4
ಹೋಳಿ ಹುಣ್ಣಿಮೆಯ ಸಡಗರ: ನೃತ್ಯದ ಸೊಬಗು

ತಾಂಡಾಗಳಲ್ಲಿ ‘ದೂಂಢ್‌’ ಸಂಭ್ರಮ..!

Published:
Updated:
ತಾಂಡಾಗಳಲ್ಲಿ ‘ದೂಂಢ್‌’ ಸಂಭ್ರಮ..!

ವಿಜಯಪುರ: ದೇಶದಲ್ಲೇ ಹೆಚ್ಚು ಬಂಜಾರಾ ತಾಂಡಾಗಳನ್ನು ಹೊಂದಿದೆ ಎಂಬ ಹೆಗ್ಗಳಿಕೆ ಹೊಂದಿರುವ ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿ ಶುಕ್ರವಾರ ಮುಸ್ಸಂಜೆ ಹೋಳಿಯ ಬಣ್ಣದ ರಂಗಿನ ಜತೆಗೆ ‘ದೂಂಢ್‌’ ಸಂಭ್ರಮ ಮುಗಿಲು ಮುಟ್ಟಿತ್ತು. ಇದು ಶನಿವಾರ, ಭಾನುವಾರವೂ ನಡೆಯಲಿದೆ.

ಹೋಳಿ ಹುಣ್ಣಿಮೆಯ ರಾತ್ರಿ ಕಾಮಣ್ಣನ ದಹನದ ಬಳಿಕ ಮುಂದಿನ ಮೂರು ದಿನ ತಾಂಡಾಗಳಲ್ಲಿ ದೂಂಢ್‌ ಸಂಭ್ರಮ ಮನೆ ಮಾಡಲಿದೆ. ಆತ್ಮೀಯರು, ಬಂಧುಗಳು, ಮಿತ್ರರು, ಒಡನಾಡಿಗಳು ಎಲ್ಲರೂ ಒಂದೆಡೆ ಸೇರಿ ಹೋಳಿಯ ರಂಗಿನ ಜತೆ, ಗಂಡು ಮಕ್ಕಳ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಮೂರು ದಿನ ಕಾರ್ಯಕ್ರಮ ಆಯೋಜಿಸುವುದು ವಿಶೇಷ.

ಹಿಂದಿನ ಹೋಳಿ ಹುಣ್ಣಿಮೆಯಿಂದ ಗುರುವಾರ (ಮಾರ್ಚ್‌ 1) ಮುಕ್ತಾಯ ಗೊಂಡ ಈ ವರ್ಷದ ಹೋಳಿ ಹುಣ್ಣಿಮೆಯ ನಡುವಿನ ಒಂದು ವರ್ಷದ ಅವಧಿಯಲ್ಲಿ ತಾಂಡಾಗಳಲ್ಲಿ ಜನಿಸಿದ ಅಪಾರ ಸಂಖ್ಯೆಯ ಗಂಡು ಮಕ್ಕಳನ್ನು ದೈವಕ್ಕೆ ಸೇರಿಸಲು ಕಾತರದಿಂದ ಕಾದಿದ್ದ ಅಮೃತ ಗಳಿಗೆ ಇದೀಗ ಎಲ್ಲೆಡೆ ಆಚರಣೆಗೊಳ್ಳುತ್ತಿದೆ.

ಬಂಜಾರಾ ಜನಾಂಗದ ಆರಾಧ್ಯ ದೈವ ಸಂತ ಸೇವಾಲಾಲ ಮಹಾರಾಜರು ಹಾಕಿಕೊಟ್ಟ ಈ ಸಂಪ್ರದಾಯವನ್ನು ಸಮಾಜ ಇಂದಿಗೂ ತಲೆ ತಲಾಂತರದಿಂದ ತಪ್ಪದೆ ಪಾಲಿ ಸುತ್ತಿದೆ. ರಾಠೋಡ ಜನಾಂಗದಲ್ಲಿ ‘ದೂಂಢ್’, ಚೌಹಾಣ ಜನಾಂಗದಲ್ಲಿ ‘ಚಾಂಬಡ್’ ಎಂಬ ಹೆಸರಿನಿಂದ ಆಚರಣೆಗೊಳ್ಳುತ್ತಿರುವುದು ವಿಶೇಷ ಎನ್ನುತ್ತಾರೆ ಸಮಾಜದ ಹಿರಿಯರು.

‘ದೂಂಢ್‌’ ಸಂಭ್ರಮ: ಬಂಜಾರಾ ಜನಾಂಗದಲ್ಲಿ ಜನ್ಮ ತಾಳಿದ ಗಂಡು ಮಕ್ಕಳನ್ನು ದೈವಕ್ಕೆ (ಅಧಿಕೃತವಾಗಿ ಜನಾಂಗಕ್ಕೆ ಸೇರಿಸಿಕೊಳ್ಳುವುದು) ಹಾಕಿಕೊಳ್ಳುವುದೇ ‘ದೂಂಢ್‌’. ತಾಂಡಾ ಪ್ರಮುಖರಾದ ಕಾರಬಾರಿ, ಢಾವ್, ನಾಯಕರ ಮೇಲುಸ್ತುವಾರಿಯಲ್ಲಿ ಈ ಆಚರಣೆ ನಡೆಯುತ್ತದೆ.

ಹೋಳಿ ಹುಣ್ಣಿಮೆಗೂ ಮುನ್ನಾ ದಿನವೇ ಮಗುವಿನ ಮನೆ ಮುಂದೆ ಈ ಪ್ರಮುಖರು ಚಪ್ಪರ ಹಾಕಿಸುತ್ತಾರೆ. ಇದಕ್ಕೆ ಪಾಲ್‌ ಎನ್ನಲಾಗುತ್ತದೆ. ಕಾಮ ದಹನದ ಬಳಿಕ ಗಂಡು ಮಗುವಿನ ಮನೆಯಲ್ಲಿ ‘ದೂಂಢ್‌’ ಸಂಭ್ರಮ.

ನೆಲಕ್ಕೆ ಕಂಬಳಿ ಹಾಸಿ ಅದರ ಮೇಲೆ ಮಗುವನ್ನು ಕೂರಿಸಿ, ಮಗುವಿನ ಮೇಲೊಂದು ಕಂಬಳಿ ಹಿಡಿದು, ಬಿದಿರಿನ ಬೊಂಬಿಟ್ಟು, ಅದಕ್ಕೆ ಬಡಿಗೆಗಳಿಂದ ಹೊಡೆಯುತ್ತಾ, ಸಂಪ್ರದಾಯದ ಹಾಡುಗಳನ್ನು ಹಾಡುವ ಮೂಲಕ ಮಗುವಿನ ಜಡೆ (ಮುಡಿ) ತೆಗೆದು ದೈವಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ಈ ಸಂದರ್ಭ ಸಾಂಪ್ರದಾಯಿಕ ಉಡುಪಿನಿಂದ ಕಂಗೊಳಿಸುವ ಮಹಿಳೆಯರು, ಪುರುಷರು ಸಾಮೂಹಿಕವಾಗಿ ನರ್ತಿಸುತ್ತಾರೆ. ಬೈಗುಳದ ವಿನಿಮಯ, ಹೊಡೆತ, ಖುಷಿ ಪಡೆಯುವುದು ಸೇರಿದಂತೆ ಇನ್ನಿತರೆ ಪ್ರಕ್ರಿಯೆ ನಡೆಯುತ್ತವೆ. ಮಗುವಿಗೆ ಶ್ರೇಯಸ್ಸು ಕೋರಿ, ಒಟ್ಟಿಗೆ ಕಲೆತು ಸಿಹಿ ಸವಿಯುವುದು ವಾಡಿಕೆ.

ದೇಶದ ಎಲ್ಲೆಡೆಯ ಲಂಬಾಣಿ ತಾಂಡಾಗಳಲ್ಲಿ ಈ ಆಚರಣೆ ನಡೆಯುತ್ತದೆ. ಅನಾಹುತ, ಸಾವು ಸಂಭವಿಸಿದ ಸಂದರ್ಭ ಮಾತ್ರ ‘ದೂಂಢ್‌’ ಆಚರಿಸಲ್ಲ ಎಂದು ತಾಂಡಾದ ಹಿರಿಯರು ‘ಪ್ರಜಾವಾಣಿ’ಗೆ ಆಚರಣೆಯ ವಿಧಿ ವಿಧಾನ, ವೈಶಿಷ್ಟ್ಯದ ಕುರಿತು ತಿಳಿಸಿದರು.

**

ಈ ಬಾರಿಯ ‘ದೂಂಢ್‌’ ಸಂಭ್ರಮವನ್ನು ಶುಕ್ರವಾರ ಮುಸ್ಸಂಜೆ ಆಚರಿಸಿದೆವು. ನಮ್ಮ ತಾಂಡಾದ ಎಂಟು ಮಕ್ಕಳ ನಾಮಕರಣ ನಡೆಯಿತು

– ರಾಜು ಜಾಧವ, ಅಲ್ಲಾಪುರ ತಾಂಡಾ ನಿವಾಸಿ

**


ಗಂಡು ಮಕ್ಕಳ ದೈವಕ್ಕೆ ಹಾಕುವ ‘ದೂಂಢ್‌’ ಅಮೃತ ಗಳಿಗೆಗೆ ಕಾತರದಿಂದ ಕಾದಿರುತ್ತವೆ. ಎಲ್ಲರೂ ಒಟ್ಟಾಗಿ ಸಂಭ್ರಮಿಸಿ ಕಂದಮ್ಮಗಳಿಗೆ ಹೆಸರಿಡುತ್ತೇವೆ.

  –ರಾಜು ಗೇಮು ರಾಠೋಡ, ಶಿಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry