ರೈತರ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್‌: ಸಚಿವ

7
ಯರಮರಸ್‌ನ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಲೋಕಾರ್ಪಣೆ ಸಮಾರಂಭದಲ್ಲಿ ಸಚಿವ ಶಿವಕುಮಾರ್‌ ಹೇಳಿಕೆ

ರೈತರ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್‌: ಸಚಿವ

Published:
Updated:
ರೈತರ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್‌: ಸಚಿವ

ರಾಯಚೂರು: ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್‌ ಪೂರೈಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರ ಹೊರವಲಯದ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಾವಗಡದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿದೊಡ್ಡ ಸೌರವಿದ್ಯುತ್‌ ಪಾರ್ಕ್‌, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಬಿಟಿಪಿಎಸ್‌) ಹಾಗೂ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾರ್ಯಾರಂಭ ಮಾಡಿವೆ. ಸೌರ ಹಾಗೂ ಪವನ ವಿದ್ಯುತ್‌ ಉತ್ಪಾದನೆಗೂ ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. ಇದರಿಂದ ರಾಜ್ಯದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 13 ಸಾವಿರ ಮೆಗಾವಾಟ್‌ನಿಂದ ಒಟ್ಟು 21 ಸಾವಿರ ಮೆಗಾವಾಟ್‌ಗೆ ತಲುಪಲಿದೆ ಎಂದು ಹೇಳಿದರು.

‘ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಪ್ರಮಾಣ 11 ಸಾವಿರ ಮೆಗಾವಾಟ್‌. ಬೇಡಿಕೆಗಿಂತಲೂ ಅತಿಹೆಚ್ಚು ವಿದ್ಯುತ್‌ ಉತ್ಪಾದಿಸುವ ಏಕೈಕ ರಾಜ್ಯ ಕರ್ನಾಟಕ. ಬರಗಾಲದಲ್ಲೂ ಸಮರ್ಪಕವಾಗಿ ವಿದ್ಯುತ್‌ ಪೂರೈಸಿದ ಹೆಗ್ಗಳಿಕೆ ನಮ್ಮದಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,600 ಮೆಗಾವಾಟ್‌ ಸಾಮರ್ಥ್ಯದ ವೈಟಿಪಿಎಸ್‌ ಲೋಕಾರ್ಪಣೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ.ರೇವಣ್ಣ, ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ್‌ ಇದ್ದರು.

ನಾವೆಲ್ಲ ಯಾರ ಮಕ್ಕಳು?: ಸಿಎಂ

ರಾಯಚೂರು: ‘ರಾಜ್ಯದಲ್ಲಿ ಒಬ್ರು ರೈತನ ಮಗ, ಇನ್ನೊಬ್ರು ಮಣ್ಣಿನ ಮಗ ಎಂದು ಹೇಳಿದ್ದೆ ಹೇಳಿದ್ದು. ಹಾಗಾದ್ರೆ ನಾವೆಲ್ಲ ಯಾರ ಮಕ್ಕಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದು ಜನ ನಗುವಂತಾಯಿತು.

ರಾಯಚೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ₹14,400 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಯಡಿಯೂರಪ್ಪ ಒಬ್ರೆನಾ ರೈತನ ಮಗ. ಸತ್ಯ ಹೇಳಿದ್ರೆ ಯಡಿಯೂರಪ್ಪಗೆ ಸಿಟ್ಟು ಬರುತ್ತದೆ. ಜೈಲಿಗೆ ಹೋಗಿದ್ದು, ಈಗ ಬೇಲ್‌ ಮೇಲೆ ಹೊರಗಡೆ ಓಡಾಡುತ್ತಿರುವುದು ಸತ್ಯವಲ್ಲವೆ?’ ಎಂದರು.

‘ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಏನೇನು ಮಾಡ್ತೀವಿ ಅಂಥ ಮಾತನಾಡುತ್ತಿದ್ದಾರೆ. ಇಂಥ ಮಾತು ಮುಖ್ಯವಲ್ಲ. ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದೀರಿ ಎನ್ನುವುದನ್ನು ಜನರಿಗೆ ಹೇಳಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೂರಕ್ಕೆ ನೂರು ಭ್ರಷ್ಟವಾಗಿತ್ತು. ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಎನ್ನುವುದು ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ರೈತರ ಸಾಲವನ್ನೆಲ್ಲ ಮನ್ನಾ ಮಾಡ್ತೀನಿ ಎಂದು ಹೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry