‘ನಿರ್ಭಯಾ ಪ್ರಕರಣದ ಭೀಕರತೆ ಇದರಲ್ಲಿದೆ’

7
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

‘ನಿರ್ಭಯಾ ಪ್ರಕರಣದ ಭೀಕರತೆ ಇದರಲ್ಲಿದೆ’

Published:
Updated:
‘ನಿರ್ಭಯಾ ಪ್ರಕರಣದ ಭೀಕರತೆ ಇದರಲ್ಲಿದೆ’

ಬೆಂಗಳೂರು: ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿ ಸಂಬಂಧ 63ನೇ ಸೆಷನ್ಸ್‌ ನ್ಯಾಯಾಲಯ ಸೋಮವಾರ ವಾದ–‍ಪ್ರತಿವಾದ ಆಲಿಸಿತು. ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ (ಫೆ.27) ಮುಂದೂಡಿತು.

ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರಾದ ಪರಮೇಶ್ವರ್‌ ಪ್ರಸನ್ನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡರು. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಎಂ.ಎಸ್‌.ಶ್ಯಾಮಸುಂದರ್ ಜಾಮೀನು ರದ್ದು ಮಾಡುವಂತೆ ಕೋರಿ 7 ಪುಟಗಳ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದರು. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ಆಕ್ಷೇಪಣೆ ಮೇಲೆ ವಾದ ಮಂಡಿಸಲು ನಲಪಾಡ್‌ ಪರ ವಕೀಲ ಟಾಮಿ ಸೆಬಾಸ್ಟಿಯನ್‌ಗೆ ಅವಕಾಶ ನೀಡಿದರು.

‘ವೈಯಕ್ತಿಕ ದ್ವೇಷದಿಂದ ಉದ್ದೇಶಪೂರ್ವಕವಾಗಿ ಈ ಘಟನೆ ಸಂಭವಿಸಿಲ್ಲ. ಅದಕ್ಕೆ ಪುರಾವೆಯೂ ಇಲ್ಲ. ಆರೋಪಿಗಳ ಪೈಕಿ ಇಬ್ಬರಿಗೆ ಗಾಯಗಳಾಗಿವೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಇನ್‌ಸ್ಪೆಕ್ಟರ್‌ ಅವರನ್ನೇ ಅಮಾನತು ಮಾಡಿಸಲಾಗಿದೆ. ಇದರಿಂದಲೇ ನಲಪಾಡ್‌ ತಂದೆ ಶಾಸಕ ಹ್ಯಾರಿಸ್‌ಗಿಂತ ವಿದ್ವತ್‌ ತಂದೆ ಲೋಕನಾಥನ್ ಅವರೇ ಹೆಚ್ಚು ಪ್ರಭಾವಿ ಎಂಬುದು ತಿಳಿಯುತ್ತದೆ. ಹೀಗಾಗಿ, ನನ್ನ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಟಾಮಿ ಸೆಬಾಸ್ಟಿಯನ್ ಕೋರಿದರು.

ಅದಕ್ಕೆ ಶ್ಯಾಮಸುಂದರ್, ‘ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದ ಭೀಕರತೆ ಈ ಪ್ರಕರಣದಲ್ಲಿ ಇದೆ. ಅದೇ ಕಾರಣಕ್ಕೆ ದೇಶದಾದ್ಯಂತ ಈ ಪ್ರಕರಣ ಸುದ್ದಿಯಾಗಿದೆ. ದುಡ್ಡಿದ್ದ ಮಾತ್ರಕ್ಕೆ ಹೇಗೆ ಬೇಕಾದರೂ ವರ್ತಿಸಬಹುದು ಎಂದು ಆರೋಪಿಗಳು ತಿಳಿದುಕೊಂಡಿದ್ದಾರೆ. ಅವರಿಗೆ ಕೋರ್ಟ್ ಆದೇಶ ಪಾಠ ಆಗಬೇಕು. ಹೀಗಾಗಿ, ಜಾಮಿನು ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ವಿದ್ವತ್‌ ಆರೋಗ್ಯ ಸ್ಥಿತಿ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಿದ ಶ್ಯಾಮಸುಂದರ್‌, ಆರೋಪಿಗಳಿಗೆ ಜಾಮೀನು ನೀಡಿದರೆ ಎದುರಾಗುವ ಪರಿಣಾಮಗಳನ್ನು ವಿವರಿಸಿದರು.

ಆರೋಪಿಗಳ ಪರ ವಕೀಲರು, ‘ಎಲ್ಲ ಆರೋಪಿಗಳ ಪರವಾಗಿ ಪ್ರತ್ಯೇಕವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಎಸ್‌ಪಿಪಿ ಅವರ ಆಕ್ಷೇಪಣೆಗೆ ಪ್ರತಿವಾದ ಮಂಡಿಸಲು ಕಾಲಾವಕಾಶ ಬೇಕು’ ಎಂದು ಕೋರಿದರು. ಆಗ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.

ನಲಪಾಡ್ ಸಹಚರ ನೀಡಿದ ದೂರು ಹಾಸ್ಯಾಸ್ಪದ:

ವಿದ್ವತ್ ವಿರುದ್ಧ ನಲಪಾಡ್ ಸಹಚರ ಅರುಣ್ ಬಾಬು ಪೊಲೀಸರಿಗೆ ನೀಡಿದ್ದ ದೂರು ಓದಿದ ಶ್ಯಾಮಸುಂದರ್, ‘ಇದರಲ್ಲಿ ನಂಬಲು ಅಸಾಧ್ಯವಾದ ಶಬ್ದಗಳಿವೆ. ಇದು ಹಾಸ್ಯಾಸ್ಪದವೂ ಆಗಿದೆ’ ಎಂದು ನಕ್ಕರು.

‘ಫರ್ಜಿ ಕೆಫೆಗೆ ನಾನು, ಶಬ್ಬಿ ಹಾಗೂ ನಫಿ ಹೋಗಿದ್ದೆವು. ಅಲ್ಲಿ ವಿದ್ವತ್ ತನ್ನ ಸ್ನೇಹಿತರ ಜತೆ ಮದ್ಯ ಸೇವಿಸುತ್ತಾ ದಾರಿಗೆ ಅಡ್ಡವಾಗಿ ಕಾಲು ಇಟ್ಟುಕೊಂಡು ಕುಳಿತಿದ್ದ. ಕಾಲು ತೆಗೆಯುವಂತೆ ಹೇಳಿದ್ದೆವು. ಅದಕ್ಕೆ ಆತ ನಿರಾಕರಿಸಿದ್ದ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಆಗ ವಿದ್ವತ್, ‘ನಾನು ಯಾರು ಗೊತ್ತಾ. ನನ್ನ ತಂದೆ ಲೋಕನಾಥನ್‌ ಹೆಸರು ಕೇಳಿದ್ದೀಯಾ. ನನ್ನ ಜತೆ ಕಿರಿಕ್ ಮಾಡಿದರೆ ನಿನ್ನನ್ನು ಮಕಾಡೆ ಮಲಗಿಸಿ ಬಿಡುತ್ತೇನೆ’ ಎಂದು ಬೆದರಿಕೆ ಹಾಕಿ ಗುರಾಯಿಸಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಉದ್ದೇಶಪೂರ್ವಕವಾಗಿ ನನ್ನ ಕಪಾಳಕ್ಕೆ ಜೋರಾಗಿ ಹೊಡೆದು ನೋವು ಉಂಟು ಮಾಡಿದ. ಆಗ ಉಂಟಾದ ತಳ್ಳಾಟದಲ್ಲಿ ಆತನೇ ಮಕಾಡೆ ಮಲಗಿ ಗಾಯ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಅರುಣ್‌ ಹೇಳಿದ್ದಾನೆ’ ಎಂದು ಶ್ಯಾಮಸುಂದರ ವಿವರಿಸಿದರು.

‘ದೂರಿನಲ್ಲಿ ಮಕಾಡೆ ಎಂಬ ಪದವಿದೆ. ಮಕಾಡೆ ಎಂದರೆ ಏನು ಎಂಬುದು ನನಗೆ ಗೊತ್ತಿಲ್ಲ. ದೂರು ದಾಖಲಿಸಿಕೊಂಡ ಪೊಲೀಸರನ್ನೇ ಆ ಬಗ್ಗೆ ಕೇಳಬೇಕು’ ಶ್ಯಾಮಸುಂದರ್ ಹೇಳುತ್ತಿದ್ದಂತೆ ನ್ಯಾಯಾಲಯದಲ್ಲಿ ನೆರೆದಿದ್ದವರೆಲ್ಲ ನಕ್ಕರು. 

ಆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಬಾಲನ್‌, ‘ಪ್ರಕರಣವನ್ನು ವೈಭವೀಕರಿಸಿ ಹೇಳುತ್ತಿರುವ ಈ ವಾದ ನಾಟಕೀಯದಂತಿದೆ. ಇಂಥ ವಾದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದರು. ಶ್ಯಾಮಸುಂದರ್, ‘ಈ ವಾದ ನಾಟಕೀಯ ಎಂದು ಅನ್ನಿಸಿದರೆ, ಹಾಗೇ ಸ್ವೀಕರಿಸಿ’ ಎಂದರು.

ಕಿಕ್ಕಿರಿದು ತುಂಬಿದ್ದ ನ್ಯಾಯಾಲಯ:

ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗುವ ಬಗ್ಗೆ ವಕೀಲರಲ್ಲೂ ಕುತೂಹಲವಿದೆ. ಜತೆಗೆ ವಾದ–ಪ್ರತಿವಾದ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿಯೇ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ನ್ಯಾಯಾಲಯದಲ್ಲಿ ಹಾಜರಿದ್ದರು. ಕೆಲವೇ ಆಸನಗಳಿದ್ದರಿಂದ ಬಹುಪಾಲು ವಕೀಲರು, ಕಲಾಪ ಮುಗಿಯುವರೆಗೂ ನಿಂತುಕೊಂಡೇ ಕಲಾಪ ವೀಕ್ಷಿಸಿದರು.

ವಿಚಾರಣೆ ಆರಂಭವಾದಾಗ ಮಾಧ್ಯಮದವರನ್ನು ನ್ಯಾಯಾಲಯದ ಒಳಗೆ ಬಿಟ್ಟಿರಲಿಲ್ಲ. ಅರ್ಧ ಗಂಟೆಯ ಬಳಿಕ ಮಾಧ್ಯಮದ ಕೆಲ ಮಂದಿಯನ್ನಷ್ಟೇ ಒಳಗೆ ಬಿಡಲಾಯಿತು. ಗಂಟೆಯ ಬಳಿಕ ಮತ್ತಷ್ಟು ಮಾಧ್ಯಮದವರು ಒಳಗೆ ಬಂದರು. ಕಿಕ್ಕಿರಿದ್ದು ಸೇರಿದ್ದ ವಕೀಲರ ಸಮ್ಮುಖದಲ್ಲೇ ನ್ಯಾಯಾಧೀಶರು, ಕಲಾಪ ನಡೆಸಿದರು.

ಹೇಗಿತ್ತು ವಾದ – ಪ್ರತಿ ವಾದ: 

ಎಂ.ಎಸ್‌.ಶ್ಯಾಮ್‌ಸುಂದರ್, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌

* ಯಾವುದೇ ದಯೆ ದಾಕ್ಷಿಣ್ಯ ಇಲ್ಲದೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. 10ರಿಂದ 15 ಮಂದಿ ಸೇರಿ ಒಂದಲ್ಲ, ಎರಡಲ್ಲ, ನೂರಾರು ಏಟು ಹೊಡೆದಿದ್ದಾರೆ.

* ಹಲ್ಲೆಗೆ ಬೀರ್‌ ಬಾಟಲಿ, ನಕ್ಕಲ್ ರಿಂಗ್‌, ಐಸ್‌ ಬಕೆಟ್‌ ಬಳಸಿದ್ದಾರೆ. ಹಲ್ಲೆ ಮಾಡುವ ಉದ್ದೇಶವಿಲ್ಲದಿದ್ದರೆ ಜೇಬಿನಲ್ಲಿ ನಕ್ಕಲ್‌ ರಿಂಗ್‌ ಇಟ್ಟುಕೊಂಡು ಓಡಾಡುವ ಅಗತ್ಯವೇನಿತ್ತು? ಅದು ಹಲ್ಲೆಗೆಂದೇ ಇಟ್ಟುಕೊಂಡಿದ್ದ ಅಸ್ತ್ರವಿದ್ದಂತೆ.

* ಸಾವಿಗೆ ಕಾರಣವಾಗುವಷ್ಟು ರೀತಿಯಲ್ಲಿ ಈ ಹಲ್ಲೆ ನಡೆದಿದೆ.

* ಕೊಲೆಯ ಉದ್ದೇಶದಿಂದಲೇ ಆರೋಪಿಗಳು ಆಸ್ಪತ್ರೆಗೆ ಹೋಗಿದ್ದಾರೆ.

* ಐಪಿಸಿ 326 ಅನ್ವಯ ಗಾಯದ ಪ್ರಕರಣ ಇದಲ್ಲ. ಇದು ಕೊಲೆಗೆ ಯತ್ನ ಎಂಬುದು ಸ್ಪಷ್ಟವಾಗುತ್ತದೆ.

* ನಲಪಾಡ್‌ ಪ್ರಭಾವಿ ಎಂಬ ಕಾರಣಕ್ಕೆ ಫರ್ಜಿ ಕೆಫೆಯ ಸಿಬ್ಬಂದಿ ಜಗಳ ಬಿಡಿಸಲು ಹೋಗಿಲ್ಲ.

* ಶಾಸಕರ ಮಗನೆಂಬ ಕಾರಣಕ್ಕೆ ಕ್ಷಮೆ ಕೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಲಾಗಿದೆ.

* ಕಾಂಗ್ರೆಸ್ ಯುವ ಮುಖಂಡರಾಗಿ ಹಲವೆಡೆ ಭಾಷಣ ಮಾಡಿರುವ ನಲಪಾಡ್‌ಗೆ ಹಲ್ಲೆಯ ತೀವ್ರತೆ ತಿಳಿಯದ್ದೇನಲ್ಲ.

* ಇದು ಮಾಮೂಲಿ ಜಗಳವಲ್ಲ. ಪ್ರಭಾವಿ ಎಂಬ ಹಮ್ಮಿನಲ್ಲಿ ನಡೆದದ್ದು. ಬಲದ ಮದದಲ್ಲಿ ನಡೆವ ಇಂಥ ಅಪರಾಧ ಕೃತ್ಯಗಳು ನಾಗರಿಕ ಹಕ್ಕುಗಳನ್ನು ಪ್ರಶ್ನಿಸುತ್ತವೆ.

* ಎರಡ್ಮೂರು ನಿಮಿಷಗಳಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿ ಪರ ವಕೀಲರು ಹೇಳುತ್ತಾರೆ. ಅಷ್ಟು ಕಡಿಮೆ ಸಮಯದಲ್ಲಿ ಇಂಥ ಭಯಾನಕ ಹಲ್ಲೆ ನಡೆಯಲು ಸಾಧ್ಯವೇ?

‌* ವಿದ್ವತ್‌ ಮೂಗು, ಎದೆ ಗೂಡು, ಪಕ್ಕೆಲುಬು, ಹೊಟ್ಟೆ, ತಲೆಗೆ ಗಾಯಗಳಾಗಿವೆ

* ಅವರ ಮುಖವೇ ಬದಲಾಗಿದೆ. ಅದು ಮೊದಲಿನಂತೆ ಆಗಲು ಸಾಧ್ಯವೇ ಇಲ್ಲ

* ವಿದ್ವತ್‌ ವಾರ್ಡ್‌ಗೆ ವರ್ಗಾಯಿಸಿದರೂ ಆರೋಗ್ಯ ಸುಧಾರಿಸಿಲ್ಲ. ಪೊಲೀಸರಿಗೆ ಹೇಳಿಕೆ ಕೊಡುವ ಸ್ಥಿತಿಯಲ್ಲೂ ಅವರಿಲ್ಲ.

* ವಿದ್ವತ್ ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ ಎಂಟು ತಿಂಗಳು ಆಸ್ಪತ್ರೆಯಲ್ಲಿ ಇರಬೇಕಾಗಬಹುದು

* ಫರ್ಜಿ ಕೆಫೆ ಹಾಗೂ ಮಲ್ಯ ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ನಲಪಾಡ್‌ ಮತ್ತು ಸಹಚರರು ಇರುವ ದೃಶ್ಯ ಸೆರೆಯಾಗಿದೆ

* ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಂಡವರನ್ನಷ್ಟೇ ಬಂಧಿಸಲಾಗಿದೆ. ಅಸ್ಪಷ್ಟವಾಗಿ ಕಂಡವರನ್ನು ಪತ್ತೆ ಹಚ್ಚಿ ಬಂಧಿಸಬೇಕಿದೆ.

* ‘ನಾನೊಬ್ಬ ರಾಜ, ನನ್ನನ್ನು ತಡೆಯುವವರೂ ಯಾರು ಇಲ್ಲ’ ಎಂಬಂತೆ ನಲಪಾಡ್‌ ವರ್ತಿಸಿದ್ದಾನೆ

* ಆತನಿಗೆ ಜಾಮೀನು ನೀಡಿದರೆ ವಿದ್ವತ್‌ಗೆ ಪ್ರಾಣ ಭೀತಿ ಎದುರಾಗುತ್ತದೆ.

* ಕೊಲೆಯ ಉದ್ದೇಶ ಇಟ್ಟುಕೊಂಡೇ ಆರೋಪಿಗಳು ಆಸ್ಪತ್ರೆಯವರೆಗೂ ವಿದ್ವತ್‌ ಅವರನ್ನು ಹಿಂಬಾಲಿಸಿದ್ದಾರೆ.

* ಜಾಮೀನು ಪಡೆದು ಆತ ಜೈಲಿನಿಂದ ಹೊರಬಂದರೆ ಏನು ಬೇಕಾದರೂ ಆಗಬಹುದು

* ಎಂಟೇ ದಿನಕ್ಕೆ ಆರೋಪಿ ಜಾಮೀನು ಕೇಳಿದರೆ ಹೇಗೆ?

* ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿದೆ

* ಮತ್ತೊಬ್ಬ ಆರೋಪಿ ಶ್ರೀಕೃಷ್ಣ ಇನ್ನೂ ಸಿಕ್ಕಿಲ್ಲ. ಆತ ಸಾಕ್ಷ್ಯ ನಾಶ ಮಾಡುತ್ತಿರಬಹುದು?

* ಆರೋಪಿಗಳು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ಜಾಮೀನು ನೀಡಬಾರದು

ಟಾಮಿ ಸೆಬಾಸ್ಟಿಯನ್, ನಲಪಾಡ್‌ ಪರ ವಕೀಲ

* ಗಾಯಾಳು ಪರ ನೀಡಿದ್ದ 10 ಸಾಲುಗಳ ದೂರಿಗೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ 10 ಸಾವಿರ ಸಾಲುಗಳ ಆಕ್ಷೇಪಣೆ ಸಲ್ಲಿಸಿದ್ದಾರೆ.

* ವಿದ್ವತ್‌ಗೆ ಆದ ಗಾಯಗಳ ಬಗ್ಗೆ ವಿವರವಾದ ಮಾಹಿತಿಯೂ ಅದರಲ್ಲಿ ಇಲ್ಲ  

* ಪ್ರಚೋದನೆ ನೀಡಿದವರು ಯಾರೆಂಬುದನ್ನು ಉಲ್ಲೇಖಿಸಿಲ್ಲ.

* ಉದ್ದೇಶಪೂರ್ವಕವಾಗಿ ಹಲ್ಲೆ ನಡೆದಿದೆ ಎಂಬುದಕ್ಕೆ ಪುರಾವೆಗಳಿಲ್ಲ. ರಾಜಕೀಯ ಪ್ರೇರಿತವಾಗಿ ಈ ಹಂತಕ್ಕೆ ಪ್ರಕರಣ ತಲುಪಿದೆ

* ವಿದ್ವತ್‌ ಚೇತರಿಸಿಕೊಂಡಿದ್ದಾರೆ. ಹೀಗಾಗಿ, ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

* ಕೆಳಗೆ ಬಿದ್ದಿದ್ದರಿಂದ ಮುಖದ ಮೇಲೆ ಗಾಯ ಆಗಿರಬಹುದು

* ಪ್ರಕರಣ ಸಂಬಂಧ ಪ್ರತಿ ದೂರು ಸಹ ನೀಡಲಾಗಿದೆ.

* ಅಪಘಾತವನ್ನು ಮಾಡಿದವರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಅದೇ ರೀತಿ ವಿದ್ವತ್‌ನನ್ನು ನೋಡಲೆಂದು ಆರೋಪಿಗಳು ಮಲ್ಯ ಆಸ್ಪತ್ರೆಗೆ ಹೋಗಿದ್ದರು. ಅದರಲ್ಲಿ ತಪ್ಪೇನಿದೆ?

* ಎಫ್‌ಐಆರ್‌ ದಾಖಲಿಸುವಾಗ ಇರದ ಕೊಲೆಗೆ ಯತ್ನ (ಐಪಿಸಿ 307) ಆರೋಪವನ್ನು ಕೆಲ ದಿನಗಳು ಬಿಟ್ಟು ಸೇರಿಸಿದ್ದು ಸರಿಯಲ್ಲ

* ಒಂದು ವಾರದೊಳಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ನೇಮಕ ಆಗಿರುವುದು ಇತಿಹಾಸದಲ್ಲೇ ಇದೇ ಮೊದಲು.

* ನಕ್ಕಲ್‌ ರಿಂಗ್‌ನಲ್ಲಿ ಹೊಡೆದಿದ್ದರೆ ಪೊಲೀಸರು ಅದನ್ನು ಜಪ್ತಿ ಮಾಡಬೇಕಿತ್ತು. ಆ ರಿಂಗ್‌ ಎಸ್‌ಪಿಪಿ ಅವರ ಸೃಷ್ಟಿ.‘ನನ್ನ ನೇಮಕ ಪ್ರಭಾವ ಬೀರಿದ್ದು ಎನ್ನುತ್ತಾರೆ’

‘ನನ್ನನ್ನು ಎಸ್‌ಪಿಪಿ ಎಂದು ನೇಮಿಸಿದ್ದೇ ಪ್ರಭಾವ ಬೀರಿ ಎನ್ನುತ್ತಾರೆ. ಆದರೆ, ನನಗೇ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಬೆದರಿಕೆ ಇತ್ತು’ ಎಂದು ಶ್ಯಾಮಸುಂದರ್‌ ಹೇಳಿದರು.

‘ನನಗೆ ಬೆದರಿಕೆ ಇರುವುದರಿಂದ, ಮನೆ ಮತ್ತು ಕಚೇರಿ ಮುಂದೆ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ಬೆದರಿಕೆ ಹಿಂದೆ ಯಾರಿದ್ದಾರೆ ಹಾಗೂ ಯಾರು ಪ್ರಭಾವಿಗಳು ಎಂಬುದು ಗೊತ್ತಾಗುತ್ತದೆ. ನನಗೆ ಬೆದರಿಕೆ ಹಾಕಿದವರು ವಿದ್ವತ್‌ ಮೇಲೂ ಮತ್ತೆ ಹಲ್ಲೆ ಮಾಡಿ ಬೆದರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ’ ಎಂದರು.

 

ಮೊಹಮದ್ ನಲಪಾಡ್ ನೇತೃತ್ವದಲ್ಲಿ ಹಲ್ಲೆ ನಡೆದಿದೆ. ಇದರಿಂದ ಸಾರ್ವಜನಿಕರೂ ಭಯಗೊಂಡಿದ್ದಾರೆ.  ಆರೋಪಿಗಳು ಜಾಮೀನಿಗೆ ಅರ್ಹರಲ್ಲ

– ಎಂ.ಎಸ್.ಶ್ಯಾಮಸುಂದರ್

ನಿರ್ಭಯಾ ಪ್ರಕರಣಕ್ಕೂ ಇದಕ್ಕೂ ಏನು ಸಂಬಂಧ. ಪ್ರಕರಣವನ್ನು ವೈಭವೀಕರಿಸಲು ಎಸ್‌ಪಿಪಿ ಅವರು ಇದನ್ನು ಸೃಷ್ಟಿ ಮಾಡಿದ್ದಾರೆ

– ಟಾಮಿ ಸೆಬಾಸ್ಟಿಯನ್‌

‘ಗೂಂಡಾ ಕಾಯ್ದೆಯಡಿ ಬಂಧಿಸಿ’

ಮೊಹಮದ್ ನಲಪಾಡ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ವೇದಿಕೆ ಅಧ್ಯಕ್ಷ ರಮೇಶ್‌ಗೌಡ, ‘ಆತನಲ್ಲಿ ಸಮಾಜಘಾತುಕ ಲಕ್ಷಣಗಳಿವೆ. ಅದಕ್ಕೆ ವಿದ್ವತ್ ಮೇಲೆ ಭೀಕರವಾಗಿ ಹಲ್ಲೆ ಮಾಡಿರುವುದೇ ಸಾಕ್ಷಿ. ನ್ಯಾಯಾಲಯದಲ್ಲಿ ವಕೀಲರನ್ನೂ ಗುರಾಯಿಸಿ ನೋಡಿದ್ದಾನೆ’ ಎಂದರು.

ಕೊಳೆತ ಆಹಾರ ನೀಡುತ್ತಿದ್ದ ಆರೋಪದಡಿ ಫರ್ಜಿ ಕೆಫೆಗೆ ₹ 50 ಸಾವಿರ ದಂಡ ವಿಧಿಸಲಾಗಿತ್ತು. ವಿದ್ವತ್‌ ಮೇಲೆ ಹಲ್ಲೆ ತಡೆಗಟ್ಟಲು ಕೆಫೆ ಸಿಬ್ಬಂದಿ ಮುಂದಾಗಿಲ್ಲ. ಅವರು ತನಿಖೆಗೂ ಸಹಕರಿಸುತ್ತಿಲ್ಲ. ಈ ಅಂಶಗಳನ್ನು ಪರಿಗಣಿಸಿ ಕೆಫೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಹ್ಯಾರಿಸ್ ಬೆಂಬಲಿಗರ ವಿರುದ್ಧ ಪ್ರತಿಭಟನೆ: ‘ಶಾಸಕ ಎನ್.ಎ.ಹ್ಯಾರಿಸ್ ಬೆಂಬಲಿಗರಾದ ದೀಪಾ ಮತ್ತು ವಿಜಯಾ ಎಂಬುವರು ಚಿಟ್ ಫಂಡ್ ಹೆಸರಿನಲ್ಲಿ ಬಡವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ’ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ಸಂಚಾಲಕ ಎನ್.ಶಂಕರ್, ‘ಹಣ ದ್ವಿಗುಣ ಮಾಡಿಕೊಡುವ ನೆಪದಲ್ಲಿ ದೀಪಾ ಹಾಗೂ ವಿಜಯಾ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಗೌತಮಪುರ, ಆಸ್ಟಿನ್‌ಟೌನ್, ಹಲಸೂರು, ಮರ್ಫಿಟೌನ್, ಎಂ.ವಿ.ಗಾರ್ಡನ್ ಹಾಗೂ ಫ್ರೇಜರ್‌ಟೌನ್‌ನ ಬಡ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ. ಹಣ ಕೇಳಿದವರ ಮೇಲೆ ಹ್ಯಾರಿಸ್ ಪ್ರಭಾವ ಬಳಸಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry