ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ರಾಜಕೀಯ ಬೇಡ’

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮನವಿ ಮಾಡಿದರು.

ಶಿವಯೋಗಾಶ್ರಮದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸ್ವಾಗತಾರ್ಹ. ಬಸವಾದಿ ಶರಣರ ಹೋರಾಟಗಳಿಗೆ ಗೌರವ, ಘನತೆ ಸಿಗಬೇಕಾದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು’ ಎಂದು ಪ್ರತಿಪಾದಿಸಿದರು.

ಸೈದ್ಧಾಂತಿಕ, ಧಾರ್ಮಿಕ, ತಾತ್ವಿಕ ನೆಲೆಗಟ್ಟಿನ ಮೇಲೆ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿದೆ. ಲಿಂಗಾಯತರನ್ನು ಕೇವಲ ಮತಬ್ಯಾಂಕ್‌ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಲಿಂಗಾಯತರು ಒಂದು ಪಕ್ಷಕ್ಕೆ ಸೀಮಿತರಲ್ಲ. ಧರ್ಮವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಬಾರದು ಎಂದು ಶರಣರು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

‘500 ವರ್ಷಗಳಷ್ಟು ಹಳೆಯ ಸಿಖ್‌ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿರಬೇಕಾದರೆ, 900 ವರ್ಷಗಳಷ್ಟು ಪುರಾತನವಾದ ಬಸವಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನ ಸಿಗಬೇಕಿರುವುದು ಅತ್ಯವಶ್ಯ. ಪ್ರಸ್ತುತ ತಜ್ಞರು ನೀಡಿರುವ ವರದಿ ಕಾನೂನು ಚೌಕಟ್ಟಿನೊಳಗಿದೆ. ವರದಿ ಬಗ್ಗೆ ಅಸಮಾಧಾನವಿದ್ದರೆ ನ್ಯಾಯಾಲಯದಲ್ಲಿ ಹೋರಾಟ ನಡೆಸಬಹುದೇ ವಿನಾ ರಾಜಕೀಯಗೊಳಿಸಬಾರದು’ ಎಂದರು.

ಚುನಾವಣೆ ಬಳಿಕ ವರದಿ ಮೂಲೆ ಗುಂಪಾದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಶರಣರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಲಿಂಗಾಯತ ಉಪಜಾತಿಗಳಲ್ಲಿ ವೀರಶೈವವೂ ಒಂದು. ಬಸವಣ್ಣನ ವಿಚಾರಧಾರೆಗಳು, ಬಸವ ತತ್ವಗಳು, ಸ್ವತಂತ್ರ ಧರ್ಮದ ಹೋರಾಟದ ಉದ್ದೇಶವನ್ನು ಒಪ್ಪಿಕೊಳ್ಳುವ ಔದಾರ್ಯ ತೋರಿದರೆ ವೀರಶೈವರನ್ನೂ ಒಪ್ಪಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT