. ಆದ್ದರಿಂದಲೇ ಇಂದಿಗೂ ಭಾರತೀಯ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿಬಾರಿ ಹೊಸ ಸಿನಿಮಾ ಮಾಡುವಾಗಲೂ ಯಾರಿಗಾಗಿ ಸಿನಿಮಾ ಮಾಡುತ್ತಿದ್ದೇನೆ. ಜನರನ್ನು ತಲುಪಲು ಸಾಧ್ಯವೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿರುತ್ತದೆ. ಯಾಕೆಂದರೆ ನಮ್ಮಲ್ಲಿ ಕಲಾತ್ಮಕ ಸಿನಿಮಾಗಳಿಗೆ ಚಿತ್ರಮಂದಿರಗಳೇ ಸಿಗುತ್ತಿಲ್ಲ' ಎಂದು ನೋವಿನಿಂದಲೇ ಹೇಳಿಕೊಂಡರು.

‘ಸಿನಿಮಾ ಈಗ ವ್ಯಾಪಾರವಾಗಿದೆ. ವ್ಯಾಪಾರದ ಆಯಾಮಗಳನ್ನು ಹೊರತುಪಡಿಸಿ ನೋಡುವುದರಿಂದ ಮಾತ್ರವೇ ಸಿನಿಮಾಗಳು ಉಳಿದುಕೊಳ್ಳಲು ಸಾಧ್ಯ. ಇದೇ ಮೊದಲ ಬಾರಿಗೆ ‘ಭೇಟಿ‘ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ನಿರ್ಮಿಸಿ 14 ತಿಂಗಳಾಯಿತು. ಬಿಡುಗಡೆ ಮಾಡಬೇಕೆಂದಿದ್ದರೂ ಜನರು ಮತ್ತು ಸರ್ಕಾರದಿಂದ ಸಹಕಾರ ದೊರಕುವುದಿಲ್ಲ. ಸರ್ಕಾರ ಮತ್ತು ಅಕಾಡೆಮಿ ಪ್ರಯೋಗಾತ್ಮಕ ಸಿನಿಮಾಗಳಿಗಾಗಿಯೇ ಚಿತ್ರಮಂದಿರಗಳನ್ನು ಕಾಯ್ದಿರಿಸಲು ಸಾಧ್ಯವಾದರೆ ಪ್ರಾಯಶಃ ನಾವು ಸಿನಿಮಾ ಬಿಡುಗಡೆ ಮಾಡುವುದು ಸಾಧ್ಯವಾಗುತ್ತದೆ’ ಎಂದರು.

‘ಹೆಣ್ಣು ಮಗು ಹಾಗೂ ತಲಾಖ್ ವಿಷಯವನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದೆ. ಇತ್ತೀಚೆಗೆ ತಲಾಖ್‌ಗೆ ನಿಷೇಧ ಹೇರಲಾಯಿತು. ಈ ಹಿಂದೆ ಎಫ್‌ಡಿಐಗೆ ಪ್ರತಿಕ್ರಿಯೆಯಾಗಿ ‘ಭಾರತ್‌ ಸ್ಟೋರ್ಸ್‌’ ಸಿನಿಮಾ ಮಾಡಿದ್ದೆ. ಈ ಸಿನಿಮಾ ಬಂದ ಮರು ವರ್ಷವೇ ಎಫ್‌ಡಿಐ ರದ್ದಾಯಿತು. ನನ್ನ ಸಿನಿಮಾದಿಂದಲೇ ಇದು ಆಯಿತು ಎಂದು ಹೇಳುತ್ತಿಲ್ಲ. ಆದರೆ ಸಿನಿಮಾವೂ ಕಾರಣವಾಗಬಲ್ಲದು. ನಿರ್ದೇಶಕನಾಗಿ ಇದು ಒಂದು ರೀತಿಯ ಹೆಮ್ಮೆ ನೀಡುತ್ತದೆ’ ಎಂದರು.

‘ಸಿನಿಮಾಗಳ ಸಂಖ್ಯೆ ಹೆಚ್ಚಿಸುತ್ತಿದ್ದೇವೆಯೋ ಹೊರತು ಪ್ರೇಕ್ಷಕರನ್ನು ಹೆಚ್ಚಿಸಲು ಯಾವುದೇ ಕೆಲಸ ಮಾಡುತ್ತಿಲ್ಲ. ನಾವು ಒಳ್ಳೆಯ ಪ್ರೇಕ್ಷಕರನ್ನು ಬೆಳೆಸದ ಕಾರಣಕ್ಕೆ ಕಲಾತ್ಮಕ ಸಿನಿಮಾಗಳ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ. ಅವಾರ್ಡ್‌ ಸಿನಿಮಾ ಎಂದರೆ ಬೋರಿಂಗ್‌ ಎಂಬ ಹಣೆಪಟ್ಟಿ ಇದೆ. ಅದಕ್ಕಾಗಿ ನಾನು ಮಾಧ್ಯಮದವರಿಗೆ ಅವಾರ್ಡ್‌ ಸಿನಿಮಾ ಎಂದು ಬರೆಯಲೇಬೇಡಿ ಎಂದು ಹೇಳುತ್ತಿರುತ್ತೇನೆ. ಒಳ್ಳೆಯ ಸಿನಿಮಾ ಕೆಟ್ಟ ಸಿನಿಮಾ ಎಂದು ಮಾತ್ರವೇ ಕರೆಯಬೇಕು’ ಎಂದರು.

‘ಕ್ರೆಸ್ಟೆಡ್‌ ಐಬಿಸ್‌’ ನಿರ್ದೇಶಕ ಕ್ವಿಯೋ ಲಿಯಾಂಗ್‌ ಕಲುಷಿತ ಪರಿಸರವೇ ತಮ್ಮ ಸಿನಿಮಾಕ್ಕೆ ವಸ್ತುವಾದ ಬಗೆ ಹಂಚಿಕೊಂಡರು. ‘ಬ್ಲಾಕೇಜ್‌’ ಸಿನಿಮಾ ನಿರ್ದೇಶಕ ಮೋಹಸೇನ್‌ ಗರಾಯ್‌, ‘ನೀರು ತಂದವರು’ ಸಿನಿಮಾ ನಿರ್ದೇಶಕ ಆಸಿಫ್‌ ಕ್ಷತ್ರಿಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry