ಬೆಳ್ಳಂದೂರು ಕೆರೆ: ಮಾಹಿತಿಗೆ ಎನ್‌ಜಿಟಿ ಸೂಚನೆ

7

ಬೆಳ್ಳಂದೂರು ಕೆರೆ: ಮಾಹಿತಿಗೆ ಎನ್‌ಜಿಟಿ ಸೂಚನೆ

Published:
Updated:
ಬೆಳ್ಳಂದೂರು ಕೆರೆ: ಮಾಹಿತಿಗೆ ಎನ್‌ಜಿಟಿ ಸೂಚನೆ

ನವದೆಹಲಿ: ಬೆಳ್ಳಂದೂರು ಕೆರೆ ಸೇರಿದಂತೆ ಬೆಂಗಳೂರಿನಲ್ಲಿರುವ ಪ್ರಮುಖ ಕೆರೆಗಳ ಜಲಾನಯನ ಪ್ರದೇಶದಲ್ಲಿನ ಘನ ತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳು ಮಲಿನಗೊಂಡಿದ್ದರ ಕುರಿತು ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜವಾದ್‌ ರಹೀಂ ನೇತೃತ್ವದ ಪೀಠವು, ಕೆರೆಗಳ ಶುದ್ಧೀಕರಣ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಗಳಲ್ಲಿ ಜಲಾನಯನ ಪ್ರದೇಶದ ಶುಚಿತ್ವ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಹೇಳಿತು.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿಯು, ಈ ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೂರು ವಾರದೊಳಗೆ ಸಮಗ್ರ ವರದಿಯನ್ನು ಸಲ್ಲಿಸಬೇಕೆಂದು ಕಳೆದ ಜನವರಿ 29ರಂದು ಸೂಚಿಸಲಾಗಿತ್ತು.

‘ಈ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. ಆದರೆ, ಕೆರೆಗಳಿಗೆ ನೀರು ಹರಿದು ಬರುವ ಜಲಾನಯನ ಪ್ರದೇಶದ ಸ್ವಚ್ಛತೆ ಕುರಿತು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ’ ಎಂದು ಅರ್ಜಿದಾರರ ಪರ ವಕೀಲ ರಾಮಪ್ರಸಾದ್‌ ನ್ಯಾಯ ಪೀಠದ ಗಮನ ಸೆಳೆದರು.

ಘನ ತ್ಯಾಜ್ಯ ನಿರ್ಮೂಲನೆ ಕುರಿತು ಪ್ರತಿ ತಿಂಗಳೂ ಪ್ರಗತಿ ವರದಿ ನೀಡುವಂತೆ ನ್ಯಾಯಮಂಡಳಿ ಸೂಚಿಸಿದ್ದರೂ ಆ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಅವರು ತಿಳಿಸಿದರು.

ಈ ಕುರಿತ ಮಾಹಿತಿಯನ್ನೂ ಒಳಗೊಂಡ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಹಸಿರು ಪೀಠವು, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 11ಕ್ಕೆ ಮುಂದೂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry