ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿಗಾಗಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮೀಸಲು ಭೂಮಿಯ ಮಂಜೂರಿಗೆ ಒಕ್ಕೊರಲ ಆಗ್ರಹ
Last Updated 7 ಮಾರ್ಚ್ 2018, 9:27 IST
ಅಕ್ಷರ ಗಾತ್ರ

ಮೂಡಿಗೆರೆ: ನಿವೇಶನ ರಹಿತರಿಗಾಗಿ ಮೀಸಲಿಟ್ಟಿರುವ ಜಮೀನನ್ನು ಕೂಡಲೇ ಮಂಜೂರುಗೊಳಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ರುದ್ರಯ್ಯ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಎದುರು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

'ಮೂಡಿಗೆರೆ ವಿಧಾನ ಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಬಹುತೇಕ ಕುಟುಂಬ ದಲಿತ ಪಂಗಡಕ್ಕೆ ಸೇರಿದವುಗಳಾಗಿವೆ. ಆದರೆ ಮೀಸಲು ಕ್ಷೇತ್ರದಲ್ಲಿ ಗೆದ್ದ ಚುನಾಯಿತ ಪ್ರತಿನಿಧಿಗಳು, ಇಲ್ಲಿನ ನಿವೇಶನ ರಹಿತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ, ಶ್ರೀಮಂತರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಜುಬೇರ್‌ ಮಾತನಾಡಿ, ‘ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನೇಕ ಬಾರಿ ನೀವೇಶನಕ್ಕಾಗಿ ಮೀಸಲಿಟ್ಟಿರುವ ಭೂಮಿಯ ಬಗ್ಗೆ ಪ್ರಶ್ನೆ ಮಾಡಿದರೆ, ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮೀಸಲಿಟ್ಟಿರುವ ಭೂಮಿಯ ಬಗ್ಗೆ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್‌ ಹಾಗೂ ಪಿಡಿಒ ರಾಜಕುಮಾರ್‌ ಬಂದು ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದು ಕೊಳ್ಳಲಾಯಿತು.

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಬೇಲೂರು ರಸ್ತೆ, ಎಂ.ಜಿ. ರಸ್ತೆ, ಲಯನ್ಸ್‌ ವೃತ್ತದ ಮೂಲ ಬಂದು ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡಿತು.
ಪ್ರತಿಭಟನೆಯಲ್ಲಿ ವಿಜಯ್‌ಹಾಂದಿ, ಶಿವಪ್ಪ, ವಿನೋದ್‌, ಜಾನಕಿ, ಲಕ್ಷ್ಮಿ, ಪುಷ್ಪಾವತಿ, ಸಂಗೀತ, ನಾಗರಾಜ್‌, ವಿಠಲ್‌, ಗೋಪಾಲ, ಶೇಖರ್‌ ಮುಂತಾದವರಿದ್ದರು.

ಮೆಸ್ಕಾಂಗೆ ಗ್ರಾಮಸ್ಥರ ಮುತ್ತಿಗೆ
ನರಸಿಂಹರಾಜಪುರ: ತಾಲ್ಲೂಕಿನ ಹೊನ್ನೇಕುಡಿಗೆ, ವರ್ಕಾಟೆ, ಸಾರ್ಯ, ಹಂತುವಾನಿ ಗ್ರಾಮದ ವ್ಯಾಪ್ತಿಯಲ್ಲಿ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.

‘ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಹಲವು ತಿಂಗಳಿನಿಂದ ವೋಲ್ಟೇಜ್ ಸಮಸ್ಯೆ ಇದ್ದು,  ಇದರಿಂದ ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ಓದಲು ತೊಂದರೆಯಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

ಮೆಸ್ಕಾಂ ಇಲಾಖೆಯ ಹಿಂಭಾಗದಿಂದ ಮುಂಡೊಳ್ಳಿ ಮಾರ್ಗವಾಗಿ ಶೀಗುವಾನಿವರೆಗಿನ ಸಂಪರ್ಕ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಂಡು ವೋಲ್ಟೇಜ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಪಟ್ಟು ಹಿಡಿದರು. ಅಲ್ಲದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಹೊನ್ನೇ ಕುಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯ ಹಂಚಿನಮನೆರಾಘವೇಂದ್ರ, ಸದಸ್ಯರಾದ ವಿಜು, ಶಿಬಿಮರಿಯಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜಪ್ಪ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ನೀರಿಗಾಗಿ ಎಂ.ಕೋಡಿಹಳ್ಳಿ ಮಹಿಳೆಯರಿಂದ ಪ್ರತಿಭಟನೆ
ಕಡೂರು: 6 ತಿಂಗಳಿನಿಂದ ಕುಡಿಯುವ ನೀರು ಇಲ್ಲದಂತದಾಗಿದ್ದರೂ, ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಿಲ್ಲ ಎಂದು ಆರೋಪಿಸಿ ಎಂ.ಕೋಡಿಹಳ್ಳಿ ಗ್ರಾಮದ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಮಲ್ಲೇಶ್ವರ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮಸಭೆ ನಡೆಯುತ್ತಿದ್ದ ಸ್ಥಳಕ್ಕೆ ಖಾಲಿ ಕೊಡ ಹಿಡಿದು ಬಂದ ಎಂ.ಕೋಡಿಹಳ್ಳಿ ಗ್ರಾಮಸ್ಥರು ಪಂಚಾಯಿತಿ ಸದಸ್ಯರ ಹಾಗೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರು ಸಿಗುತ್ತಿಲ್ಲ. ಹಣ ಕೊಟ್ಟು ಕುಡಿಯಲು ನೀರು ತರುತ್ತಿದ್ದೇವೆ. ನಮಗೆ ನೀರಿನ ವ್ಯವಸ್ಥೆ ಆಗಲೇಬೇಕು. ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

ಪಿಡಿಒ ಯಮುನಾ ಮಾತನಾಡಿ, ‘ಎಂ.ಕೋಡಿಹಳ್ಳಿ ಗ್ರಾಮ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಗ್ರಾಮ ಪಂಚಾಯಿತಿಗೆ ಕೊಳವೆ ಬಾವಿ ಕೊರೆಸುವ ಅಧಿಕಾರವಿಲ್ಲ. ಆದರೆ ಕೊಳವೆ ಬಾವಿಗಳ ನಿರ್ವಹಣೆಯ ಜವಾಬ್ದಾರಿ ನಮ್ಮದೇ ಆಗಿದೆ. 14ನೇ ಹಣಕಾಸು ಅನುದಾನವನ್ನು ಕುಡಿಯುವ ನೀರಿಗೆ ಬಳಸಲು ಸೂಚನೆ ಬಂದಿದೆ.

ಆದರೆ ಸೂಚನೆ ಬರುವುದರ ಒಳಗೆ ಬೇರೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದರಿಂದ ಆ ಕಾಮಗಾರಿಗಳ ಬದಲಾವಣೆ ಕೋರಿ ಪತ್ರ ಬರೆದಿದ್ದು, ಅದಕ್ಕೆ ಅನುಮೋದನೆ ಬಂದ ಕೂಡಲೇ ಆ ಹಣವನ್ನು ಕುಡಿಯುವ ನೀರಿನ ತೊಂದರೆ ಬಗೆಹರಿಸಲು ಬಳಸಲಾಗುವುದು.

ಎಂ. ಕೋಡಿಹಳ್ಳಿ ಗ್ರಾಮದಲ್ಲಿ ಕೂಡಲೇ ಕೊಳವೆ ಬಾವಿ ಕೊರೆಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಾನಾಯ್ಕ, ಶ್ರೀನಿವಾಸನಾಯ್ಕ, ಕಾರ್ಯದರ್ಶಿ ಜಗದೀಶ್ ಇದ್ದರು.
***
‘ನಿವೇಶನ ರಹಿತರ ಬದುಕು ಮೂರಾಬಟ್ಟೆಯಾಗಿದ್ದು, ಕೂಡಲೇ ನಿವೇಶನ ನೀಡಿ ವಸತಿ ಸಮಸ್ಯೆ ಬಗೆಹರಿಸಬೇಕು’
– ಬಿ. ರುದ್ರಯ್ಯ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT