ರಾಚೇನಹಳ್ಳಿ– ದಾಸರಹಳ್ಳಿ ಕೆರೆಯಲ್ಲಿ ಹಬ್ಬದ ಸಡಗರ

7

ರಾಚೇನಹಳ್ಳಿ– ದಾಸರಹಳ್ಳಿ ಕೆರೆಯಲ್ಲಿ ಹಬ್ಬದ ಸಡಗರ

Published:
Updated:
ರಾಚೇನಹಳ್ಳಿ– ದಾಸರಹಳ್ಳಿ ಕೆರೆಯಲ್ಲಿ ಹಬ್ಬದ ಸಡಗರ

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ರಾಚೇನಹಳ್ಳಿ– ದಾಸರಹಳ್ಳಿ ಕೆರೆ ಅಂಗಳದಲ್ಲಿ ಭಾನುವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಓಟ, ಸಂಗೀತ, ನೃತ್ಯ, ಯಕ್ಷಗಾನ, ಜನಪದ ಕುಣಿತ, ಕನ್ನಡ ಬ್ಯಾಂಡ್‌ ಕಲಾವಿದರ ಪ್ರದರ್ಶನ, ಜಲಕ್ರೀಡೆಗಳು ಜನರ ಮನತಣಿಸಿದವು.

ಬಿಬಿಎಂಪಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಭಾನುವಾರ ‘ನಮ್ಮ ಬೆಂಗಳೂರು ಹಬ್ಬ’ ಹಾಗೂ ಕೆರೆ ಸಮರ್ಪಣಾ ಸಮಾರಂಭ ಜರುಗಿತು.

5 ಕಿ.ಮೀ. ಓಟಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಟೆಲಿಕಾಂ ಬಡಾವಣೆಯಿಂದ ಆರಂಭವಾದ ಓಟವು ಶ್ರೀರಾಮಪುರ ಮತ್ತು ಮಾನ್ಯತಾ ಟೆಕ್‌ಪಾರ್ಕ್‌ ಗೇಟ್‌ ಮೂಲಕ ಕೆರೆಯ ಆವರಣದಲ್ಲಿ ಕೊನೆಗೊಂಡಿತು. ಇದರಲ್ಲಿ ಸುಮಾರು 500 ಮಂದಿ ಪಾಲ್ಗೊಂಡಿದ್ದರು.

ಸೈಕ್ಲೋಥಾನ್‌ನಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 7 ಕಿ.ಮೀ. ದೂರದವರೆಗೆ ಸೈಕಲ್ ತುಳಿದು ಸಂಭ್ರಮಿಸಿದರು. 5ಕೆ ಮತ್ತು ಸೈಕ್ಲೋಥಾನ್‌ನಲ್ಲಿ ಸಚಿವ ಕೃಷ್ಣ ಬೈರೇಗೌಡ ದಂಪತಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕೆರೆಯಲ್ಲಿ ಬೋಟಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕರು ವಿಹಾರ ನಡೆಸಿ, ಕೆರೆಯ ಸೊಬಗನ್ನು ಕಣ್ತುಂಬಿಕೊಂಡರು. ಮಕ್ಕಳು ಹಾಗೂ ಪೋಷಕರು ವಾಟರ್‌ ಬಲೂನ್‌ ಆಟ ವಾಡಿದರು. ಮಕ್ಕಳು ಪೆಡಲ್‌ ಬೋಟಿಂಗ್‌ ಮಾಡಿ ಸಂಭ್ರಮಿಸಿದರು.

ಕೆರೆಯ ಬಳಿ ಲೇಸರ್‌ ಶೋ ಆಯೋಜಿಸಲಾಗಿತ್ತು. ಜಲಮೂಲದ ಸುತ್ತಲಿರುವ 18 ಅಂತಸ್ತುಗಳ 3 ಕಟ್ಟಡಗಳಿಂದ ವಿಡಿಯೊ ಚಿತ್ರೀಕರಣ ಮಾಡಿರುವುದು ವಿಶೇಷ. ಹೇರಂಭಾ-ಹೇಮಂತ ಅವಳಿ ಸಹೋದರರು ದ್ವಂದ್ವ ಕೊಳಲು ವಾದನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಿದರು.

ಕೆರೆಗಳ ಸಂರಕ್ಷಣೆ, ಪರಿಸರ, ನೀರಿನ ಮಿತ ಬಳಕೆ ಹಾಗೂ ಕಸ ವಿಂಗಡಣೆ ಕುರಿತು ಜನರಿಗೆ ಅರಿವು ಮೂಡಿಸಲಾಯಿತು.

ಜಲಮೂಲದ ಆವರಣದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಕರಕುಶಲವಸ್ತುಗಳು, ಅಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳು, ಚಿತ್ರಕಲಾಕೃತಿಗಳ ಮಳಿಗೆಗಳಿದ್ದವು. ಆಹಾರ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಪುಳಿಯೊಗರೆ, ಮೊಸರನ್ನ, ಬಿಸಿಬೇಳೆಬಾತ್, ದೋಸೆ ಎಲ್ಲರ ಗಮನ ಸೆಳೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry