ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರ ಸಹಭಾಗಿತ್ವವಿಲ್ಲದೆ ಸೊರಗಿದ ‘ನಂದಿ ಹಬ್ಬ’

Last Updated 4 ಮಾರ್ಚ್ 2018, 19:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಭಾನುವಾರ ನಂದಿ ಬೆಟ್ಟದ ತಪ್ಪಲಿನ ಕುಡುವತಿ ಬಳಿ ಹಮ್ಮಿಕೊಂಡಿದ್ದ ‘ನಂದಿಹಬ್ಬ’ ಸ್ಥಳೀಯರ ಸಹಭಾಗಿತ್ವವಿಲ್ಲದೆ ಸೊರಗಿ, ಮಧ್ಯಾಹ್ನದ ಹೊತ್ತಿಗೆ ಮುಕ್ತಾಯವಾಯಿತು.

ತರಾತುರಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸ್ಥಳೀಯವಾಗಿ ಪ್ರಚಾರದ ಕೊರತೆ ಆದ ಕಾರಣಕ್ಕೆ ಕಾರ್ಯಕ್ರಮದಲ್ಲಿ ‘ಹಬ್ಬ’ದ ವಾತಾವರಣವೇ ಕಾಣಲಿಲ್ಲ. ಖಾಸಗಿ ಸಂಸ್ಥೆಯ ಉಸ್ತುವಾರಿಯಲ್ಲಿ ನಡೆದ ‘ಕಾರ್ಪೊರೇಟ್’ ಸ್ವರೂಪ ಪಡೆದಿತ್ತು.

ಮ್ಯಾರಥಾನ್ ಮತ್ತು ಸ್ಲೈಕ್ಲಿಂ ಗ್ ಸ್ಪರ್ಧೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದಿದ್ದ ವೃತ್ತಿಪರ ಸ್ಪರ್ಧಾಳುಗಳು, ಬೆಂಗಳೂರಿನಿಂದ ವಾರಾಂತ್ಯದ ಮೋಜಿಗಾಗಿ ಬಂದಿದ್ದ ಜನರನ್ನು ಹೊರತುಪಡಿಸಿದರೆ ಸ್ಥಳೀಯ ಜನರು ಅಷ್ಟಾಗಿ ಈ ಕಾರ್ಯಕ್ರಮದತ್ತ ತಲೆ ಹಾಕಲಿಲ್ಲ.

ಕುಡುವತಿ ಗ್ರಾಮದ ಬಳಿ ತಲೆ ಎತ್ತಿದ್ದ ‘ರೈತರ ಮಾರುಕಟ್ಟೆ’ಯಲ್ಲಿ ರೈತರೇ ಇರಲಿಲ್ಲ. ರೇಷ್ಮೆ, ತೋಟಗಾರಿಗೆ ಇಲಾಖೆಗಳ ಮಳಿಗೆ ಹೊರತುಪಡಿಸಿದಂತೆ ರೈತರು ತೆರೆದ ಮಳಿಗೆಗಳು ಗೋಚರಿಸಲಿಲ್ಲ.

ಕುಡುವತಿ ಸಮೀಪದ ‘ವ್ಯಾಲಿ ಆಫ್ ದಿ ವಿಂಡ್ ಫೇಸ್-2’ ಬಳಿ ಬೆಳಿಗ್ಗೆ 7ರ ಸುಮಾರಿಗೆ ಶಾಸಕ ಡಾ.ಕೆ.ಸುಧಾಕರ್ ಮ್ಯಾರಥಾನ್‌ಗೆ ಚಾಲನೆ ನೀಡಿದರು. ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 8ಕ್ಕೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 10ರ ಸುಮಾರಿಗೆ ಕುಡುವತಿ ಬಳಿ ಆಯೋಜಿಸಿದ್ದ ಸ್ಲೈಕ್ಲಿಂಗ್ ಸ್ಪರ್ಧೆಗೆ ಸಂಸದ ವೀರಪ್ಪ ಮೊಯಿಲಿ ಚಾಲನೆ ನೀಡಿದರು.

ಜಿಲ್ಲಾಡಳಿತ ₹40 ಲಕ್ಷ ವೆಚ್ಚ ಮಾಡಿ ರೂಪಿಸಿದ್ದ ಕಾರ್ಯಕ್ರಮದಂತೆ ದಿನವೀಡಿ ‘ನಂದಿ ಹಬ್ಬ’ ನಡೆಯಬೇಕಿತ್ತು. ಆದರೆ ನಿರೀಕ್ಷೆ ಹುಸಿಯಾಗುತ್ತಿದ್ದಂತೆ ಕಾರ್ಯಕ್ರಮವನ್ನು ತರಾತುರಿಯಲ್ಲಿ ಅರ್ಧ ದಿನಕ್ಕೆ ಸೀಮಿತ ಮಾಡಲಾಯಿತು. ಸ್ಲೈಕ್ಲಿಂಗ್ ಸ್ಪರ್ಧೆಗೆ ಚಾಲನೆ ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತ ತಲೆ ಹಾಕಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT