ದಾಕ್ಷಾಯಣಿ ವೇಲಾಯುಧನ್ - ಸಂವಿಧಾನ ರಚನಾ ಸಮಿತಿಯ ಏಕೈಕ ದಲಿತ ಮಹಿಳೆ

7

ದಾಕ್ಷಾಯಣಿ ವೇಲಾಯುಧನ್ - ಸಂವಿಧಾನ ರಚನಾ ಸಮಿತಿಯ ಏಕೈಕ ದಲಿತ ಮಹಿಳೆ

Published:
Updated:
ದಾಕ್ಷಾಯಣಿ ವೇಲಾಯುಧನ್ - ಸಂವಿಧಾನ ರಚನಾ ಸಮಿತಿಯ ಏಕೈಕ ದಲಿತ ಮಹಿಳೆ

ಈ ದೇಶದ ಆಡಳಿತ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ರೂಪದಲ್ಲಿಯೇ ಉಳಿಸಿದ್ದು ಯಾವುದು ಎಂದು ಪ್ರಶ್ನಿಸಿದಾಗ, ಆ ಪ್ರಶ್ನೆಯನ್ನು ಇಟ್ಟುಕೊಂಡು ಕೆಲವು ಕಾಲ ಆಲೋಚಿಸಿದಾಗ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಎಂದು ನ್ಯಾಯಶಾಸ್ತ್ರ ಪರಿಣತರು ಉತ್ತರ ನೀಡಬಹುದು. ಹಾಗೆ ಉತ್ತರ ನೀಡಿದವರೂ ಇದ್ದಾರೆ, ನಿಜ. ಆದರೆ, ಈ ‍ಪ‍್ರಶ್ನೆಗೆ ಸಂಬಂಧಿಸಿದ ಆಲೋಚನೆಯನ್ನು ಇನ್ನಷ್ಟು ವಿಸ್ತರಿಸಿದಾಗ, ‘ಎಂದಿಗೂ ಬದಲಿಸಲು ಆಗದ ಮಾರ್ಗಸೂಚಿಗಳನ್ನು ಹೊಂದಿದ್ದೂ, ಕಾಲದ ಅಗತ್ಯಕ್ಕೆ ತಕ್ಕಂತೆ ಕೆಲವೊಂದು ಅಂಶಗಳ ಬದಲಾವಣೆ ಸದಾ ಸಿದ್ಧವಿರುವ ಸಂವಿಧಾನವೇ ಈ ದೇಶವನ್ನು ಜೀವಂತವಾಗಿ ಇರಿಸಿದೆ’ ಎನ್ನಲು ಅಡ್ಡಿಯಿಲ್ಲ.

ನಮ್ಮ ಸಂವಿಧಾನ ರೂಪುಗೊಂಡಿದ್ದು ಡಾ.ಬಿ.ಆರ್‌. ಅಂಬೇಡ್ಕರ್‌ ಅಧ್ಯಕ್ಷತೆಯ ಸಂವಿಧಾನ ಕರಡು ರಚನಾ ಸಮಿತಿಯ ಶ್ರಮ ಮತ್ತು ಸಂವಿಧಾನ ರಚನಾ ಸಭೆ ನಡೆಸಿದ ವಿಸ್ತೃತವಾದ ಚರ್ಚೆಗಳ ಮೂಲಕ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದರೆ, ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರೂ ಇದ್ದರು ಎಂಬುದನ್ನು ಕೊಂಚ ಮಟ್ಟಿಗೆ ಒತ್ತಿ ಹೇಳಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ, ಈ ಸಭೆಯಲ್ಲಿ ದಕ್ಷಿಣ ಭಾರತದ ದಲಿತ ಮಹಿಳೆಯೊಬ್ಬರು ಇದ್ದರು. ನಾವು ಇವತ್ತು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಅವರ ಜೀವನಾನುಭವ ಮತ್ತು ಆಲೋಚನೆಗಳು ಕೆಲಸ ಮಾಡಿವೆ ಎಂಬ ಮಾತನ್ನು ಗಟ್ಟಿ ದನಿಯಲ್ಲಿ ಹೇಳಬೇಕಾಗುತ್ತದೆ. ಅಂದಹಾಗೆ, ಇಲ್ಲಿ ಮಾತನಾಡುತ್ತಿರುವುದು ಕೇರಳದ ಎರ್ನಾಕುಳಂ ಜಿಲ್ಲೆಯ ಮುಳವುಕಾಡ್ ಊರಿನ ದಾಕ್ಷಾಯಣಿ ವೇಲಾಯುಧನ್ ಅವರ ಬಗ್ಗೆ. ಇವರು ಸಂವಿಧಾನ ರಚನಾ ಸಭೆಯ ಏಕೈಕ ದಲಿತ ಮಹಿಳೆ.

ಇವರು ಜನಿಸಿದ್ದು 1912ರ ಜುಲೈ ತಿಂಗಳಲ್ಲಿ. ದಲಿತ ನಾಯಕ ಆರ್‌. ವೇಲಾಯುಧನ್ ಅವರನ್ನು ವಿವಾಹವಾದ ನಂತರ ಇವರ ಹೆಸರು ದಾಕ್ಷಾಯಣಿ ವೇಲಾಯುಧನ್ ಎಂದಾಯಿತು. ಇವರ ವಿವಾಹ ಕಾರ್ಯಕ್ರಮ ಕೂಡ ವಿಭಿನ್ನವಾಗಿ ನಡೆಯಿತು. ಮಹಾತ್ಮ ಗಾಂಧಿ ಮತ್ತು ಕಸ್ತೂರಬಾ ಸಮ್ಮುಖದಲ್ಲಿ ಗುಜರಾತಿನ ವಾರ್ಧಾ ಆಶ್ರಮದಲ್ಲಿ, ಕುಷ್ಠರೋಗಿಯೊಬ್ಬರನ್ನು ಪುರೋಹಿತರ ಸ್ಥಾನದಲ್ಲಿ ಕೂರಿಸಿ ದಾಕ್ಷಾಯಣಿ–ವೇಲಾಯುಧನ್ ವಿವಾಹವಾದರು. ದೇಶದ ರಾಷ್ಟ್ರಪತಿಯಾಗಿದ್ದ ಕೆ.ಆರ್. ನಾರಾಯಣನ್ ಅವರು ದಾಕ್ಷಾಯಣಿ ಅವರಿಗೆ ಸಂಬಂಧಿಕರೂ ಹೌದು.

ದಾಕ್ಷಾಯಣಿ ಅವರ ಬದುಕಿನ ಪುಟಗಳನ್ನು ತಿರುವಿ ಹಾಕುವ ಜೊತೆಯಲ್ಲೇ ಸಂವಿಧಾನ ರಚನಾ ಸಭೆಯಲ್ಲಿ ಅವರು ಅಸ್ಪೃಶ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಆಡಿದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮಾತುಗಳು ಅಸ್ಪೃಶ್ಯತೆಯನ್ನು ದಾಕ್ಷಾಯಣಿ ಅವರು ಗ್ರಹಿಸಿದ ಬಗೆಯನ್ನು ಹೇಳುತ್ತವೆ. ಮಹಾತ್ಮ ಗಾಂಧೀಜಿ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ತೋರಿಸುತ್ತವೆ. ಭಾರತದ ಮೇಲ್ಜಾತಿಗಳ ಜನ ಖಂಡಿತ ಬದಲಾಗುತ್ತಾರೆ ಎಂದು ಅವರು ಹೊಂದಿದ್ದ ವಿಶ್ವಾಸವನ್ನು ಧ್ವನಿಸುತ್ತವೆ. ‘ಎಲ್ಲ ಧಾರ್ಮಿಕ ಮುಖಂಡರೂ ಅಸ್ಪೃಶ್ಯತೆಗೆ ವಿರುದ್ಧವಾಗಿದ್ದರು’ ಎಂದು ದಾಕ್ಷಾಯಣಿ ಹೇಳಿದ್ದರು. ಅಸ್ಪೃಶ್ಯತೆ ವಿಚಾರವಾಗಿ ಇನ್ನೂ ಒಂದು ಮಾತು ಹೇಳಿದ್ದರು: ‘ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯತೆ ಎಂಬ ಪದವನ್ನು ಇಷ್ಪಪಡುತ್ತಿಲ್ಲದಿರುವುದು ನಮಗೆ ಕಾಣುತ್ತಿದೆ. ಅಸ್ಪೃಶ್ಯತೆ ಆಚರಿಸಿದ್ದಕ್ಕೆ ಬೈಗುಳ ತಿನ್ನಲು ಅವರು ಸಿದ್ಧರಿಲ್ಲ. ಏಕೆಂದರೆ, ಈ ಆಚರಣೆಗೆ ತಾವು ಕಾರಣರು, ಇದನ್ನು ನಮ್ಮ ನೆಲದಿಂದ ನಿರ್ಮೂಲಗೊಳಿಸಬೇಕು ಎಂಬ ತೀರ್ಮಾನವನ್ನು ಅವರು ಕೈಗೊಂಡಿದ್ದಾರೆ.’ ದೇಶದ ಸಾಮಾಜಿಕ ವ್ಯವಸ್ಥೆಯ ಮೇಲಿನ ಅಪಾರ ನಂಬಿಕೆ ಈ ಮಾತುಗಳಲ್ಲಿ ವ್ಯಕ್ತವಾದರೂ, ಆ ನಂಬಿಕೆ ಎಷ್ಟರಮಟ್ಟಿಗೆ ಸತ್ಯವಾಗಿದೆ ಎಂಬುದು ಇಂದು ಬರಿಗಣ್ಣಿಗೆ ಕಾಣುತ್ತಿದೆ.

ಕೇರಳದ ಪುಲಯ ಸಮುದಾಯಕ್ಕೆ ಸೇರಿದ ಈ ಮಹಿಳೆ ದಿಟ್ಟೆ ಎಂಬುದನ್ನು ಅವರ ಬದುಕು ಸ್ಪಷ್ಟವಾಗಿ ಹೇಳುತ್ತದೆ. ಕೇರಳದ ನಿರ್ದಿಷ್ಟ ಜಾತಿಗಳ ಮಹಿಳೆಯರು ಎದೆ ಭಾಗವನ್ನು ವಸ್ತ್ರದಿಂದ ಮುಚ್ಚಿಕೊಳ್ಳಲು ಅವಕಾಶ ಇಲ್ಲದಂತಹ ಸಂದರ್ಭದಲ್ಲಿ, ಎದೆ ಭಾಗವನ್ನು ಮುಚ್ಚುವ ವಸ್ತ್ರ ತೊಟ್ಟ ಮಹಿಳೆಯರಲ್ಲಿ ದಾಕ್ಷಾಯಣಿ ಮೊದಲಿಗರು. ಅವರ ದಿಟ್ಟತನವು ಸಂವಿಧಾನ ರಚನಾ ಸಭೆಯಲ್ಲಿ ಆಡಿದ ಕೆಲವು ಮಾತುಗಳಲ್ಲಿಯೂ ವ್ಯಕ್ತವಾಗಿದೆ. ಸಭೆಯ ಮುಂದೆ ಇರಿಸಿದ್ದ ಕರಡನ್ನು ಪರಿಶೀಲಿಸಿ ದಾಕ್ಷಾಯಣಿ ಅವರು: ‘ಸಂವಿಧಾನ ರಚನಾ ಸಭೆಯು ಆರಂಭದ ದಿನದಿಂದಲೂ ಸಂವಿಧಾನ ರಚನೆಯ ಬದಲು ಬೇರೆ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿತು ಎಂಬ ಆತಂಕ ನನ್ನದು’ ಎಂದು ಹೇಳಿದ್ದರು. ನೆಹರೂ, ಅಂಬೇಡ್ಕರ್‌ ಅವರಂತಹ ನಾಯಕರ ಎದುರು ಈ ಮಾತು ಹೇಳುವುದು ಸಾಮಾನ್ಯದ ಸಂಗತಿಯೇ?!

ಇಷ್ಟೇ ಅಲ್ಲ, ದಾಕ್ಷಾಯಣಿ ಅವರು ಸಭೆಯಲ್ಲಿ ಇನ್ನೂ ಕೆಲವು ಕಟು ಮಾತುಗಳನ್ನು ಆಡಿದ್ದರು. ಅವು ಹೀಗಿವೆ: ‘ಮಹಾನ್ ನಾಯಕರು ದಿನಂಪ್ರತಿ ಮಾಡುವ ಭಾಷಣಗಳನ್ನು, ಅವುಗಳಲ್ಲಿನ ಆದರ್ಶಗಳು ಮತ್ತು ತತ್ವಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಸಂವಿಧಾನವು ಅವರ ತತ್ವಗಳು ಮತ್ತು ಆಲೋಚನೆಗಳಲ್ಲಿ ಬರಡಾಗಿದೆ. ನಮ್ಮಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿರುವ ನಾಯಕರು ಇದ್ದಾರೆ. ಆದರೂ, ಇಂಥದ್ದೊಂದು ಕರಡನ್ನು ನಮ್ಮ ಮುಂದೆ ಇರಿಸಿರುವುದು ದುರಂತ. ನಮ್ಮ ಮುಂದೆ ಇರಿಸಿರುವ ಕರಡಿನ ಪ್ರತಿಯನ್ನು ಕರಡು ರಚನಾ ಸಮಿತಿವರೂ ಪೂರ್ತಿಯಾಗಿ ಓದಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ.’

ಇಂತಹ ದಿಟ್ಟತನದ ಮಾತುಗಳನ್ನು ಆಡುವುದಕ್ಕೆ ಬೇಕಿರುವ ಧೈರ್ಯವನ್ನು ದಾಕ್ಷಾಯಣಿ ಅವರು ಎಳೆಯ ವಯಸ್ಸಿನಲ್ಲೇ ಸಂಪಾದಿಸಿಕೊಂಡಿದ್ದನ್ನು ಗುರುತಿಸಬಹುದು. ದಾಕ್ಷಾಯಣಿ ಅವರು ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಒಂದು ಪ್ರಸಂಗ ನಡೆಯಿತು. ಅಸ್ಪೃಶ್ಯತೆಯನ್ನು ನಿವಾರಿಸುವ ಉದ್ದೇಶದಿಂದ ಆರಂಭಿಸಿದ ನಿಧಿಯೊಂದಕ್ಕೆ ಹಣ ನೀಡುವಂತೆ ದಾಕ್ಷಾಯಣಿ ಅವರಲ್ಲಿ ಸಹಪಾಠಿಯೊಬ್ಬರು ಮನವಿ ಮಾಡಿದರು. ಇದಕ್ಕೆ ದಾಕ್ಷಾಯಣಿ ನೀಡಿದ ಉತ್ತರ ಮಾರ್ಮಿಕವಾಗಿತ್ತು: ‘ಅಸ್ಪೃಶ್ಯತೆಗೆ ನೀವೇ ಕಾರಣರು. ಹಾಗಾಗಿ ಅದನ್ನು ತೊಡೆಯಲು ಅಗತ್ಯವಿರುವ ಹಣವನ್ನು ನೀವೇ ಒಟ್ಟುಗೂಡಿಸಬೇಕು. ಹಣವನ್ನು ನೀವು ನನ್ನ ಬಳಿ ಕೇಳುವುದು ಸೂಕ್ತವಲ್ಲ’ ಎಂದಿದ್ದರು.

ಇಷ್ಟೇ ಅಲ್ಲ, ದಾಕ್ಷಾಯಣಿ ಅವರು ಎಳೆಯ ವಯಸ್ಸಿನಲ್ಲಿ ಇದ್ದಾಗಿನಿಂದಲೂ ಅಸ್ಪೃಶ್ಯತೆ ಎಂಬ ಪದವೇ ಅವರಲ್ಲಿ ಬಂಡಾಯದ ಮನೋಭಾವವನ್ನು ಉದ್ದೀಪಿಸುತ್ತಿತ್ತು. ‘ಶಾಲೆಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಚಹಾ ಕೂಟದಂತಹ ಕಾರ್ಯಕ್ರಮಗಳ ವೇಳೆ ಅಸ್ಪೃಶ್ಯತೆ ಆಚರಿಸಲಾಗುತ್ತಿತ್ತು. ಅಂತಹ ಕಾರ್ಯಕ್ರಮಗಳಿಗೆ ನಾನು ಸಹಕಾರವನ್ನೇ ನೀಡುತ್ತಿರಲಿಲ್ಲ’ ಎಂದು ದಾಕ್ಷಾಯಣಿ ಹೇಳಿಕೊಂಡಿದ್ದಾರೆ. ‘ಮಹಾತ್ಮ ಗಾಂಧಿ ಮಾಡಿದ ಕೆಲಸಗಳಿಂದಾಗಿಯೇ ಇಂದು ಜನರಲ್ಲಿ ಪರಿವರ್ತನೆ ಬಂದಿದೆ’ ಎಂದು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಅವರು ಹೇಳಿದ್ದರು.

ಜಾತೀಯತೆ ಹಾಗೂ ಅಸ್ಪೃಶ್ಯತೆಯನ್ನು ಕಂಡು, ಅನುಭವಿಸಿದ್ದರೂ, ಅದನ್ನು ಆಚರಿಸುವವರ ಬಗ್ಗೆ ದಾಕ್ಷಾಯಣಿ ಅವರಲ್ಲಿ ದ್ವೇಷ ಇತ್ತೇ? ಈ ಪ್ರಶ್ನೆಯನ್ನು ಇಟ್ಟುಕೊಂಡು ಉತ್ತರ ಹುಡುಕಿದರೆ, ಅಸ್ಪೃಶ್ಯತೆ ಬಗ್ಗೆ ಅವರಲ್ಲಿನ ಧೋರಣೆ ಏನಿತ್ತು ಎಂಬುದರ ಚಿತ್ರಣ ಕಣ್ಣು ಮುಂದೆ ಮೂಡುತ್ತದೆ. ‘ಈ ಸಂವಿಧಾನ ಜಾರಿಗೆ ಬಂದ ನಂತರ ನಾವು ಬಯಸುವುದು, ಅಸ್ಪೃಶ್ಯತೆಯನ್ನು ನಿವಾರಿಸುವ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಜನರನ್ನು ಶಿಕ್ಷಿಸುವುದಲ್ಲ. ಅಸ್ಪೃಶ್ಯತೆಯ ನಿವಾರಣೆಯ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಅಭಿಯಾನ ಹಮ್ಮಿಕೊಳ್ಳಬೇಕು. ಆಗ ಮಾತ್ರ ನಾವು ಬಯಸುವ ಸುಧಾರಣೆಗಳು ಸಾಧ್ಯವಾಗುತ್ತವೆ’ ಎಂದು ಅವರು ಪ್ರತಿಪಾದಿಸಿದ್ದರು.

‘ಕಾಲ ಸರಿದಂತೆ, ಅಸ್ಪಶ್ಯರು ಎಂಬ ಸಮುದಾಯ ಇರುವುದಿಲ್ಲ ಎನ್ನುವುದು ನನ್ನ ಆಶಯ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಪ್ರತಿನಿಧಿಗಳ ಬಳಿ ಯಾರಾದರೂ ಅಸ್ಪೃಶ್ಯತೆಯ ಬಗ್ಗೆ ಪ್ರಶ್ನಿಸಿದಾಗ ಅವರು ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಅನಿವಾರ್ಯತೆಯೂ ಇರುವುದಿಲ್ಲ’ ಎಂದೂ ಅವರು ಸಂವಿಧಾನ ರಚನಾ ಸಭೆಯಲ್ಲಿ ಹೇಳಿದ್ದರು. ದಾಕ್ಷಾಯಣಿ ಅವರು 66ನೇ ವಯಸ್ಸಿನಲ್ಲಿ (1978ರಲ್ಲಿ) ನಿಧನರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry