ಸವಿರುಚಿ ಸಂಚಾರಿ ಕ್ಯಾಂಟೀನ್‌: ಇಂದು ಉದ್ಘಾಟನೆ

7

ಸವಿರುಚಿ ಸಂಚಾರಿ ಕ್ಯಾಂಟೀನ್‌: ಇಂದು ಉದ್ಘಾಟನೆ

Published:
Updated:

ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಸವಿರುಚಿ ಸಂಚಾರಿ ಕ್ಯಾಂಟೀನ್‌ ಯೋಜನೆಗೆ ಮಂಗಳವಾರ (ಇದೇ 27) ಬೆಳಿಗ್ಗೆ 9.30ಕ್ಕೆ ವಿಧಾನಸೌಧದ ಪೂರ್ವ ದ್ವಾರದಲ್ಲಿ ಚಾಲನೆ ನೀಡಲಾಗುತ್ತದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌, ‘30 ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಸುಸಜ್ಜಿತ ಸಂಚಾರಿ ಕ್ಯಾಂಟೀನ್‌ ವಾಹನ ನೀಡುತ್ತೇವೆ’ ಎಂದರು.

‘ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸುತ್ತೇವೆ. ಆಹಾರಕ್ಕೆ ಬೇಡಿಕೆ ಇರುವ ಪ್ರದೇಶದಲ್ಲಿ ಈ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತದೆ. ಸಭೆ, ಸಮಾರಂಭ, ಪುಸ್ತಕ ಪ್ರದರ್ಶನದಂತಹ ಕಾರ್ಯಕ್ರಮಗಳು, ಕೋರ್ಟ್‌, ಕಚೇರಿಗಳ ಮುಂದೆ ಸಂಚಾರಿ ಕ್ಯಾಂಟೀನ್‌ ನಡೆಸಬಹುದು’ ಎಂದು ವಿವರಿಸಿದರು.

‘ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಸಾರ ಇಲ್ಲಿ ಅಡುಗೆ ತಯಾರಿಸಲಾಗುತ್ತದೆ. ಅಲ್ಲಿನ ಹೊಟೇಲ್‌ಗಳು ನಿಗದಿ ಮಾಡುವ ದರಕ್ಕಿಂತ ₹5 ಕಡಿಮೆ ಇರುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲಿ 11 ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಮುಖ್ಯವಾಗಿ ಇಲ್ಲಿ ಮನೆಯ ಅಡುಗೆಯನ್ನು ಜನರಿ‌ಗೆ ಉಣಬಡಿಸುತ್ತೇವೆ. ವಾರದಲ್ಲಿ ಒಂದೆರಡು ದಿನಗಳು ಸಿರಿಧಾನ್ಯ ಅಡುಗೆ ತಯಾರಿಸುವಂತೆ ಸೂಚನೆ ನೀಡಿದ್ದೇವೆ’ ಎಂದರು.

‘ಇವರು ಆಹಾರವನ್ನು ಕೇಟರಿಂಗ್‌ ಸಹ ಮಾಡಬಹುದು. ಸಂಚಾರಿ ಕ್ಯಾಂಟೀನ್‌ ನಿರ್ವಹಿಸುವವರು ಬೇಡಿಕೆಗೆ ತಕ್ಕಂತೆ ಸಿಹಿ ಪದಾರ್ಥ, ಅಡುಗೆಯನ್ನು ಮಾಡಿಕೊಡಬಹುದು’ ಎಂದರು. 

ಬಡ್ಡಿ ರಹಿತ ಸಾಲ: ‘ಪ್ರತಿ ಜಿಲ್ಲೆಗೆ ₹10 ಲಕ್ಷ ಬಡ್ಡಿ ರಹಿತ ಸಾಲ ನೀಡಿದ್ದು, ಆರು ತಿಂಗಳ ನಂತರ ₹15 ಸಾವಿರದಂತೆ ಸಾಲ ಮರುಪಾವತಿ ಮಾಡಬೇಕು. ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಲು ಈ ಯೋಜನೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry