15 ಲಕ್ಷ ಪೆಂಗ್ವಿನ್‌ಗಳು ಪತ್ತೆ

7

15 ಲಕ್ಷ ಪೆಂಗ್ವಿನ್‌ಗಳು ಪತ್ತೆ

Published:
Updated:
15 ಲಕ್ಷ ಪೆಂಗ್ವಿನ್‌ಗಳು ಪತ್ತೆ

ಪ್ಯಾರಿಸ್‌: ಅಂಟಾರ್ಕ್ಟಿಕಾ ದ್ವೀಪಗಳಲ್ಲಿ 15 ಲಕ್ಷಕ್ಕೂ ಹೆಚ್ಚು ‘ಅಡೇಲಿ’ ಪೆಂಗ್ವಿನ್‌ಗಳು ಪತ್ತೆಯಾಗಿವೆ.

‘ಅಡೇಲಿ’ ಎನ್ನುವುದು ಪೆಂಗ್ವಿನ್‌ಗಳಲ್ಲಿನ ಒಂದು ತಳಿಯಾಗಿದೆ. ಅಂಟಾರ್ಕ್ಟಿಕಾದ ‘ಡೇಂಜರ್‌’ ದ್ವೀಪಗಳಲ್ಲೇ 7.5 ಲಕ್ಷ ಪೆಂಗ್ವಿನ್‌ಗಳು ಕಾಣಿಸಿಕೊಂಡಿವೆ. ಇತರ ಒಂಬತ್ತು ದ್ವೀಪಗಳಲ್ಲಿ ಉಳಿದ ಪೆಂಗ್ವಿನ್‌ಗಳು ಪತ್ತೆಯಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

‘ಪೆಂಗ್ವಿನ್‌ಗಳ ಬಗ್ಗೆ ಹೊಸ ಮಾಹಿತಿ ದೊರೆತಿರುವುದು ಆಶ್ಚರ್ಯಕರವಾಗಿದೆ. ಈ ದ್ವೀಪಗಳಲ್ಲಿ ಇದುವರೆಗೆ ಪೆಂಗ್ವಿನ್‌ಗಳು ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಅಪಾರ ಸಂಖ್ಯೆಯಲ್ಲಿರುವ ಅಡೇಲಿ ಪೆಂಗ್ವಿನ್‌ಗಳಿಗೆ ಈ ದ್ವೀಪಗಳಲ್ಲಿನ ವಾತಾವರಣ ಈಗ ಹಿತಕರವಾಗಿರಬಹುದು’ ಎಂದು ಸ್ಟೋನಿ ಬ್ರೂಕ್‌ ವಿಶ್ವವಿದ್ಯಾಲಯದ ಹೀಥರ್‌ ಲಿಂಚ್‌ ವಿಶ್ಲೇಷಿಸಿದ್ದಾರೆ.

‘ಅಡೇಲಿ ಪೆಂಗ್ವಿನ್‌ಗಳು ಮಧ್ಯಮಗಾತ್ರ ಹೊಂದಿದ್ದು, 70 ಸೆಂಟಿ ಮೀಟರ್‌ಗಳಷ್ಟು ಎತ್ತರ ಬೆಳೆಯುತ್ತವೆ. 3ರಿಂದ 6 ಕಿಲೋ ಗ್ರಾಂ ತೂಕ ಹೊಂದಿರುವ ಈ ಪೆಂಗ್ವಿನ್‌ಗಳು ಮಾಂಸಾಹಾರಿಗಳಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ಡ್ರೋನ್‌ನಿಂದ ಪಡೆದ ದೃಶ್ಯಾವಳಿ ಹಾಗೂ ಛಾಯಾಚಿತ್ರಗಳನ್ನು ಆಧರಿಸಿ ಪೆಂಗ್ವಿನ್‌ಗಳ ಸಂಖ್ಯೆ ಅಂದಾಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಡೇಂಜರ್‌ ದ್ವೀಪಗಳನ್ನು ಇಡೀ ವರ್ಷ ಭಾರಿ ಗಾತ್ರದ ಮಂಜುಗಡ್ಡೆಗಳು ಆವರಿಸಿಕೊಂಡಿರುತ್ತವೆ. ಬೇಸಿಗೆ ಕಾಲದಲ್ಲೂ ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸುವುದು ಕಷ್ಟ’ ಎಂದು ಲಿಂಚ್‌ ತಿಳಿಸಿದ್ದಾರೆ.ಪಶ್ಚಿಮ ಅಂಟಾರ್ಕ್ಟಿಕಾದ ದ್ವೀಪಗಳಿಂದ 160 ಕಿಲೋ ಮೀಟರ್‌ ದೂರದ ಪ್ರದೇಶಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಪೆಂಗ್ವಿನ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ ಎಂದು ವಿಜ್ಞಾನಿಗಳು ಈಚೆಗೆ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry