ಬಹುಪಕ್ಷೀಯ ಪ್ರಜಾತಂತ್ರದಿಂದ ಅಸಹ್ಯ ಸ್ಪರ್ಧೆ: ಕ್ಸಿ ಜಿನ್‌ಪಿಂಗ್‌

ಬುಧವಾರ, ಮಾರ್ಚ್ 27, 2019
22 °C

ಬಹುಪಕ್ಷೀಯ ಪ್ರಜಾತಂತ್ರದಿಂದ ಅಸಹ್ಯ ಸ್ಪರ್ಧೆ: ಕ್ಸಿ ಜಿನ್‌ಪಿಂಗ್‌

Published:
Updated:
ಬಹುಪಕ್ಷೀಯ ಪ್ರಜಾತಂತ್ರದಿಂದ ಅಸಹ್ಯ ಸ್ಪರ್ಧೆ: ಕ್ಸಿ ಜಿನ್‌ಪಿಂಗ್‌

ಬೀಜಿಂಗ್‌: ತಮ್ಮ ಅಧ್ಯಕ್ಷೀಯ ಅವಧಿಯನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಿದ್ದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಂತಸ ವ್ಯಕ್ತಪಡಿಸಿದ್ದು, ಏಕಪಕ್ಷದ ಆಡಳಿತದಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

‘ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಬಹುಪಕ್ಷವಿದ್ದರೆ, ಅಸಹ್ಯ ಸ್ಪರ್ಧೆಗೆ ಎಡೆಮಾಡಿಕೊಡುತ್ತದೆ. ಏಕಪಕ್ಷೀಯ ವ್ಯವಸ್ಥೆಯಲ್ಲಿ ಜನರ ಆಶೋತ್ತರಗಳನ್ನು ಯಾವುದೇ ಅಡೆತಡೆಯಿಲ್ಲದೇ ಈಡೇರಿಸಲು ಸಾಧ್ಯ’ ಎಂದು ಕ್ಸಿ ಹೇಳಿರುವುದಾಗಿ ಕ್ಸಿನ್‌ಹುವಾ  ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ,  ಜಿನ್‌ಪಿಂಗ್‌ ಅವರಿಗೆ ಜೀವಿತಾವಧಿ ತನಕ ಅಧಿಕಾರ ಹೊಂದಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಸೋಮವಾರ ಇಲ್ಲಿ ನಡೆದ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ ಸಭೆ ಸರ್ವಾನುಮತದಿಂದ ತೀರ್ಮಾನಿಸಿದೆ.

ತಿಯಾನ್ಮನ್‌ ವೃತ್ತದಲ್ಲಿರುವ ‘ಗ್ರೇಟ್‌ ಹಾಲ್ ಆಫ್‌ ಪೀಪಲ್‌’ನಲ್ಲಿ ನಡೆದ ವಾರ್ಷಿಕ ಸಭೆ ಆರಂಭಗೊಂಡಿದ್ದು ಚೀನಾದ ಶಾಸನಸಭೆಯ 3 ಸಾವಿರಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಎರಡು ವಾರಗಳ ಕಾಲ ಸಭೆ ಮುಂದುವರಿಯಲಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು ಎರಡು ಅವಧಿಗೆ ಸೀಮಿತಗೊಳಿಸುವ ಕಾನೂನನ್ನು ತೆಗೆದುಹಾಕುವಂತೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾ (ಸಿಪಿಸಿ)  ಪ್ರಸ್ತಾವ ಸಲ್ಲಿಸಿತ್ತು. ಸರ್ವಾಧಿಕಾರ ತಲೆದೋರದಂತೆ ತಡೆಯಲು ಪಕ್ಷದ ಸಂಸ್ಥಾಪ‍ಕ ಮಾವೊ ಝೆಡೊಂಗ್‌ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು ಎರಡು ಅವಧಿಗೆ ಸೀಮಿತಗೊಳಿಸಿದ್ದರು. ಕಳೆದ ಎರಡು ದಶಕಗಳಿಂದ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿತ್ತು. ಆದರೆ ಕ್ಸಿ ವಿಚಾರದಲ್ಲಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ತೀರ್ಮಾನಿಸಲಾಗಿದೆ.

ಜಾಗತಿಕ ಚರ್ಚೆ: ಅಧ್ಯಕ್ಷರ ಅವಧಿಗೆ ವಿಧಿಸಲಾಗಿದ್ದ ಮಿತಿಯನ್ನು ತೆಗೆದುಹಾಕಿರುವ ಚೀನಾದ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚೀನಾವು ಒಬ್ಬ ವ್ಯಕ್ತಿಗೆ ಸಂಪೂರ್ಣ ಅಧಿಕಾರ ನೀಡಲು ಮುಂದಾಗುತ್ತಿರುವ ನಿರ್ಧಾರವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ.

ಕ್ಸಿ ಅವರು ಅನಿರ್ದಿಷ್ಟಾವಧಿಗೆ ಅಧ್ಯಕ್ಷರಾಗಿ ಮುಂದುವರಿದಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಶಂಸಿಸಿದ್ದಾರೆ. ‘ಕ್ಸಿ ಅವರು ಅಜೀವಪರ್ಯಂತ ಅಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ. ಅವರೊಬ್ಬ ಮಹಾನ್‌ವ್ಯಕ್ತಿ’ ಎಂದು ಟ್ರಂಪ್‌ ಹೇಳಿರುವುದಾಗಿ ಸಿಎನ್‌ಎನ್‌ ವರದಿ ಪ್ರಸಾರ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry