ಕನ್ನಡ ಮಾಧ್ಯಮ

7

ಕನ್ನಡ ಮಾಧ್ಯಮ

Published:
Updated:

‘ರಾಜ್ಯದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ‘ಅಹಿಂದ’ ಸಮುದಾಯಗಳು ಇಂಗ್ಲಿಷ್‌ ಮಾಧ್ಯಮದ ಪರವಾಗಿವೆ’ ಎಂಬುದನ್ನು ಪದ್ಮರಾಜ ದಂಡಾವತಿಯವರು ಒತ್ತಿ ಹೇಳಿದ್ದಾರೆ (ಪ್ರ.ವಾ., ಪ್ರಜಾ ಮತ, ಮಾ. 2).

ಪ್ರಾಚೀನ ಕಾಲದಿಂದಲೂ ಸಂಸ್ಕೃತ ಮಾಧ್ಯಮದ ಶಿಕ್ಷಣ ವ್ಯವಸ್ಥೆ ತಮ್ಮನ್ನು ಶಿಕ್ಷಣದ ಅವಕಾಶಗಳಿಂದ ವಂಚಿತಗೊಳಿಸಿದೆ. ಈಗ ಸಂಸ್ಕೃತದ ಸ್ಥಾನವನ್ನು ಇಂಗ್ಲಿಷ್‌ ಆಕ್ರಮಿಸಿಕೊಂಡಿದೆ. ನಾವು ಕನ್ನಡ, ಕನ್ನಡ ಮಾಧ್ಯಮ ಎಂದು ಭಾವಜೀವಿಗಳಾಗಿ ಕುಳಿತರೆ ಸಿಗಬೇಕಾದ ಸಮಪಾಲು ಸಿಕ್ಕುವುದಿಲ್ಲ ಎಂಬ ವಾಸ್ತವ ಪ್ರಜ್ಞೆ ಈ ಸಮುದಾಯಗಳಲ್ಲಿ ಜಾಗೃತವಾಗಿದ್ದರ ಪರಿಣಾಮವಿದು.

ಪ್ರಸ್ತುತ ಐದನೇ ತರಗತಿವರೆಗೆ ಕನ್ನಡ ಮಾಧ್ಯಮ ಇರಬೇಕೆಂಬುದನ್ನು ಮಾತ್ರ ಕೇಂದ್ರವಾಗಿಸಿಕೊಂಡು ನಮ್ಮ ಚರ್ಚೆ-ಹೋರಾಟಗಳು ಗಿರಕಿ ಹೊಡೆಯುತ್ತಿವೆ. ನಂತರದ ಶಿಕ್ಷಣ ಮುಖ್ಯವಾಗಿ ವಿಜ್ಞಾನ, ತಾಂತ್ರಿಕ ಶಿಕ್ಷಣದ ಮಾಧ್ಯಮವು ಈಗ ಸಂಪೂರ್ಣ ಇಂಗ್ಲಿಷ್‌ಮಯವಾಗಿದೆ. ಸಾಮಾಜಿಕ ನ್ಯಾಯಕ್ಕೆ ತೊಡಕಾಗಿದೆ. ಈ ಕುರಿತು ಚರ್ಚೆ ಮುನ್ನೆಲೆಗೆ ಬರದಿರುವುದು ನಮ್ಮ ಚಿಂತನೆಯಲ್ಲಿಯ ದೋಷಗಳನ್ನು ಜಾಹೀರುಗೊಳಿಸುತ್ತದೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಕನ್ನಡೀಕರಣಗೊಳಿಸಲು ಕುವೆಂಪು  ಹೋರಾಡಿದರು. ಇಂದು ನಾವು ಈ ಹೋರಾಟವನ್ನು ತುಂಡು ತುಂಡು ಮಾಡಿಕೊಂಡು ಏನನ್ನೂ ಸಾಧಿಸದೆ ಕುಳಿತಿದ್ದೇವೆ.

ಶಿಶುವಿಹಾರದಿಂದಲೇ ಇಂಗ್ಲಿಷ್‌ ಕಲಿಯುವ ಮಕ್ಕಳು, ಉನ್ನತ ಶಿಕ್ಷಣದಲ್ಲಿರುವ ಇಂಗ್ಲಿಷ್‌ ಮಾಧ್ಯಮದ ಸದುಪಯೋಗ ಮಾಡಿಕೊಂಡು ಸರ್ಕಾರಿ-ಖಾಸಗಿ ವಲಯಗಳ ಆಯಕಟ್ಟಿನ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.

ಅದೇ ಐದನೇ ತರಗತಿ-ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದ ‘ಉನ್ನತ ಶಿಕ್ಷಣ’ ಎವರೆಸ್ಟ್‌ ಶಿಖರವಾಗುತ್ತದೆ. ಇವರು ಇಂಗ್ಲಿಷ್‌ ಮಾಧ್ಯಮದ ಮಕ್ಕಳೊಂದಿಗೆ ಶಿಕ್ಷಣ ಪಡೆಯುವ ಮತ್ತು ಉದ್ಯೋಗ ಗಳಿಸುವ ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತಾರೆ. ಇದು ವಾಸ್ತವ.

ಪರಿಸ್ಥಿತಿ ಹೀಗಿರುವಾಗ ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ತರಲೇಬೇಕು, ಕನ್ನಡ ಉಳಿಸಲೇಬೇಕು. ಜೊತೆಗೆ ಸಾಮಾಜಿಕ ನ್ಯಾಯವನ್ನೂ ಎತ್ತಿ ಹಿಡಿಯಬೇಕೆಂದರೆ ಶಿಶುವಿಹಾರದಿಂದ ಸ್ನಾತಕೋತ್ತರವರೆಗಿನ ಎಲ್ಲಾ ವಿಧದ ಶಿಕ್ಷಣವನ್ನು ಕನ್ನಡ ಮಾಧ್ಯಮಕ್ಕೆ ಪರಿವರ್ತಿಸಬೇಕು. ಇಚ್ಛಾಶಕ್ತಿ ಇದ್ದರೆ ಇದೇನೂ ಕಷ್ಟವಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದರೆ ಹೆಚ್ಚಿನ ಅಂಕಗಳು ಬರುತ್ತವೆ ಎಂಬ ವಾತಾವರಣ ನಿರ್ಮಾಣವಾದರೆ ಸಾಕು, ಉಳಿದದ್ದೆಲ್ಲಾ ತನ್ನಿಂತಾನೇ ಆಗುತ್ತದೆ.

–ಹಜರತಅಲಿ ಇ. ದೇಗಿನಾಳ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry