7

21ನೇ ಶತಮಾನದಲ್ಲಿ ಭಾರತ ಹೊಸ ಎತ್ತರಕ್ಕೆ

Published:
Updated:
21ನೇ ಶತಮಾನದಲ್ಲಿ ಭಾರತ ಹೊಸ ಎತ್ತರಕ್ಕೆ

ತುಮಕೂರು: ಅಪಾರ ಯುವಜನ ದೇಶದ ಶಕ್ತಿಯಾಗಿದ್ದು, ಈ ಸಮುದಾಯವೇ 21ನೇ ಶತಮಾನದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ರಜತ ಯಾನದ’ ಸಮಾರೋಪ ಸಮಾರಂಭದಲ್ಲಿ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನಲವತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಮಾತನಾಡಿದರು.

‘3 ವರ್ಷಗಳ ಹಿಂದೆ ಸಿದ್ಧಗಂಗಾಮಠಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಾಗ ಅಲ್ಲಿನ ಜನರು, ಯುವಕರು ವಿಶೇಷ ಪ್ರೀತಿ ತೋರಿದ್ದು ನೆನಪಿದೆ. ಬಸವೇಶ್ವರ ಮತ್ತು ಸ್ವಾಮಿ ವಿವೇಕಾನಂದರ ಆಶೀರ್ವಾದದಿಂದ ಶಿವಕುಮಾರ ಸ್ವಾಮೀಜಿಯವರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಅವರಿಗೆ ಆರೋಗ್ಯ ಮತ್ತು ದೀರ್ಘಾಯು ಪ್ರಾಪ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ತುಮಕೂರಿನಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪನೆಯಾಗಿ 25 ವರ್ಷಗಳಾಗಿವೆ. ಚಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ 125 ವರ್ಷವಾಗಿದೆ. ಸೋದರಿ ನಿವೇದಿತಾ ಅವರ 150ನೇ ಜನ್ಮದಿನೋತ್ಸವದ ನೆನಪಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅಪೂರ್ವ ಸನ್ನಿವೇಶವಾಗಿದೆ ಎಂದು ಅವರು ನುಡಿದರು.

ವಿದ್ಯಾರ್ಥಿ ದೇವೋಭವ, ಯುವಶಕ್ತಿ ದೇವೋಭವ: ‘ನನ್ನ ಪ್ರಕಾರ ವಿದ್ಯಾರ್ಥಿ ದೇವೊಭವ ಅಷ್ಟೇ ಅಲ್ಲ. ಯುವ ಶಕ್ತಿಯು ದೇವೋಭವ. ನಮ್ಮ ದೇಶದ ಯುವ ಶಕ್ತಿ ಬಹು ದೊಡ್ಡದು. ವಿಶ್ವದಲ್ಲಿಯೇ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಶೇ 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಸಮುದಾಯ ವೈಯಕ್ತಿಕ ಮತ್ತು ದೇಶದ ಉನ್ನತಿಯ ಧ್ಯೇಯ ಇಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಗುರಿ ತುಂಬಾ ಸ್ಪಷ್ಟವಾಗಿದ್ದಾಗ ಉನ್ನತಿ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ನಾನು ನನ್ನ ಜೀವನವನ್ನು ಯೋಗ್ಯ ರೀತಿಯಲ್ಲಿ ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು. ಅವರ ಸಂದೇಶ, ಚಿಂತನೆಗಳನ್ನು ಪಾಲಿಸಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನ ಪಡಬೇಕು’ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು  ವೃತ್ತಿಪರರು ಭಾಗವಹಿಸಿದ್ದರು. ವಿಶೇಷವಾಗಿ ವಕೀಲರು, ಶಿಕ್ಷಕರು, ವಿಜ್ಞಾನಿಗಳು, ಎಂಜಿನಿಯರ್‌ಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪವನ್ನು ಕೊಟ್ಟಿದ್ದರು. ಸ್ವಾತಂತ್ರ ಪಡೆದ ಬಳಿಕ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದರು. ಇದೆಲ್ಲವೂ ಆಗಿದ್ದು ಸಂಕಲ್ಪ ಸಿದ್ಧಿ ಶಕ್ತಿಯಿಂದ ಎಂದು ಹೇಳಿದರು.

ಮೂರು ಕೋಟಿ ಜನರಿಗೆ ಉದ್ಯೋಗ: ‘ದೇಶದ ಯುವ ಸಮುದಾಯದ ಮೇಲೆ ನಮ್ಮ ಸರ್ಕಾರವು ನಾಲ್ಕುವರೆ ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡಿದೆ. ಇದರಿಂದ ದೇಶಕ್ಕೆ ಸುಮಾರು ಮೂರು ಕೋಟಿ ಉದ್ಯೋಗಿಗಳು ದೊರೆತಿದ್ದಾರೆ. ಮುದ್ರಾ ಯೋಜನೆಯಡಿ ನೀಡಲಾದ ಸಾಲದ ಮರುಪಾವತಿಯು ಅಷ್ಟೇ ವೇಗದಲ್ಲಿ ಆಗುತ್ತಿದೆ. ವಿಶೇಷವಾಗಿ ಈ ಯೋಜನೆಯಡಿ ಸಾಲ ಪಡೆಯುವವರಲ್ಲಿ ಶೇ 70ರಷ್ಟು ಮಹಿಳೆಯರೇ ಆಗಿದ್ದಾರೆ’ ಎಂದು ಹೇಳಿದರು.

ಯುವಕರ ಆಶೋತ್ತರಗಳನ್ನು ಈಡೇರಿಸಲು ಕೇಂದ್ರ ಸರ್ಕಾರವು ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಕಾರ್ಯಕ್ರಮ ರೂಪಿಸಿದೆ.ಶಿಕ್ಷಣ ವ್ಯವಸ್ಥೆಯಲ್ಲಿ ಆವಿಷ್ಕಾರಕ್ಕೆ ಹೆಚ್ಚು ಒತ್ತು ಕೊಡಬೇಕು. ಅದು ಶಾಲಾ ಸಂಸ್ಕೃತಿಯ ಭಾಗವಾಗಬೇಕು ಎಂಬ ಧ್ಯೇಯದೊಂದಿಗೆ ಅಟಲ್‌ ಇನ್ನೋವೇಷನ್ ಮಿಷನ್ ಯೋಜನೆ ಪ್ರಾರಂಭಿಸಿದೆ ಎಂದರು.

ಮುಂದಿನ ನಾಲ್ಕು ವರ್ಷದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಒಂದು ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿಯೇ ನಾವು ಘೋಷಣೆ ಮಾಡಿದ್ದೇವೆ ಎಂದು ವಿವರಿಸಿದರು.

ತ್ರಿಪುರಾ ಫಲಿತಾಂಶ ಐತಿಹಾಸಿಕ

‘ಅನೇಕ ದಶಕಗಳು ಉರುಳಿದ ಮೇಲೆ ಈಗ ದೇಶದಲ್ಲಿ ಮತ್ತೊಮ್ಮೆ ಅದೇ ಸಂಕಲ್ಪ ಶಕ್ತಿ ದೇಶದಲ್ಲಿ ಕಂಡು ಬರುತ್ತಿದೆ. ಯುವಕರ ಸಂಕಲ್ಪ ಶಕ್ತಿಯ ಅದ್ಭುತ ಕೌಶಲವನ್ನು ಮೊನ್ನೆ ತಾನೇ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ಚುನಾವಣೆಯಲ್ಲಿ ನೋಡಿದ್ದೇವೆ. ಮೂರೂ ರಾಜ್ಯಗಳಲ್ಲಿ ಜನರು ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ’ ಎಂದು ಪ್ರಧಾನಿ ವಿಶ್ಲೇಷಿಸಿದರು.

‘ತ್ರಿಪುರ ಫಲಿತಾಂಶವು ವಾಸ್ತವವಾಗಿ ಒಂದು ಐತಿಹಾಸಿಕವಾದುದು. ತ್ರಿಪುರಾ ಎಂದರೆ ಎಡಪಂಥೀಯರ ಕೋಟೆ ಎನ್ನಲಾಗುತ್ತಿತ್ತು. ಆದರೆ, ಯುವಶಕ್ತಿ ಮತ್ತು ನಾರಿ ಶಕ್ತಿ ಕೂಡಿ ಆ ಕೋಟೆಯನ್ನು ಬೇಧಿಸಿವೆ’ ಎಂದು ಹೇಳಿದರು.

‘ಆ ರಾಜ್ಯದ ಯುವ ಸಮುದಾಯವು ಅಲ್ಲಿನ ಭಯ, ಭ್ರಷ್ಟಾಚಾರ, ಸೇಡು, ವೈಷಮ್ಯ, ಭ್ರಮೆಯ ರಾಜಕೀಯ ಅಂಶಗಳನ್ನು ಪರಾಭವಗೊಳಿಸಿದ್ದಾರೆ. ಈಗ ಆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಯುವ ಸರ್ಕಾರ ಆ ರಾಜ್ಯದಲ್ಲಿ ರಚನೆಯಾಗುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry