ಮತ ಕ್ಷೇತ್ರದ ಪ್ರಗತಿಯಲ್ಲಿ ಸಚಿವರ ಪಾತ್ರ?

ಬುಧವಾರ, ಮಾರ್ಚ್ 20, 2019
23 °C

ಮತ ಕ್ಷೇತ್ರದ ಪ್ರಗತಿಯಲ್ಲಿ ಸಚಿವರ ಪಾತ್ರ?

Published:
Updated:
ಮತ ಕ್ಷೇತ್ರದ ಪ್ರಗತಿಯಲ್ಲಿ ಸಚಿವರ ಪಾತ್ರ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿ ಜನಪ್ರಿಯ, ಜನಪರ ಕಾರ್ಯಕ್ರಮಗಳನ್ನು ರೂಪಿಸಿದವರು ಅನೇಕರಿದ್ದಾರೆ. ಸಚಿವರಾಗಿ ಯಶಸ್ವಿಯಾದವರು, ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದು ಪ್ರತಿಪಾದಿಸುತ್ತಿರುವವರು ಶಾಸಕರಾಗಿ ತಮ್ಮ ಮತ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ?

ತಮ್ಮನ್ನು ನಂಬಿ ಮತ ಹಾಕಿದ ‘ಮಹಾಪ್ರಭು’ಗಳ ನಿರೀಕ್ಷೆ, ಅಪೇಕ್ಷೆಗಳಿಗೆ ನಾಲ್ಕು ಮುಕ್ಕಾಲು ವರ್ಷ ಸರ್ಕಾರವನ್ನು ಮುನ್ನಡೆಸಿದವರು ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ ಎಂಬುದನ್ನು ಸಮೀಕ್ಷೆಯಲ್ಲಿ ಸಿಕ್ಕಿದ ಅಂಕಿ–ಅಂಶಗಳ ಮೂಲಕವೇ ತೋರಿಸುವ ವಿಶ್ಲೇಷಣೆ ಇಲ್ಲಿದೆ. ಮತದಾರರ ಅಭಿಪ್ರಾಯ ಆಧರಿಸಿ, ಸಚಿವರಿಗೆ ಅಂಕ ನೀಡಲಾಗಿದೆ. ಅದನ್ನಷ್ಟೇ ಇಲ್ಲಿ ಕ್ರೋಡೀಕರಿಸಲಾಗಿದೆ.

ಸಚಿವರ ಪೈಕಿ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಅಗ್ರ ಶ್ರೇಯಾಂಕದಲ್ಲಿದ್ದರೆ, ಗೃಹ ಸಚಿವ ರಾಮಲಿಂಗಾರೆಡ್ಡಿ ಕೊನೆಯ ಸ್ಥಾನದಲ್ಲಿದ್ದಾರೆ.

ನುಡಿದಂತೆ. . .: ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕ ನಿಷ್ಠುರಿಗಳು, ಜನಪರ ಕಳಕಳಿ ಇರುವವರೆಂದು ಬಿಂಬಿತವಾಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಆರೋಗ್ಯ ಸಚಿವ ಕೆ.ಆರ್. ರಮೇಶಕುಮಾರ್‌ ಅವರು ಆಡಳಿತ ಪಕ್ಷದೊಳಗಿನ ವಿರೋಧ ಪಕ್ಷದ ಸದಸ್ಯರಂತೆ ಇದ್ದಾರೆ. ಹಾಗೆಂದು ಇಬ್ಬರೂ ಸತತ ಎರಡು ಚುನಾವಣೆಗಳಲ್ಲಿ ಗೆದ್ದಿರುವ ನಿದರ್ಶನ ವಿರಳ. ಕ್ಷೇತ್ರದಲ್ಲಿ ಒಲವು ಇದ್ದರೂ ಗೆಲುವು ಇವರಿಗೆ ಎಂದಿಗೂ ಸಲೀಸಾಗಿಲ್ಲ.

ಕಾನೂನು ಸಚಿವ ಟಿ.ಬಿ. ಜಯಚಂದ್ರ ಒಂದು ಬಾರಿ ಮಾತ್ರ ಸೋಲುಂಡವರು. ಮೂರನೇ ಬಾರಿ ಗೆದ್ದ ಶರಣ ಪ್ರಕಾಶ ಪಾಟೀಲ, ಎರಡನೇ ಬಾರಿ ಗೆದ್ದ ವಿನಯ ಕುಲಕರ್ಣಿ ಈಗ ಸಚಿವರು. ಎಚ್.ಕೆ. ಪಾಟೀಲ ಹಾಗೂ ಪ್ರಿಯಾಂಕ್ ಖರ್ಗೆ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದವರು. ಸಚಿವರ ಯಾದಿಯಲ್ಲಿ ಈ ಏಳೂ ಜನ 10ಕ್ಕೆ 8ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಸರ್ಕಾರದ ಅವಧಿ ಮೂರು ವರ್ಷ ತುಂಬುವವರೆಗೆ ಕಾಗೋಡು ಸಭಾಧ್ಯಕ್ಷರಾಗಿದ್ದರು. ರಮೇಶ್‌ ಕುಮಾರ್ ಶಾಸಕರಾಗಿದ್ದರು. ಸಮೀಕ್ಷೆಯಲ್ಲಿ ಇವರಿಬ್ಬರೂ ಕ್ರಮವಾಗಿ 8.04 ಹಾಗೂ 8.22 ಅಂಕ ಗಳಿಸಿದ್ದಾರೆ. ಜಯಚಂದ್ರ ಮತ್ತು ಎಚ್.ಕೆ. ಪಾಟೀಲ ತಲಾ 8.19 ಅಂಕ ಪಡೆದಿದ್ದಾರೆ.

ಎಚ್.ಸಿ. ಮಹದೇವಪ್ಪ, ರಮಾನಾಥ ರೈ, ಬಸವರಾಜ ರಾಯರಡ್ಡಿ, ರಮೇಶ ಜಾರಕಿಹೊಳಿ ಒಟ್ಟಾರೆ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ, ಶಾಸಕರು ಜನರ ಕೈಗೆ ಎಟುಕುತ್ತಾರೆಯೇ ಎಂಬ ಪ್ರಶ್ನೆಗೆ ಇವರೆಲ್ಲ 8ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಮಹದೇವಪ್ಪ, ರೋಷನ್ ಬೇಗ್‌, ಆಂಜನೇಯ, ರಾಯರಡ್ಡಿ, ರುದ್ರಪ್ಪ ಲಮಾಣಿ, ಎ.ಮಂಜು, ಎಸ್.ಎಸ್. ಮಲ್ಲಿಕಾರ್ಜುನ, ಎಂ.ಬಿ. ಪಾಟೀಲ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆಲವರು ಏಳರ ಸಮೀಪ ಸಾಗಿದರೂ ಏಳು ದಾಟುವಲ್ಲಿ ಯಶ ಕಂಡಿಲ್ಲ.

ಏಳಕ್ಕೇರದ ಸಭಾಧ್ಯಕ್ಷ ಕೋಳಿವಾಡ

224 ಶಾಸಕರಿಗೆ ಉತ್ತರದಾಯಿಯಾಗಿರುವ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ 6.78 ಅಂಕ ಮಾತ್ರ ಗಳಿಸಿದ್ದಾರೆ.

ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಕಾಗೋಡು ತಿಮ್ಮಪ್ಪ, ರಮೇಶಕುಮಾರ್‌, ಜಗದೀಶ ಶೆಟ್ಟರ್, ಕೆ.ಜಿ. ಬೋಪಯ್ಯ 14ನೇ ವಿಧಾನಸಭೆಯ ಸದಸ್ಯರೂ ಆಗಿದ್ದಾರೆ. ಇವರ ಪೈಕಿ ಬೋಪಯ್ಯ 7.71 ಅಂಕ ಗಳಿಸಿದ್ದಾರೆ. ಉಳಿದೆಲ್ಲರೂ 8ರ ಗಡಿ ದಾಟಿದ್ದಾರೆ. ಆದರೆ, ಕೋಳಿವಾಡ ಹಿನ್ನಡೆ ಅನುಭವಿಸಿದ್ದಾರೆ.

ಇನ್ನು ಉಪ ಸಭಾಧ್ಯಕ್ಷ ಎನ್‌.ಎಚ್. ಶಿವಶಂಕರ ರೆಡ್ಡಿ ಅವರಿಗೆ ಅಂಕ ಗಳಿಕೆಯಲ್ಲಿ ‍ಪ್ರಥಮ ಶ್ರೇಣಿ ಪಡೆಯಲು ಸಾಧ್ಯವಾಗಿಲ್ಲ.

ಯಾವ ವಲಯದಲ್ಲಿ ಯಾರಿಗೆ ಒಲವು? (ಪ್ರದೇಶಾವಾರು ಸಾಧನೆ)

ಬೆಂಗಳೂರು:
ರಾಜ್ಯದ ಯಾವ ಭಾಗದಲ್ಲಿ ಯಾವ ಪಕ್ಷದ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಶಾಸಕರ ಸಾಮರ್ಥ್ಯ, ಕ್ಷೇತ್ರದ ಅಭಿವೃದ್ಧಿಯತ್ತ ಅವರಿಗಿರುವ ಕಾಳಜಿಯನ್ನು ಮೌಲ್ಯಮಾಪನ ಮಾಡಲು ‘ಪ್ರಜಾವಾಣಿ’ ಜತೆ ‘ದಕ್ಷ್‌’ ಸಂಸ್ಥೆ ಕೈಜೋಡಿಸಿದೆ. ಶಾಸಕರ ಕಾರ್ಯವೈಖರಿ, ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಯ ಗಮನ ಮತ್ತಿತರ ವಿಷಯಗಳ ಕುರಿತು ಸಮೀಕ್ಷೆ ವೇಳೆ 28 ಪ್ರಶ್ನೆಗಳನ್ನು ಕೇಳಲಾಗಿದೆ. ಅದನ್ನು ಕ್ರೋಡೀಕರಿಸಿ 10 ಅಂಕಗಳಿಗೆ ಶಾಸಕರು ಹಾಗೂ ಪಕ್ಷ ಪಡೆದ ಅಂಕವನ್ನು ನೀಡಲಾಗಿದೆ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಪ್ರದೇಶವಾರು ವಿಭಜಿಸಿ, ‍ಪಕ್ಷವಾರು ಪಡೆದ ಅಂಕಗಳನ್ನು ವಿಶ್ಲೇಷಿಸುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

ಕರಾವಳಿಯಲ್ಲಿ ‘ಕೈ’ಗೆ ಜೈ: ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳ ವಿಷಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷದ ನಾಯಕರ ಮಧ್ಯೆ ವಾಗ್ವಾದ ನಡೆಯುತ್ತಲೇ ಇದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಅಭಿವೃದ್ಧಿ ಕುಸಿದಿದೆ ಎಂದು ಬಿಜೆಪಿಯವರು ಟೀಕಾ ಪ್ರಹಾರ ಮಾಡುತ್ತಲೇ ಇದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿದ್ದು, ಅವರೇ ಹೆಚ್ಚಿನ ಅಂಕ ಗಳಿಸಿದ್ದಾರೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಘೋಷಿಸಿಕೊಳ್ಳುತ್ತಿರುವ ಬಿಜೆಪಿ ಶಾಸಕರು ಎರಡನೇ ಸ್ಥಾನಕ್ಕೆ ಹೋಗಿದ್ದಾರೆ. ಕರಾವಳಿಯಲ್ಲಿ ಜೆಡಿಎಸ್‌ ಶಾಸಕರು ಇಲ್ಲ.

ಮುಂಬೈ ಕರ್ನಾಟಕಲ್ಲಿ ಬಿಜೆಪಿ– ಕಾಂಗ್ರೆಸ್ ಶಾಸಕರ ಸಂಖ್ಯೆ ಸರಿ ಸುಮಾರು ಸಮಬಲದಲ್ಲಿದೆ. ಪ್ರಭಾವಿ ನಾಯಕರೂ ಈ ಭಾಗದಲ್ಲಿದ್ದಾರೆ. ಜೆಡಿಎಸ್ ‍ಪ್ರಾತಿನಿಧ್ಯ ಕೂಡ ಇದೆ. ಅಭಿವೃದ್ಧಿಯ ಪರ್ವ ಆರಂಭವಾಗಿದ್ದೇ ನಮ್ಮ ಕಾಲದಲ್ಲಿ ಎಂದು ಕಾಂಗ್ರೆಸ್‌ ಸರ್ಕಾರದ ಸಚಿವರು ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಈ ಪ್ರದೇಶದಲ್ಲಿ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಎರಡನೇ ಸ್ಥಾನ. ಬಿಜೆಪಿ 7.69 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಜೆಡಿಎಸ್‌ 6.09ಗೆ ತೃಪ್ತಿಪಟ್ಟುಕೊಂಡಿದೆ.

ಹೈ–ಕದಲ್ಲಿ ಕಮಲಕ್ಕೆ ರಂಗು: ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆ. ಬಿಜೆಪಿ, ಜೆಡಿಎಸ್‌ ಕೂಡ ಪ್ರಾತಿನಿಧ್ಯ ಪಡೆದಿವೆ. ಯಾವ ಪಕ್ಷ ಹೆಚ್ಚಿನ ಪ್ರಭಾವ ಹೊಂದಿದೆ ಎಂಬ ಬಗ್ಗೆ ನಡೆದ ಖಾಸಗಿ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿತ್ತು. ಆದರೆ, ಶಾಸಕರ ಸಾಧನೆ ಆಧರಿಸಿ ಪಕ್ಷ ಪಡೆದ ಅಂಕಗಳನ್ನು ಗಮನಿಸಿದರೆ, ಬಿಜೆಪಿ ಹೆಚ್ಚಿನ ಅಂಕ ಪಡೆದು ಮೊದಲ ಸಾಲಿನಲ್ಲಿದೆ. ಅದಕ್ಕಿಂತ 0.08ರಷ್ಟು ಕಡಿಮೆ ಅಂಕವನ್ನು ಕಾಂಗ್ರೆಸ್‌ ಪಡೆದಿದೆ.

ಮಧ್ಯ ಕರ್ನಾಟಕದ (ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ) ಮೂರು ಜಿಲ್ಲೆಗಳ ಶಾಸಕರ ಪೈಕಿ ಕಾಂಗ್ರೆಸ್‌ ಅತಿ ಹೆಚ್ಚು ಶಾಸಕರನ್ನು ಹೊಂದಿದೆ. ಬಿಜೆಪಿ ಪ್ರಾತಿನಿಧ್ಯವೂ ಇದೆ. ಆಡಳಿತ ಪಕ್ಷ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದೆ. ಈ ಪ್ರದೇಶದಲ್ಲಿ ಜೆಡಿಎಸ್‌ ಸದಸ್ಯರ ಸಂಖ್ಯೆ (4 ಶಾಸಕರು) ಕಡಿಮೆ ಇದ್ದರೂ 7.33 ಅಂಕ ಗಳಿಸಿದೆ.

ಹಳೆ ಮೈಸೂರಿನ ಲೆಕ್ಕ: ಹಳೆ ಮೈಸೂರು ಭಾಗದಲ್ಲಿ ಕಡಿಮೆ ಶಾಸಕರನ್ನು ಹೊಂದಿರುವ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್ ಅತಿ ಹೆಚ್ಚಿನ ಶಾಸಕರ ಪ್ರಾತಿನಿಧ್ಯ ಹೊಂದಿದ್ದರೆ, ಸಂಖ್ಯಾಬಲದಲ್ಲಿ ಜೆಡಿಎಸ್‌ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದ್ದರೆ, ಜೆಡಿಎಸ್ 7.12 ಅಂಕ ಪಡೆದು ಎರಡನೇ ಸ್ಥಾನ ದಕ್ಕಿಸಿಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್– ಬಿಜೆಪಿ ಶಾಸಕರು ಸರಿಸುಮಾರು ಸಮಾನ ಪ್ರಾತಿನಿಧ್ಯ ಹೊಂದಿದ್ದಾರೆ. ಆದರೆ, ಅಂಕ ಗಳಿಕೆಯಲ್ಲಿ ಜೆಡಿಎಸ್‌ ಮೊದಲ ಸ್ಥಾನದಲ್ಲಿದೆ. ಆಡಳಿತಾರೂಢ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಡಿಮೆ ಶಾಸಕರಿದ್ದ ಕಡೆ ಹೆಚ್ಚು ಅಂಕ

ಶಾಸಕರ ಸಂಖ್ಯೆ ಕಡಿಮೆ ಇದ್ದ ಪ್ರದೇಶಗಳಲ್ಲಿ ಪಕ್ಷವಾರು ಅಂಕ ಗಳಿಕೆ ಹೆಚ್ಚಾಗಿದೆ. ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಜೆಡಿಎಸ್‌ ತಲಾ ಮೂವರು ಶಾಸಕರನ್ನು ಹೊಂದಿವೆ. ಮಧ್ಯ ಕರ್ನಾಟಕದಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರು ಇದ್ದಾರೆ. ಆದರೆ, ಅಂಕ ಗಳಿಕೆಯಲ್ಲಿ ಬಿಜೆಪಿ, ಜೆಡಿಎಸ್‌ ಹೆಚ್ಚಿನ ಸಾಧನೆ ಮಾಡಿವೆ.

ಒಂದು ಪ್ರದೇಶದಲ್ಲಿ ನಿರ್ದಿಷ್ಟ ಪಕ್ಷಕ್ಕೆ ಸೇರಿರುವ ಶಾಸಕರ ಸಂಖ್ಯೆ ಹೆಚ್ಚಿದ್ದು, ಅವರ ಪೈಕಿ ಕಡಿಮೆ ಅಂಕ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಸರಾಸರಿ ಗಣಕ ಮಾಡಿದಾಗ ಪಕ್ಷ ಪಡೆದ ಅಂಕ ಇಳಿಕೆಯಾಗುತ್ತದೆ.

ಉದಾಹರಣೆಗೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಮೂವರು ಶಾಸಕರನ್ನು ಮಾತ್ರ ಹೊಂದಿದೆ. ಮೂವರೂ 6.8ರಿಂದ 7.47ವರೆಗಿನ ಅಂಕ ಪಡೆದಿದ್ದರೆ, ಸರಾಸರಿ ಲೆಕ್ಕ ಮಾಡುವಾಗ ಪಕ್ಷದ ಅಂಕ ಅಂದಾಜು 7 ದಾಟುತ್ತದೆ. ಒಂದು ಪಕ್ಷದ 40ಕ್ಕೂ ಹೆಚ್ಚು ಶಾಸಕರಿರುವ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಶಾಸಕರು 6, ಹತ್ತು ಜನ 4 ಹಾಗೂ ಉಳಿದ ಹತ್ತು ಜನ 8 ಅಂಕ ಪಡೆದಿದ್ದರೆ, ಸರಾಸರಿ ಲೆಕ್ಕ ಹಾಕುವಾಗ ಪಕ್ಷವಾರು ಅಂಕ ಇಳಿಕೆಯಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry