ವಯಸ್ಸು 60 ಓಟ 200...

7

ವಯಸ್ಸು 60 ಓಟ 200...

Published:
Updated:
ವಯಸ್ಸು 60 ಓಟ 200...

‘ಹೆಣ್ಣಿಗೆ ಯಾರದೂ ಸಹಾಯ ಹಸ್ತ ಬೇಡ. ನಮಗಾಗಿ ಯಾವುದೇ ಮೀಸಲು ಬೇಡ...’

–ಹೀಗೆನ್ನುತ್ತಿದ್ದ ಅವರ ಕಣ್ಣುಗಳಲ್ಲಿ ಉತ್ಸಾಹ ಚಿಮ್ಮುತ್ತಿತ್ತು. ಅನುಮಾನಕ್ಕೆ ಎಡೆಯಿರದ ಮಾತು.  ಉತ್ಸಾಹ ಮತ್ತು ಅಂಗಸೌಷ್ಟವ 20ರ ಹರೆಯದವರನ್ನೂ ನಾಚಿಸುವಂತಿತ್ತು. ಅವರೇ ಚಂದ್ರಾ ಗೋಪಾಲನ್‌.

‘ಕ್ರೀಡೆ ನನ್ನ ಬಾಲ್ಯದ ಆಸಕ್ತಿ. ಆಗ ನಾನು ಬ್ಯಾಡ್ಮಿಂಟನ್‌ ಆಟಗಾರ್ತಿ. ಇದು ನನ್ನನ್ನು ಯಾವಾಗಲೂ ಉತ್ಸಾಹದಿಂದ ಇರುವಂತೆ ಮಾಡುತ್ತಿತ್ತು. ನಂತರ ಮದುವೆಯಾಗಿ ಮಕ್ಕಳಾದವು. ಆದರೆ, ನನ್ನ ಕ್ರೀಡಾ ಸ್ಫೂರ್ತಿ ಬತ್ತಲಿಲ್ಲ. ಹಾಗೆಂದು ಕ್ರೀಡೆಗಾಗಿ ಸಮಯ ಮೀಸಲಿಡಲಿಕ್ಕೂ ಆಗುವುದಿಲ್ಲ. ಆದ್ದರಿಂದ ಜಿಮ್‌ ಸೇರಿದೆ. ಅದು ಗಂಡು–ಹೆಣ್ಣು ಇಬ್ಬರೂ ಬರುವ ಜಿಮ್‌. ಮಹಿಳೆಯರಿಗೆ ಶಕ್ತಿ ಕಮ್ಮಿ ಎಂದು ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಿರಲಿಲ್ಲ. ಈ ಮನೋಭಾವ ನನ್ನದೇ ಆದ ಜಿಮ್‌ ತೆರೆಯಲು ಪ್ರೇರೇಪಿಸಿತು’ ಎನ್ನುತ್ತಾರೆ.

2006ರಲ್ಲಿ ಚಂದ್ರಾ ಮಹಿಳೆಯರಿಗಾಗಿಯೇ ‘ಕೌಂಟರ್ಸ್‌ ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ಜಿಮ್‌ ತೆರೆದರು. ಈ ಮೂಲಕ ತಮ್ಮ ಕ್ರೀಡಾಸಕ್ತಿಯ ಮತ್ತೊಂದು ಅಧ್ಯಾಯ ತೆರೆದ ಚಂದ್ರಾ, ತಮ್ಮ ಸ್ನೇಹಿತರು ನೀಡಿದ ಸಲಹೆ ಮೇರೆಗೆ 2004ರಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು ಆರಂಭಿಸಿದರು.

‘ಮದುವೆ ಆದಮೇಲೆ ಎಲ್ಲಾ ಮುಗಿಯಿತು. ದೇಹದ ಫಿಟ್‌ನೆಸ್‌ ಬಗ್ಗೆ ಗಮನ ಯಾಕೆ ಎನ್ನುವ ಮಹಿಳೆಯರು ಬಹಳ ಮಂದಿ ಇದ್ದಾರೆ. ಇನ್ನೂ ಕ್ರೀಡಾ ಮನೋಭಾವವನ್ನಂತೂ ಸಂಪೂರ್ಣ ಕಳೆದುಕೊಂಡಿರುತ್ತಾರೆ. ಹೆಣ್ಣು ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹ ನೀಡದ ಕಾಲವೊಂದಿತ್ತು. ಆದರೆ, ಈಗ ನಮ್ಮ ಮಗಳು ಕ್ರೀಡಾಪಟು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜತೆಗೆ ಈಗಿನ ಹುಡುಗಿಯರು ಅಥವಾ ಮಹಿಳೆಯರು ಅಂದವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಜಿಮ್‌ಗೆ ಹೋಗುತ್ತಾರೆ. ಈ ಎಲ್ಲದರ ಆಚೆಗೂ ಆರೋಗ್ಯ ಮುಖ್ಯವಾಗಬೇಕು’ ಎನ್ನುವುದು ಚಂದ್ರಾ ಅಭಿಪ್ರಾಯ.

‘ಮಹಿಳೆಯ ದೇಹದಲ್ಲಿ ಮ್ಯಾರಥಾನ್‌ ಓಡುವಷ್ಟು ಶಕ್ತಿ ಇರುವುದಿಲ್ಲ ಎಂದು ಭಾರತದ ಕೆಲವು ಮ್ಯಾರಥಾನ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತಿರಲಿಲ್ಲ. ಆಕೆ ಪುರುಷನ ಸಹಾಯ ಇಲ್ಲದೆ ಏನನ್ನೂ ಸಾಧಿಸಲಾರಳು ಎನ್ನುವುದನ್ನು ನಾನು ನಂಬುವುದಿಲ್ಲ. ದೈಹಿಕ ಶಕ್ತಿ ಇಲ್ಲ ಎನ್ನುವ ಕಾರಣಕ್ಕಾಗಿನ ‘ಮೀಸಲಾತಿ’ಗಳಲ್ಲೂ ನಂಬಿಕೆ ಇಲ್ಲ. ಮಹಿಳೆ ಎನ್ನುವ ಕಾರಣಕ್ಕೆ ಯಾವುದೇ ರಿಯಾಯಿತಿಯೂ ಬೇಡ. ಗಂಡು–ಹೆಣ್ಣು ಇಬ್ಬರೂ ಸಮಾನರು. ಬೆಂಗಳೂರಿನಲ್ಲಿ ತಾರತಮ್ಯ ಇದೆ, ಆದರೂ ಇಲ್ಲ ಎನ್ನುವ ಪರಿಸ್ಥಿತಿ ಇದೆ. ತಾರತಮ್ಯ ಸಂಪೂರ್ಣವಾಗಿ ನಿಲ್ಲಬೇಕು’ ಎನ್ನುತ್ತಾರೆ ಅವರು.

‘ಸಮಾನತೆಯ ದೃಷ್ಟಿಕೋನ ಪ್ರತಿ ಮನೆಯಲ್ಲೇ ಮೊಳಕೆಯೊಡೆಯಬೇಕು. ಇದು ಗಂಡು ಹೆತ್ತವರ ಕರ್ತವ್ಯ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಸಣ್ಣವರಿರುವಾಗಲೇ  ಹೆಣ್ಣನ್ನು ಸಮಾನವಾಗಿ ಕಾಣುವ, ಗೌರವಿಸುವುದನ್ನು ಹೇಳಿಕೊಟ್ಟಿದ್ದೇನೆ. ಅವರೂ ಸಹ ಅದನ್ನು ಪಾಲಿಸುತ್ತಿದ್ದಾರೆ. ಹೀಗಿದ್ದಲ್ಲಿ ಮಾತ್ರ ಮಕ್ಕಳು ಅಪ್ಪ–ಅಮ್ಮ ಇಬ್ಬರನ್ನೂ ಸಮಾನವಾಗಿ ಕಾಣಲು ಸಾಧ್ಯ. ಇದು ಪ್ರತಿ ಗಂಡು ಹೆತ್ತವರ ಮನೆಯಲ್ಲಿ ಆಗಬೇಕಾದ ಕೆಲಸ’ ಎಂಬುದು ಚಂದ್ರಾ ಅಭಿಪ್ರಾಯ.

‘ನಾನು ಹೆಣ್ಣಾಗಿ ಹುಟ್ಟಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಹೆಣ್ಣು ಅನ್ನುವ ಕಾರಣಕ್ಕೆ ಕೀಳರಿಮೆ ಸಲ್ಲದು. ನಾನು ಏನನ್ನೂ ಮಾಡಬಲ್ಲೆ, ಯಾವ ಎತ್ತರಕ್ಕೂ ಏರಬಲ್ಲೆ ಎನ್ನುವುದನ್ನು ಮಹಿಳೆಯರು ಮನಸ್ಸಿಗೆ ತಂದುಕೊಳ್ಳಬೇಕು. ನಾವು ಪುರುಷರಿಗಿಂತ ಉತ್ತಮವಾಗಿ ಕೆಲವನ್ನು ನಿರ್ವಹಿಸಬಲ್ಲೆವು. ಇದನ್ನು ಮನಗಾಣಬೇಕು. ಹೆಣ್ಣು ಎಂದರೆ ಶಕ್ತಿ’... ಎಂಬುದು ಚಂದ್ರಾ ಗೋಪಾಲನ್‌ ಅವರ ಮನದ ಮಾತು.

***

ಮದುವೆ ಆದಮೇಲೆ ಎಲ್ಲಾ ಮುಗಿಯಿತು. ದೇಹದ ಫಿಟ್‌ನೆಸ್‌ ಬಗ್ಗೆ ಗಮನ ಯಾಕೆ ಎನ್ನುವ ಮಹಿಳೆಯರು ಬಹಳ ಮಂದಿ ಇದ್ದಾರೆ. ಇನ್ನೂ ಕ್ರೀಡಾ ಮನೋಭಾವವನ್ನಂತೂ ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ. ಹೆಣ್ಣು ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹ ನೀಡದ ಕಾಲವೊಂದಿತ್ತು. ಆದರೆ, ಈಗ ಕಾಲ ಬದಲಾಗುತ್ತಿದೆ. ನಮ್ಮ ಮಗಳು ಕ್ರೀಡಾಪಟು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

– ಚಂದ್ರಾ ಗೋಪಾಲನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry