ತಜ್ಞರ ಸಮಿತಿಯ ಆತುರದ ನಿರ್ಧಾರ ಸರಿಯಲ್ಲ: ರಂಭಾಪುರಿ ಸ್ವಾಮೀಜಿ

7

ತಜ್ಞರ ಸಮಿತಿಯ ಆತುರದ ನಿರ್ಧಾರ ಸರಿಯಲ್ಲ: ರಂಭಾಪುರಿ ಸ್ವಾಮೀಜಿ

Published:
Updated:
ತಜ್ಞರ ಸಮಿತಿಯ ಆತುರದ ನಿರ್ಧಾರ ಸರಿಯಲ್ಲ: ರಂಭಾಪುರಿ ಸ್ವಾಮೀಜಿ

ರಂಭಾಪುರಿ ಪೀಠ (ಬಾಳೆಹೊನ್ನೂರು): ವೀರಶೈವ ಧರ್ಮದ ಐತಿಹಾಸಿಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಅಲ್ಪ ಸಂಖ್ಯಾತರ ಆಯೋಗಕ್ಕೆ ತಜ್ಞರ ಸಮಿತಿ ವರದಿ ಸಲ್ಲಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀ ರಂಭಾಪುರಿ ಪೀಠದಲ್ಲಿ ಭಾನುವಾರ ಮಾತನಾಡಿ, ‘ಇತಿಹಾಸ ಮತ್ತು ಪರಂಪರೆಯುಳ್ಳ ವೀರಶೈವ ಧರ್ಮದಿಂದ ಲಿಂಗಾಯತ ಧರ್ಮ ಸ್ವತಂತ್ರವಾಗಬೇಕೆಂಬ ಹೋರಾಟಗಾರರ ಒತ್ತಾಸೆಯಂತೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಪರಿಶೀಲಿಸಿತ್ತು. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು. ಧರ್ಮ, ಸಂಸ್ಕೃತಿ, ಆದರ್ಶಗಳನ್ನು ಸಂರಕ್ಷಿಸಬೇಕಾದ ಸರ್ಕಾರ ಇಂದು ವೀರಶೈವ ಲಿಂಗಾಯಿತ ಇವೆರಡರಲ್ಲಿ ದ್ವಂದ್ವ ಹುಟ್ಟು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ತಿಳಿಸಿದ್ದಾರೆ.

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತಜ್ಞರ ಸಮಿತಿ ಸದಸ್ಯರು ಈ ಮೊದಲೇ ಒಂದು ಗುಂಪಿನ ಜೊತೆ ಗುರುತಿಸಿಕೊಂಡಿದ್ದು, 6 ತಿಂಗಳು ಕಾಲಾವಕಾಶ ಕೇಳಿದ ಸಮಿತಿ ಕೇವಲ 2 ತಿಂಗಳಲ್ಲಿ ಅಲ್ಪಸಂಖ್ಯಾತರ ಆಯೋಗಕ್ಕೆ ವರದಿ ಸಲ್ಲಿಸಿರುವುದು ಪೂರ್ವನಿಯೋಜಿತ ತಂತ್ರಗಾರಿಕೆ ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದು ದೂರಿದರು.

‘ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಕೆಲವು ಮಂತ್ರಿಗಳ ಒತ್ತಡದಿಂದ ಆತುರಾತುರವಾಗಿ ನಿರ್ಧಾರ ಕೈಗೊಂಡಿರುವುದು ಭವಿಷ್ಯದಲ್ಲಿ ಅವರಿಗೆ ತಿರುಗು ಬಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಜ್ಞರ ಸಮಿತಿ ರಚಿಸಿರುವುದು ಸಂವಿಧಾನ ವಿರೋಧಿ ಕ್ರಮ. ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಜ್ಞರ ಸಮಿತಿ ಈ ನಿರ್ಧಾರ ಕೈಗೊಂಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟಗಾರರ ಅನಿಸಿಕೆಗಳನ್ನು ತಜ್ಞರ ಸಮಿತಿ ಮಾನ್ಯ ಮಾಡಿ ವರದಿ ಕೊಟ್ಟಿರುವುದು ನ್ಯಾಯ ಸಮ್ಮತವಾದುದಲ್ಲ’ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಇದೇ ವರ್ಷ ನಡೆಯುವ ಸಾರ್ವತ್ರಿಕ ಚುನಾವಣಾ ಪೂರ್ವದಲ್ಲಿ ಸರ್ಕಾರ ಕೈಗೊಳ್ಳುವ ಆತುರದ ನಿರ್ಧಾರದಿಂದ ಪಕ್ಷಕ್ಕೆ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ. ಧರ್ಮ ಒಡೆಯುವ ಕೆಲಸ ಮಾಡಿದರೆ ಅದರ ಪ್ರಾಯಶ್ಚಿತ್ತ ಪಕ್ಷದ ಮೇಲೆ ದುಷ್ಪರಿಣಾಮವಾಗದೇ ಇರಲಾರದು. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿದ್ದಾದರೆ ನಾಡಿನ ಎಲ್ಲ ಗುರು ವಿರಕ್ತ ಮಠಾಧೀಶರು ಒಗ್ಗೂಡಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry