‘ಜೀವನ ಕಲಿಸೋ ಪಾಠ ನಾವೆಲ್ಲ ಕಲಿಲೇಬೇಕು’

ಗುರುವಾರ , ಮಾರ್ಚ್ 21, 2019
25 °C

‘ಜೀವನ ಕಲಿಸೋ ಪಾಠ ನಾವೆಲ್ಲ ಕಲಿಲೇಬೇಕು’

Published:
Updated:
‘ಜೀವನ ಕಲಿಸೋ ಪಾಠ ನಾವೆಲ್ಲ ಕಲಿಲೇಬೇಕು’

ನನ್ನದು ಮಾಲೂರು ತಾಲ್ಲೂಕಿನ ಮಾಕಾರ ಹಳ್ಳಿ. ಅಪ್ಪ–ಅವ್ವನ ಮುದ್ದಿನ ಮಗ ನಾನು. ಅದಕ್ಕೆ ವಾಸಿಮ್‌ ಅಂತಾ ಹೆಸರಿಟ್ಟಿದ್ದಾರೆ. ನನಗೀಗ 25 ವರ್ಷ. ತುಂಬಿದ ಕುಟುಂಬ, ನೀಗಲಾರದ ಬಡತನದಲ್ಲಿ ಕೃಷಿ ಮಾಡಿಕೊಂಡಿದ್ವಿ. ಐವರು ಮಕ್ಕಳ ಕುಟುಂಬದಲ್ಲಿ ಜೀವನ ಸಾಗಿಸೋದು ಕಷ್ಟ ಆಗಿತ್ತು. ಅಣ್ಣ, ಅಕ್ಕ ತಂಗಿರೂ ತಕ್ಕಮಟ್ಟಿಗೆ ಓದಿದ್ದಾರೆ. ನಾನು 5ನೇ ಕ್ಲಾಸ್‌ವರೆಗೂ ಓದಿದೀನಿ. ಸದ್ಯ 3 ವರ್ಷದಿಂದ ಟ್ರಿನಿಟಿ ಸರ್ಕಲ್ ಹತ್ತಿರ ರಸ್ತೆ ಪಕ್ಕ ಎಳನೀರು ವ್ಯಾಪಾರ ಮಾಡಿಕೊಂಡಿದ್ದೀನಿ.

ಕೃಷಿನೇ ನಮ್ಮ ಕುಟುಂಬದ ಬೆನ್ನೆಲುಬು. ಊರಲ್ಲಿ ತೋಟ ಇದೆ. ಭತ್ತ, ರಾಗಿ, ತರಕಾರಿ ಬೆಳಿತೀವಿ. ಮಳೆ ಇದ್ದಾಗ ನಮಗೆಲ್ಲ ಹಬ್ಬ. ಇಲ್ಲಾಂದ್ರೆ ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡಬೇಕಾಗುತ್ತೆ. ತೋಟದಾಗೆ ಇದ್ದ ಬೊರ್‌ವೆಲ್‌ ಒಡಲು ಕೂಡ ಬರೀದಾಗಿದೆ. ಇಣುಕಿದ್ರೂ ಹನಿ ನೀರು ಸಿಗಲ್ಲ. ಕಾಲಕಾಲಕ್ಕೆ ಮಳೆನೂ ನೆಟ್ಟಗೆ ಬರಲ್ಲ. ದನಕರುಗಳಿಗೂ ಮೇವಿಲ್ಲದಂಗಾಗಿ ಸತ್ತೊದ್ವು. ಇನ್ನು ನಮ್ಮಂಥ ರೈತರ ಪಾಡು ಕೇಳೊರು ಯಾರು?

ನನಗೆ ತೋಟದ ಕೆಲಸ ಬಿಟ್ರೆ ಬೇರೇನೂ ಬರಲ್ಲ. ಕಲಿಬೇಕಾದ ವಯಸ್ಸಲ್ಲಿ ‌ಕಲಿಯಕಾಗಲಿಲ್ಲ. ಇನ್ನೂ ಸ್ವಲ್ಪ ಓದಕೊಂಡಿದ್ರೆ ಬೇರೆ ಇನ್ನೇನಾದ್ರೂ ಕೆಲಸ ಮಾಡಬಹುದಿತ್ತು. ಏನ್‌ ಮಾಡಕಾಗತ್ತೆ..? ಆದ್ರೆ ಜೀವನ ಕಲಿಸೋ ಪಾಠ ನಾವೆಲ್ಲ ಕಲಿಲೇಬೇಕು. ಒಪ್ಪತ್ತಿನ ಗಂಜಿ ಕುಡಕೊಂಡೆ ಬೆಳೆದ್ವಿ. ಇರೋ ಬಡತನದಾಗೆ ಅಣ್ಣ, ಅಕ್ಕ ತಂಗಿರ ಮದುವೆನೂ ಆಗೋಯ್ತು. ಇನ್ನು ಉಳಿದೊನು ನಾನೊಬ್ಬ.

ಅಣ್ಣನಿಗೆ ಚಿಕ್ಕವಯಸ್ಸಿನಲ್ಲೆ ಪೊಲೀಯೊ ಬಂತು. ಎರಡೂ ಕಾಲು ಶಕ್ತಿ ಕಳಕೊಂಡಿವೆ. ಇಬ್ಬರೂ ಊರು ಬಿಟ್ಟು ಬೆಂಗಳೂರಿಗೆ ಬಂದ್ವಿ. ಹಲಸೂರು ಸಮೀಪದ ಬೇಗಮ್‌ ಮಹಲ್‌ ಹತ್ರ ಎಳನೀರು ವ್ಯಾಪಾರ ಶುರು ಮಾಡಿದ್ವಿ. ಆಗೇನೊ ವ್ಯಾಪಾರ ಚೆನ್ನಾಗೆ ನಡಿತಿತ್ತು. ಬರ್ತಾಬರ್ತಾ ಅಲ್ಲಿನೂ ಸುತ್ತಮುತ್ತ ಅಂಗಡಿಗಳು ಜಾಸ್ತಿ ಆದ್ವು. ನಮ್ಮ ವ್ಯಾಪಾರ ಅಷ್ಟಕಷ್ಟೆ ಆಗೊಯ್ತು. ಒಂದೇ ಅಂಗಡಿನಾಗೆ ದುಡಿದ್ರೆ ಹೊಟ್ಟೆ ತುಂಬೊಲ್ಲ ಅಂತಾ ಟ್ರಿನಿಟಿ ಹತ್ತಿರ ಗಾಡಿನಾಗೆ ಎಳನೀರು ವ್ಯಾಪಾರ ಶುರು ಮಾಡಿದೆ.

ವೆಂಕಟೇಶಪುರದಲ್ಲಿ ₹6,000 ಕ್ಕೆ ಬಾಡಿಗೆ ಮನೆ ಮಾಡಿದ್ದೀವಿ. ಅಣ್ಣ, ಅತ್ತಿಗೆ ಇಬ್ಬರು ಮಕ್ಕಳು ಎಲ್ಲರೂ ಒಟ್ಟಿಗೆ ಇದೀವಿ. ಬೆಳಿಗ್ಗೆ 5ರ ಸುಮಾರಿಗೆ ಅಣ್ಣನ ಅಂಗಡಿ ತೆರೆದು ಕಸಗುಡಿಸಿ ಬರ್ತೀನಿ. ಆಮೇಲೆ ನನ್ನ ಅಂಗಡಿ ತೆಗಿತೀನಿ. ರಾತ್ರಿ 8 ಗಂಟೆಗೆ ನನ್ನ ಅಂಗಡಿ ಮುಚ್ಚಿ, ಮತ್ತೆ ಅಣ್ಣನ ಅಂಗಡಿಗೆ ಹೋಗ್ತೀನಿ. 10ರವೆಗೆಗೂ ಅಲ್ಲಿ ದುಡಿತೀನಿ. ಆಮೇಲೆ ಅವರನ್ನು ಮನೆಗೆ ಕರಕೊಂಡು ಹೋಗ್ತೀನಿ.

ಮಂಡ್ಯ, ಕೋಲಾರದ ವ್ಯಾಪಾರಿಗಳ ತೋಟಕ್ಕೆ ಹೋಗಿ ನಾನೇ ಕಾಯಿ ಕೊಯ್ದುಕೊಂಡು ಬರ್ತೀನಿ. ಕೆಲವು ಸಾರಿ ಅವರೇ ಕೊಯ್ದು ಕಳಿಸ್ತಾರೆ. ಕಾಯಿ ಗಾತ್ರಕ್ಕೆ ತಕ್ಕಂಗೆ ಬೆಲೆ. ಒಂದು ದಿನಕ್ಕೆ ಸುಮಾರು 500 ಸಿಗುತ್ತೆ. ಈಗೇನೂ ಅಷ್ಟೊಂದು ವ್ಯಾಪಾರ ಇಲ್ಲ. ಬೇಸಿಗೆ ಇದ್ದಾಗ ವ್ಯಾಪಾರ ಚೆನ್ನಾಗಾಗುತ್ತೆ. 2 ವರ್ಷದಿಂದ ಇದರಾಗೆ ನನ್ನ ಜೀವನ ಹೆಂಗೊ ನಡಿತಾ ಇದೆ. ದುಡಿಮೆ ದುಡ್ಡೆಲ್ಲ ಅಣ್ಣನಿಗೆ ಕೊಡತೀನಿ. ಅಣ್ಣನೇ ನನಗೆಲ್ಲ. ಬದುಕು ಕಲಿಸಿ ಕೊಟ್ಟಿದ್ದು ಅವನೇ. ಅವನಂದ್ರೆ ಹೆಚ್ಚು ಪ್ರೀತಿ ನನಗೆ. ಅಪ್ಪ ಅಮ್ಮನಿಗೂ ವಯಸ್ಸಾಗಿದೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಇತ್ತಾಗ ಈ ಕೆಲಸ ಮಾಡ್ತಾ, ತೋಟದ ಕೆಲಸಾನು ಮಾಡ್ತೀನಿ.

ಕಾರ್ಪೊರೆಷನ್‌ದವರಿಗೆ ತಿಂಗಳಿಗೆ ₹500 ಕಟ್ಟತೀನಿ. ಕೆಲವು ಸಾರಿ ಇಲ್ಲಿ ವ್ಯಾಪಾರ ಮಾಡೊಕು ಬಿಡಲ್ಲ. ಕಷ್ಟ ಆದ್ರೂ ಜೀವನ ನಡೆಸಲೇಬೇಕು. ಬಂದಿದ್ದು ಬರಲಿ ಅಂತಾ ಮುಂದಕ್ಕೆ ಹೆಜ್ಜೆ ಹಾಕ್ತಾ ಇರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry