ನಾರಿ ಸಬಲೀಕರಣ: ಕ್ರಿಯಾಶೀಲತೆಯೇ ದಾರಿ

ಮಂಗಳವಾರ, ಮಾರ್ಚ್ 19, 2019
27 °C

ನಾರಿ ಸಬಲೀಕರಣ: ಕ್ರಿಯಾಶೀಲತೆಯೇ ದಾರಿ

Published:
Updated:
ನಾರಿ ಸಬಲೀಕರಣ: ಕ್ರಿಯಾಶೀಲತೆಯೇ ದಾರಿ

ಬೆಂಗಳೂರು: ಗಂಡಸರು ಒಡ್ಡುತ್ತಿದ್ದ, ಒಡ್ಡುತ್ತಲೇ ಇರುವ ಸವಾಲುಗಳನ್ನು ಮೆಟ್ಟಿನಿಂತ ಆತ್ಮವಿಶ್ವಾಸ ಅವರ ಮೊಗಗಳಲ್ಲಿ ನಿಗಿನಿಗಿಸುತ್ತಿತ್ತು. ರಾಜಕೀಯದಲ್ಲಿ ಮುನ್ನೆಲೆಗೆ ಬರಲೇಬಾರದು ಎಂಬ ಏಕೈಕ ಕಾರಣಕ್ಕೆ ಚಾರಿತ್ರ್ಯವಧೆ, ಕಳಂಕ ಅಂಟಿಸುವ ಸಕಲ ಕುತಂತ್ರಗಳನ್ನೂ ಸೆಟೆದೊದ್ದು ಮುನ್ನುಗ್ಗಿ ಬಂದಿದ್ದ ಆ ಛಲಗಾತಿಯರ ಧ್ವನಿಯಲ್ಲಿ ಕಿಂಚಿತ್ತೂ ನಡುಕವಿರಲಿಲ್ಲ. ‘ಓ ಬನ್ನಿ... ಅಕ್ಕತಂಗಿಯರೇ... ಸಾಗಿ ಬನ್ನಿ... ಕಣ್ಣಗಡಿಯಾಚೆಗೂ ಇದೆ ಗಗನಬಿತ್ತರ, ಶಿಖರದೆತ್ತರದ ಹಾದಿ’ ಎಂದು ಸ್ತ್ರೀ ಸಂಕುಲವನ್ನು ಕೈಬೀಸಿ ಕರೆದು ‘ಪ್ರಮೀಳಾ ರಾಜ್ಯ’ವನ್ನು ಕಟ್ಟುವ ಉಮೇದು ಅವರ ಮಾತುಗಳಲ್ಲಿ ಚಿಮ್ಮುತ್ತಿತ್ತು. ಮೇಲಿಂದ ಮೇಲೆ ತಮ್ಮ ಮೇಲೆ ಬಿದ್ದ ಗೋಡೆಗಳನ್ನು ಕೆಡವಿದರೂ ಬಸವಳಿಯದೆ, ನಾರೀ ಶಕ್ತಿಗೂ ಇದೆ ನಾಡನಾಳುವ ಧೀಶಕ್ತಿ ಎಂಬುದನ್ನು ತೋರಿಸಿದ ದಿಟ್ಟತೆ ಅವರಲ್ಲಿ ಮಿನುಗುತ್ತಿತ್ತು.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಉಮಾಶ್ರೀ, ಶೋಭಾ ಕರಂದ್ಲಾಜೆ, ಡಾ. ಲಕ್ಷ್ಮಿ ಅಶ್ವಿನ್ ಗೌಡ ತಮ್ಮ ಪಕ್ಷಗಳ ಸಿದ್ಧಾಂತದ ಭಿನ್ನತೆ ಮರೆತು, ಕೂಡಿ ಕಲೆತು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡರು. ರಾಜಕೀಯ ‘ನಾರೀ ಪಥ’ದಲ್ಲಿ ನಾಯಕಿಯರು ಸಾಗಿದ ಕಷ್ಟದ ದಿನಗಳ ಮೆಲುಕುಗಳು, ಮುನ್ನಡೆ ಗಳಿಸಲು ಬೇಕಾದ ಉಪಾಯಗಳ ಕುರಿತ ಅವರ ಮಾತುಗಳನ್ನು ಸಾವಿರಾರು ಜನ ಫೇಸ್‌ಬುಕ್ ಲೈವ್‌ನಲ್ಲಿ ನೋಡಿದರು, ಆಲಿಸಿದರು.

ತಾವು ಸವೆಸಿದ ಕಲ್ಲುಮುಳ್ಳಿನ ದಾರಿ, ತಮ್ಮ ಸಹಭಾಗಿಗಳು ಬೇಕೆಂತಲೇ ತಂದೊಡ್ಡಿದ ಅಡ್ಡಿ ಆತಂಕಗಳು, ಪ್ರತಿ ನಡೆಗೂ ಧುತ್ತೆಂದು ಎದುರಾಗುತ್ತಿದ್ದ ವಿಘ್ನಗಳನ್ನು ಹೆಡೆಮುರಿ ಕಟ್ಟಿ, ರಾಜಕೀಯ ಪಡಸಾಲೆಯ ಮುಂಚೂಣಿಗೆ ಬಂದ ಯಶೋಗಾಥೆಯನ್ನು ನಾಯಕಿಯರು ಹರವಿಟ್ಟರು. ಸಂಕಲ್ಪ ಬಲವೊಂದಿದ್ದರೆ ಯಾವುದೇ ಗೋಡೆಗಳು, ಮುಳ್ಳುತಂತಿಯ ಬೇಲಿಗಳು ಯಾರನ್ನೂ ತಡೆಯಲಾರವು ಎಂಬುದನ್ನು ತಮ್ಮ ಮಾತುಗಳಲ್ಲಿ ಬಿಡಿಸಿಟ್ಟರು. ನೋವುಗಳೇ ತುಂಬಿದ ಕವಲು ದಾರಿಗಳಲ್ಲಿ ಸಾಗಿಬಂದು, ವಿಧಾನಸೌಧದ ಮೂರನೇ ಮಹಡಿಗೆ ಏರುವ ಶ್ರಮವೇನು ಎಂಬುದನ್ನು ಅವರ ಧ್ವನಿಭಾವಗಳೇ ಬಿಂಬಿಸಿದವು.

ಕರುಣಾಳು ರಾಘವನಲಿ ತಪ್ಪಿಲ್ಲ: ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 50ರಷ್ಟು ಮೀಸಲಾತಿ ಬೇಕು ಎಂಬ ವಿಷಯದಲ್ಲಿ ಮೂವರೂ ನಾಯಕಿಯರು ಸಹಮತ ವ್ಯಕ್ತಪಡಿಸಿದರು. ‘ಸ್ತ್ರೀಮತವನುತ್ತರಿಸಲಾರದೇ... ’ ಇರುವ ಪುರುಷ ಠೇಂಕಾರದ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ನೀಡುವಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ನಿಲುವೇನು ಎಂಬ ಪ್ರಶ್ನೆ ಎದುರಾದಾಗ ಉಮಾಶ್ರೀ ಮತ್ತು ಶೋಭಾ ಉತ್ತರಕ್ಕಾಗಿ ತಡಕಾಡಿದರು. ಕವಿ ಲಕ್ಷ್ಮೀಶನ `ಜೈಮಿನಿ ಭಾರತ’ದಲ್ಲಿ `ಕರುಣಾಳು ರಾಘವನಲಿ ತಪ್ಪಿಲ್ಲ’ ಎಂದು ರಾಮನ ಬಗ್ಗೆ ಸೀತೆಯ ಮಾತೊಂದಿದೆ. ಮೀಸಲಾತಿ ಮಸೂದೆಯ ಹಣೆಬರಹದ ಬಗ್ಗೆ ಹೇಳುವಾಗಲೂ ಇದೇ ‘ವ್ಯಂಗ್ಯೋಕ್ತಿ’ಯ ಮಾದರಿಯನ್ನು ನಾಯಕಿಯರು ಅನುಸರಿಸಿದರು. ‘ಪುರುಷರದೇನೂ ತಪ್ಪಿಲ್ಲ. ಮೀಸಲಾತಿ ಬೇಕು. ಅದಕ್ಕಾಗಿ ಕಾಯುವುದು ಬಿಟ್ಟು ಮಹಿಳೆಯರು ಸಕ್ರಿಯ ರಾಜಕಾರಣದಲ್ಲಿ ತೊಡಗಬೇಕು. ಸಕ್ರಿಯವಾಗುವ ಮೂಲಕವೇ ಸಬಲೀಕರಣಗೊಂಡರೆ ಮೀಸಲಾತಿಯ ಗೊಡವೆ ಇರುವುದಿಲ್ಲ’ ಎಂಬ ನಿಲುಮೆಗೆ ಬಂದು ನಿಂತರು.

‘ರಾಜಕೀಯ ಎಂದರೆ ಇದ್ದ ಅಸಡ್ಡೆ ಹಾಗೂ ಮೂಗು ಮುರಿಯುವ ಪರಿಸ್ಥಿತಿ ಬದಲಾಗಿದೆ. ಮಹಿಳೆಯರಲ್ಲೂ ಎಚ್ಚರ ಬರತೊಡಗಿದ್ದು, ರಾಜಕೀಯ, ಸಾಮಾಜಿಕ ಪ್ರಜ್ಞೆ ಜಾಗೃತವಾಗುತ್ತಿದೆ. ವೈಯಕ್ತಿಕ ಶಕ್ತಿಯನ್ನು ಬಳಸುವ ಜತೆಗೆ ಪಕ್ಷದ ಬೆಂಬಲವೂ ಬೇಕಾಗುತ್ತದೆ. ಜನ ನಮ್ಮನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೀಸಲಾತಿಯನ್ನು ಹೋರಾಟ ಮಾಡಿ ಪಡೆಯಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಉಮಾಶ್ರೀ ಪ್ರತಿಪಾದಿಸಿದರು.

‘ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಸೆ. ಆದರೆ, ಪುರುಷರಿಗೆ ಹೋಲಿಕೆ ಮಾಡಿ ಮಹಿಳಾ ಅಭ್ಯರ್ಥಿಗೆ ಗೆಲ್ಲುವ ಸಾಮರ್ಥ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗುತ್ತಿದೆ. ಈ ವಿಷಯದಲ್ಲಿ ದೊಡ್ಡ ಕಂದರವೇ ಇದೆ. ನಾವೂ ವಿವಿಧ ಹಂತಗಳಲ್ಲಿ ಹೋರಾಟ ಮಾಡಿ ಮೇಲೆ ಬಂದರೆ ಯೋಗ್ಯತೆ ತಾನಾಗಿ ಒದಗುತ್ತದೆ. ರಾಜಕೀಯ ಪಕ್ಷದ ನೇತಾರರು ಕೂಡ ಮಹಿಳೆಯರಿಗೆ ಟಿಕೆಟ್ ನೀಡಲು ಆದ್ಯತೆ ನೀಡಬೇಕು’ ಎಂದು ಹೇಳಿದರು.

ಈ ವಿಷಯದಲ್ಲಿ ತಮ್ಮದೇ ಆದ ಅಭಿಪ್ರಾಯ ಹಂಚಿಕೊಂಡ ಶೋಭಾ ಕರಂದ್ಲಾಜೆ, ‘ಗಂಡ ರಾಜಕಾರಣಿಯಾಗಿದ್ದರೆ ಹೆಂಡತಿ ಕಾರ್ಪೊರೇಟರ್‌, ತಂದೆ ರಾಜಕಾರಣಿಯಾದರೆ ಮಗಳಿಗೆ ಟಿಕೆಟ್, ಗಂಡ ಪ್ರಭಾವಿಯಾದರೆ ಪತ್ನಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂಬ ಪರಿಸ್ಥಿತಿ ಇದೆ. ಮಹಿಳಾ ಕಾರ್ಪೊರೇಟರ್‌ ಅಥವಾ ಪಂಚಾಯಿತಿ ಅಧ್ಯಕ್ಷೆಗೆ ಕರೆ ಮಾಡಿದರೆ, ಆಕೆಯ ಗಂಡ ಫೋನ್ ರಿಸೀವ್‌ ಮಾಡುತ್ತಾರೆ. ಇದು ಬದಲಾಗಬೇಕಿದೆ’ ಎಂದು ಹೇಳಿದರು.

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಸ್ಥಾಪನೆಯಾಗುವವರೆಗೆ, ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಸೆರಗು ಹೊದ್ದು ಬರುತ್ತಿದ್ದರು. ಸ್ತ್ರೀಶಕ್ತಿ ಸಂಘಗಳ ಸಭೆಗೆ ಬರಲು ಆರಂಭಿಸಿದ ಮೇಲೆ ಜಾಗೃತಿ ಮೂಡಿತು. ಮಹಿಳೆಯರಿಗೆ ಧ್ವನಿ ಬರಬೇಕಾದರೆ ಶಿಕ್ಷಣ ಪಡೆದು, ಆರ್ಥಿಕವಾಗಿ ಸದೃಢರಾಗಬೇಕು. ರಾಜಕೀಯ ಪಕ್ಷಗಳು ಕೂಡ ರಾಜಕಾರಣಿಗಳ ಮಕ್ಕಳು, ಪತ್ನಿ ಎಂಬ ಕಾರಣಕ್ಕೆ ಮನೆಯಲ್ಲಿ ಕುಳಿತವರನ್ನು ಕರೆತಂದು ಚುನಾವಣೆಗೆ ನಿಲ್ಲಿಸುವುದನ್ನು ಬಿಡಬೇಕು ಎಂದರು.

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಸಿಗುವ ಕಾರಣಕ್ಕೆ (ಅಳಿಯಕಟ್ಟು ಪದ್ಧತಿ) ದಕ್ಷಿಣ ಕನ್ನಡದ ಬಂಟ, ಮೀನುಗಾರರು, ಬಿಲ್ಲವ ಸಮಾಜದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ. ತಮ್ಮ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕು, ಮದುವೆ ಹೇಗೆ ಮಾಡಬೇಕು, ಯಾವ ಹುಡುಗ ಸೂಕ್ತ, ಮನೆ ಹೇಗೆ ಕಟ್ಟಬೇಕು ಎಂಬುದನ್ನು ಮಹಿಳೆಯರೇ ನಿರ್ಧರಿಸುತ್ತಾರೆ. ಹೀಗೆ ಆರ್ಥಿಕ ಸಬಲತೆಯಿಂದಾಗಿ ಮಹಿಳೆಯರು ಬಲಿಷ್ಠರಾಗಿದ್ದಾರೆ ಎಂದೂ ಶೋಭಾ ಹೇಳಿದರು.

ಜೆಡಿಎಸ್‌ನ ಲಕ್ಷ್ಮಿ, ‘ಮಹಿಳೆಯರಲ್ಲಿ ಅಪಾರ ಶಕ್ತಿ ಇದೆ. ಅದು ಮನೆಯಲ್ಲಿ ಮಾತ್ರ ಸದ್ಬಳಕೆಯಾಗುತ್ತಿದೆ. ರಾಜಕೀಯದಲ್ಲೂ ಅದು ಸದ್ಬಳಕೆಯಾಗಬೇಕು. ಭಾರತೀಯ ನಾರಿ ದೇವಮಾನ್ಯೆ ಎಂದು ಕುವೆಂಪು ಬಣ್ಣಿಸಿದ್ದಾರೆ. ಅದು ವಾಸ್ತವವಾಗಬೇಕಾದರೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

ಇತಿಹಾಸದಲ್ಲಿ ತುಳಿತಕ್ಕೊಳಗಾದ ಜೀವ ಎಂದರೆ ಅದು ಹೆಣ್ಣು ಜೀವ. ಲೋಕಸಭೆಯ 545 ಸದಸ್ಯರ ಪೈಕಿ 59, ರಾಜ್ಯಸಭೆಯ 242 ಸದಸ್ಯರ ಪೈಕಿ 25 ಹಾಗೂ ವಿಧಾನಸಭೆಯ 225 ಸದಸ್ಯರ ಪೈಕಿ ಏಳು ಮಹಿಳೆಯರಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಶೇ 50ರಷ್ಟು ಬೇಕು ಎಂಬುದು ಬೇಡಿಕೆಯಾಗಿಯೇ ಉಳಿದಿದೆ ಎಂದೂ ಅವರು ಹೇಳಿದರು.

ವ್ಯೂಸ್‌ ಎಡಿಟರ್‌ ಸಿ.ಜಿ. ಮಂಜುಳಾ ಸಂವಾದವನ್ನು ನಡೆಸಿಕೊಟ್ಟರು.

ಪರಿಚಯ
ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

‘ಒಡಲಾಳ’ದ ಸಾಕವ್ವನಾಗಿ ರಂಗದ ಮೇಲೆ ಬೆಳಗಿದ ಉಮಾಶ್ರೀ, ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯದಲ್ಲೂ ಸಾಕವ್ವನ ಛಲವನ್ನು ಪ್ರದರ್ಶಿಸಿದವರು. ತೇರದಾಳ ಕ್ಷೇತ್ರದಲ್ಲಿ ಸತತ ಪರಿಶ್ರಮ ಪಟ್ಟು ಗೆದ್ದ ಅವರು, ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಎರಡು ಸಚಿವ ಖಾತೆಗಳನ್ನು ನಿರ್ವಹಿಸಿದ್ದಾರೆ.

ಶೋಭಾ ಕರಂದ್ಲಾಜೆ, ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಎಂ.ಎಸ್.ಡಬ್ಲ್ಯು ಪದವೀಧರೆಯಾದ ಶೋಭಾ, ಸಂಘದ ಸಾಮಾನ್ಯ ಕಾರ್ಯಕರ್ತೆಯಾಗಿ  ಬಿಜೆಪಿಯಲ್ಲಿ ತೊಡಗಿಸಿಕೊಂಡವರು. ದೂರದ ಪುತ್ತೂರಿನ ಶೋಭಾ ಬೆಂಗಳೂರಿನ ಯಶವಂತಪುರ ವಿದಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದವರು. ಗ್ರಾಮೀಣಾಭಿವೃದ್ಧಿ, ಇಂಧನ ಖಾತೆ ಸಚಿವೆಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಈಗ ಉಡುಪಿ ಕ್ಷೇತ್ರದ ಸಂಸದೆ.

ಡಾ. ಲಕ್ಷ್ಮಿ ಅಶ್ವಿನ್ ಗೌಡ, ಜೆಡಿಎಸ್ ಯುವ ನಾಯಕಿ

ವೈದ್ಯ ಪದವೀಧರೆ ಲಕ್ಷ್ಮಿ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಭಾರತೀಯ ರೈಲ್ವೆ ಸೇವೆಗೆ (ಐಆರ್‌ಎಸ್‌) ಆಯ್ಕೆಯಾದವರು. ಕೋಲ್ಕತ್ತದಲ್ಲಿ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಬೇಕು ಎಂಬ ಕಾರಣಕ್ಕೆ ಐಆರ್‌ಎಸ್‌ಗೆ ರಾಜೀನಾಮೆ ನೀಡಿ, ಇತ್ತೀಚೆಗೆ ಜೆಡಿಎಸ್‌ ಸೇರಿದ್ದಾರೆ.

* ಕೆ.ಎಸ್‌. ವಿಮಲಾ, ಹೋರಾಟಗಾರ್ತಿ: ರಾಜಕೀಯ ಪಕ್ಷಗಳ ಮಾತು– ಕೃತಿ ನಡುವೆ ಅಗಾಧ ಅಂತರ ಇದೆ. ಹೆಣ್ಣು ಮಕ್ಕಳ ಸಶಕ್ತೀಕರಣವು ಕಲ್ಯಾಣ ಯೋಜನೆ ಎಂಬ ಭಾವನೆ ಇದೆ. ಪುರುಷ ಪ್ರಧಾನ ಪಾಳೆಗಾರಿ ಮೌಲ್ಯಗಳು ಸಮಾಜವನ್ನು ಆಳುತ್ತಿವೆ. ಅವಳ ಆಲೋಚನಾ ಕ್ರಮಗಳನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ಇಡೀ ಸಮಾಜವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಏನು?

ಉಮಾಶ್ರೀ: ಸಮಾಜದಲ್ಲಿ ಬದಲಾವಣೆ ಆಗುತ್ತಿದೆ. ಅದನ್ನು ಸ್ವೀಕರಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಉಡುಗೆ ವಿಷಯ ವೈಯಕ್ತಿಕ. ಅದನ್ನು ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ. ಆ ಕಾರಣಕ್ಕೆ ಸ್ವೇಚ್ಛಾಚಾರದಿಂದ ವರ್ತಿಸುವುದೂ ಸರಿಯಲ್ಲ.

ಶೋಭಾ: ಹೆಣ್ಣು ಮಕ್ಕಳು ತಮಗೆ ಸ್ಪರ್ಧಿ ಎಂಬ ಭಯ ಪುರುಷರಿಗೆ ಇದೆ. ಅವರಿಗೆ ಶೇ 33 ಮೀಸಲಾತಿ ನೀಡಿದರೂ 60ರಿಂದ 70 ಸ್ಥಾನ ಮೀಸಲಿಡಬೇಕಾಗುತ್ತದೆ. ಇದರಿಂದ ತಮ್ಮ ಪಾಲು ಕಡಿತವಾಗುತ್ತದೆ ಎಂಬ ಭೀತಿ ಪುರುಷರಿಗೆ ಇದೆ. ಈ ಕಾರಣಕ್ಕೆ ಮಹಿಳೆಯರನ್ನು ಹಿಂದಕ್ಕೆ ತಳ್ಳುವ ಕೆಲಸ ಆಗುತ್ತಿದೆ. ಶಿಕ್ಷಣ ಪಡೆದ ಮಹಿಳೆಯರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು. ಪಕ್ಷದೊಳಗೆ ಮಹಿಳೆಯರು ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕಡಿಮೆಯಾಗಬೇಕು.

ಡಾ. ಲಕ್ಷ್ಮಿ: ಹೆಣ್ಣು ರಾಜಕೀಯವಾಗಿ ಸಬಲವಾಗಲು ಆರ್ಥಿಕ ಹಾಗೂ ಕೌಟುಂಬಿಕವಾಗಿ ಸದೃಢಳು ಆಗಬೇಕು. ಹೆಣ್ಣಿಗೆ ಹೆಣ್ಣೇ ಶತ್ರು ಆಗಿದ್ದಾಳೆ. ಶಿಕ್ಷಣ ಪಡೆದು ಸಾಮಾಜಿಕ ಅಡ್ಡಗೋಡೆಗಳನ್ನು ದಾಟಿ ಆಕೆ ಬೆಳೆಯಬೇಕು. ಆಕೆಗೆ ಹುಟ್ಟಿನಿಂದಲೇ ಪ್ರಾಮಾಣಿಕತೆ ಹಾಗೂ ಕಾರ್ಯತತ್ಪರತೆ ಬಂದಿದೆ. ಆಕೆ ಶಾಂತಿಪ್ರಿಯೆ. ಸರಿತೂಕ ಹಾಗೂ ಸಮತೂಕ ಆಕೆಗಿದೆ. ಶಾಂತಿ ನೆಲೆಸುವಂತೆ ಮಾಡುವ ತಾಕತ್ತು ಇದೆ. ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಬಲ್ಲಳು.

* ಮೀನಾಕ್ಷಿ ಭರತ್‌, ನಗರ ಯೋಜನಾ ತಜ್ಞೆ: ಸ್ಯಾನಿಟರಿ ನ್ಯಾಪ್‌ಕಿನ್‌ ವಿಲೇವಾರಿ ಸಮಸ್ಯೆಯಾಗಿದೆ. ಇದಕ್ಕೆ ಸುಸ್ಥಿರ ಪರಿಹಾರ ರೂಪಿಸ ಬೇಕಿದೆ. ಇದಕ್ಕೆ ಯಾವ ಯೋಜನೆ ರೂಪಿಸುತ್ತೀರಿ?

ಉಮಾಶ್ರೀ: ಇದು ನಿಜವೂ ಕೂಡ. ಬೇರೆ ತಂತ್ರಜ್ಞಾನ ಬಳಸಬೇಕು. ಅದನ್ನು ಸರ್ಕಾರ ಮಾಡಬೇಕು. ಬದಲಾವಣೆ ಮತ್ತು ಸುಧಾರಣೆಯನ್ನು ಮಹಿಳೆ ತಕ್ಷಣ ಒಪ್ಪಿಕೊಳ್ಳುವುದೂ ಮುಖ್ಯ. ಎಲ್ಲ ವಿಷಯದಲ್ಲೂ ಅಷ್ಟೆ.

ಶೋಭಾ: ಹಳೆ ಪದ್ಧತಿ ಬಿಟ್ಟು ಹೊಸ ಪದ್ಧತಿಗೆ ಬನ್ನಿ ಎಂದು ಮಹಿಳೆಯರಿಗೆ ಹೇಳಿದ್ದೇವೆ. ಮತ್ತೆ ಹಳೆಯ ಪದ್ಧತಿಗೆ ಹೋಗಿ ಎಂದು ಹೇಳುವುದು ಕಷ್ಟ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕು.

ಡಾ. ಲಕ್ಷ್ಮಿ: ಅರುಣಾಚಲಂ ಎಂಬುವರು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಸುಸ್ಥಿರ ಪರಿಹಾರ ಸೂಚಿಸಿದ್ದರು. ಅದನ್ನು ಅಳವಡಿಸಿಕೊಳ್ಳಬೇಕು.

* ಸೂರ್ಯಪ್ರಕಾಶ್‌, ‘ದಕ್ಷ್’ ಸಂಸ್ಥೆಯ ಸಂಶೋಧಕ: ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಆಗುತ್ತಿಲ್ಲ. ಈ ಬಗ್ಗೆ ನೀವೇನು ಮಾಡುತ್ತೀರಿ?

ಶೋಭಾ: ಸಮಾಜದಲ್ಲಿನ ಒಟ್ಟು ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಬೇಕು. ಆಕೆಯ ದೇಹಪ್ರಕೃತಿ ಕಾರಣಕ್ಕೆ ದೌರ್ಜನ್ಯ ಹಾಗೂ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರಿಗೆ ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಸರ್ಕಾರ ನೀತಿಗಳನ್ನು ರೂಪಿಸುವ ಮೂಲಕ ಅವುಗಳನ್ನು ಮುಟ್ಟಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಕೇಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನಜಾಗೃತಿ ಮೂಡಿಸಬೇಕಾಗುತ್ತದೆ. ಮಹಿಳೆಯರ ಸಮಸ್ಯೆ ಮಹಿಳೆಯರಿಗೆ ಮಾತ್ರ ಅರ್ಥವಾಗುತ್ತದೆ.

ಡಾ. ಲಕ್ಷ್ಮಿ: ಕೌಟುಂಬಿಕ ನೆಲೆಯಲ್ಲಿ ಪತಿ, ಅತ್ತೆ ಸೇರಿದಂತೆ ಹಲವರಿಂದ ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಸಬಲೀಕರಣವನ್ನು ಪಕ್ಷಗಳು ಮಾಡಬೇಕು. ಆಕೆಗೆ ಆರ್ಥಿಕ ಕುಂದುಕೊರತೆ ಕಾಡದಂತೆ ನೋಡಿಕೊಳ್ಳಬೇಕು. ಆಗ ರಾಜಕೀಯ ಪ್ರವೇಶ ಸುಲಲಿತವಾಗುತ್ತದೆ.

‘ರಾಜಕಾರಣದಲ್ಲೇ ಅತೀ ಹೆಚ್ಚು ಗಾಸಿಪ್‌’

ಚೂಡಿ ಶಿವರಾಂ, ಅಂಕಣಕಾರ್ತಿ: ಸಂಸತ್ತಿನಲ್ಲಿ ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆಯು ಶೈತ್ಯಾಗಾರದಲ್ಲಿದೆ. ಮೂವರು ಮಹಿಳೆಯರಷ್ಟೇ ಕ್ಯಾಬಿನೆಟ್‌ ಸಚಿವರಾಗಿದ್ದಾರೆ. ಈ ಪರಿಸ್ಥಿತಿ ಬದಲಾಗುವುದು ಯಾವಾಗ?

ಉಮಾಶ್ರೀ: ಹೆಣ್ಣು ಮಕ್ಕಳಿಗೆ ಟಿಕೆಟ್‌ ನೀಡುವಂತೆ ನಾವೆಲ್ಲ ನಿರಂತರ ಒತ್ತಡ ಹೇರುತ್ತಾ ಬಂದಿದ್ದೇವೆ. ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಾಗ ಪಕ್ಷಗಳು ಗೆಲ್ಲುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಪ್ರಯೋಗ ಮಾಡಲು ಸಿದ್ಧವಿಲ್ಲ. 2008ರಲ್ಲಿ ತೇರದಾಳದಲ್ಲಿ ಚುನಾವಣೆಗೆ ನಿಂತೆ. ‘224 ಸೀಟುಗಳಲ್ಲಿ ಒಂದು ಸೀಟನ್ನು ಮಹಿಳೆಗೆ ನೀಡಿದ್ದೇವೆ. ಸೋತರೆ ಕಳೆದುಕೊಳ್ಳುವುದು ಒಂದು ಸೀಟು ತಾನೇ’ ಎಂಬ ಮಾತುಗಳು ಬಂದವು.

ಚುನಾವಣೆಗೆ 10 ದಿನಗಳು ಇರುವಾಗ ಅಲ್ಲಿಗೆ ಹೋದೆ. ಗುರುತು ಪರಿಚಯ ಇಲ್ಲದ ಊರದು. ಹೊರಗಿನವರನ್ನು ಕಣಕ್ಕೆ ಇಳಿಸಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಊರಿನ ಒಳಗಡೆ ಬಿಡಲಿಲ್ಲ. ಈ ಎಲ್ಲ ಸವಾಲುಗಳನ್ನು ಜೀರ್ಣಿಸಿಕೊಂಡು 52,000 ಮತಗಳನ್ನು ಪಡೆದೆ. ಸೋತ ಬಳಿಕ ಪಕ್ಷ ಸಂಘಟನೆ ಮಾಡಿದೆ.

2013ರ ಚುನಾವಣೆಯಲ್ಲಿ 69,000 ಮತಗಳನ್ನು ಪಡೆದು ಗೆದ್ದೆ. ನನಗೆ ಎದುರಾದ ಎಲ್ಲ ಬಗೆಯ ಸಂಕಟಗಳನ್ನು ಎದುರಿಸಿ ಅಂತಃಶಕ್ತಿಯಿಂದ ಮೇಲೆ ಬಂದೆ. ಶೋಭಾ ಕರಂದ್ಲಾಜೆ ಸಹ ಇದೇ ರೀತಿಯ ಸವಾಲುಗಳನ್ನು ಎದುರಿಸಿದ್ದಾರೆ. ಗೆಲುವಿನ ಸಂಖ್ಯೆ ನೋಡಿದಾಗ ಪುರುಷರೇ ಸಮರ್ಥರು ಎಂಬ ಭಾವನೆಯೂ ಇದೆ.

ಸಾಕಷ್ಟು ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಛಾಪು ಮೂಡಿಸಿದ್ದಾರೆ. ಅಂತಹ ಹೆಣ್ಣು ಮಕ್ಕಳನ್ನು ಹುಡುಕಿ ಸೀಟು ನೀಡುವ ಕೆಲಸ ಆಗಬೇಕು. ಮಹಿಳೆಯರೂ ಬೇರು ಮಟ್ಟದಲ್ಲಿದ್ದು ಹಗಲು ರಾತ್ರಿ ಕೆಲಸ ಮಾಡಬೇಕು. ಒಂದು ದಿನ ಕಣ್ಮರೆಯಾದರೂ ಜನ ಒಪ್ಪಿಕೊಳ್ಳುವುದಿಲ್ಲ. ಆಕೆ 24X7 ರಾಜಕಾರಣಿಯಾಗಬೇಕು. ಕೆಲವು ಸಂದರ್ಭಗಳಲ್ಲಿ ಅಗತ್ಯಬಂದರೆ ಸಂಸಾರವನ್ನು ಸಂಪೂರ್ಣವಾಗಿ ಮರೆತು ಕೆಲಸ ಮಾಡಬೇಕಾಗುತ್ತದೆ. ಇದು ಮಹಿಳೆಯರಿಗೆ ಇರುವ ತೊಡಕು ಸಹ ಹೌದು. ಎಲ್ಲ ಶಕ್ತಿ ವಿನಿಯೋಗಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಕೆ ಕೆಲಸ ಮಾಡಬೇಕು.

ಶೋಭಾ: ರಾಜಕೀಯ ಸಹ ಪುರುಷ ಪ್ರಧಾನವಾಗಿದೆ. ಪುರುಷರು ನಿಂತರೆ ಮಾತ್ರ ಗೆಲುವು ಸಾಧ್ಯ ಎಂಬ ತಪ್ಪು ಕಲ್ಪನೆ ಇದೆ. ಈ ಮನಸ್ಥಿತಿ ಬದಲಾಗಬೇಕು. ಪಕ್ಷಗಳ ರೀತಿಯಲ್ಲೇ ಮತದಾರರು ಕೂಡ ಪ್ರಯೋಗ ಮಾಡುತ್ತಾರೆ. ಸಮಾಜ ನಿಂತ ನೀರಲ್ಲ. ರಾಜಕೀಯ ಪಕ್ಷಗಳ ಮಾನಸಿಕತೆ ಬದಲಾಗಬೇಕು. ಎಲ್ಲ ಪಕ್ಷಗಳೂ ಒಂದೇ ರೀತಿ ಆಲೋಚನೆ ಮಾಡಬೇಕು. ಮಹಿಳೆಯರಿಗೆ ಸೀಟು ನೀಡುವ ಬಗ್ಗೆ ಆಂತರಿಕ ಹೊಂದಾಣಿಕೆ ಮಾಡಿಕೊಳ್ಳಬೇಕು.

ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ರಾಜಕೀಯಕ್ಕೆ ಬಂದ ಅನೇಕ ಮಹಿಳೆಯರು ಅಪವಾದಗಳನ್ನು ಎದುರಿಸಿದ್ದಾರೆ. ಇಲ್ಲಿ ಪುರುಷರ ಜತೆಗೆ ಓಡಾಟ ಹಾಗೂ ಕೆಲಸ ಮಾಡಬೇಕಾಗಿದೆ.

ಅತೀ ಹೆಚ್ಚು ಗಾಸಿಪ್‌ ಹರಡುವುದು ರಾಜಕಾರಣದಲ್ಲೇ. ಇಂತಹ ವದಂತಿಗೆ ಹೆಣ್ಣು ಮಕ್ಕಳು ಹೆದರುತ್ತಾರೆ. ಹೀಗಾಗಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಧ್ವನಿ ಎತ್ತಿದವರನ್ನು ಹಾಗೂ ಹೋರಾಟ ಮಾಡಿದವರನ್ನು ಸಮಾಜ ಕೆಟ್ಟ ಕಣ್ಣಿನಿಂದ ನೋಡುತ್ತದೆ. ಅಷ್ಟೇ ಅಲ್ಲ, ಅವರ ಚಾರಿತ್ರ್ಯ ಹನನವನ್ನೂ ಮಾಡುತ್ತದೆ.

ಪ್ರಶ್ನೋತ್ತರ: ನೇರಾನೇರ

ವಿಶಾಲ್‌, ವಿದ್ಯಾರ್ಥಿ: ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಬಹಳ ಕಡಿಮೆ ಇದೆ. ಮಹಿಳಾ ದೌರ್ಜನ್ಯ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದನ್ನು ಕಡಿಮೆ ಮಾಡಲು ಏನು ಕ್ರಮ ಕೈಗೊಳ್ಳುತ್ತೀರಿ?

ಉಮಾಶ್ರೀ: ಹಿಂದಕ್ಕೆ ಹೋಲಿಸಿದರೆ ಈಗ ಶಿಕ್ಷೆ ಪ್ರಮಾಣ ಹೆಚ್ಚಾಗಿದೆ. ಈ ದಿಸೆಯಲ್ಲಿ ಪೊಲೀಸ್‌ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲೂ ಸುಧಾರಣೆ ಆಗಬೇಕಿದೆ. ಸಾಕ್ಷ್ಯ ನಾಶ ಆಗದಂತೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ವಿನಯ್‌ ಸಾರಥಿ, ವಿದ್ಯಾರ್ಥಿ: ಪಬ್‌ ದಾಳಿ ವೇಳೆ ಸಂಘ ಪರಿವಾರದವರು ಹಾಗೂ ಶ್ರೀರಾಮ ಸೇನೆಯವರು ಹೆಣ್ಣು ಮಕ್ಕಳನ್ನು ಹಿಡಿದು ಎಳೆದಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಇಂತಹ ಆರೋಪಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ಹೊಂದಿದೆಯಲ್ಲ?

ಶೋಭಾ: ಸಂಘ ಪರಿವಾರದವರು ಯಾರೂ ಅತ್ಯಾಚಾರ ಮಾಡಿಲ್ಲ. ಈ ವಿಷಯ ನಿಮಗೆ ಗೊತ್ತಿರಲಿ. ಸಂಘ ‍ಪರಿವಾರ ಪದ ಬಳಸಿದ್ದು ಏಕೆ? ಮೊದಲು ನಿಮ್ಮ ಮಾನಸಿಕತೆ ಬದಲಾಯಿಸಿಕೊಳ್ಳಿ.

ವಿನಯ್‌: ಅತ್ಯಾಚಾರ ಮಾಡಿದ್ದಾರೆ ಎಂಬ ಪದ ಬಳಸಿಲ್ಲ.

ಉಮಾಶ್ರೀ: ಅಂತಹ ದೌರ್ಜನ್ಯಗಳನ್ನು ಯಾರು ಮಾಡಿದರೂ ತಪ್ಪು. ಆದರೆ, ಶಿಕ್ಷೆ ನೀಡುವುದು ನ್ಯಾಯಾಂಗಕ್ಕೆ ಸಂಬಂಧಿಸಿದ್ದು.

ಚೇತನಾ, ಹೋರಾಟಗಾರ್ತಿ: ಶೋಭಾ ಅವರೇ, ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಕೆಲವರು ಅಶ್ಲೀಲ ಚಿತ್ರ ನೋಡಿದ್ದರು. ಅವರು ಈಗಲೂ ನಿಮ್ಮ ಪಕ್ಷದಲ್ಲೇ ಇದ್ದಾರಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಸುರಕ್ಷತೆ ಹೇಗೆ ಸಾಧ್ಯ?

ಶೋಭಾ: ಅವರನ್ನು ಮಂತ್ರಿಮಂಡಲದಿಂದ ಕಿತ್ತು ಹಾಕಿದ್ದೆವು. ಒಬ್ಬರನ್ನು ಜನರು ಮತ್ತೆ ಆಯ್ಕೆ ಮಾಡಿದರು. ಇನ್ನೊಬ್ಬರನ್ನು ಸೋಲಿಸಿದರು. ಇದು ರಾಜಕೀಯೇತರ ವೇದಿಕೆ. ಈ ಪ್ರಶ್ನೆ ಮೂಲಕ ನಿಮ್ಮ ರಾಜಕೀಯ ಹಿನ್ನೆಲೆ ಗೊತ್ತಾಗುತ್ತಿದೆ. ಪುರುಷರ ಮನಃಸ್ಥಿತಿ ಬದಲಾಗದೆ ಸಮಾಜ ಬದಲಾಗದು. ಇದು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಹೆಣ್ಣು ಭೋಗಕ್ಕಾಗಿ ಇರುವುದು ಎಂಬ ಮನೋಭಾವ ಇರುವ ತನಕ ಇದು ನಡೆಯುತ್ತಲೇ ಇರುತ್ತದೆ. ಕಾನೂನು ಬಲಪಡಿಸಬೇಕು. ತಕ್ಷಣ ಶಿಕ್ಷೆಯಾಗುತ್ತದೆ ಎಂದಾಗ ದೌರ್ಜನ್ಯ ಕಡಿಮೆಯಾಗುತ್ತದೆ.

ಉಮಾಶ್ರೀ: ಈ ಹಿಂದೆ ಪ್ರಕರಣ ದಾಖಲಿಸಲು ಹೆದರುತ್ತಿದ್ದರು. ಈಗ ಮಹಿಳೆಯರು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಸಿ.ವಿ. ಶೋಭಾ, ನವೋದ್ಯಮಿ: ಕೌಟುಂಬಿಕ ಹಿನ್ನೆಲೆ ಹಾಗೂ ಆರ್ಥಿಕ ಹಿನ್ನೆಲೆ ಇಲ್ಲದವರು ಉದ್ಯಮ ಆರಂಭಿಸಲು ಕಷ್ಟಪಡಬೇಕಿದೆ. ಏಕಗವಾಕ್ಷಿ ಪರಿಕಲ್ಪನೆ ಇನ್ನೂ ಬಂದಿಲ್ಲ. ಉದ್ಯಮ ಆರಂಭಿಸಲು ಅನುಮತಿ ಪಡೆಯಲು ಕಚೇರಿಗಳಿಗೆ ವರ್ಷಗಟ್ಟಲೆ ಅಲೆದಾಡಬೇಕಿದೆ. ಈ ಕಷ್ಟವನ್ನು ಯಾವ ರೀತಿ ನಿವಾರಿಸುತ್ತೀರಿ?

ಉಮಾಶ್ರೀ: ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮಹಿಳಾ ಸಾಲ ಮನ್ನಾ ಮಾಡಿದ್ದೇವೆ. ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದೆ.

ಗೀತಾ ಚಿನಿವಾಲರ, ಉದ್ಯಮಿ: ಮಹಿಳಾ ಉದ್ಯಮಿಗಳಿಗೆ ಸಾಲ ಹಾಗೂ ಆರ್ಥಿಕ ನೆರವು ಸಿಗುತ್ತಿದೆ ಎಂಬುದು ನಿಜ. ಆದರೆ, ಕೌಶಲ ಅಭಿವೃದ್ಧಿಗೆ ಯಾವುದೇ ಯೋಜನೆಗಳು ಇಲ್ಲವಲ್ಲ?

ಉಮಾಶ್ರೀ: ಕೇಂದ್ರ ಸರ್ಕಾರದ ನೆರವಿನಿಂದ ಕೌಶಲ ಅಭಿವೃದ್ಧಿ ಇಲಾಖೆ ಆರಂಭಿಸಿದ್ದೇವೆ. ಅದರ ಮೂಲಕ ತರಬೇತಿ ನೀಡಲಾಗುತ್ತಿದೆ.

ಸಿಂಧೂರ, ವಿದ್ಯಾರ್ಥಿನಿ: ಅಂತರ್‌ ಧರ್ಮೀಯ ವಿವಾಹ ದೊಡ್ಡ ವಿವಾದವಾಗುತ್ತಿದೆ. ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ನಮ್ಮ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ನಿಲುವೇನು?

ಶೋಭಾ: ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಸಂವಿಧಾನವೇ ಕೊಟ್ಟಿದೆ. ಆದರೆ, ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಲಾಗುತ್ತಿದೆ. ಮದುವೆಯಾಗಿ ನಂತರ ಕೈ ಬಿಡುತ್ತಾರೆ. ಪ್ರೀತಿಸಿ ಮದುವೆಯಾಗಿ ವಂಚನೆ ಮಾಡಿರುವ ಅನೇಕ ಪ್ರಕರಣಗಳು ಕರಾವಳಿಯಲ್ಲೇ ನಡೆದಿವೆ. ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇವೆ ಹಾಗೂ ಹೋರಾಟ ಮಾಡಿದ್ದೇವೆ.

ಉಮಾಶ್ರೀ: ನಾನು ಮದುವೆಯಾಗಿದ್ದು ಹಿಂದೂವನ್ನೇ. ಅವರು ಎರಡು ಮಕ್ಕಳನ್ನು ಕೊಟ್ಟು ನನ್ನನ್ನು ಬಿಟ್ಟು ಹೋದರು. ವಿವಾಹ ವೈಯಕ್ತಿಕ ವಿಚಾರ. ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾವ ಸಂಘಟನೆಗೂ ಇಲ್ಲ. ಹಾಗೆ ಮಾಡಿದರೆ ಅದು ಸರಿಯಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry