ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಗೀತೆಗಳಿಗೆ ಭಾವ ತುಂಬುವ ವಾದ್ಯಗೋಷ್ಠಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭಕ್ತಿಭಾವವನ್ನು ಅನಾಯಾಸವಾಗಿ ಉಕ್ಕಿಸುವ ಸಾಹಿತ್ಯಕ್ಕೆ ಅಷ್ಟೇ ಭಾವಪೂರ್ಣ ಮಾಧುರ್ಯವುಳ್ಳ ದನಿ ಜೊತೆಯಾದರೆ ಎಂತಹ ನಾಸ್ತಿಕನೂ ಅರೆಕ್ಷಣ ಮಂತ್ರಮುಗ್ಧನಾಗಿ ತಲೆದೂಗುತ್ತಾನೆ. ಕಳೆದ 28 ವರ್ಷಗಳಿಂದ ಹೀಗೆ ಸಂಗೀತ ಪ್ರಿಯರ ಮನತಣಿಸುತ್ತಿದ್ದಾರೆ ‘ಶ್ರುತಿ ವಾದ್ಯಗೋಷ್ಠಿ’ಯ ಸದಸ್ಯರು.

ಭಾರತದ ಬಹುತೇಕ ಭಾಷೆಗಳ ಹಾಡುಗಳನ್ನು ಭಕ್ತಿಪರವಶವಾಗಿ ಹಾಡುವ ಈ ಕಲಾತಂಡದಲ್ಲಿ ವಿವಿಧ ಭಾಷೆಯ ಕಲಾವಿದರಿದ್ದಾರೆ. ನಗರದ ಜಾಲಹಳ್ಳಿಯಲ್ಲಿರುವ ಈ ವಾದ್ಯಗೋಷ್ಠಿ ಮಣಿಕಂಠನ್ ಅವರ ಸಾರಥ್ಯದಲ್ಲಿ ಆರಂಭಗೊಂಡ ಇದೀಗ ಬೆಳ್ಳಿಹಬ್ಬವನ್ನೂ ಪೂರೈಸಿದೆ. ಮೂಲತಃ ಕೇರಳದವರಾದ ಎಂ.ಮಣಿಕಂಠನ್ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ಮಾಧುರ್ಯಪೂರ್ಣವಾಗಿ ಹಾಡಬಲ್ಲರು. ಯಾವುದೇ ಸಂಗೀತ ಶಾಲೆಗಳಿಗೆ ತೆರಳಿ ಸಂಗೀತ ಕಲಿಯದ ಅವರು ಸ್ವಂತ ಆಸಕ್ತಿಯಿಂದಲೇ ಸಂಗೀತವನ್ನು ಸಿದ್ಧಿಸಿಕೊಂಡವರು. ಚಿಕ್ಕಂದಿನಲ್ಲಿ ಶಾಲಾ ವೇದಿಕೆಗಳಲ್ಲಿ ಹಾಡುತ್ತಿದ್ದ ಅವರಿಂದು ಸಾವಿರಾರು ಜನರನ್ನು ತಮ್ಮ ಗಾನ ಮಾಧುರ್ಯದಿಂದ ಮೂಕವಿಸ್ಮಿತರಾಗಿಸುತ್ತಾರೆ.

ಶಬರಿಮಲೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತಸಾಗರದ ಎದುರಿಗೆ ಅಯ್ಯಪ್ಪನ ಹಾಡುಗಳಿಗೆ ದನಿಯಾಗಿದ್ದು, ತಂಡದ ಹೆಗ್ಗಳಿಕೆ. ಅಷ್ಟೇ ಅಲ್ಲದೆ ನಗರದಲ್ಲಿನ ವಿದ್ಯಾರಣ್ಯಪುರ ಸಾಯಿಬಾಬಾ ಮಂದಿರ, ಕಾಳಿಕಾದುರ್ಗಾಪರಮೇಶ್ವರಿ ಮಂದಿರ, ಮಹಾಲಕ್ಷ್ಮಿಪುರದ ಆಂಜನೇಯ ದೇವಸ್ಥಾನ,ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳು ಇವರ ಸಂಗೀತಕ್ಕೆ ವೇದಿಕೆಯಾಗಿವೆ.

ವರ್ಷದ ಹಿಂದಷ್ಟೇ ತಂಡಕ್ಕೆ ಜೊತೆಯಾದವರು ಗಾಯಕ ಬಿ.ಜಿ.ಸದಾಶಿವ. ತಾಯಿಯೇ ಸಂಗೀತದ ಮೊದಲ ಗುರು ಎನ್ನುವ ಇವರು, ಸಾಹಿತ್ಯ, ರಂಗಭೂಮಿ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿ ದ್ದಾರೆ.  ಭಾರತದಾದ್ಯಂತ 21,000 ಕಿ.ಮೀ. ಸೈಕಲ್ ಜಾಥಾ ನಡೆಸಿ ಅರಣ್ಯ ಸಂರಕ್ಷಣೆಯ ಪಾಠವನ್ನೂ ಬೋಧಿಸಿದ್ದಾರೆ. ಬಿಡುವಿನ ಸಮಯದಲ್ಲಿ ಹಾಡುಗಳನ್ನು ರಚಿಸುತ್ತಾರೆ. ತಮ್ಮ ಸಾಹಿತ್ಯಕ್ಕೆ ತಾವೇ ಸಂಗೀತ ಸಂಯೋಜಿಸಿ ಹಾಡುತ್ತಾರೆ. ಡಾ. ರಾಜ್‌ಕುಮಾರ್ ಅವರ ಗೀತೆಗಳನ್ನು ಇಷ್ಟಪಟ್ಟು ಸೊಗಸಾಗಿ ಹಾಡುತ್ತಾರೆ.

‘ಕಾರ್ಯಕ್ರಮವೊಂದರಲ್ಲಿ ಕನ್ನಡದ ಭಕ್ತಿಗೀತೆಗಳ ಸಾಹಿತ್ಯವನ್ನು ಮಲೆಯಾಳಂನಲ್ಲಿ ಬರೆದುಕೊಂಡು ಹಾಡುತ್ತಿದ್ದ ಮಣಿಕಂಠನ್ ಅವರ ಕನ್ನಡ ಪ್ರೀತಿಗೆ ಮಾರುಹೋದ ನಾನು ಈ ತಂಡದೊಂದಿಗೆ ಜೊತೆಯಾದೆ’ ಎನ್ನುತ್ತಾರೆ ಸದಾಶಿವ.

ಸದ್ಯ 12 ಜನ ಸಂಗೀತಗಾರರು ವಾದ್ಯತಂಡದಲ್ಲಿದ್ದಾರೆ. ನೃತ್ಯ ತಂಡವೂ ಜೊತೆಗಿದೆ. ಶಾಸ್ತ್ರೀಯ ಹಾಗೂ ಸಮಕಾಲೀನ ನೃತ್ಯಗಳಿಗೆ ಹೆಜ್ಜೆಹಾಕುತ್ತಾರೆ. ವಿವಿಧ ಸಂಘಸಂಸ್ಥೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಆಯಾ ಕಾರ್ಯಕ್ರಮಗಳಿಗೆ ಸೂಕ್ತವಾಗುವ ಹಾಡುಗಳನ್ನು ಹಾಡುತ್ತಾರೆ. ಅನೇಕ ದೇವಾಲಯಗಳಲ್ಲಿ ಉಚಿತ ಸಂಗೀತ ಸೇವೆಯನ್ನು ನೀಡಿದ್ದಾರೆ. ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಈ ತಂಡ ದ್ವನಿಮುದ್ರಿಕೆಗಳನ್ನು ಮಾಡಿದೆ. ವಿವಿಧ ವಾಹಿನಿಗಳಲ್ಲಿ ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಸಂಪರ್ಕಕ್ಕೆ ಮೊ–ಸದಾಶಿವ ಬಿ.ಜಿ–7760779424.ಮಣಿಕಂಠನ್–9886992515

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT