ಶಾಸಕಿಯರ ಪೈಕಿ ಉಮಾಶ್ರೀ ಮುಂಚೂಣಿ

7

ಶಾಸಕಿಯರ ಪೈಕಿ ಉಮಾಶ್ರೀ ಮುಂಚೂಣಿ

Published:
Updated:
ಶಾಸಕಿಯರ ಪೈಕಿ ಉಮಾಶ್ರೀ ಮುಂಚೂಣಿ

ಬೆಂಗಳೂರು: ವಿಧಾನಸಭಾ ಚುನಾವಣೆಯ ಕಾವೇರುತ್ತಿದ್ದು ‘ಅಭಿವೃದ್ಧಿ’ ವಿಷಯ ರಾಜಕೀಯ ಅಂಗಳದ ಬಹು ಚರ್ಚಿತ ಸಂಗತಿಯಾಗಿದೆ. ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಚುನಾಯಿತ ಪ್ರತಿನಿಧಿಗಳು ಏನು ಮಾಡಿದ್ದಾರೆ, ಮತದಾರರ ಕೈಗೆ ಸಿಕ್ಕಿದ್ದಾರೆಯೇ ಎಂಬಿತ್ಯಾದಿ ವಿಷಯಗಳನ್ನು ಮುಂದಿಟ್ಟು ನಡೆಸಿದ ಸಮೀಕ್ಷೆಯ ಎರಡನೇ ಕಂತು ಇದು. ಮತದಾರರಿಂದಲೇ ಜನಪ್ರತಿನಿಧಿಯ ‘ಸಾಮರ್ಥ್ಯ’ವನ್ನು ಅಳೆದು ತೋರಿಸುವ ಪ್ರಯತ್ನವನ್ನು ‘ಪ್ರಜಾವಾಣಿ’ ಕೈಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ, ಪ್ರಜಾತಂತ್ರದ ಉನ್ನತೀಕರಣಕ್ಕಾಗಿ ತೊಡಗಿಸಿಕೊಂಡಿರುವ ‘ದಕ್ಷ್‌’ ಸಂಸ್ಥೆ ನಮ್ಮ ಜತೆ ಕೈಜೋಡಿಸಿದೆ.

ಕರ್ನಾಟಕ ವಿಧಾನಸಭೆ ಪ್ರತಿನಿಧಿಸುತ್ತಿರುವ ಏಳು ಶಾಸಕಿಯರ ಸಾಧನೆಗೆ ಕನ್ನಡಿ ಹಿಡಿಯುವ ಯತ್ನ ಇಂದಿನ ಸಂಚಿಕೆಯಲ್ಲಿದೆ. ನಾಲ್ಕೈದು ದಶಕಗಳಿಂದ ರಾಜಕಾರಣದಲ್ಲಿ ತೊಡಗಿಕೊಂಡಿರುವ ಕುಟುಂಬಕ್ಕೆ ಸೇರಿದ ಜನಪ್ರತಿನಿಧಿಗಳು, ಹಾಲಿ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಕ್ಕಳು 14ನೇ ವಿಧಾನಸಭೆಯ ಅವಧಿಯಲ್ಲಿ ಸಾಧಿಸಿದ್ದೇನು? ಅವರ ನಡಾವಳಿಗಳಲ್ಲಿ ಜನರು ಕಂಡ ಕೊರತೆಗಳೇನು ಎಂಬುದರ ವಿವರ ಇಲ್ಲಿದೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಎಷ್ಟು ಆದ್ಯತೆ ಕೊಟ್ಟಿದ್ದಾರೆ ಎಂಬುದನ್ನು ಸ್ಥೂಲವಾಗಿ ತೋರಿಸುವ ಅಂಕಪಟ್ಟಿ ಹಾಗೂ ವಿಶ್ಲೇಷಣೆ ಇಂದಿನ ಆವೃತ್ತಿಯ ವಿಶೇಷ. ಎಲ್ಲ ವಿಧಾನಸಭಾ ಕ್ಷೇತ್ರಗಳ ಪೂರ್ಣ ಮಾಹಿತಿ ‘ಪ್ರಜಾವಾಣಿ’ ಪುಟಗಳಲ್ಲಿ  ಅನಾವರಣಗೊಳ್ಳಲಿದೆ.

ಉಮಾಶ್ರೀ ಅಗ್ರ ಶ್ರೇಯಾಂಕ

ವಿಧಾನಸಭೆಯನ್ನು ಪ್ರತಿನಿಧಿಸುವ ಏಳು ಮಹಿಳೆಯರಲ್ಲಿ ಎಲ್ಲರೂ ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿದ್ದಾರೆ.

ಅವರ ಪೈಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ತೇರದಾಳ ಕ್ಷೇತ್ರದ ಶಾಸಕಿ ಉಮಾಶ್ರೀ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅಲ್ಲದೆ, 224 ಶಾಸಕರ ಪೈಕಿ ಮೂರನೇ ಸ್ಥಾನವನ್ನು ಗಳಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಕುಮಟಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಶಾರದಾ ಮೋಹನ ಶೆಟ್ಟಿ ಕಡಿಮೆ ಅಂಕ ಪಡೆದು, ಪಟ್ಟಿಯ ಕೊನೆಯ ಸಾಲಿನಲ್ಲಿದ್ದಾರೆ.

ಸಣ್ಣ ಕೈಗಾರಿಕೆ ಸಚಿವ ಎಂ.ಸಿ. ಮೋಹನಕುಮಾರಿ 7.77 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದು ವರ್ಷದ ಹಿಂದಷ್ಟೇ ಇವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅದಕ್ಕೆ ಹಿಂದಿನ ನಾಲ್ಕು ವರ್ಷ ಅವರ ಪತಿ ದಿವಂಗತ ಮಹದೇವ ಪ್ರಸಾದ್ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.

‘ದಕ್ಷ್’ ನಡೆಸಿದ ಸಮೀಕ್ಷೆಯಲ್ಲಿ 28 ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಉದ್ಯೋಗ ಮತ್ತು ತರಬೇತಿ, ಮೂಲಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಆದ್ಯತೆ, ಆಸ್ಪತ್ರೆ ಸೌಕರ್ಯ, ಶಾಸಕರ ವಿಶ್ವಾಸಾರ್ಹತೆ, ಲಭ್ಯತೆ ಮತ್ತಿತರ ಸಂಗತಿಗಳ ಕುರಿತು ಪ್ರಸ್ತಾಪಿಸಲಾಗಿತ್ತು. ಅವೆಲ್ಲವುಗಳನ್ನೂ ಕೂಡಿಸಿ, ಸರಾಸರಿ ಅಂಕಗಳನ್ನು ನೀಡಲಾಗಿದೆ.

ಮೊದಲ ಶ್ರೇಣಿಯಲ್ಲಿರುವ ಉಮಾಶ್ರೀ ಈ ಎಲ್ಲ ಕ್ಷೇತ್ರಗಳಲ್ಲಿ ಸರಾಸರಿ 7ರಿಂದ 9 ಅಂಕ ಪಡೆದಿದ್ದಾರೆ. ಸಮೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ಶಾರದಾ ಶೆಟ್ಟಿ, ಪ್ರಮುಖ ಕ್ಷೇತ್ರಗಳಲ್ಲಿ 6.4ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಆದರೆ ಉಳಿದ 23 ಕ್ಷೇತ್ರಗಳಲ್ಲಿ 3ರಿಂದ 4 ಅಂಕ ಗಿಟ್ಟಿಸಿದ್ದಾರೆ. ಹೀಗಾಗಿ ಅವರು ಕೊನೆಯ ಸ್ಥಾನಕ್ಕೆ ಹೋಗಿದ್ದಾರೆ.

ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಕೆಜಿಎಫ್ ಕ್ಷೇತ್ರದ ಬಿಜೆಪಿಯ ವೈ.ರಾಮಕ್ಕ ಎರಡನೇ ಸ್ಥಾನದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಅವರ ಸಾಧನೆ 8.3 ಅಂಕವನ್ನು ದಾಟಿರುವುದು ವಿಶೇಷ.

ಮಹಿಳೆಯರ ಪೈಕಿ ಶಾಸಕಿಯಾಗಿ ಹೊಂದಿರುವ ಅನುಭವದಲ್ಲಿ ಹಿರೀಕರಾಗಿರುವ ಶಕುಂತಳಾ ಶೆಟ್ಟಿ ಮೂರನೇ ಸ್ಥಾನದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರಾಸರಿ 7.9 ಅಂಕ ಪಡೆದಿದ್ದರೂ ನಗರ ಪ್ರದೇಶದಲ್ಲಿ ಇವರ ಅಂಕ ಗಳಿಕೆ ಪ್ರಮಾಣ 9 ದಾಟಿದೆ. ಆದರೆ, ಸರಾಸರಿ ಲೆಕ್ಕದಲ್ಲಿ ಕಡಿಮೆಯಾಗಿದೆ.

ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ 7.63 ಅಂಕ ಪಡೆದಿದ್ದಾರೆ. ಆದ್ಯತಾ ಕ್ಷೇತ್ರಗಳಲ್ಲಿ ಸರಾಸರಿ 8 ಅಂಕ ಪಡೆದಿದ್ದಾರೆ. ಆದರೆ, ಕೆಲವು ವಿಷಯಗಳಲ್ಲಿ 6ಕ್ಕೆ ಇಳಿದಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಶಾಸಕಿ ಶಾರದಾ ಪೂರ್ಯಾನಾಯ್ಕ ಬಿಜೆಪಿಯ ಶಶಿಕಲಾ ಅವರನ್ನು ಒಟ್ಟಾರೆ ಅಂಕಗಳಲ್ಲಿ ಹಿಂದಿಕ್ಕಿದ್ದಾರೆ. ಆದರೆ, 22 ಕ್ಷೇತ್ರಗಳಲ್ಲಿ ಅವರ ಸರಾಸರಿ ಅಂಕ 6.9ರಷ್ಟಿದೆ.

ಮಹಿಳಾ ಸುರಕ್ಷೆ

ಮಹಿಳಾ ಸುರಕ್ಷತೆಗೆ ಶಾಸಕರು ಎಷ್ಟು ಆದ್ಯತೆ ನೀಡಿದ್ದಾರೆ ಎಂಬ ಪ್ರಶ್ನೆಯನ್ನೂ ಸಮೀಕ್ಷೆಯಲ್ಲಿ ಕೇಳಲಾಗಿತ್ತು. ನಗರ ಪ್ರದೇಶದ ಮತದಾರರು ಉಮಾಶ್ರೀಗೆ 10 ಅಂಕ ಕೊಟ್ಟಿದ್ದರೆ, ಗ್ರಾಮೀಣ ಮತದಾರರು 7.9 ಅಂಕ ಕೊಟ್ಟಿದ್ದಾರೆ. ಮೋಹನ ಕುಮಾರಿ ಅವರಿಗೆ 9.6 ಅಂಕ ಸಿಕ್ಕಿದೆ. ಬಹುತೇಕರು ಸರಾಸರಿ 7.8ರಿಂದ 8.3 ಅಂಕ ಪಡೆದಿದ್ದಾರೆ. ಆದರೆ, ಶಶಿಕಲಾ ಜೊಲ್ಲೆ ಮಾತ್ರ ಈ ವಿಷಯದಲ್ಲಿ ಅತ್ಯಂತ ಕಡಿಮೆ ಎಂದರೆ 3.8 ಅಂಕ ಗಳಿಸಿದ್ದಾರೆ.

ಮಹಿಳೆಯರು ಶೌಚಾಲಯದ ವಿಷಯದಲ್ಲಿ ಅನುಭವಿಸುವಷ್ಟು ಯಾತನೆಯನ್ನು ಬೇರೆ ಯಾರೂ ಅನುಭವಿಸಲಾರರು. ಈ ವಿಷಯದಲ್ಲಿ ಜನಪ್ರತಿನಿಧಿಗಳ ಆದ್ಯತೆ ಎಷ್ಟಿದೆ ಎಂಬ ಪ್ರಶ್ನೆಗೆ ಉಮಾಶ್ರೀ ಹಾಗೂ ಶಾರದಾ ಪೂರ್ಯಾನಾಯ್ಕ 10 ಅಂಕ ಗಿಟ್ಟಿಸಿದ್ದಾರೆ. ಉಳಿದವರು 7.9 ಅಂಕ ಪಡೆದಿದ್ದಾರೆ. ಆರೋಗ್ಯ ಸೇವೆ ವಿಷಯದಲ್ಲಿ ಶಾರದಾ ಶೆಟ್ಟಿ ಬಿಟ್ಟರೆ ಉಳಿದವರು ಸರಾಸರಿ 7.5 ಅಂಕ ಗಳಿಸಿದ್ದಾರೆ.

‘ದೊಡ್ಡ’ವರೆಲ್ಲ ಜಾಣರೇ?

ಬೆಂಗಳೂರು: ರಾಜಕಾರಣವನ್ನೇ ಉಟ್ಟುಂಡು ಬೆಳೆದಿರುವ ಕುಟುಂಬಕ್ಕೆ ಸೇರಿದ ಶಾಸಕರು ತಮ್ಮ ಕ್ಷೇತ್ರದ ಮತದಾರರ ಅಭಿಲಾಶೆ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದಾರೆಯೇ, ಮಾಡುತ್ತಿದ್ದಾರೆಯೇ?

ಸಮೀಕ್ಷೆಯಲ್ಲಿ ಇಂತಹದೊಂದು ಪ್ರಶ್ನೆ ಇರಲಿಲ್ಲವಾದರೂ ದತ್ತಾಂಶ ಆಧರಿಸಿ ವಿಶ್ಲೇಷಣೆಗೆ ಗುರಿಪಡಿಸಿದಾಗ ‘ದೊಡ್ಡ’ವರ ಮಕ್ಕಳೆಲ್ಲ ದೊಡ್ಡ ಮಟ್ಟದ ಸಾಧನೆ ಮಾಡದೇ ಇರುವುದು ಪತ್ತೆಯಾಗಿದೆ.

ಎರಡು ತಲೆಮಾರುಗಳಿಂದ ರಾಜಕಾರಣದಲ್ಲಿರುವ ಕುಟುಂಬಕ್ಕೆ ಸೇರಿದವರು, ಮುಖ್ಯಮಂತ್ರಿಯಾಗಿದ್ದವರ ಮಕ್ಕಳು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಎಷ್ಟು ಅಂಕ ಪಡೆದಿದ್ದಾರೆ ಎಂದು ಹುಡುಕಿದರೆ ಅಚ್ಚರಿಯ ಫಲಿತಾಂಶ ಕಾಣಿಸುತ್ತದೆ. ಮಾಜಿ ಮುಖ್ಯಮಂತ್ರಿಗಳ ಪುತ್ರರ ಪೈಕಿ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಮಾತ್ರ 10 ಅಂಕಗಳಿಗೆ 7.67 ಅಂಕ ಪಡೆದಿದ್ದಾರೆ.

‘ನವ ಕರ್ನಾಟಕ ನಿರ್ಮಾಣ’ದ ಕನಸು ಬಿತ್ತುತ್ತಾ ಹೋಗುತ್ತಿರುವ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದವರು. ಅವರ ಪುತ್ರ ಬಿ.ವೈ. ರಾಘವೇಂದ್ರ 2014ರಿಂದ ಶಿಕಾರಿಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅವರು ಪಡೆದಿರುವ ಅಂಕ 7ನ್ನೂ ದಾಟಿಲ್ಲ. ಈ ಕ್ಷೇತ್ರಕ್ಕೆ ಅಂಟಿಕೊಂಡಿರುವ ಸೊರಬ ಕ್ಷೇತ್ರ ಪ್ರತಿನಿಧಿಸುವ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರರೂ ಆದ ಮಧು ಕೂಡ ಅದೇ ಆಸುಪಾಸಿನ ಸಾಧನೆ ಮಾಡಿದ್ದಾರೆ. ಆದರೆ, ರಾಘವೇಂದ್ರಗಿಂತ ಮುಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್‌ ಪುತ್ರ, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ದಿನೇಶ್ ಗುಂಡೂರಾವ್ ಏಳರ ಸಮೀಪದಲ್ಲಿದ್ದಾರೆ. ದಶಕಗಳ ಕಾಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ, ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಅಜಯ್‌ ಸಿಂಗ್, ಈ ಯಾದಿಯಲ್ಲಿ ಅತ್ಯಂತ ಕಡಿಮೆ ಅಂಕ ಪಡೆದಿದ್ದಾರೆ.

ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ದೇವೇಗೌಡರ ಮಗ ಎಚ್.ಡಿ. ರೇವಣ್ಣ ತಮ್ಮ ಕ್ಷೇತ್ರದಿಂದ ಎಂದೂ ಆಚೆಗೆ ನೋಡದ, ಹಾಸನ ಬಿಟ್ಟು ಬೇರೆ ವಿಷಯದಲ್ಲಿ ತಲೆಯನ್ನೇ ಕೆಡಿಸಿಕೊಳ್ಳದವರು. ಒಂದು ದಶಕಗಳ ಕಾಲ ಸಚಿವರೂ ಆಗಿದ್ದವರು. ಹಾಗಿದ್ದರೂ ಅವರು ಪಡೆದ ಅಂಕ 7ರ ಗಡಿಯನ್ನು ತಲುಪಿಲ್ಲ.

ಎಚ್.ಕೆ.ಪಾಟೀಲರೇ ಮುಂದು:

ಹುಲಕೋಟಿ ರಾಜಕಾರಣ ಕುಟುಂಬದ ಕುಡಿಯಾಗಿರುವ, ಹಾಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಾತ್ರ ‘ದೊಡ್ಡ’ವರ ಮಕ್ಕಳ ಸಾಲಿನಲ್ಲಿರುವ ಹಿರೀಕರು. ಸಮೀಕ್ಷೆಯಲ್ಲಿ 10ಕ್ಕೆ ಅವರು ಪಡೆದಿರುವ ಅಂಕ ಕೂಡ 8.19.

ಸುದೀರ್ಘ ಅವಧಿಯಿಂದ ರಾಜಕಾರಣದಲ್ಲಿರುವ, ಸದ್ಯ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಪ್ರಸ್ತುತ ಪ್ರವಾಸೋದ್ಯಮ ಸಚಿವ. ಕ್ಷೇತ್ರದ ಮತದಾರರು ಇವರಿಗೆ 8.01 ಅಂಕ ನೀಡಿದ್ದಾರೆ.

ಅದೇ ಮಾದರಿಯ ಮತ್ತೊಂದು ಕುಟುಂಬವಾದ ಬಿ.ಎಂ. ಪಾಟೀಲ ಪರಂಪರೆಗೆ ಸೇರಿರುವ, ಹಾಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ನೀರಾವರಿ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಸ್ವಕ್ಷೇತ್ರ ಬಬಲೇಶ್ವರಕ್ಕೆ ಸಾಕಷ್ಟು ಅನುದಾನವನ್ನೂ ನೀಡಿದ್ದಾರೆ. ಆದರೆ, ಮತದಾರರು ಮಾತ್ರ ಇವರಿಗೆ ಕೊಟ್ಟಿರುವ ಅಂಕ 6.16.

ದಶಕಗಳಿಂದ ಕಾಂಗ್ರೆಸ್‌ ಅನ್ನು ಪರೋಕ್ಷವಾಗಿ ‘ಆಳಿದ’ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್‌. ಮಲ್ಲಿಕಾರ್ಜುನ ಈಗ ತೋಟಗಾರಿಕೆ ಸಚಿವ. ಎರಡನೇ ಅವಧಿಯಲ್ಲಿ ಅವರು ಸಚಿವರಾಗಿದ್ದಾರೆ. ಕ್ಷೇತ್ರದ ವಿಷಯದಲ್ಲಿ ಅವರದ್ದು ನಿರಾಸಕ್ತಿ ಎಂಬುದನ್ನು ಮತದಾರರು ತೋರಿಸಿದ್ದಾರೆ. ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರಾದರೂ ‍ಪಡೆದ ಅಂಕ ಏಳನ್ನೂ ತಲುಪಿಲ್ಲ.

ದಕ್ಷ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಬೈರೇಗೌಡರ ಪುತ್ರ ಕೃಷ್ಣ ಬೈರೇಗೌಡ ಈಗ ಕೃಷಿ ಸಚಿವ. ಬೆಂಗಳೂರಿನ ಬ್ಯಾಟರಾಯನಪುರ ಶಾಸಕರಾಗಿರುವ ಇವರು ಪಡೆದಿರುವ ಅಂಕ ಆರನ್ನೂ ಮುಟ್ಟಿಲ್ಲ.

ಮುತ್ಸದ್ದಿ ರಾಜಕಾರಣಿ ಎಂದೇ ಹೆಸರಾಗಿದ್ದ ಎಂ.ಪಿ. ಪ್ರಕಾಶ್ ಹಾಗೂ ಅಜೀಜ್ ಸೇಠ್ ರಾಜ್ಯ ರಾಜಕಾರಣದಲ್ಲಿ ಮರೆಯಲಾಗದ ಹೆಸರು. ಸೇಠ್ ಪುತ್ರ ತನ್ವೀರ್ ಸೇಠ್ ಈಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ. ಮೈಸೂರಿನ ನರಸಿಂಹರಾಜ ಕ್ಷೇತ್ರ ಪ್ರತಿನಿಧಿಸುವ ಸೇಠ್‌ 7.09 ಅಂಕ ಪಡೆದಿದ್ದಾರೆ. ಪ್ರಕಾಶ್ ಅವರ ಪುತ್ರ, ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ತಮ್ಮ ಸರೀಕ ರಾಜಕಾರಣಿಗಳ ಪೈಕಿ ಅತ್ಯಂತ ಕಡಿಮೆ ಎಂದರೆ 5.02 ಅಂಕ ಗಿಟ್ಟಿಸಿದ್ದಾರೆ.

ಅತ್ಯಂತ ಕಿರಿಯ ಶಾಸಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಹೊಂದಿ, ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದವರು ಗೋವಿಂದರಾಜ ನಗರ ಕ್ಷೇತ್ರದ ಪ್ರಿಯಕೃಷ್ಣ. ಇವರ ತಂದೆ ಎಂ. ಕೃಷ್ಣಪ್ಪ ಸುದೀರ್ಘ ಅವಧಿಯಿಂದ ರಾಜಕಾರಣದಲ್ಲಿದ್ದು, ಸದ್ಯ ವಸತಿ ಸಚಿವ. ಕಿರಿತನಕ್ಕೆ ತಕ್ಕಂತೆ ಹೆಚ್ಚು ಉತ್ಸಾಹದಿಂದ ಅವರು ಕೆಲಸ ಮಾಡುವ ನಿರೀಕ್ಷೆಯಿತ್ತು. ಆದರೆ, ಮತದಾರರು ಇವರಿಗೆ ನೀಡಿರುವ ಅಂಕ 5.29. ಕಡಿಮೆ ಅಂಕ ಪಟ್ಟಿ ಪಡೆದಿರುವವರ ಪೈಕಿ ಇವರೂ ಒಬ್ಬರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry