ವೇತನ ಪರಿಷ್ಕರಣೆ: ಅಧಿಕೃತ ಆದೇಶ

7

ವೇತನ ಪರಿಷ್ಕರಣೆ: ಅಧಿಕೃತ ಆದೇಶ

Published:
Updated:

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಅನ್ವಯಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಲಾಗಿದೆ.

2018ರ ಏಪ್ರಿಲ್ 1ರಿಂದ ನೂತನ ವೇತನ ಶ್ರೇಣಿ ಅನ್ವಯವಾಗಲಿದೆ. 5.20 ಲಕ್ಷ ನೌಕರರು, 5.73 ಲಕ್ಷ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ 73,000 ನೌಕರರಿಗೆ ಇದರಿಂದ ಪ್ರಯೋಜನ ಸಿಗಲಿದೆ.

ಆರಂಭಿಕ ಕನಿಷ್ಠ ಮೂಲ ವೇತನ ₹9,600 ಇದ್ದುದನ್ನು ₹17,000ಕ್ಕೆ ಹೆಚ್ಚಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (ಬಿಬಿಎಂಪಿ) ನೌಕರರಿಗೆ ಶೇ 24ರಷ್ಟು ಮನೆಬಾಡಿಗೆ ಭತ್ಯೆ (ಎಚ್‌ಆರ್‌ಎ) ಸಿಗಲಿದೆ. ಹೀಗೆ ಲೆಕ್ಕ ಹಾಕಿದರೆ ₹21,080 ವೇತನ ಕೈಗೆ ಸಿಗಲಿದೆ. ಬೆಂಗಳೂರು ನಗರದಲ್ಲಿ ಎ ಗ್ರೂಪ್ ನೌಕರರಿಗೆ ₹600, ಬಿ ಗ್ರೂಪ್‌ಗಿಂತ ಕೆಳಗಿನ ನೌಕರರಿಗೆ ₹500 ನಗರ ಪರಿಹಾರ ಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ.

ನೌಕರ ನಿವೃತ್ತಿಯಾದರೆ ಅಥವಾ ಆಕಸ್ಮಿಕ ಮರಣ ಹೊಂದಿದರೆ ಇಲ್ಲಿಯವರೆಗೆ ಉಪದಾನ ರೂಪದಲ್ಲಿ ₹10 ಲಕ್ಷ ನೀಡಲಾಗುತ್ತಿತ್ತು. ಅದನ್ನು ₹20 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶ ವಿವರಿಸಿದೆ.

ಎಚ್ಆರ್‌ಎ ಎಷ್ಟು?: ವೇತನ ಪರಿಷ್ಕರಿಸಿದ ಬಳಿಕ ಎಚ್ಆರ್‌ಎ ಪ್ರಮಾಣವನ್ನು ಇಳಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಅದರನ್ವಯ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ನೌಕರರಿಗೆ ಶೇ 24, 5 ಲಕ್ಷ ಮೇಲ್ಪಟ್ಟು 25 ಲಕ್ಷದೊಳಗಿನ ಜನಸಂಖ್ಯೆ ಇರುವ ಅಥವಾ ಪಾಲಿಕೆ ವ್ಯಾಪ್ತಿಯ ನೌಕರರಿಗೆ ಶೇ 16 ಹಾಗೂ 5 ಲಕ್ಷದೊಳಗಿನ ಪ್ರದೇಶಗಳ ನೌಕರರಿಗೆ ಶೇ 8ರಷ್ಟು ಎಚ್‌ಆರ್‌ಎ ನೀಡುವಂತೆ ಆಯೋಗ ಹೇಳಿತ್ತು.  ಎಚ್ಆರ್‌ಎ, ನಗರ ಪರಿಹಾರ ಭತ್ಯೆ ಕುರಿತ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಪ್ರತ್ಯೇಕ ಆದೇಶಗಳಲ್ಲಿ ಅದನ್ನು ಅನುಷ್ಠಾನ ಮಾಡಲಾಗುವುದು ಎಂದು ಆದೇಶ ವಿವರಿಸಿದೆ.

ನಿವೃತ್ತರಿಗೆ ಅನುಕೂಲ: ನಿವೃತ್ತ ನೌಕರರು ಅಥವಾ ಕುಟುಂಬ ಪಿಂಚಣಿಯ ಮೊತ್ತವನ್ನು ಹೆಚ್ಚಿಸಲಾಗಿದೆ.

ನಿವೃತ್ತ ನೌಕರರು ಕನಿಷ್ಠ ₹4,800 ಹಾಗೂ ಗರಿಷ್ಠ ₹39,900 ಪಡೆಯುತ್ತಿದ್ದರು. ಅದನ್ನು ಕ್ರಮವಾಗಿ ₹8,500ರಿಂದ ₹75,300ರವರೆಗೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿ ಮೊತ್ತ ಕನಿಷ್ಠ ₹8,500 ಕ್ಕಿಂತ ಕಡಿಮೆ ಇಲ್ಲದೇ, ಗರಿಷ್ಠ ₹45,180 ಇರುವಂತೆ ಹೆಚ್ಚಿಸಬೇಕು ಎಂದು ಆದೇಶ ಹೇಳಿದೆ.

2017ರ ಜುಲೈ 1 ನಂತರ ನಿವೃತ್ತರಾದ ನೌಕರರ‌ ವೇತನ ಪರಿಷ್ಕರಣೆಗೆ ಸೂತ್ರ ನೀಡಲಾಗಿದೆ. ನಿವೃತ್ತಿಯಾಗುವಾಗ ಇದ್ದ ಮೂಲವೇತ

ನವು ಹೊಸ ವೇತನ ಶ್ರೇಣಿಯ ಅನ್ವಯ ಪರಿಷ್ಕರಿಸಿದಾಗ ಎಷ್ಟಾಗುತ್ತದೆ ಎಂಬ ಲೆಕ್ಕಾಚಾರದ ಮೇಲೆ ನಿವೃತ್ತಿ ವೇತನದ ಮೊತ್ತ ನಿಗದಿ ಮಾಡುವಂತೆ ಸೂಚಿಸಲಾಗಿದೆ. ಉದಾಹರಣೆಗೆ, ಮೂಲವೇತನ ₹10,000 ಇದ್ದರೆ ಅದಕ್ಕೆ ಶೇ 45.25ರಷ್ಟು ತುಟ್ಟಿಭತ್ಯೆ, ಶೇ 30ರಷ್ಟು ಫಿಟ್ ಮೆಂಟ್ ವಿಲೀನಗೊಳಿಸಿ ಪರಿಷ್ಕೃತ ಮೂಲ ವೇತನ ನಿಗದಿ ಮಾಡುವಂತೆ ಸೂಚಿಸಲಾಗಿದೆ.

ಎನ್‌ಪಿಎಸ್ ನೌಕರರಿಗೆ ಲಾಭ: 2006 ಇಸವಿಯ ಬಳಿಕ ನೇಮಕಾತಿ ಹೊಂದಿದ ನೌಕರ ನಿವೃತ್ತಿಯಾದರೆ ಸರ್ಕಾರದಿಂದಲೇ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ನೀಡುವ ಸೌಲಭ್ಯ ಇಲ್ಲ. ಇವರೆಲ್ಲರಿಗಾಗಿ ನೌಕರರವಂತಿಗೆ ಆಧರಿಸಿ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಚಾಲ್ತಿಗೆ ತರಲಾಗಿದೆ. ಒಂದೂವರೆ ಲಕ್ಷ ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ.

ಎನ್‌ಪಿಎಸ್ ನೌಕರರು ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪಿಂಚಣಿ ನೀಡಬೇಕು ಎಂಬ ಶಿಫಾರಸನ್ನು ಸರ್ಕಾರ

ಒಪ್ಪಿಕೊಂಡಿದೆ ಎಂದು ಆದೇಶ ಹೇಳಿದೆ.

ಎನ್‌ಪಿಎಸ್ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಯೋಗ ಶಿಫಾರಸು ಮಾಡಿತ್ತು. ಆ ಬಗ್ಗೆ ಆದೇಶ ಏನನ್ನೂ ಹೇಳಿಲ್ಲ.

ಶಿಕ್ಷಕರಿಗೆ ಹೆಚ್ಚುವರಿ ಭಾಗ್ಯ

ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವಿಶೇಷ ಭತ್ಯೆಯನ್ನು(ತಿಂಗಳಿಗೆ) ಇಲ್ಲಿಯವರೆಗೆ ನೀಡಲಾಗುತ್ತಿದೆ. ಈ ಮೊತ್ತವನ್ನು ಪರಿಷ್ಕೃತ ಮೂಲವೇತನಕ್ಕೆ ಸೇರಿಸುವಂತೆ ಆಯೋಗ ಶಿಫಾರಸು ಮಾಡಿದೆ. ಶಿಕ್ಷಕರ ವೇತನ ಪರಿಷ್ಕರಿಸುವಾಗ ಈ ಅಂಶವನ್ನೂ ಸರ್ಕಾರ ಪರಿಗಣಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ₹ 450, ಪ್ರೌಢ ಶಾಲಾ ಶಿಕ್ಷಕರಿಗೆ ₹ 400 ಹಾಗೂ ಪಿಯು ಉಪನ್ಯಾಸಕರಿಗೆ ₹500 ಭತ್ಯೆ ನೀಡಲಾಗುತ್ತಿದೆ. 2017ರ ಜುಲೈ 1ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ 45.25ರಷ್ಟು ತುಟ್ಟಿಭತ್ಯೆ, ಶೇ 30ರಷ್ಟು ಫಿಟ್ ಮೆಂಟ್ (ತಾರತಮ್ಯ ನಿವಾರಿಸುವ ಮೊತ್ತ) ಸೇರಿಸಿದ ಬಳಿಕ ಬರುವ ಮೊತ್ತಕ್ಕೆ ವಿಶೇಷ ಭತ್ಯೆಯನ್ನು ವಿಲೀನ ಮಾಡುವಂತೆ ಆದೇಶ ತಿಳಿಸಿದೆ.

ಪ್ರಸ್ತುತ ₹23,400 ಮೂಲವೇತನವಿದ್ದರೆ ತುಟ್ಟಿಭತ್ಯೆ, ಫಿಟ್ ಮೆಂಟ್ ಸೇರಿಸಿದರೆ ಈ ಮೊತ್ತ ₹44,200 ಆಗಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೆ ಇದಕ್ಕೆ ₹450 ಸೇರಿಸಿಕೊಳ್ಳಬೇಕು. ಹೀಗಾದಲ್ಲಿ ಮೂಲವೇತನ ₹44,650 ಕ್ಕೆ ಏರಲಿದೆ. ಈ ಮೊತ್ತಕ್ಕೆ ಶೇ 24ರಷ್ಟು ಮನೆಬಾಡಿಗೆ ಭತ್ಯೆ ಅಂದರೆ ₹10,956 ಸೇರಿಸಿದರೆ ಒಟ್ಟು ಪಡೆಯುವ ಮೊತ್ತ ₹55,606 ಆಗಲಿದೆ. ಇದರ ಜತೆಗೆ ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ.‌

ಮುಖ್ಯ ವೇತನ ಶ್ರೇಣಿ(₹ಗಳಲ್ಲಿ)

ಪ್ರಸ್ತುತ, ಪರಿಷ್ಕೃತ, ಒಟ್ಟು ವೇತನ*

9,600 17,000 21,080

10,400 18,600 23,064

11,200 20,400 25,296

12,000 22,400 27,776

14,200 27,000 33,480

15,600 29,600 36,704

17,200 32,600 40,424

‌19,000 36,000 44,640

21,000 39,800 49,352

24,600 46,400 57,536

28,800 53,900 66,836

33,600 62,600 77,624

39,000 72,500 89,900

45,300 83,900 1,04,036

52,500 97,100 1,20,404

60,600 1,12,100 1,39,004

69,600 1,28,900 1,59,836

79,800 1,47,500 1,82,900

(*ಮೂಲವೇತನ ₹9,600 ಇದ್ದುದು ₹17,000ಕ್ಕೆ ಬದಲಾದರೆ ಶೇ 24ರಷ್ಟು ಮನೆಬಾಡಿಗೆ ಭತ್ಯೆ(ಎಚ್ಆರ್‌ಎ) ಸೇರಿಸಿದರೆ ಒಟ್ಟು ₹21,080ಗೆ ಏರಿಕೆಯಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಶೇ 24ರಷ್ಟು ಎಚ್ಆರ್‌ಎ ಇದೆ. ಉಳಿದ ಪಾಲಿಕೆಗಳ ವ್ಯಾಪ್ತಿಯಲ್ಲಿ ಶೇ 16ರಷ್ಟು, ಇತರೆ ಪ್ರದೇಶಗಳಲ್ಲಿ ಶೇ 8ರಷ್ಟು ಇದೆ. ಈ ಪಟ್ಟಿ ಶೇ 24ರಷ್ಟು ಎಚ್‌ಆರ್‌ಎ ಅನ್ವಯ ಸಿದ್ಧಪಡಿಸಿದ್ದಾಗಿದೆ)

ಬರಹ ಇಷ್ಟವಾಯಿತೆ?

 • 1

  Happy
 • 4

  Amused
 • 0

  Sad
 • 1

  Frustrated
 • 0

  Angry