ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ

ಮಂಗಳವಾರ, ಮಾರ್ಚ್ 19, 2019
33 °C

ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ

Published:
Updated:
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ

ಬೆಂಗಳೂರು: ‘ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ 2020ಕ್ಕೆ 4 ಕೋಟಿಗೂ ಅಧಿಕ ಉದ್ಯೋಗಗಳು ಸೃಷ್ಟಿ ಆಗಲಿವೆ. ದೇಶದ ರೈತ ಕುಟುಂಬಗಳ ಯುವಕ– ಯುವತಿಯರು ಈ ಉದ್ಯೋಗ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು’ ಎಂದು ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ತಿಳಿಸಿದರು.

ಭಾರತೀಯ ಉದ್ಯಮಗಳ ಒಕ್ಕೂಟ (ಸಿಐಐ) ಬುಧವಾರ ಏರ್ಪಡಿಸಿದ್ದ ‘ರೀ ಇಮೇಜಿಂಗ್‌ ಇಂಡಿಯಾ’ ವಿಷಯದ ಕುರಿತು ಅವರು ಮಾತನಾಡಿದರು.

‘ನರ್ಸಿಂಗ್‌ ಸೇರಿದಂತೆ ವಿವಿಧ ರೀತಿಯ ಆರೈಕೆಗಳ ಕೌಶಲ ಹೊಂದಿದವರಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಇದೆ. ಕ್ಯೂಬಾ ಮತ್ತು ಫಿಲಿಪ್ಪೀನ್ಸ್‌ ದೇಶಗಳು ಈ ಬೇಡಿಕೆಯನ್ನು ಪೂರೈಸುತ್ತಿವೆ. ಈ ಅವಕಾಶಗಳತ್ತ ರೈತ ಕುಟುಂಬಗಳೂ ಗಮನ ಹರಿಸಬೇಕು. ಇದಕ್ಕೆ ಪೂರಕ ನೀತಿಯನ್ನು ಸರ್ಕಾರ ರೂಪಿಸಬೇಕು. ಇದರಿಂದ ರೈತ ಕುಟುಂಬಗಳ ಆದಾಯವೂ ಹೆಚ್ಚಾಗುತ್ತದೆ’ ಎಂದು ಸಲಹೆ ನೀಡಿದರು.

‘ದೇಶದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ಅವರ ಜೀವನದ ಸ್ಥಿತಿಯೂ ಸುಧಾರಣೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಕುಟುಂಬಗಳ ಯುವ ಸದಸ್ಯರು ಪರ್ಯಾಯ ಉದ್ಯೋಗಗಳತ್ತ ಗಮನ ಹರಿಸಬಹುದು. ಆರೋಗ್ಯ ಕ್ಷೇತ್ರದಲ್ಲಿ ಅವಕಾಶ ಹೇರಳವಾಗಿದೆ’ ಎಂದರು.

40 ದಿನಗಳಿಗೆ ₹ 50 ಸಾವಿರ: ‘ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನ ಸಾಕಷ್ಟು ಮಹಿಳೆಯರು ಬಾಣಂತಿಯರ ಆರೈಕೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು 40 ದಿನ ಕೆಲಸ ಮಾಡಿ ₹ 50 ಸಾವಿರ ಗಳಿಸುತ್ತಾರೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ. ಬಾಣಂತಿ ಆರೈಕೆ ಮಾಡಲು ಕುಟುಂಬದಲ್ಲಿ ಹಿರಿಯರು ಸಿಗುತ್ತಿಲ್ಲ’ ಎಂದು ಅವರು ಹೇಳಿದರು.

ಬೆಳವಣಿಗೆ ದರ ಶೇ 10 ದಾಟಿದರೆ ಎಲ್ಲರಿಗೂ ಉದ್ಯೋಗ: ‘ದೇಶದಲ್ಲಿ ಎಲ್ಲ ಅರ್ಹ ಯುವ ಜನರಿಗೆ ಉದ್ಯೋಗ ಸಿಗಬೇಕಾದರೆ ದೇಶದ ಬೆಳವಣಿಗೆ ದರ ಶೇ 10 ದಾಟಬೇಕು’ ಎಂದು ಟೊಯೋಟಾ ಕಿರ್ಲೋಸ್ಕರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ಹೇಳಿದರು.

‘ಯುವ ಜನತೆ ಕ್ರಿಯಾಶೀಲವಾಗಿ ಚಿಂತನೆ ನಡೆಸಬೇಕು. ಬೆಂಗಳೂರಿನ ಯುವ ಉದ್ಯಮಿಯೊಬ್ಬರು ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಸಿ ಪ್ಯಾಕಿಂಗ್‌ ಮಾಡಿ ಮಾರುವ ಮೂಲಕ ಸುಮಾರು ₹ 10 ಕೋಟಿ ಗಳಿಸುತ್ತಿದ್ದಾರೆ. ಇಂತಹ ಆವಿಷ್ಕಾರಗಳಿಗೆ ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

ನವೋದ್ಯಮಗಳಿಗೆ ಕಾನೂನು ಚೌಕಟ್ಟು: ಪ್ರಿಯಾಂಕ್ ಖರ್ಗೆ

‘ನವೋದ್ಯಮಗಳಿಗೆ ಕಾನೂನು ಚೌಕಟ್ಟು ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ’ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಸಾಕಷ್ಟು ನವೋದ್ಯಮಗಳು ಅಸ್ತಿತ್ವಕ್ಕೆ ಬರುತ್ತಿವೆ. ಅದಕ್ಕೆ, ರಾಜ್ಯ ಸರ್ಕಾರದಿಂದಲೂ ಹಲವು ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ, ಅವುಗಳ ನಿರ್ವಹಣೆಗೆ ಹಾಗೂ ನಿಯಂತ್ರಣಕ್ಕೆ ಯಾವುದೇ ಕಾನೂನು ಇಲ್ಲ. ಅವುಗಳಿಗೂ ಕಾನೂನು ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಐಟಿ–ಬಿಟಿ ವಲಯದಲ್ಲಿ ನಮ್ಮ ರಾಜ್ಯ ಸ್ಪರ್ಧೆ ನಡೆಸುತ್ತಿರುವುದು ಜಾಗತಿಕ ಮಟ್ಟದಲ್ಲೇ ಹೊರತು, ಇತರ ರಾಜ್ಯಗಳೊಂದಿಗೆ ಅಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಉದ್ಯಮಿಗಳು ಗಮನ ಹರಿಸಬೇಕಿದೆ’ ಎಂದರು.

‘ಉದ್ಯೋಗ ತೊರೆದು ಉದ್ಯಮಿಯಾಗಲು ಬಯಸುವವರಿಗಾಗಿ ರಾಜೀವ್‌ಗಾಂಧಿ ನವೋದ್ಯಮ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸ

ಲಾಗಿದೆ. ಆಯ್ಕೆಯಾದ 1,000 ಮಂದಿಗೆ ಒಂದು ವರ್ಷದವರೆಗೆ ತಿಂಗಳಿಗೆ ₹ 30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆ ಸೇರಲಿ’

‘ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು, ಅಧಿಕಾರಿಗಳು, ರಾಜಕಾರಣಿಗಳು ಅವರ ಮಕ್ಕಳನ್ನು ಸರ್ಕಾರಿ ಶಾಲಾ– ಕಾಲೇಜುಗಳಿಗೆ ಕಳುಹಿಸಬೇಕು. ಆಗ ಅವುಗಳ ಸ್ಥಿತಿ ಸುಧಾರಣೆ ಆಗುತ್ತದೆ. ಶೇ 99 ರಷ್ಟು ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಬಡ್ತಿ ನೀಡಬಾರದು’ ಎಂದು ಫಾರ್ಮ್‌ವೇದ ಸಂಸ್ಥೆಯ ಸ್ಥಾಪಕ ತ್ರಿಲೋಚನ್‌ ಶಾಸ್ತ್ರಿ ಹೇಳಿದರು.

‘ಎಲ್ಲ ನಗರಗಳಲ್ಲಿ ರಂಗಮಂದಿರ ಬೇಕು’

‘ದೇಶದ ಎಲ್ಲ ನಗರಗಳಲ್ಲಿ ಉತ್ತಮ ಗುಣಮಟ್ಟದ ರಂಗ ಮಂದಿರಗಳನ್ನು ಸ್ಥಾಪಿಸಬೇಕು. ಭಾರತ ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರ. ಕಲೆ, ಸಂಗೀತ, ನಾಟಕ ತಳ ಹಂತದವರೆಗೆ ತಲುಪಬೇಕು. ಇದರಿಂದ ಸುಸಂಸ್ಕೃತ ಸಮಾಜವನ್ನು ಹುಟ್ಟುಹಾಕಲು ಸಾಧ್ಯ’ ಎಂದು ರಂಗಕರ್ಮಿ ಅರುಂಧತಿ ನಾಗ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry