ಕೇರಳದ ಮನವಿ ತಿರಸ್ಕರಿಸಿದ ಕರ್ನಾಟಕ, ತಮಿಳುನಾಡು

7
ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಸಂಬಂಧ ಸಭೆ

ಕೇರಳದ ಮನವಿ ತಿರಸ್ಕರಿಸಿದ ಕರ್ನಾಟಕ, ತಮಿಳುನಾಡು

Published:
Updated:
ಕೇರಳದ ಮನವಿ ತಿರಸ್ಕರಿಸಿದ ಕರ್ನಾಟಕ, ತಮಿಳುನಾಡು

ಬೆಂಗಳೂರು: ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ತೆರವು ಮಾಡುವಂತೆ ಕೋರಿದ್ದ ಕೇರಳದ ಮನವಿಯನ್ನು ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಆದೇಶ ತೆರವು ಸಂಬಂಧ ಅರಣ್ಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೂರು ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಚರ್ಚಿಸಿದರು.

‘ರಾತ್ರಿ ಸಂಚಾರ ನಿಷೇಧದಿಂದಾಗಿ ಬೆಂಗಳೂರಿನಿಂದ ಕೇರಳಕ್ಕೆ ಬರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಸುತ್ತಿ ಬಳಸಿ ಕೇರಳಕ್ಕೆ ಬರುವ ಸ್ಥಿತಿ ಇದೆ. ಹೀಗಾಗಿ ಆದೇಶವನ್ನು ತೆರವು ಮಾಡಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ಕೇರಳದ ಅಧಿಕಾರಿಗಳು ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು, ‘ವನ್ಯಜೀವಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ರಾತ್ರಿ ವೇಳೆ ವಾಹನಗಳ ಸಂಚಾರವನ್ನ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರ ವಿರುದ್ಧವಾಗಿ ನಡೆದುಕೊಂಡರೆ, ನ್ಯಾಯಾಂಗ ನಿಂದನೆ ಆಗುತ್ತದೆ. ಹೀಗಾಗಿ, ಯಥಾಸ್ಥಿತಿ ಕಾಯ್ದುಕೊಳ್ಳಲಿದ್ದೇವೆ. ನೀವು (ಕೇರಳ) ಬೇಕಾದರೆ, ಸುಪ್ರೀಂ ಕೋರ್ಟ್‌ನಲ್ಲೇ ಪ್ರಶ್ನಿಸಿ’ ಎಂದರು. ಈ ನಿರ್ಧಾರಕ್ಕೆ ತಮಿಳುನಾಡು ಅಧಿಕಾರಿಗಳು ಧ್ವನಿಗೂಡಿಸಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯ ವನ್ಯಜೀವಿ ಪರಿಪಾಲಕ ಸಿ.ಜಯರಾಮ್, ‘ಒಪ್ಪಿಗೆ ನೀಡಿದರೆ ರಾತ್ರಿ ವೇಳೆಯೇ ವಾಹನಗಳ ಸಂಚಾರ ಹೆಚ್ಚಾಗಲಿದೆ. ಇದನ್ನು ಸುಪ್ರೀಂಕೋರ್ಟ್ ಹಾಗೂ ಸಮಿತಿ ಗಮನಕ್ಕೂ ತರಲಿದ್ದೇವೆ’ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್‌, ‘35 ಕಿ.ಮೀವರೆಗಿನ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಸಂಪೂರ್ಣ ನಿಷೇಧಕ್ಕೂ ಒತ್ತಾಯವಿದೆ’ ಎಂದರು.

ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ‘ಟಿಂಬರ್‌ ಮಾಫಿಯಾದ ಒತ್ತಡಕ್ಕೆ ಮಣಿದು ಕೇರಳವು ಈ ಬೇಡಿಕೆ ಇಟ್ಟಿದೆ. ಅದಕ್ಕೆ ಒಪ್ಪಿಗೆ ನೀಡಿದರೆ ಬಂಡೀಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮೌನ ಪ್ರತಿಭಟನೆ

ಸಭೆ ನಡೆಯುತ್ತಿದ್ದ ವೇಳೆಯಲ್ಲೇ ಅರಣ್ಯಭವನದ ಎದುರು ಪರಿಸರವಾದಿಗಳು ಮೌನ ಪ್ರತಿಭಟನೆ ನಡೆಸಿದರು. ‘ವನ ಜಾಗೃತಿ’ , ‘ವನ್ಯ’, ‘ವೀ ಸೇವ್ ವೈಲ್ಡ್’ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

‘ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬರಲಿದೆ. ಹೀಗಾಗಿ ಕೇರಳದ ನಿರ್ಧಾರಕ್ಕೆ ಕರ್ನಾಟಕವು ಮಣಿಯಬಾರದು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry