ಬಿಜೆಪಿ ಅಧಿಕಾರಕ್ಕೆ ಬಂದರೆ ದಕ್ಷ ಆಡಳಿತ

7

ಬಿಜೆಪಿ ಅಧಿಕಾರಕ್ಕೆ ಬಂದರೆ ದಕ್ಷ ಆಡಳಿತ

Published:
Updated:
ಬಿಜೆಪಿ ಅಧಿಕಾರಕ್ಕೆ ಬಂದರೆ ದಕ್ಷ ಆಡಳಿತ

ಬೀದರ್‌: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಚ್ಛ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ಕೊಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಇಲ್ಲಿನ ಹಬ್ಸಿಕೋಟ್‌ ಅತಿಥಿಗೃಹದಲ್ಲಿ ತಮ್ಮ 75ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕೆಇಬಿ ಸಮೀಪ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಹಾಗೂ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ನನ್ನ 60ನೇ ಜನ್ಮದಿನಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಬಂದು ಆಶೀರ್ವಾದ ಮಾಡಿದ್ದರು. ಹಿಂದಿನ ವರ್ಷ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದು ನನ್ನ ಪೂರ್ವಜನ್ಮದ ಪುಣ್ಯದ ಫಲ’ ಎಂದು ಸಂತಸ ವ್ಯಕ್ತಪಡಿಸಿದರು. ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ ಹಣಕಾಸಿನ ನೆರವು ಪಡೆಯಲು ಅನುಕೂಲವಾಗಲಿದೆ’ ಎಂದು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಒಂದು ಲಕ್ಷ ಕೋಟಿ ರೂಪಾಯಿ ಕೊಡಲಾಗುವುದು. ಆಲಮಟ್ಟಿ ಅಣೆಕಟ್ಟನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಏರಿಸಲಾಗುವುದು. ಆಲಮಟ್ಟಿ ಅಣೆಕಟ್ಟು ಎತ್ತರಿಸಲು ಐದು ವರ್ಷಗಳ ಹಿಂದೆಯೇ ಅನುಮತಿ ಸಿಕ್ಕಿದೆ. ಆದರೆ ಕಾಂಗ್ರೆಸ್‌ ಆ ಕೆಲಸ ಮಾಡಿಲ್ಲ. ಪುನರ್‌ವಸತಿ ಹಾಗೂ ಪರಿಹಾರ ಕೊಡುವ ಕೆಲಸ ಆಗಬೇಕಿದೆ. ನೀರಾವರಿಯೇ ನನ್ನ ಆದ್ಯತೆಯಾಗಲಿದೆ’ ಎಂದು ತಿಳಿಸಿದರು.

ಜನ್ಮದಿನ ಆಚರಣೆ: ಬಿ.ಎಸ್‌.ಯಡಿಯೂರಪ್ಪ ಅವರ 75ನೇ ಜನ್ಮದಿನವನ್ನು ಮಂಗಳವಾರ ಇಲ್ಲಿನ ಹಬ್ಸಿಕೋಟ್‌ ಅತಿಥಿಗೃಹದಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಯಡಿಯೂರಪ್ಪ ಅವರ ಭಾವಚಿತ್ರ ಇರುವ ‘ಭಾವಿ ಮುಖ್ಯಮಂತ್ರಿ ಯಡಿಯೂರಪ್ಪಜಿ ಅವರಿಗೆ ಜನ್ಮದಿನದ ಶುಭಾಶಯ’ ಎಂದು ಬರೆಯಲಾದ 16 ಕೆಜಿ ತೂಕದ ಬೃಹತ್‌ ಗಾತ್ರದ ಕೇಕ್‌ ತರಿಸಿದ್ದರು. ಕಾರ್ಯಕರ್ತರ ಸಮ್ಮುಖದಲ್ಲಿ ಯಡಿಯೂರಪ್ಪ ಕೇಕ್‌ ಕತ್ತರಿಸಿದರು.

ಯಡಿಯೂರಪ್ಪ ಅವರಿಗೆ ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಪುಷ್ಪಗುಚ್ಛ ನೀಡಿ ಜನ್ಮದಿನದ ಶುಭಕೋರಿದರು. ಮಾಜಿ ಶಾಸಕ ಸುಭಾಷ ಕಲ್ಲೂರ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬು ವಾಲಿ, ದೊಡ್ಡಪ್ಪ ಪಾಟೀಲ ನರಿಬೋಳ್, ಗುಂಡುರೆಡ್ಡಿ, ಡಿ.ಕೆ.ಸಿದ್ರಾಮ ಇದ್ದರು.

ರಾಯರ ದರ್ಶನ ಪಡೆದ ಯಡಿಯೂರಪ್ಪ: ಹಬ್ಸಿಕೋಟ್‌ನಿಂದ ನೇರವಾಗಿ ಕೆಇಬಿ ಸಮೀಪದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೆ ಬಂದ ಯಡಿಯೂರಪ್ಪ ದೇವರ ದರ್ಶನ ಪಡೆದು ಮಂಗಳಾರತಿ ಮಾಡಿದರು. ನಂತರ ರಾಘವೇಂದ್ರ ಸ್ವಾಮಿ ಮಠಕ್ಕೂ ಬಂದು ರಾಯರ ದರ್ಶನ ಪಡೆದರು. ಅರ್ಚಕರಾದ ಮಿಲಿಂದ್‌ ಆಚಾರ್ಯ ಹಾಗೂ ಬಿಂದು ಆಚಾರ್ಯ ಅವರು ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ ರಾಯರ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿ ಶುಭ ಕೋರಿದರು.

ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರರಾವ್‌ ಪಾಟೀಲ, ಆಡಳಿತಾಧಿಕಾರಿ ಭೀಮಸೇನರಾವ್ ಕಾಗಿನಹಾಳ, ಕಾರ್ಯದರ್ಶಿ ರಾಜೇಂದ್ರ ಕುಲಕರ್ಣಿ, ಕಿಶನ್‌ರಾವ್‌ ಕುಲಕರ್ಣಿ, ಕಲ್ಯಾಣರಾವ್ ಗೋರಟಾ, ದಿನಕರ ಶೆಂಬೆಳ್ಳಿ, ರಮೇಶ ಪಾಟೀಲ, ಮನೋಹರ ದಂಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry