ಯಾತ್ರೆಗೆ ಅಭ್ಯಂತರವಿಲ್ಲ: ಶಾಂತಿ ಕಾಪಾಡಲಿ

ಗುರುವಾರ , ಮಾರ್ಚ್ 21, 2019
32 °C

ಯಾತ್ರೆಗೆ ಅಭ್ಯಂತರವಿಲ್ಲ: ಶಾಂತಿ ಕಾಪಾಡಲಿ

Published:
Updated:
ಯಾತ್ರೆಗೆ ಅಭ್ಯಂತರವಿಲ್ಲ: ಶಾಂತಿ ಕಾಪಾಡಲಿ

ಮಂಗಳೂರು: ಬಿಜೆಪಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಯಾತ್ರೆಯ ಹೆಸರಿನಲ್ಲಿ ಸಾಮರಸ್ಯ ಕೆಡಿಸುವುದು ಸರಿಯಲ್ಲ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾತ್ರೆಗಳು, ಸಮಾರಂಭಗಳು ಹೆಚ್ಚಾಗುತ್ತವೆ. ಇದೊಂದು ರೀತಿಯಲ್ಲಿ ದಸರಾ ಇದ್ದಂತೆ ಎಂದರು.

ಬಿಜೆಪಿಯವರಿಗೆ ಹರೀಶ್‌ ಪೂಜಾರಿ, ವಿನಾಯಕ ಬಾಳಿಗ, ಬಶೀರ್‌ ನೆನಪಾಗುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಇವರು ಜೀವ ಕಳೆದುಕೊಂಡಿಲ್ಲವೇ? ಅದನ್ನು ಬಿಟ್ಟು ಕೇವಲ ಹಿಂದೂಗಳ ಹತ್ಯೆಯಾಗಿದೆ ಎಂದು ಯಾತ್ರೆ ನಡೆಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಚುನಾವಣಾ ಯಾತ್ರೆ ಎಂದು ಲೇವಡಿ ಮಾಡಿದರು.

ಪುರಸಭೆಯಾಗಿ ಸೋಮೇಶ್ವರ ಮೇಲ್ದರ್ಜೆಗೆ: ತಾಲ್ಲೂಕಿನ ಸೋಮೇಶ್ವರ ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಖಾದರ್ ತಿಳಿಸಿದರು.

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಸೋಮೇಶ್ವರ ಪುರಸಭೆಗೂ ಚುನಾವಣೆ ನಡೆಯಲಿದೆ ಎಂದರು.

ಮುಖ್ಯಮಂತ್ರಿಗಳು ಇತ್ತೀಚಿಗೆ ಬಜೆಟ್‌ನಲ್ಲಿ ಘೋಷಿಸಿದ ಹರೇಕಳ- ಅಡ್ಯಾರು ಮಧ್ಯೆ ಕಿರು ಅಣೆಕಟ್ಟು ಸುಮಾರು ₹176 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ. ಇದರಿಂದ ಸುಮಾರು 6 ಟಿಎಂಸಿ ನೀರು ಸಂಗ್ರಹವಾಗಲಿದ್ದು, ಅಣೆಕಟ್ಟೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಅದೇ ರೀತಿ ₹32 ಕೋಟಿ ವೆಚ್ಚದಲ್ಲಿ ಮಂಗಳೂರು ಹಳೇ ಬಂದರು, ಉಳ್ಳಾಲ ಮತ್ತು ಬೆಂಗರೆ ವ್ಯಾಪ್ತಿಯಲ್ಲಿ ನೇತ್ರಾವತಿ ಅಳಿವೆ ಹೂಳೆತ್ತಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಸಿಆರ್‌ಜೆಡ್‌ಯೇತರ ಪ್ರದೇಶದಲ್ಲಿ ಮರಳುಗಾರಿಕೆಗೆ ನಿಯಮಾವಳಿಗಳಲ್ಲಿ ಸರಳೀಕರಣ ಮಾಡಲಾಗಿದೆ. 5 ವರ್ಷ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಯಾರೊಬ್ಬರೂ, ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಲಾಗುವುದು ಎಂದು ಹೇಳಿದರು.

**

ದೆಹಲಿಯಲ್ಲಿ ಅಬ್ಬಕ್ಕ ಉತ್ಸವ 11ರಿಂದ

ಮಂಗಳೂರು: ರಾಜ್ಯ ಸರ್ಕಾರ, ಜಿಲ್ಲಾಡಳಿತ, ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ದೆಹಲಿ ಕರ್ನಾಟಕ ಸಂಘಗಳ ಆಶ್ರಯದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ದೆಹಲಿಯಲ್ಲಿ ಇದೇ 11 ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ರಾಜ್ಯ ಸರ್ಕಾರ ಈಗಾಗಲೇ ₹12 ಲಕ್ಷ ಅನುದಾನ ನೀಡಿದ್ದು, ಹೆಚ್ಚಿನ ಅನುದಾನ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಬೆಳ್ಳಾರೆ ಮಾತನಾಡಿ, ಈ ಸಂದರ್ಭದಲ್ಲಿ ಕನ್ನಡ, ತುಳು, ಹಿಂದಿ, ಇಂಗ್ಲಿಷ್, ಮಲೆಯಾಳಿ, ತಮಿಳು ಹಾಗೂ ತೆಲಗು ಭಾಷೆಗಳಲ್ಲಿ ರಾಣಿ ಅಬ್ಬಕ್ಕನ ಕುರಿತು ವಿಚಾರಗೋಷ್ಠಿ ನಡೆಯಲಿವೆ. 18 ರಂದು ದಕ್ಷಿಣ ಕನ್ನಡ ಜಿಲ್ಲೆಯ ಹುಲಿವೇಷಧಾರಿಗಳೊಂದಿಗೆ ಇಂಡಿಯಾ ಗೇಟ್‌ನ ಅಮರಜ್ಯೋತಿ ಸ್ಮಾರಕಕ್ಕೆ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry