ಆರ್‌.ವಿ.ರಸ್ತೆ–ಯಲಚೇನಹಳ್ಳಿ: ಮೆಟ್ರೊ ಸೇವೆ ಪುನರಾರಂಭ

7

ಆರ್‌.ವಿ.ರಸ್ತೆ–ಯಲಚೇನಹಳ್ಳಿ: ಮೆಟ್ರೊ ಸೇವೆ ಪುನರಾರಂಭ

Published:
Updated:

ಬೆಂಗಳೂರು:‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ಹಳಿ ದುರಸ್ತಿ ಸಲುವಾಗಿ ಆರ್‌.ವಿ.ರಸ್ತೆ–ಯಲಚೇನಹಳ್ಳಿ ನಿಲ್ದಾಣಗಳ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೆಟ್ರೊ ಸೇವೆ ಭಾನುವಾರ ಸಂಜೆ 5ಗಂಟೆಯಿಂದ ಪುನರಾರಂಭಗೊಂಡಿತು.

ಉತ್ತರ– ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ ನಿಲ್ದಾಣದ ಬಳಿ ಹಳಿ ದುರಸ್ತಿಗಾಗಿ ಈ ನಿಲ್ದಾಣಗಳ ನಡುವೆ ಶನಿವಾರ ರಾತ್ರಿ 9ಗಂಟೆಯಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಿಗ್ಗೆ 5 ಗಂಟೆಗೆ ಸೇವೆ ಮತ್ತೆ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಮೊದಲು ಹೇಳಿತ್ತು. ದುರಸ್ತಿ ಕಾರ್ಯ ಅವಧಿಗೆ ಮುನ್ನವೇ ಪೂರ್ಣಗೊಂಡಿದ್ದರಿಂದ ಭಾನುವಾರವೇ ರೈಲು ಸಂಚಾರ ಆರಂಭಿಸಲಾಗಿದೆ.

‘ಬಿರುಕು ಬಿಟ್ಟಿರುವ ಹಳಿಯ ಉಕ್ಕಿನಪಟ್ಟಿಯನ್ನು ಹೊರತೆಗೆದು ಬೇರೆಯೇ ಪಟ್ಟಿಯನ್ನು ಜೋಡಿಸಬೇಕಿತ್ತು. ನಮ್ಮ ಸಿಬ್ಬಂದಿ ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಸತತವಾಗಿ ಕೆಲಸ ನಡೆಸಿದ್ದರಿಂದ ಪ್ರಯಾಣಿಕರಿಗೆ ಬೇಗನೆ ಸೇವೆ ಒದಗಿಸಲು ಸಾಧ್ಯವಾಗಿದೆ. ಹಳಿ ಪರೀಕ್ಷೆಯೂ ಮುಗಿದಿದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯು.ಎ. ವಸಂತರಾವ್‌ ತಿಳಿಸಿದರು.

‘ದೋಷ ಕಂಡು ಬಂದ ಉಕ್ಕಿನ ಪಟ್ಟಿಯ ಬಗ್ಗೆ ಮೊದಲು ಅಧ್ಯಯನ ನಡೆಸುತ್ತೇವೆ. ಪೂರೈಸಿದ್ದ ಪಟ್ಟಿಯಲ್ಲೇ ದೋಷ ಇದ್ದದ್ದು ಸಾಬೀತಾದರೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬಹುದು. ಸದ್ಯಕ್ಕೆ ಕಂಪನಿಗೆ ಯಾವುದೇ ನೋಟಿಸ್‌ ನೀಡಿಲ್ಲ’ ಎಂದು ಅವರು  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry