ಮನಸಿನ ಅಭಿವ್ಯಕ್ತಿ ಸಿನಿಮಾ

ಮಂಗಳವಾರ, ಮಾರ್ಚ್ 19, 2019
21 °C

ಮನಸಿನ ಅಭಿವ್ಯಕ್ತಿ ಸಿನಿಮಾ

Published:
Updated:
ಮನಸಿನ ಅಭಿವ್ಯಕ್ತಿ ಸಿನಿಮಾ

* ನಿಮ್ಮ ಓದು, ಹಿನ್ನೆಲೆ ಬಗ್ಗೆ ಹೇಳಿ...

ಬೀಜಿಂಗ್‌ ಫಿಲ್ಮ್‌ ಅಕಾಡೆಮಿ ನಿರ್ದೇಶನಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕನಾಗಿದ್ದೇನೆ. ಮದರ್ ವಿಲ್ ಮ್ಯಾರಿ, ಹೌ ಟು ಸೇವ್ ಯು ಮೈ ಲವ್, ಎಂಡ್‌ಲೆಸ್‌ ಲವ್ ಇನ್ ಟೋಕಿಯೊ ಟಿ.ವಿ. ಸರಣಿಗಳಲ್ಲಿ ಕೆಲಸ ಮಾಡಿದ್ದೇನೆ. ಫ್ಲೈ, ಕೀಲುಂಗ್, ಮೈ ಓನ್ ಪ್ರೈವೇಟ್ ಡಾಯ್ಚ್‌ಲ್ಯಾಂಡ್‌, ಕ್ರೆಸ್ಟೆಡ್ ಐಬಿಸ್ ನನ್ನ ನಿರ್ದೇಶನದ ಸಿನಿಮಾಗಳು.

* ನಿರ್ದೇಶನದಲ್ಲಿ ಆಸಕ್ತಿ ಬಂದಿದ್ದು ಹೇಗೆ?

ನನ್ನ ತಂದೆ ಸಿನಿಮಾ ನಿರ್ದೇಶಕರು. ಅವರಿಗೆ ನಾನು ನಿರ್ದೇಶಕನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಬರಹಗಾರನಾಗಬೇಕೆಂಬ ಆಸೆಯಿತ್ತು. ಆದರೆ ನನಗೆ ಅಪ್ಪನ ನಿರ್ದೇಶನದ ‍ಪಟ್ಟುಗಳನ್ನು ನೋಡುತ್ತಲೇ ಅದರಲ್ಲೇ ಆಸಕ್ತಿ ಬೆಳೆಯಿತು. ಜೊತೆಗೆ ಫೈಟಿಂಗ್, ನಟನೆ, ನೃತ್ಯದ ಬಗ್ಗೆ ಒಲವಿತ್ತು. ಹೀಗಾಗಿ ನಿರ್ದೇಶಕನಾಗಲು ಅಗತ್ಯವಿರುವ ಅಂಶಗಳನ್ನು ಕಲಿತೆ.

* ಚಲನಚಿತ್ರಗಳಿಗೆ ಸೆನ್ಸಾರ್‌ಶಿಪ್ ಅಗತ್ಯವೇ?

ಸಿನಿಮಾಗಳಿಗೆ ಸೆನ್ಸಾರ್‌ಶಿಪ್ ಇರಬಾರದು. ಸೆನ್ಸಾರ್‌ ಮಾಡುವುದರಿಂದ ನಿರ್ದೇಶಕನ ಪ್ರತಿಭೆಗೆ ಕತ್ತರಿ ಹಾಕಿದಂತೆ. ಸಿನಿಮಾ ನಿರ್ಮಿಸುವವರು ನೀತಿ ಸಂಹಿತೆ ರೂಪಿಸಿಕೊಂಡು ಅದನ್ನು ಪಾಲಿಸಬೇಕು.

* ನಿಮ್ಮ ಸಿನಿಮಾಗಳ ಕಥೆಗಳಿಗೆ ಸ್ಫೂರ್ತಿ?

ಸುತ್ತಲಿನ ಪರಿಸರವೇ ನನ್ನ ಸಿನಿಮಾಗಳ ಕಥೆಗೆ ಸ್ಫೂರ್ತಿ. ನನಗೆ ಅನಿಸಿದ್ದನ್ನು ಸಿನಿಮಾದ ಕಥೆಯಾಗಿಸಿ ಜನರ ಮುಂದಿಡಲು ಪ್ರಯತ್ನಿಸುತ್ತೇನೆ. ‘ಕ್ರಿಸ್ಟೆಡ್‌ ಐಬಿಸ್‌’ ಸಿನಿಮಾದಲ್ಲಿ ನಾನು ಚೀನಾದಲ್ಲಿ ಅಭಿವೃದ್ಧಿ ಹೆಸರಿನ ಬದಲಾವಣೆಗಳಿಂದಾಗಿ ಆಗಿರುವ ಪರಿಣಾಮಗಳನ್ನು ಚಿತ್ರಿಸಿದ್ದೇನೆ. ರಾಸಾಯನಿಕ ಗೊಬ್ಬರದ ಬಳಕೆಯಿಂದ ಚೀನಾದ ಹಲವು ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ.‌ ಗ್ರಾಮೀಣ ಚೀನಾದ ಬದುಕು ಹಾಗೂ ಮಾನವೀಯತೆಯ ದ್ವಂದ್ವ ಇಲ್ಲಿ ಅನಾವರಣಗೊಂಡಿದೆ.

* ಭಾರತೀಯ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ?

ನನಗೆ ಭಾರತೀಯ ಸಿನಿಮಾಗಳೆಂದರೆ ತುಂಬಾ ಇಷ್ಟ. ಚೀನಾದಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಅಮೀರ್‌ಖಾನ್‌ ಚೀನಾದಲ್ಲಿ ಅತ್ಯಂತ ಜನಪ್ರಿಯ ನಟ. ಅವರ ‘ದಂಗಲ್‌’ ಮತ್ತು ‘ಸಿಕ್ರೆಟ್‌ ಸೂಪರ್‌ ಸ್ಟಾರ್‌’ ಅಲ್ಲಿ ದೊಡ್ಡ ಯಶಸ್ಸು ಕಂಡಿದೆ. ಚೀನಾ ಮತ್ತು ಭಾರತೀಯ ಸಿನಿಮಾಗಳ ನಡುವೆ ಹೋಲಿಕೆ ಇದೆ. ಇಲ್ಲಿಯ ಸಿನಿಮಾಗಳು ತುಂಬಾ ಭಾವನಾತ್ಮಕವಾಗಿರುತ್ತವೆ.

* ಭಾರತೀಯ ಮತ್ತು ಚೀನಾ ಸಿನಿಮಾಗಳ ನಡುವಿನ ವ್ಯತ್ಯಾಸ?

ಸಾಂಸ್ಕೃತಿಕ ವೈವಿಧ್ಯತೆ ಇಲ್ಲಿಯ ಸಿನಿಮಾಗಳಲ್ಲಿ ಅಭಿವ್ಯಕ್ತಿಯಾಗುತ್ತದೆ. ಭಾರತೀಯರು ಇಲ್ಲಿಯ ಸಿನಿಮಾಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಆದರೆ ಚೀನಿಯರು ಸ್ಥಳೀಯ ಸಿನಿಮಾಗಳಿಗಿಂತ ಹಾಲಿವುಡ್‌ ಸಿನಿಮಾಗಳನ್ನು ಮೆಚ್ಚುತ್ತಾರೆ. ಈ ವೈರುಧ್ಯಕ್ಕೆ ಕಾರಣ ಕಂಡುಕೊಳ್ಳಲು ನಾನು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದೇನೆ.

* ಚೀನಾದ ಕಲಾತ್ಮಕ ಸಿನಿಮಾದ ವಸ್ತು ವಿಷಯ ಯಾವುದು?

ಚೀನಾದ ಜನರ ನಡುವಿನ ಸಂಬಂಧಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಚೀನಾದ ಹಳ್ಳಿಗಳಲ್ಲಿ ಯುವಜನರು ಕಾಣುತ್ತಿಲ್ಲ. ಹೆಚ್ಚು ಹಣ ಗಳಿಸುವುದಕ್ಕಾಗಿ ವಲಸೆ ಹೋಗುತ್ತಾರೆ. ಪೋಷಕರ ಬಗ್ಗೆ ಅವರಿಗೆ ಕಾಳಜಿಯೂ ಇಲ್ಲ. ಚೀನಾದ ಹಲವು ಸಿನಿಮಾಗಳು ಸಂಬಂಧವನ್ನೇ ಕೇಂದ್ರವಾಗಿ ಹೊಂದಿರಲು ಇದು ಮುಖ್ಯ ಕಾರಣ.

* ದೇಶ–ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸಿನಿಮಾ ಸಹಕಾರಿ ಆಗುವುದೇ?

ಸಿನಿಮಾಗಳು ಒಂದು ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಇದರಿಂದ ಒಂದು ದೇಶದವರು ಮತ್ತೊಂದು ದೇಶದವರನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

***

ಚೀನಾದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಆಗಿರುವ ಕಾಮಗಾರಿಗಳ ಪರಿಣಾಮಗಳನ್ನೇ ಸಿನಿಮಾ ಮಾಡಿದವರು ನಿರ್ದೇಶಕ ಕ್ವಿಯೋ ಲಿಯಾಂಗ್‌. ಇವರ ನಿರ್ದೇಶನದ ಕ್ರಿಸ್ಟೆಡ್ ಐಬೀಸ್ ಚಲನಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚರ್ಚೆಗೆ ಗ್ರಾಸವಾಯಿತು. ಪರಿಸರ ಸಂರಕ್ಷಣೆ ಮತ್ತು ಕೈಗಾರಿಕೆಗಳ ಅಸ್ತಿತ್ವವನ್ನು ಗೆಳೆತನ, ಬಾಂಧವ್ಯ, ಪ್ರೇಮದಂಥ ಮಾನವೀಯ ನೆಲಗಟ್ಟಿನಿಂದ ವಿಶ್ಲೇಷಿಸುವ ವಿಶಿಷ್ಟ ಚಿತ್ರ ಕ್ರಿಸ್ಟೆಡ್ ಐಬೀಸ್

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry