ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ರೈಲು ರದ್ದು

7

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ರೈಲು ರದ್ದು

Published:
Updated:
ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ರೈಲು ರದ್ದು

ನವದೆಹಲಿ: ರೈಲ್ವೆ ಇಲಾಖೆಯ ಆಂತರಿಕ ಸಮಿತಿಯೊಂದು ನೀಡಿದ ಶಿಫಾರಸು ಜಾರಿಗೆ ಬಂದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ರೈಲುಗಳು ರದ್ದಾಗಲಿವೆ ಮತ್ತು ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಕಡಿತವಾಗಲಿದೆ.

ರೈಲುಗಳು ಸಮಯಕ್ಕೆ ಸರಿಯಾಗಿ ಓಡುವಂತೆ ಮಾಡುವುದಕ್ಕೆ ಸಂಬಂಧಿಸಿ ಆಂತರಿಕ ಸಮಿತಿಯು ವರದಿ ಸಿದ್ಧಪಡಿಸಿದ್ದು ಅದು ರೈಲ್ವೆ ಮಂಡಳಿಗೆ ಸಲ್ಲಿಕೆಯೂ ಆಗಿದೆ. ರೈಲ್ವೆ ವಲಯಗಳ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕೆ ಹಲವು ಶಿಫಾರಸುಗಳು ವರದಿಯಲ್ಲಿ ಇವೆ.

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಅಂತಹ ರೈಲುಗಳನ್ನು ರದ್ದು ಮಾಡಬೇಕು. ಲಭ್ಯ ಇರುವ ಇತರ ರೈಲುಗಳಿಗೆ ಈ ಪ್ರಯಾಣಿಕರನ್ನು ಹೊಂದಾಣಿಕೆ ಮಾಡಬೇಕು ಎಂಬುದು ವರದಿಯಲ್ಲಿರುವ ಪ್ರಮುಖ ಶಿಫಾರಸುಗಳಲ್ಲಿ ಒಂದು.

ಯಾವುದೇ ನಿಲ್ದಾಣದಲ್ಲಿ ರೈಲು ನಿಲ್ಲುವುದಕ್ಕೆ ಕನಿಷ್ಠ ₹12,716ರಿಂದ ಗರಿಷ್ಠ ₹24,506ರವರೆಗೆ ವೆಚ್ಚ ತಗಲುತ್ತದೆ. ಹೊಸ ನಿಲುಗಡೆಗಳನ್ನು ನೀಡುವ ಸಂದರ್ಭದಲ್ಲಿ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ನಿಲುಗಡೆಗೆ ತಗಲುವ ಖರ್ಚು ಆ ನಿಲ್ದಾಣದಲ್ಲಿ ರೈಲು ನಿಲ್ಲುವುದರಿಂದ ಬರುತ್ತದೆಯೇ ಎಂಬುದು ಹೊಸ ನಿಲುಗಡೆ ನೀಡಲು ಅನುಸರಿಸುವ ಪ್ರಮುಖ ಮಾನದಂಡವಾಗಲಿದೆ.

ಆರ್ಥಿಕವಾಗಿ ಕಾರ್ಯಸಾಧುವಲ್ಲದ ನಿಲುಗಡೆಗನ್ನು ರದ್ದು ಮಾಡುವಂತೆ ಅಥವಾ ನಿಲುಗಡೆ ಸಮಯವನ್ನು ಕಡಿಮೆಮಾಡುವಂತೆ ರೈಲ್ವೆ ವಲಯಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಅಲ್ಪಾವಧಿ ಕ್ರಮಗಳು

* ಮನುಷ್ಯ, ಜಾನುವಾರು ಮತ್ತು ವಾಹನಗಳು ರೈಲ್ವೆ ಹಳಿ ಮೇಲೆ ಬರದಂತೆ ತಡೆಯಲು ಬೇಲಿ ನಿರ್ಮಾಣ

* ಎಲ್ಲ ರೀತಿಯ ಬೋಗಿಗಳಿಗೆ ಬೇಕಾದಷ್ಟು ಬಿಡಿ ಭಾಗಗಳ ಪೂರೈಕೆ

* ಹಳಿ ಮಧ್ಯದಲ್ಲಿ ದಾಟುವಿಕೆ ರದ್ದತಿ

* ಎಲ್ಲ ಕ್ರಾಸಿಂಗ್‌ಗಳಿಗೆ ಕಾವಲು

* ಸ್ವಯಂಚಾಲಿತ ರೈಲು ಸಮಯ ಪಾಲನೆ ವ್ಯವಸ್ಥೆ

ದೀರ್ಘಾವಧಿ ಕ್ರಮಗಳು

* ನಗರ ಹೊರವಲಯ ಮತ್ತು ಮುಖ್ಯ ಹಳಿಗಳನ್ನು ಪ್ರತ್ಯೇಕಿಸುವುದು

* ಸಾಧ್ಯವಿದ್ದಲ್ಲೆಲ್ಲ ಸರಕು ಸಾಗಣೆಗೆ ಪ್ರತ್ಯೇಕ ಹಳಿ ನಿರ್ಮಾಣ

* ನಿರ್ಮಾಣ ಕೇಂದ್ರದಲ್ಲಿ ಮಾತ್ರವಲ್ಲದೆ, ಎಲ್ಲ ಕೇಂದ್ರಗಳಲ್ಲಿಯೂ ದುರಸ್ತಿ ಸಾಧ್ಯವಾಗುವ ರೀತಿಯ ಎಂಜಿನ್‌ ನಿರ್ಮಾಣ

* ರೈಲ್ವೆ ವಲಯಗಳಿಂದ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಜಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry